ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ

ಸುಶ್ರುತ ಮತ್ತು ಪರ್ನೀಶಿಯಸ್ ಅನೀಮಿಯಾ

ಬರಹ

೧೯೩೪ ನೇ ಇಸವಿಯ ವೈದ್ಯಕೀಯ ಕ್ಷೇತ್ರಕ್ಕೆ ಮೀಸಲಾಗಿರುವ ನೋಬಲ್ ಬಹುಮಾನವನ್ನು ಮೂವರು ವಿಜ್ಞಾನಿಗಳಿಗೆ ಕೊಡಲಾಯಿತು - ಜಾರ್ಜ್ ವ್ಹಿಪಲ್, ಜಾರ್ಜ್ ಮಿನಾಟ್ ಮತ್ತು ವಿಲ್ಲಿಯಮ್ ಮರ್ಫಿ. ಈ ಮೂವರು ’ಪರ್ನೀಶಿಯಸ್ ಅನೀಮಿಯಾ’ ಎಂಬ ಒಂದು ತರಹದ ರಕ್ತಹೀನತೆಗೆ ಔಷಧ ಕಂಡುಹಿಡಿದಿದ್ದರು; ಅದಕ್ಕಾಗಿ ಈ ಗೌರವ.
ಇವರಲ್ಲಿ ಮೊತ್ತಮೊದಲು ಈ ರೋಗದ ಮೇಲೆ ಕೆಲಸ ಮಾಡಿದ್ದು ಜಾರ್ಜ್ ವ್ಹಿಪಲ್. ಆತ ತನ್ನ ಪ್ರಯೋಗಶಾಲೆಯಲ್ಲಿ ನಾಯಿಗಳ ದೇಹದಿಂದ ಕೃತಕವಾಗಿ ರಕ್ತಸ್ರಾವ ಆಗುವಹಾಗೆ ಮಾಡಿ, ಅನಂತರ ಅವುಗಳಿಗೆ ಬೇರೆ ಬೇರೆ ತರಹದ ಆಹಾರವನ್ನು ಕೊಡುತ್ತ ಹೋದ. ಆಹಾರದಲ್ಲಿನ ಯಾವುದಾದರೂ ಅಂಶ ದೇಹದಲ್ಲಿ ರಕ್ತ ಉತ್ಪತ್ತಿಯಾಗುವುದನ್ನು ಹೆಚ್ಚಿಸುತ್ತದೋ ಎಂದು ನೋಡುವುದು ಅವನಿಗೆ ಬೇಕಾಗಿತ್ತು. ವ್ಹಿಪಲ್ ಕೊನೆಗೂ ತನ್ನ ಪ್ರಯೋಗಗಳಿಂದ ಕಂಡುಕೊಂಡದ್ದು Liver (ಯಕೃತ್ತು) ಇಂತಹ ಸನ್ನಿವೇಶದಲ್ಲಿ ಬಹಳ ಉಪಯೋಗಿ ಎಂದು. ಕಚ್ಚಾ ಯಕೃತ್ತನ್ನು ಸೇವಿಸಿದ ನಾಯಿಗಳ ರಕ್ತದಲ್ಲಿ ಕೂಡಲೇ ಹೀಮೋಗ್ಲೋಬಿನ್ ಹೆಚ್ಚುವುದನ್ನು ಆತ ಗಮನಿಸಿದ. ಮುಂದೆ ಇದೇ ಪ್ರಯೋಗವನ್ನು ಆಧರಿಸಿ, ಉಳಿದ ಇಬ್ಬರು – ಮರ್ಫಿ ಮತ್ತು ಮಿನಾಟ್ – Liver ನ ಉಪಯೋಗ ಪರ್ನೀಶಿಯಸ್ ಅನೀಮಿಯಾ ಎಂಬ ರೋಗದಲ್ಲೂ ಆಗುತ್ತದೆ ಎಂದು ತೋರಿಸಿಕೊಟ್ಟರು.
