ಸುವಾಸನೆ ಬೀರುವ ಕಸ್ತೂರಿ ಮೃಗ
‘ಕತ್ತೆಗೇನು ಗೊತ್ತು ಕಸ್ತೂರಿಯ ಗಂಧ' ಎಂಬುದು ಹಳೆಯ ಗಾದೆ ಮಾತು. ಕಸ್ತೂರಿಯ ಸುವಾಸನೆಯು ಬಹಳ ಪ್ರಸಿದ್ಧ. ನೈಜವಾದ ಕಸ್ತೂರಿ ಉತ್ಪಾದನೆಯಾಗುವುದು ಕಸ್ತೂರಿ ಮೃಗ ಎಂಬ ಜಿಂಕೆ ಜಾತಿಯ ಪ್ರಾಣಿಯ ಗ್ರಂಥಿಗಳಲ್ಲಿ. ಕಸ್ತೂರಿ ಪರಿಮಳ ಸೂಸುವಾಗ ಕಸ್ತೂರಿ ಮೃಗಕ್ಕೆ ಆ ಸುವಾಸನೆ ಎಲ್ಲಿಂದ ಬರುತ್ತದೆ ಎಂದು ತಿಳಿಯದೇ, ಇಡೀ ಕಾಡಿನಲ್ಲಿ ಓಡಾಡಿ ಸುಸ್ತು ಮಾಡಿಕೊಳ್ಳುತ್ತದೆಯಂತೆ. ಹೀಗೆ ಬಳಲಿದ ಪ್ರಾಣಿಯನ್ನು ಬೇಟೆಗಾರರು ಸುಲಭವಾಗಿ ಹಿಡಿದು ಕೊಂಡು ಅದರ ಗ್ರಂಥಿಯಿಂದ ಕಸ್ತೂರಿಯನ್ನು ಹೊರತೆಗೆಯುತ್ತಾರಂತೆ. ಇದು ಎಷ್ಟು ಸತ್ಯ ಮಾತೋ ಗೊತ್ತಿಲ್ಲ. ಆದರೆ ಬಹು ಸಮಯದಿಂದ ಪ್ರಚಲಿತವಿರುವ ಸಂಗತಿ. ಈ ವಿಷಯವನ್ನು ‘ಕೆಲವರು ಸ್ವ ಸಾಮರ್ಥ್ಯವನ್ನು ಹೊಂದಿದ್ದರೂ ಅವರಿಗೆ ಅವರ ಸಾಮರ್ಥ್ಯದ ಅರಿವು ಇರುವುದಿಲ್ಲ.’ ಅಂತಹ ವ್ಯಕ್ತಿಗಳಿಗೆ ಬಳಸುತ್ತಾರೆ. ಈ ಕಸ್ತೂರಿ ಮೃಗದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಕಸ್ತೂರಿ ಮೃಗ (Musk Deer) ಜಿಂಕೆಯ ಜಾತಿಗೆ ಸೇರಿದ ಒಂದು ಪ್ರಾಣಿ. ಬಹುತೇಕವಾಗಿ ಒಂಟಿಯಾಗಿಯೇ ಬದುಕುವ ಇವುಗಳು ಸೈಬೀರಿಯಾದಿಂದ ಹಿಮಾಲಯದವರೆಗಿನ ಪರ್ವತ ಶ್ರೇಣಿಗಳಲ್ಲಿ ಕಂಡುಬರುತ್ತವೆ. ಹಿಮಾಲಯದ ದಕ್ಷಿಣ ತಪ್ಪಲು ಪ್ರದೇಶ ಹಾಗೂ ಟಿಬೇಟ್ ನ ಕೆಲವು ಭಾಗಗಳಲ್ಲಿ ಇವುಗಳು ವಾಸಿಸುತ್ತವೆ. ಜಿಂಕೆಗಳಂತೆ ಇವುಗಳಿಗೆ ಕೊಂಬುಗಳಿರುವುದಿಲ್ಲ. ಮೈಮೇಲೆ ಹಿಮಾಲಯದ ಚಳಿ, ಗಾಳಿಯಿಂದ ರಕ್ಷಣೆ ಸಿಗಲು ದಟ್ಟ ರೋಮಗಳಿಂದ ಕೂಡಿದ ತುಪ್ಪಳವಿದೆ. ಇವುಗಳ ಕಿವಿಗಳು ದೊಡ್ಡದಾಗಿದ್ದು ವೃತ್ತಾಕಾರವಾಗಿರುತ್ತವೆ. ದೊಡ್ಡದಾದ ಕಿವಿಗಳಿರುವುದರಿಂದ ಶತ್ರುಗಳ ದಾಳಿಯ ಬಗ್ಗೆ ತಕ್ಷಣ ತಿಳಿದುಕೊಳ್ಳುತ್ತವೆ. ಸಣ್ಣ ಶಬ್ದವಾದರೂ ಗೊತ್ತಾಗುತ್ತದೆ. ಇದರ ಬಾಲ ಬಹಳ ಸಣ್ಣದು. ಬಾಲದ ಉದ್ದ ಕೇವಲ ೪ ರಿಂದ ೫ ಸೆಂ. ಮೀ ಮಾತ್ರ. ಈ ಪ್ರಾಣಿಯನ್ನು ನೋಡಲು ಒಂದು ರೀತಿಯಲ್ಲಿ ಕಾಡಿನ ಕುರಿಯಂತೆ ಕಾಣಿಸುತ್ತದೆ. ಕಸ್ತೂರಿ ಮೃಗದ ಉದ್ದ ಸುಮಾರು ೮೫ ರಿಂದ ೧೦೦ ಸೆಂ. ಮೀ. ಇದರ ತೂಕ ಸುಮಾರು ೧೨ ರಿಂದ ೧೮ ಕೆ.ಜಿ. ಇರುತ್ತದೆ. ಈ ಪ್ರಾಣಿಯ ಹಿಂದಿನ ಕಾಲುಗಳು ಮುಂದಿನ ಕಾಲುಗಳಿಗಿಂತಲೂ ಉದ್ದವಾಗಿರುತ್ತವೆ. ಬಾಯಿಯಲ್ಲಿ ಸಣ್ಣ ಕೋರೆ ಹಲ್ಲುಗಳಿರುತ್ತವೆ. ಬಾಯಿಯಿಂದ ಹೊರಗೆ ಚಾಚಿದಂತಿರುವ ಈ ಹಲ್ಲುಗಳು ಹೆಚ್ಚಾಗಿ ಕಾಡಿನಲ್ಲಿ ಓಡಾಡುವಾಗ ಮರ, ಬಂಡೆ ಕಲ್ಲುಗಳಿಗೆ ತಾಗಿ ತುಂಡಾಗಿರುತ್ತವೆ.
ಪ್ರೌಢಾವಸ್ಥೆಗೆ ಬಂದ ಹೆಣ್ಣು ಕಸ್ತೂರಿ ಮೃಗವು ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಗರ್ಭ ಧರಿಸುತ್ತದೆ. ಸುಮಾರು ಆರು ತಿಂಗಳು ಇದರ ಗರ್ಭಧಾರಣೆಯ ಅವಧಿ. ಮೇ-ಜೂನ್ ತಿಂಗಳಲ್ಲಿ ಇದು ಮರಿಗೆ ಜನ್ಮ ನೀಡುತ್ತದೆ. ಮರಿ ಆಹಾರಕ್ಕಾಗಿ ತನ್ನ ತಾಯಿಯನ್ನು ಅವಲಂಬಿಸಿರುತ್ತದೆ. ಸುಮಾರು ಎರಡು ತಿಂಗಳುಗಳವರೆಗೆ ಮರಿಗಳು ನಿರ್ಜನವಾದ ಪ್ರದೇಶದಲ್ಲಿ ಅಡಗಿಕೊಂಡಿರುತ್ತವೆ. ಎರಡು ವರ್ಷ ತುಂಬಿದಾಗ ಅವುಗಳು ಪ್ರೌಢಾವಸ್ಥೆಗೆ ಬರುತ್ತವೆ. ಕಸ್ತೂರಿ ಮೃಗಗಳು ಸುಮಾರು ೧೫ ರಿಂದ ೨೦ ವರ್ಷಗಳು ಬದುಕಿರುತ್ತವೆ. ಇವುಗಳು ಹಗಲಿನಲ್ಲಿ ಓಡಾಡುವುದು ಕಮ್ಮಿ. ಸಾಯಂಕಾಲವಾಗುತ್ತಿದ್ದಂತೆ ಇವುಗಳು ಚುರುಕಾಗುತ್ತವೆ. ಸಾಮಾನ್ಯವಾಗಿ ಹುಲ್ಲನ್ನೇ ಮೇಯುವ ಇವುಗಳು ಸೊಪ್ಪು, ಚಿಗುರುಗಳನ್ನೂ ತಿನ್ನುತ್ತವೆ.
