'ಸುವರ್ಣ ಸಂಪುಟ' (ಭಾಗ ೮೭) - ಜೀ.ಶಂ.ಪರಮಶಿವಯ್ಯ

'ಸುವರ್ಣ ಸಂಪುಟ' (ಭಾಗ ೮೭) - ಜೀ.ಶಂ.ಪರಮಶಿವಯ್ಯ

'ಜೀಶಂಪ' ಎಂದೇ ಸಾಹಿತ್ಯ ಲೋಕದಲ್ಲಿ ಖ್ಯಾತರಾಗಿರುವ ಜೀ ಶಂ ಪರಮಶಿವಯ್ಯ ಇವರು ಹುಟ್ಟಿದ್ದು ನವೆಂಬರ್ ೧೨, ೧೯೩೩ರಲ್ಲಿ ನಾಗಮಂಗಲ ತಾಲೂಕಿನ ಅಂಬಲ ಜೀರಹಳ್ಳಿ ಎಂಬ ಗ್ರಾಮದಲ್ಲಿ. ಪರಮಶಿವಯ್ಯನವರು ಜಾನಪದ ಸಾಹಿತ್ಯದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದವರಾಗಿದ್ದು, ಜಾನಪದ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಮಹಾನ್ ಜಾನಪದ ವಿದ್ವಾಂಸ ಎಂದೇ ಖ್ಯಾತಿಯನ್ನೂ ಪರಮಶಿವಯ್ಯನವರು ಪಡೆದುಕೊಂಡಿದ್ದಾರೆ. 

ಪರಮಶಿವಯ್ಯನವರು ತಮ್ಮ ಪ್ರೌಢಶಾಲೆಯ ತನಕದ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿದರು. ತಮ್ಮ ಅಧ್ಯಾಪಕರಾಗಿದ್ದ ಹೊಯ್ಸಳ ಹಾಗೂ ತಮ್ಮ ಮನೆಯ ಪಕ್ಕದಲ್ಲಿ ವಾಸವಾಗಿದ್ದ ಖ್ಯಾತ ಸಾಹಿತಿ ಪು ತಿ ನ ಅವರ ಒಡನಾಟದಿಂದ ಸಾಹಿತ್ಯದ ಗೀಳನ್ನು ಅಂಟಿಸಿಕೊಂಡರು. ವಿದ್ಯಾರ್ಥಿ ದೆಸೆಯಲ್ಲೇ ಇವರು ಹಲವಾರು ಕವನಗಳನ್ನು ಬರೆದರು. ಈ ಕವನಗಳು 'ತಾಯಿನಾಡು' ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಮುಂದಿನ ವಿದ್ಯಾಭ್ಯಾಸವನ್ನು ಪಡೆಯಲು ಮೈಸೂರಿನ ಮಹಾರಾಜಾ ಕಾಲೇಜು ಸೇರಿಕೊಂಡರೂ ಅನಿವಾರ್ಯ ಕಾರಣಗಳಿಂದ ಅವರು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲಿಲ್ಲ. ನಂತರ ಅವರು ಕನಕಪುರದ ಎಸ್ ಕರಿಯಪ್ಪನವರ ವಿದ್ಯಾಶಾಲೆಯಲ್ಲಿ ಮಾಧ್ಯಮಿಕ ಶಾಲೆಯ ಉಪಾಧ್ಯಾಯರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಮುಂದಿನ ದಿನಗಳಲ್ಲಿ ಓದಿನಲ್ಲಿ ಮುಂದುವರೆಯಬೇಕೆಂದು ಹಠ ಹಿಡಿದು ತಮ್ಮ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸವನ್ನು ಪೂರೈಸಿದರು, 'ಜಾನಪದ' ಎಂಬ ಮಹಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಗೌರವವನ್ನೂ ಗಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿಕೊಂಡು ನಂತರ ಕಾಲಕ್ರಮೇಣ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಮತ್ತು ಉಪ ಕುಲಪತಿಗಳ ಕಾರ್ಯದರ್ಶಿಗಳಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದರು. ಮೈಸೂರಿನ ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಜಾನಪದ ವಿಭಾಗ ಆರಂಭವಾದಾಗ ಅದರ ಮುಖ್ಯಸ್ಥರಾಗಿ ಜಾನಪದ ಸಂಗ್ರಹಾಲಯ ನಿರ್ಮಿಸುವ ಕನಸು ಕಂಡರು. ಪಿ ಆರ್ ತಿಪ್ಪೇಸ್ವಾಮಿ ಜೊತೆಗೂಡಿ ಕನ್ನಡ ನಾಡಿನ ಮೂಲೆ ಮೂಲೆಗೆ ಸಂಚರಿಸಿ ಅಪಾರ ವಸ್ತುಗಳನ್ನು ಸಂಗ್ರಹಿಸಿದರು. ಜಾನಪದ ಉಳಿವಿಗಾಗಿ ೧೯೬೭ರಲ್ಲಿ ತರೀಕೆರೆಯಲ್ಲಿ ಪ್ರಥಮ ಜಾನಪದ ಸಮ್ಮೇಳನ ಹಮ್ಮಿಕೊಂಡರು. ಆ ಸಂದರ್ಭದಲ್ಲಿ ಇವರ ಸಂಪಾದಕತ್ವದಲ್ಲಿ ಹೊರತಂದ 'ಹೊನ್ನಬಿತ್ತೇವು ಹೊಲಕೆಲ್ಲ' ಕೃತಿ ಈಗಲೂ ಜಾನಪದ ಕ್ಷೇತ್ರದಲ್ಲಿನ ಅಪರೂಪದ ಕೃತಿ ಎನಿಸಿಕೊಂಡಿದೆ. 

ಪರಮಶಿವಯ್ಯನವರು ಜಾನಪದ ಸಾಹಿತ್ಯದ ಅಧ್ಯಯನಕ್ಕಾಗಿ ವಿಶ್ವದಾದ್ಯಂತ ಸಂಚರಿಸಿದ್ದರು. ಜಾನಪದ ಲೇಖಕರಾಗಿ ಜಾನಪದ ಸಾಹಿತ್ಯ ಸಮೀಕ್ಷೆ, ಮಂಟೇಸ್ವಾಮಿ, ನೀಲಗಾರರು, ಮೈಲಾರ ಗೊರವರು, ದೊಂಬಿದಾಸರು, ಕಿನ್ನರಿ ಜೋಗಿಗಳು, ಜಾನಪದ ಅಡುಗೆಗಳು ಮೊದಲಾದ ಸುಮಾರು ೫೦ಕ್ಕೂ ಮಿಕ್ಕ ಕೃತಿಗಳನ್ನು ರಚನೆ ಮಾಡಿದ್ದಾರೆ. ಜೀವನ ಗೀತ (ಕವನ ಸಂಕಲನ), ದಿಬ್ಬದಾಚೆ (ಖಂಡ ಕಾವ್ಯ), ಕಾವಲುಗಾರ ಮತ್ತು ಇತರೆ ಕಥೆಗಳು, ಮಬ್ಬು ಜಾರಿದ ಕಣಿವೆಯಲ್ಲಿ (ಕಥಾ ಸಂಕಲನ), ಸಿಡಿಲ ಮರಿಗಳು (ಕಿರು ಕಾದಂಬರಿ), ಭೀಮಪ್ಪನ ಬೇಟೆ (ನಾಟಕ), ಮೇದರಕಲ್ಲು ಮತ್ತು ಇತರೆ ಪ್ರಬಂಧಗಳು (ಪ್ರಬಂಧ) ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. 