Pernicious Anemia ದಲ್ಲಿ ಕೆಂಪು ರಕ್ತ ಕೋಶಗಳ (Red Blood Corpuscles) ಉತ್ಪತ್ತಿ ಕಡಿಮೆಯಾಗುತ್ತದೆ ಎಂಬುದನ್ನು ಹೊರತುಪಡಿಸಿ, ಅಲ್ಲಿಯ ತನಕ ಈ ರೋಗದ ಪ್ರಕ್ರಿಯೆಯಾಗಲಿ, ಕಾರಣಗಳಾಗಲಿ, ಔಷಧವಾಗಲಿ - ಗೊತ್ತಿರಲಿಲ್ಲ. ಆದರೆ ಈಗ ಆ ಬಗ್ಗೆ ಹಲವು ವಿಷಯಗಳು ಗೊತ್ತಾಗಿವೆ. ಈ ರೋಗದಲ್ಲಿ ಜಠರದಲ್ಲಿರುವ Parietal Cell ಎಂಬ ಜೀವಕೋಶ, ತಾನು ಸ್ರವಿಸಬೇಕಾದ Intrinsic Factor ಎಂಬ ರಾಸಾಯನಿಕವನ್ನು ಸರಿಯಾಗಿ ಸ್ರವಿಸದಂತಾಗುತ್ತದೆ. ಇದಕ್ಕೆ Auto-immunity ಎಂಬ ವಿಕೃತ ಪ್ರಕ್ರಿಯೆ ಕಾರಣ. ಈ ಇಂಟ್ರಿನ್ಸಿಕ್ ಫ್ಯಾಕ್ಟರ್ ನ ಅಗತ್ಯ ಇರುವುದು ‘ವೈಟಮಿನ್ – ಬಿ -12’ ( Vitamin – B12) ಎಂಬ ತತ್ವದ ಸರಿಯಾದ Absorption ಗೆ. (Absorption ಅಂದರೆ, ಜೀರ್ಣಾಂಗ ವ್ಯೂಹ - Gastro Intestinal Tract - ದಿಂದ ಯಾವುದೇ ತತ್ವವು ರಕ್ತವನ್ನು ಸೇರುವ process – ಪ್ರಕ್ರಿಯೆ). ಈ ವೈಟಮಿನ್ ಸಾಕಷ್ಟು ಪ್ರಮಾಣದಲ್ಲಿ ದೇಹದಲ್ಲಿದ್ದರೆ ಮಾತ್ರ ಕೆಂಪು ರಕ್ತ ಕೋಶಗಳ ಉತ್ಪತ್ತಿ ಎಲುಬುಗಳ ಒಳಭಾಗದ ಮಜ್ಜೆಯಲ್ಲಿ (Bone marrow) ಸರಿಯಾಗಿ ಆಗುತ್ತದೆ. ಇಲ್ಲದಿದ್ದರೆ ಪ್ರಾಕೃತ ಸ್ವರೂಪಕ್ಕಿಂತ ಭಿನ್ನವಾದ, ಇನ್ನೂ immature ಆಗಿರುವ ಅಸಹಜವಾಗಿ ದೊಡ್ಡ ಗಾತ್ರ ಹೊಂದಿರುವ ಕೆಂಪು ರಕ್ತಕೋಶಗಳು ತಯಾರಾಗಿ ಮೆಗಾಲೋಬ್ಲಾಸ್ಟಿಕ್ ಅನೀಮಿಯಾ (Magaloblastic anaemia) ಬರುತ್ತದೆ. (Magaloblastic anaemia ಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು - ಅವುಗಳಲ್ಲಿ Pernicious anaemia ಕೂಡ ಒಂದು). Liver, ಈ ವೈಟಮಿನ್ B-12 ನ ಒಂದು ಅತ್ಯುತ್ತಮ ಆಕರ. ಈ ವೈಟಮಿನ್, liver ನಲ್ಲಿ ಸಂಗ್ರಹವಾಗುತ್ತದೆ. ಅದಕ್ಕೇ ಕಚ್ಚಾ liver ನ್ನು ತಿಂದಾಗ ಅನೀಮಿಯಾದ ಲಕ್ಷಣಗಳು ಇಲ್ಲವಾಗುವುದು.

