'ಸುವರ್ಣ ಸಂಪುಟ' (ಭಾಗ ೮೫) - ಯು ಆರ್ ಅನಂತಮೂರ್ತಿ

'ಸುವರ್ಣ ಸಂಪುಟ' (ಭಾಗ ೮೫) - ಯು ಆರ್ ಅನಂತಮೂರ್ತಿ

ಕನ್ನಡ ಖ್ಯಾತ ಸಾಹಿತಿಗಳಲ್ಲಿ ಓರ್ವರಾದ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ (ಯು ಆರ್ ಅನಂತಮೂರ್ತಿ) ಇವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಎಂಬ ಗ್ರಾಮದಲ್ಲಿ. ಇವರು ಉಡುಪಿ ರಾಜಗೋಪಾಲಾಚಾರ್ಯ ಹಾಗೂ ಸತ್ಯಮ್ಮ ದಂಪತಿಗಳ ಸುಪುತ್ರರಾಗಿ ಡಿಸೆಂಬರ್ ೨೧, ೧೯೩೨ರಂದು ಜನಿಸಿದರು. 

ಅನಂತಮೂರ್ತಿಯವರ ವಿದ್ಯಾಭ್ಯಾಸವು ದೂರ್ವಾಸಪುರದ ಸಾಂಪ್ರದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ಆರಂಭವಾಗಿ ನಂತರ ತೀರ್ಥಹಳ್ಳಿ, ಮೈಸೂರುಗಳಲ್ಲಿ ಮುಂದುವರೆಯಿತು. ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಭಾಷೆಯಲ್ಲಿ ಎಂ ಎ ಪದವಿಯನ್ನು ಪಡೆದುಕೊಂಡ ಬಳಿಕ ಅಧಿಕ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ಇವರಿಗೆ ಅಲ್ಲಿ ಕಾಮನ್ ವೆಲ್ತ್ ವಿದ್ಯಾರ್ಥಿ ವೇತನ ದೊರೆತ ಕಾರಣ ಇವರು ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಹಾಗೂ ಸಾಹಿತ್ಯದಲ್ಲಿ ೧೯೬೬ರಲ್ಲಿ ಪಿ ಎಚ್ ಡಿ ಪದವಿಯನ್ನು ಪಡೆದುಕೊಂಡರು. 

೧೯೭೦ರಲ್ಲಿ ಅನಂತಮೂರ್ತಿಯವರು ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು. ಇವರು ೧೯೮೭ರಿಂದ ೧೯೯೧ರವರೆಗೆ ಕೇರಳದ ಕೊಟ್ಟಾಯಂ ನ ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದರು. ಇವರು 'ಋಜುವಾತು' ಎಂಬ ಪತ್ರಿಕೆಯನ್ನು ಹೊರತರುತ್ತಿದ್ದರು. ಹಲವಾರು ದೇಶಗಳಲ್ಲಿ ಅನಂತಮೂರ್ತಿಯವರು ತಮ್ಮ ಉಪನ್ಯಾಸಗಳನ್ನು ನೀಡಿದ್ದಾರೆ. ಇದಕ್ಕೆ ಕಾರಣ ಅವರು ಉತ್ತಮ ವಾಗ್ಮಿಗಳು ಹಾಗೂ ಆಂಗ್ಲ ಭಾಷೆಯಲ್ಲಿ ಪ್ರಭುತ್ವವನ್ನು ಪಡೆದಿದ್ದರು. 