ಪರಮಶಿವಯ್ಯನವರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. ಕನ್ನಡ ಸಾಹಿತ್ಯದ ವಜ್ರಮಹೋತ್ಸವದ ಪ್ರಶಸ್ತಿ, ರಾಷ್ಟ್ರೀಯ ಅಧ್ಯಾಪಕ ಗೌರವ, ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷತೆಯ ಗೌರವಗಳು ಸಂದಿವೆ. 'ಜಾನಪದ ಸಂಭಾವನೆ' ಇವರಿಗೆ ಅರ್ಪಿಸಿದ ಅಭಿನಂದನಾ ಗ್ರಂಥ. ಪರಮಶಿವಯ್ಯನವರು ಜೂನ್ ೧೭, ೧೯೯೫ರಲ್ಲಿ ನಿಧನಹೊಂದಿದರು.

'ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಒಂದು ಪುಟ ಕವನ ಪ್ರಕಟವಾಗಿದೆ.

ಮಗಳೆನಿತು ಜಾಣ ಒಡವೆ !

ಅರೆನಿದ್ದೆ ಬುವಿಗೆ, ಮುಗಿಲೆದ್ದ ಬಗೆಗೆ ನಿಮಿರಿತ್ತು ಚಿಕ್ಕೆಯುಡಿಗೆ !

ತಂಬೆಲರೆ ತರುಣಿ -ಚಿಗಿಚಿಗಿವ ಹರಿಣಿ ಬೆವರಿತ್ತು ಸೊಕ್ಕು ನಡಿಗೆ !

ಬಾನಟ್ಟದಿಂದ ಶಶಿಶೈಲದಿಂದ ಬೆಳುಬೆಳ್ಳಗಿಳಿದನಾರೊ !

ವಸುಮತಿಯ ಮೈಯ - ಮೇಲವನ ಕೈಯ ಚಾಚಿದ ಒಲುಮೆಗಾರೊ !

ಅದೊ ಶಾಲಿವನದ - ಮೇಲವಳ ಬಿನದ ನಸುನಕ್ಕಳೇಕೊ ಏನೊ !

ತೆಗೆಗೊನೆಯ ಮೌನ-ತೊನೆದಂತೆ ಬಾನ ಉಲಿದಿತ್ತು. ತೇನೆಯೇನೊ !

ಶೃಂಗಾರ ಗೀತ -ಬಳಿಗೆಳೆದನಾತ, ಸುಳಿಗಾಳಿಗಯ್ಯೊಪುಳಕ !

ಕಡುಮೋಹಜಾಲ ಬೆಸದಿದ್ದಿ ತೊಲವ, ಪ್ರಣಯಿಗಳ ಕೈಯ ಜಳಕ !

ಪ್ರೇಮಾಂಕುರಕ್ಕೆ - ಒಲವಿಂಗೆ ರೆಂಕೆ ಕಡುಮೌನಕೇಕೆ ವ್ಯಂಗ್ಯ !

ಕೊಕೊಕೋಕೊ ಎಂದು, ಕಲಿಹುಂಜವೊಂದು ಕೂಗಿದುದೆ - ಪ್ರಣಯ ಭಂಗ !

ಓಡಿದ್ದನಲ್ಲ - ಬಾಡಿದಳು ನಲ್ಲೆ ಭೂತಾಯಿ ಎದ್ದಳಾಗ !

'ಬೆಳಗಾಗುವೇಳೆ - ಎದ್ದೇಳೆ ಮಗಳೆ' ಎನುವಾಗಲೆಲರರಾಗ ;

ತಾಳಮ್ಮ ನಿದ್ದೆ ಬಲು ಓದುತ್ತಿದ್ದೆ - ಅರೆಗಳಿಗೆ ಮಲಗಿಬಿಡುವೆ !

ಮಲಗೆಂದಳಾಕೆ - ನಗುತಿದ್ದಳೀಕೆ ಮಗಳೆನಿತು ಜಾಣ ಒಡವೆ !

('ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)