ಹಿಮಾಲಯದಲ್ಲಿ ವಾಸಿಸುವ ಕಸ್ತೂರಿ ಮೃಗಗಳು ವಲಸೆ ಹೋಗುವುದಿಲ್ಲ. ಅಧಿಕ ಚಳಿ ಆದಾಗಲೂ ಅವುಗಳು ತಮ್ಮ ವಾಸ ಸ್ಥಾನವನ್ನು ಬಿಟ್ಟು ಹೋಗುವುದಿಲ್ಲ. ಹೆಣ್ಣು ಮೃಗವು ತನ್ನದೇ ಆದ ಪರಿಧಿಯನ್ನು ಗುರುತಿಸಿಕೊಳ್ಳುತ್ತದೆ. ಈ ಪರಿಧಿಯ ಒಳಗೆ ಬೇರೆ ಯಾವುದೇ ಮೃಗಗಳು (ಅದರ ಸಂಗಾತಿಯನ್ನು ಹೊರತು ಪಡಿಸಿ) ಬಾರದಂತೆ ನೋಡಿಕೊಳ್ಳುತ್ತದೆ. ಗಂಡು ಮೃಗವು ಬೇರೆ ಬೇರೆ ಪರಿಧಿಯೊಳಗೆ ಹಲವಾರು ಹೆಣ್ಣು ಸಂಗಾತಿಯನ್ನು ಹೊಂದಿರುತ್ತದೆ. ಈ ಎಲ್ಲಾ ಸಂಗಾತಿಗಳ ಮೇಲೆ ಬೇರೆ ಗಂಡು ಮೃಗಗಳಿಂದ ಆಕ್ರಮಣವಾಗದಂತೆ ತಡೆಯುತ್ತದೆ.
ಕಸ್ತೂರಿ ಮೃಗಗಳ ಶತ್ರುಗಳೆಂದರೆ ತೋಳ ಹಾಗೂ ನರಿಗಳು. ಕಸ್ತೂರಿ ಮೃಗಗಳು ತಮ್ಮ ಚುರುಕಾದ ಕಿವಿಗಳ ಸಹಾಯದಿಂದ ಅಪಾಯದ ಶಬ್ದವನ್ನು ಗ್ರಹಿಸುತ್ತವೆ ಹಾಗೂ ಆ ಸ್ಥಳದಿಂದ ದೂರಕ್ಕೆ ಹೋಗುತ್ತವೆ. ಇವುಗಳು ತುಂಬಾ ದೂರಕ್ಕೆ ನೆಗೆಯ ಬಲ್ಲವು. ಓಡುತ್ತಾ ಓಡುತ್ತಾ ಸ್ವಲ್ಪ ನಿಂತು ಮತ್ತೆ ಹಿಂದೆ ತಿರುಗಿ ನೋಡಿ ಶತ್ರುಗಳ ಚಲನೆಯನ್ನು ಗಮನಿಸಿ ಮತ್ತೆ ಓಡುತ್ತವೆ. ಇವುಗಳ ಘ್ರಾಣ ಶಕ್ತಿಯೂ ಅಧಿಕ. ಅತಿ ಬೇಗದಲ್ಲೇ ಸಮೀಪವಿರುವ ಶತ್ರುವಿನ ಬಗ್ಗೆ ತಿಳಿದುಕೊಳ್ಳುತ್ತದೆ. ಹೆಚ್ಚಾಗಿ ಶಾಂತವಾಗಿರುವ ಇವುಗಳು ಹೆದರಿಕೆಯಾದಾಗ ಭುಸುಗುಟ್ಟುವುದಿದೆ.