ಅನಂತಮೂರ್ತಿಯವರು ಹಲವಾರು ಕೃತಿಗಳನ್ನು, ವಿವಿಧ ಪ್ರಕಾರಗಳಲ್ಲಿ ರಚಿಸಿದ್ದಾರೆ. ಅವುಗಳಲ್ಲಿ ಕೆಲವು ಕೃತಿಗಳ ಬಗ್ಗೆ ವಿವರಗಳನ್ನು ಇಲ್ಲಿ ನೀಡಲಾಗಿದೆ

ಎಂದೆಂದೂ ಮುಗಿಯದ ಕತೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಕ್ಲಿಪ್ ಜಾಯಿಂಟ್, ಘಟಶ್ರಾದ್ಧ, ಸೂರ್ಯನ ಕುದುರೆ, ಪಚ್ಚೆ ರೆಸಾರ್ಟ್, ಬೇಟೆ, ಬಳೆ ಮತ್ತು ಓತಿಕ್ಯಾತ, ಎರಡು ದಶಕದ ಕಥೆಗಳು ಇತ್ಯಾದಿಗಳು ಇವರ ಕಥಾ ಸಂಕಲನ. ಸಂಸ್ಕಾರ, ಭಾರತೀಪುರ, ಭವ, ದಿವ್ಯ ಇತ್ಯಾದಿ ಕಾದಂಬರಿಗಳು. ಪ್ರಜ್ಞೆ ಮತ್ತು ಪರಿಸರ, ಪೂರ್ವಾಪರ, ಸಮಕ್ಷಮ, ಸನ್ನಿವೇಶ, ವಾಲ್ಮೀಕಿಯ ನೆವದಲ್ಲಿ, ಮಾತು ಸೋತ ಭಾರತ, ಬೆತ್ತಲೆ ಪೂಜೆ ಏಕೆ ಕೂಡದು, ಶತಮಾನದ ಕವಿ ಯೇಟ್ಸ್, ಕಾಲಮಾನ ಇತ್ಯಾದಿಗಳು ಇವರ ವಿಮರ್ಶೆ ಮತ್ತು ಪ್ರಬಂಧ ಸಂಕಲನ. ಆವಾಹನೆ ಇವರು ಬರೆದ ನಾಟಕ. ಹದಿನೈದು ಪದ್ಯಗಳು, ಮಿಥುನ, ಅಜ್ಜನ ಹೆಗಲ ಸುಕ್ಕುಗಳು, ಅಭಾವ, ಸಮಸ್ತ ಕಾವ್ಯ ಇವರ ಕವನ ಸಂಕಲನ, ಸುರಗಿ ಇವರ ಆತ್ಮಕಥೆ. 

ಯು ಆರ್ ಅನಂತಮೂರ್ತಿ ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಮಾಸ್ತಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಕೇರಳ ಸರಕಾರದ ಬಶೀರ್ ಪುರಸ್ಕಾರ, ರವೀಂದ್ರ ಟ್ಯಾಗೋರ್ ಸ್ಮಾರಕ ಪದಕ, ಪದ್ಮಭೂಷಣ, ಹಿಮಾಚಲ ಪ್ರದೇಶ ಸರಕಾರದ ಶಿಖರ್ ಸನ್ಮಾನ್ ಇತ್ಯಾದಿಗಳು ಸಂದಿವೆ. ಇವರು ತುಮಕೂರಿನಲ್ಲಿ ಜರುಗಿದ ೬೯ನೇ ಅಖಿಲ ಭಾರತ ಕನ್ನಡ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಇವರು ಆಗಸ್ಟ್ ೨೨, ೨೦೧೪ರಲ್ಲಿ ನಿಧನ ಹೊಂದಿದರು. 

'ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಒಂದು ಕವನ ಪ್ರಕಟವಾಗಿದೆ. 

ರಾಜನ ಕಳವಳದ ಪದ್ಯ

ಬಳಲಿ ಬಾಯಾರಿಕೆ ತರಳ

ಜನ್ಮದಾಚೆಯ ಕೊನೆಯ ನೆನಪು - ಯಕ್ಷನ ಕಾಟ

ದಾಹಾಂಧದಾತುರದಿ

ಬೊಗಬೊಗಸೆ ಜೀವನದಿ ನೀರನೆತ್ತಿ ಕುಡಿದರೆ ನನ್ನ ಕಣ್ಣು ಕಂಗಾಲು.