ಎಲ್ಲ ಸರಿ. ಆದರೆ ಈ ಆಯುರ್ವೇದದ ಅಳಲೇಕಾಯಿ ಪಂಡಿತನಿಗೂ ಪರ್ನೀಶಿಯಸ್ ಅನೀಮಿಯಾಕ್ಕೂ ಏನು ಸಂಬಂಧ - ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಸುಶ್ರುತ ಸಂಹಿತೆಯಲ್ಲಿನ ಈ ಶ್ಲೋಕ ವೊಂದನ್ನು ಓದಿ:

अतिनिःस्रुत रक्तॊ वा क्षौद्रयुक्तं पिबॆदसृक् ।
यकृद्वा भक्षयॆदाजमामं पित्तसमायुतम् ॥
(ಸುಶ್ರುತ ಸಂಹಿತೆ, ಉತ್ತರ ತಂತ್ರ,೪೫ನೇ ಅಧ್ಯಾಯ)

ಇದರ ಅರ್ಥ: “ಅತಿಯಾದ ರಕ್ತಸ್ರಾವವಾದಾಗ ಆಡಿನ ಯಕೃತ್ತನ್ನು (Liver) ಬೇಯಿಸದೆ ಅದರಲ್ಲಿನ ಪಿತ್ತದ ಜೊತೆಗೆ ತಿನ್ನಲು ಕೊಡಬೇಕು; ಅಥವಾ, ಜೇನಿನ ಜೊತೆ ರಕ್ತವನ್ನು ಬೆರೆಸಿ ಕುಡಿಯಲು ಕೊಡಬೇಕು”

(When there is extreme loss of blood, one should be given either the blood mixed with honey to drink or should be advised to consume raw goat liver with all its contents.)

ರಕ್ತವನ್ನು ಜೇನಿನ ಜೊತೆಗೆ ಸೇವಿಸುವುದು ಇವತ್ತಿನ ಮಟ್ಟಿಗೆ ಸ್ವಲ್ಪ ಅಪ್ರಾಸಂಗಿಕ ಅನ್ನಿಸಬಹುದು. ಆದರೆ Liver ಬಗೆಗಿನ ವಿವರಣೆ ಅಚ್ಚರಿಯಾಗುವಂತಿದೆ – ಅಲ್ಲವೇ ? (ಸುಶ್ರುತ ಸಂಹಿತೆಯ ’ಉತ್ತರ ತಂತ್ರ’ ವನ್ನು ನಾಗಾರ್ಜುನ ಎಂಬ ವೈದ್ಯ ಬರೆದುದಾಗಿ ಹೇಳಲಾಗುತ್ತದೆ. ಅದು ನಿಜ ಎಂದು ಒಪ್ಪಿಕೊಂಡರೂ ಅದು ಸುಮಾರು ಕ್ರಿಸ್ತ ಶಕ ಹತ್ತನೇ ಶತಮಾನದ ಆಸುಪಾಸಿನ ವಿಷಯ).
ಸುಶ್ರುತ ಕಂಡುಹಿಡಿದದ್ದಕ್ಕಿಂತ ಹೆಚ್ಚಿನ ಏನನ್ನೂ ವ್ಹಿಪಲ್ ಕಂಡುಹಿಡಿದಿರಲಿಲ್ಲ. ಇನ್ನು, ಸುಶ್ರುತನ ಕೊಡುಗೆಯನ್ನು surgery ಗೆ ಸಂಬಂಧಿಸಿದ ಪುಸ್ತಕಗಳಲ್ಲಿ ಅಲ್ಲಲ್ಲಿ ಬರೆಯುವರಾದರೂ ಆತ ಮಾಡಿದ ಇಂತಹ ಪ್ರಯೋಗಗಳ ಬಗ್ಗೆ ಯಾರೂ ಉಲ್ಲೇಖಿಸುವುದಿಲ್ಲ. ವೈದ್ಯವಿಜ್ಞಾನದ ಇತಿಹಾಸವನ್ನು ಹೇಳುವಾಗಲೂ ಈ ಬಗ್ಗೆ ಯಾರೂ ಮಾತಾಡುವುದಿಲ್ಲ.
ಅದಕ್ಕೇ ಈ ಬರಹ.