ಸುವಾಸನೆ ಹೊಂದಿರುವ ಕಸ್ತೂರಿ ಗ್ರಂಥಿ ಇರುವುದು ಗಂಡು ಮೃಗದ ಹೊಟ್ಟೆಯ ಭಾಗದಲ್ಲಿ ಮಾತ್ರ. ಈ ಪರಿಮಳ ಬೀರುವ ಗ್ರಂಥಿಗಳೇ ಈ ಮೃಗಗಳಿಗೆ ಶತ್ರುವಾಗಿ ಪರಿಣಮಿಸಿದೆ. ಇದರ ಸುವಾಸನಾ ಕಸ್ತೂರಿಗಾಗಿ ಇದರ ಹತ್ಯೆ ನಡೆಯುತ್ತದೆ. ಈ ಕಾರಣದಿಂದಲೇ ಕಸ್ತೂರಿ ಮೃಗಗಳ ಸಂಖ್ಯೆ ಬಹಳಷ್ಟು ಕಮ್ಮಿಯಾಗಿದೆ. ಗಂಡು ಕಸ್ತೂರಿ ಮೃಗಗಳ ಹೊಟ್ಟೆಯ ಭಾಗದಿಂದ ಇವುಗಳನ್ನು ಕೊಲ್ಲದೆಯೂ ಆ ಸುವಾಸನಾ ಚೀಲವನ್ನು ತೆಗೆಯ ಬಹುದಾದದೂ ಬಹುತೇಕರು ಕೊಂದು ತೆಗೆಯುವುದೇ ಸುಲಭ ಮಾರ್ಗವೆಂದು ತಿಳಿದುಕೊಂಡಿದ್ದಾರೆ. ಇಡೀ ಚೀಲದಲ್ಲಿ ಕೇವಲ ೨೫ ರಿಂದ ೩೦ ಗ್ರಾಂ ಕಸ್ತೂರಿ ಸಿಗಬಹುದು. ಆದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಕಸ್ತೂರಿಗೆ ಸಾವಿರಾರು ರೂಪಾಯಿ ಮೌಲ್ಯವಿರುವ ಕಾರಣ ಇದನ್ನು ಪಡೆಯಲು ಬೇಟೆಗಾರರು ಮೃಗವನ್ನು ಕೊಲ್ಲುತ್ತಾರೆ. ಕಸ್ತೂರಿ ಮೃಗವು ಈಗ ವಿನಾಶದ ಅಂಚಿನಲ್ಲಿರುವ ಜೀವಿ ಎಂದು ಘೋಷಣೆಯಾಗಿದೆ.
ಕಸ್ತೂರಿ ಎಂಬ ಪದವು ಪರಿಮಳಕ್ಕೆ ಅಥವಾ ಅದೇ ರೀತಿಯ ಪರ್ಯಾಯ ಪದವಾಗಿ ಬಳಕೆಯಾಗುವುದರಿಂದ ನಮ್ಮ ಹಲವು ವಸ್ತು, ವಿಷಯಗಳಿಗೆ ಕಸ್ತೂರಿ ಪದವನ್ನು ಬಳಸುವುದು ಸಾಮಾನ್ಯವಾಗಿದೆ. ಉದಾಹರಣೆಗೆ ಕಸ್ತೂರಿ ಅರಸಿನ, ಕಸ್ತೂರಿ ಮಾವು, ಕಸ್ತೂರಿ ಮಲ್ಲಿಗೆ, ಕನ್ನಡ ಕಸ್ತೂರಿ, ಕಾಮ ಕಸ್ತೂರಿ. ಕಸ್ತೂರಿ ಮೃಗವು ಅಳಿವಿನಂಚಿಗೆ ಬಂದು ನಿಂತಿದೆ. ಅದಕ್ಕೆ ಕಾರಣ ಮಾನವರ ಸ್ವಾರ್ಥ. ಅದನ್ನು ಮಾನವರು ಬಿಡಬೇಕು. ಇಂತಹ ಅಪರೂಪದ ಪ್ರಾಣಿಗಳನ್ನು ಸಂರಕ್ಷಿಸಬೇಕು.
ಚಿತ್ರ: ಅಂತರ್ಜಾಲ ಕೃಪೆ