ಸುಸ್ತಿದಾರರ ವಿರುದ್ಧ ಕಠಿಣ ಕ್ರಮ: ಅತ್ಯವಶ್ಯ ಸುಧಾರಣೆ

ಸುಸ್ತಿದಾರರ ವಿರುದ್ಧ ಕಠಿಣ ಕ್ರಮ: ಅತ್ಯವಶ್ಯ ಸುಧಾರಣೆ

ದೊಡ್ದ ಪ್ರಮಾಣದ ಸಾಲ ತೆಗೆದುಕೊಂಡು ಬ್ಯಾಂಕುಗಳಿಗೆ ಟೋಪಿ ಹಾಕಿ ತಪ್ಪಿಸಿಕೊಳ್ಳುವ ಉದ್ದೇಶಪೂರ್ವಕ ಸುಸ್ತಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಾಗೂ ಅವರಿಗೆ ಮತ್ತೆ ಸಾಲ ಸಿಗದಂತೆ ನೋಡಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ. ಈ ಕುರಿತ ಕಾನೂನುಗಳಿಗೆ ತಿದ್ದುಪಡಿ ತರುವಂತೆ ಅದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದು ಅತ್ಯವಶ್ಯವಾಗಿ ಬೇಕಿರುವ ಸುಧಾರಣೆ. ಇಷ್ಟು ಕಾಲ ಉದ್ದೇಶಪೂರ್ವಕವಾಗಿ ಸುಸ್ತಿದಾರರ ವಿರುದ್ಧ ಇಂತಹ ಕಠಿಣ ಕ್ರಮಗಳು ಇರಲಿಲ್ಲ ಎಂಬುದೇ ಅಚ್ಚರಿಯ ಸಂಗತಿ. ಬ್ಯಾಂಕುಗಳಲ್ಲಿರುವ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುವ ಈ ‘ಉದ್ದೇಶಪೂರ್ವ ಸುಸ್ತಿದಾರರು' ಎಂಬ ವರ್ಗೀಕರಣವೇ ಒಂದು ರೀತಿಯ ಅವೈಜ್ಞಾನಿಕ ವ್ಯವಸ್ಥೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ, ಸಾಲ ತೀರಿಸದೆ ಅವರು ಹಾಗೇ ಓಡಾಡಿಕೊಂಡಿರಲು ಬಿಡುವುದು ಪ್ರಾಮಾಣೀಕ ತೆರಿಗೆದಾರರಿಗೆ ಹಾಗೂ ಪ್ರಾಮಾಣಿಕ ಸಾಲ ಮರುಪಾವತಿದಾರರಿಗೆ ಅನ್ಯಾಯ ಮಾಡಿದಂತೆ. ಕಂಪೆನಿಯ ಹೆಸರಿನಲ್ಲಿ ಪಡೇದ ಸಾಲ ತೀರಿಸದೆ, ಅದು ಸುಸ್ತಿ ಸಾಲ ಆಗಲು ಬಿಟ್ಟು ಆ ಹಣದಲ್ಲಿ ವೈಯಕ್ತಿಕವಾಗಿ ಸ್ಥಿರಾಸ್ತಿಗಳನ್ನು ಮಾಡಿಕೊಂಡು ಮೋಜು ಮಾಡುವ ದೊಡ್ದ ದೊಡ್ಡ ಉದ್ಯಮಿಗಳ ಪಡೆಯೇ ನಮ್ಮ ದೇಶದಲ್ಲಿದೆ. ಅಂತಹವರಿಗೆ ಕಡಿವಾಣ ಬೀಳಲೇಬೇಕಿದೆ.

ಪ್ರತಿ ವರ್ಷ ಹೀಗೆ ಉದ್ದೇಶಪೂರ್ವಕ ಸುಸ್ತಿದಾರರ ಸಾವಿರಾರು ಕೋಟಿ ರೂಪಾಯಿಗಳನ್ನು ‘ಮನ್ನಾ’ ಮಾಡುವ , ಅವರಿಗೆ ‘ಕ್ಷಮಾದಾನ' ನೀಡಿ ಬಿಟ್ಟುಬಿಡುವಂತಹ ಪ್ರಕ್ರಿಯೆಗಳು ಸಾರ್ವಜನಿಕ ಸ್ವೌಮ್ಯದ ಬ್ಯಾಂಕುಗಳ ಮೂಲಕ ನಡೆಯುತ್ತಲೇ ಇರುತ್ತವೆ. ಸರ್ಕಾರದಲ್ಲಿರುವ ಪ್ರಭಾವಿಗಳು ಹಾಗೂ ಉದ್ಯಮಪತಿಗಳ ನಡುವಿನ ಸಂಬಂಧಗಳು ಇಂತಹ ವ್ಯವಹಾರಗಳಲ್ಲಿ ರಾಜಾರೋಷವಾಗಿ ಬಳಕೆಯಾಗುತ್ತಿದೆ. ಪುಟ್ಟ ಪುಟ್ಟ ವ್ಯಕ್ತಿಗಳು ಹಾಗೂ ರೈತರು ಮಾಡುವ ಸಾಲಗಳನ್ನು ಬಲವಂತವಾಗಿ ವಸೂಲಿ ಮಾಡೂವ ಅಥವಾ ಆಸ್ತಿ ಹರಾಜು ಮಾಡುವಂತಹ ಅಮಾನವೀಯ ಕ್ರಮಗಳನ್ನು ಕೈಗೊಳ್ಳುವ ಬ್ಯಾಂಕುಗಳು, ದೊಡ್ಡ ದೊಡ್ಡ ಶ್ರೀಮಂತರು ಕಾಯ್ದೆಯಲ್ಲಿರುವ ನ್ಯೂನತೆಯನ್ನು ಬಳಸಿಕೊಂಡು ಕೋಟ್ಯಂತರ ರೂ. ಸಾಲವನ್ನು ಮರುಪಾವತಿ ಮಾಡದೆ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಗೆ ಸೇರಿ ನುಣುಚಿಕೊಳ್ಳಲು ಬಿಡುತ್ತವೆ. ಇದಕ್ಕೆ ಈಗಲಾದರೂ ಕಡಿವಾಣ ಹಾಕಲು ಆರ್ ಬಿ ಐ ಮುಂದಾಗಿದೆ ಎಂಬುದೇ ಆಶಾದಾಯಕ ಬೆಳವಣಿಗೆ. ಇಂತಹ ಸುಸ್ತಿದಾರರ ವಿರುದ್ಧ ಸರಿಯಾದ ಕಾನೂನು ಕ್ರಮ ಕೈಗೊಂಡು, ಕಂಪೆನಿ ಅಥವಾ ವೈಯಕ್ತಿಕ ಆಸ್ತಿಯನ್ನು ಹರಾಜು ಹಾಕುವ ಮೂಲಕ ಸಾಲ ವಸೂಲಿ ಮಾಡಲು ಹೊಸ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಬೇಕಿದೆ. ಸರ್ಕಾರ ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು.

ಕೃಪೆ: ಕನ್ನಡ ಪ್ರಭ. ಸಂಪಾದಕೀಯ, ದಿ: ೨೩-೦೯-೨೦೨೩  

ಚಿತ್ರ ಕೃಪೆ ಅಂತರ್ಜಾಲ ತಾಣ