ನಚಿಕೇತ ಶಿಶುಪ್ರಶ್ನೆಗೊಲಿದು ಬಾಗಿದ ದೈತ್ಯ

ಪ್ರಾರಬ್ಧ ಕರ್ಮಯಮ ಕೈಯೊಡ್ಡಿ ನಿಂತಿರಲು

ಎದೆಯಂದತಮ ಬೆದಕಿ ಆಳದಾಳದ ಕೊಳದಿ

ಜೀವ ಹಂಸದ ಗೀತೆ, ಮುರಲಿ ದನಿ.

ಭ್ರೂಣ ನಿದ್ರೆಗೆ ಜಾರಲದರ ನೆನೆವರಿಕೆ ಕನವರಿಕೆ.

ಮಾಂಸಮೆತ್ತುತ ಮರಸುವಮ್ಮನೆದೆ ಲಾಲಿಯಲಿ

ಎಲಬುಗೇರಿದೆ ನಾನು.

(ಶಿಲುಬೆಗೇರಿದ ಕ್ರಿಸ್ತ)

ಮೈಯ ನರನರದ ಸಿಕ್ಕಿನಲಿ ಬೋಧಿಸಸಿ ಬೇರು ನಾಟಿರಲು

ತತ್ತರಿಸಿ.

ಕುಡಿಕುಡಿಯ ಚಿವುಟಿದೆನು ಬುದ್ಧನೊಲವಿಗೆ ಬೆದರಿ.

ಯಕ್ಷಪ್ರಶ್ನೆಯ ನೆನೆದು ಥರಥರನೆ ನಡುಗೆ ಎದೆ 

ಮೋಹ ಮಧುವೀಂಟಲೆತ್ತಿದೆನು ಬಯಕೆ ಬಟ್ಟಲ -

ತುಟಿಗೆ-

(ಎತ್ತಿದನು ಸಾಕ್ರಟೀಸ ಹೆಮ್ಲಾಕನು.)

ಮೋಹಮಧುಮತ್ತ ನಿದ್ರಾಲೋಲದಾಳದಲಾಗ ಬೋಧಿ ಎಲೆ ಒಣಗಿ ಉದುರಿರಲು

ಎದಿರೆ ಹಾಜರು ಸಾವು.

ಬೆದರಿ ರಾಮಾ ಎಂದೆ.

('ಹಾರಾಮ' ಎನೆ ಬಾಬು ಯುಗ ಜಿಗಿದ -ಯುಗಪುರುಷ!)

ನಾನೊ?

ಬಯಕೆ ಕವಣೆಗೆ ಸಿಕ್ಕು'

ಒಡನೆ ಜನನಿಯ ಜಠರ ಹುಡುಕಿ ಹೊರಟೆನು ಮತ್ತೆ.

ಜನುಮ ಜನುಮಕು ಬೆಳೆದ ನೆನಪು ಕಿಚ್ಚಾಗಿರಲು

ಎದೆಯ ಕಗ್ಗವಿಯಲ್ಲು ಜ್ವಲಿಪ ಜ್ಯೋತಿರ್ಲಿಂಗ.

ಬಯಕೆಯರಮನೆಯಲ್ಲು ಬೋಧಿವೃಕ್ಷದ ಸುಯ್ಲು.

ಮಿದುಳ್ಮತಳಮಳದಲ್ಲಿ ಕಳವಳದ ದನಿಯೊಂದು;

ದಿನಮಪಿ ರಜನೀ ಸಾಯಂಪ್ರಾತಃ

ಶಿಶಿರ ವಸಂತೌ ಪುನರಾಯಾತಃ

ಕಾಲಃಕ್ರೀಡತಿ ಗಚ್ಛಾತ್ಯಾಯುಃ

ತದಪಿ ನಮುಂಚತ್ಯಾಶಾವಾಯುಃ

('ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)