ಸುಸ್ಥಿರ ಕೃಷಿಯ ಹರಿಕಾರ - ಚೇರ್ಕಾಡಿ ರಾಮಚಂದ್ರ ರಾವ್
ಚೇರ್ಕಾಡಿ ರಾಮಚಂದ್ರ ರಾಯರ ಹೆಸರು ಮತ್ತೆಮತ್ತೆ ಕೇಳಿ ಬರುತ್ತದೆ - ಸುಸ್ಥಿರ ಕೃಷಿಯ ಮಾತು ಬಂದಾಗೆಲ್ಲ. ಯಾಕೆಂದರೆ ಸುಸ್ಥಿರ ಕೃಷಿಯೇ ಅವರ ಉಸಿರಾಗಿತ್ತು. ಒಂಭತ್ತು ದಶಕಗಳು ಮಿಕ್ಕಿದ ತುಂಬು ಬದುಕು ಮುಗಿಸಿ, ಅವರು ನಮ್ಮನ್ನಗಲಿದ್ದು ೨೧ ಫೆಬ್ರವರಿ ೨೦೧೦ರಂದು. ಅವರ ಮಣ್ಣಿನ ಅನುಭವದ ಮಾತು ಮನದಣಿಯೆ ಕೇಳಲು ಅವಕಾಶವಾದದ್ದು ೭ ಎಪ್ರಿಲ್ ೨೦೦೫ರಂದು. ಮಧ್ಯಾಹ್ನದ ಉರಿಬಿಸಿಸಿಲಿನಲ್ಲಿ ಅವರ ಮನೆ ತಲುಪಿ, ಅವರೆದುರು ಕುಳಿತಾಗ ನನ್ನ ದಣಿವನ್ನೆಲ್ಲ ಕರಗಿಸಿತು, ಅವರ ನೆರಿಗೆದುಂಬಿದ ಮುಖದಲ್ಲಿ ಅರಳಿದ ನಗು, ಲವಲವಿಕೆಯ ಮಾತು. “ಇದೆಲ್ಲ ಶುರುವಾದದ್ದು ಹೇಗೆ, ರಾಮಚಂದ್ರ ರಾಯರೇ?” ಎಂದು ಕೇಳಿದಾಗ ಐದು ದಶಕಗಳ ಮುಂಚಿನ ದಿನಗಳನ್ನು ಮೆಲುಕು ಹಾಕಿದರು. “ಮಹಾತ್ಮಾ ಗಾಂಧಿಯವರ ತತ್ವ ಮನಸ್ಸಿಗೆ ನಾಟಿತ್ತು. ಆ ರೀತಿ ಬದುಕಬೇಕಂತ ನಿರ್ಧರಿಸಿದೆ" ಎಂದು ಮಾತು ಆರಂಭಿಸಿದರು. “ಚರಕ ಸುತ್ತಿ ನೂಲು ತೆಗಿತಾ ಇದ್ದೆ. ಕೆಲವು ವರ್ಷ ಹಾಗೇ ನಡೀತು. ಆದ್ರೆ ಅದ್ರಿಂದಲೇ ಜೀವನ ಮಾಡಕ್ಕೆ ಆಗಲ್ಲ ಅನ್ನೋದು ಗೊತ್ತಾಯ್ತು. ಯಾರಿಗೂ ಭಾರ ಆಗಬಾರದು. ಸ್ವಾವಲಂಬಿಯಾಗಿ ಬದುಕಬೇಕು. ಹೇಗೆ ಅನ್ನೋದೇ ನಂಗೆ ಯೋಚನೆ. ಆಗ ಗಾಂಧೀಜಿ ಹೇಳಿದ್ದು ನೆನಪಾಯಿತು. ಅನ್ನ-ವಸ್ತ್ರ ಎರಡರಲ್ಲೂ ಸ್ವಾವಲಂಬಿ ಆಗಬೇಕು. ನಾನು ವಸ್ತ್ರ ಮಾತ್ರ ತಯಾರು ಮಾಡ್ತಿದ್ದೆ. ನನ್ನ ಅನ್ನಕ್ಕಾಗಿ ನಾನೇ ಭತ್ತ ಬೆಳೀಬೇಕು ಅಂತ ತೀರ್ಮಾನ ಮಾಡಿದೆ. ನನ್ನ ಭಾವನ ಈ ಎರಡೂವರೆ ಎಕರೆ ಜಾಗ ಇತ್ತು. ಅವರನ್ನು ಕೇಳಿ ಗೇಣಿಗೆ ತಗೊಂಡೆ. ಹೆಂಡತಿ ಜೊತೆ ಇಲ್ಲಿಗೆ ಬಂದೆ. ನಾವಿಬ್ಬರೂ ದುಡಿದು ಮಾಡಿದ್ದು ಈ ತೋಟ.” ಅದು ಗುಡ್ಡದ ಜಾಗ. ಮೇಲ್ಮೈಯಲ್ಲಿ ಐದಡಿ ಮಣ್ಣು, ಕೆಳಭಾಗ ಗಟ್ಟಿ ಮಣ್ಣು. ಅಲ್ಲಿ ಕಷ್ಟಪಟ್ಟು ಒಂದು ಬಾವಿ ತೋಡಿದರು. ನೀರು ಸಿಕ್ಕಿತು. ಬಾವಿಯಿಂದ ಜಮೀನಿಗೆ ಕೊಡಪಾನದಲ್ಲಿ ನೀರು ಎತ್ತಿಎತ್ತಿ ಹಾಕಿ ಎದೆ ನೋವು ಬಂದಾಗ ಆತಂಕ. ವೈದ್ಯರಿಗೆ ತೋರಿಸಿದರೆ “ಏನೂ ತೊಂದರೆ ಇಲ್ಲ” ಎಂದರು. ಕೊನೆಗೆ ಮಂಗಳೂರಿನ ಡಾ. ಶಾಸ್ತ್ರಿಗಳಿಗೆ ತೋರಿಸಿದರು. ಅವರು ನಾಡಿ ಹಿಡಿದು ನೋಡಿ, “ಏನು ಕೆಲಸ ಮಾಡ್ತೀಯಾ?" ಎಂದು ಕೇಳಿದರು. ಇವರ ಉತ್ತರ ಕೇಳಿ, ವಿಪರೀತ ಕೆಲಸ ಮಾಡಬಾರದೆಂದು ತಾಕೀತು ಮಾಡಿದರು.
ಬಾವಿಯಿಂದ ನೀರೆತ್ತಲು ಚರಕದ ಚಕ್ರವನ್ನೇ ದೊಡ್ಡದು ಮಾಡಿ, ಬಾವಿಗೆ ರಾಟೆಯಂತೆ ಅಳವಡಿಸಿದರೆ ಹೇಗೆ? ಎಂಬ ಯೋಚನೆ ಮೂಡಿತು ರಾಮಚಂದ್ರ ರಾಯರಿಗೆ. ಬಡಗಿಯನ್ನು ಕರೆಸಿ ತಮ್ಮ ಕಲ್ಪನೆಯ ರಾಟೆ ಮಾಡಿಸಿದರು - ಕೇವಲ ೨೦ ರೂಪಾಯಿ ವೆಚ್ಚದಲ್ಲಿ. ಅದೇ “ಸರ್ವೋದಯ ರಾಟೆ". ಅದರಿಂದ ಐದು ದಶಕಗಳ ಕಾಲ ಬಾವಿಯಿಂದ ನೀರು ಮೊಗೆದು ಮೊಗೆದು ತಮ್ಮ ಗಿಡಗಳಿಗೆ ಉಣಿಸಿದರು ರಾಯರು. ಈ ನಡುವೆ ಒಂದೇ ಒಂದು ಸಲ ೨೦೦ ರೂಪಾಯಿ ವೆಚ್ಚದಲ್ಲಿ ರಾಟೆಯನ್ನು ರಿಪೇರಿ ಮಾಡಿಸಿದ್ದುಂಟು. ರಾಮಚಂದ್ರ ರಾಯರ ರಾಟೆಯನ್ನು ಪಂಪ್ ಸೆಟ್ಟಿಗೆ ಹೋಲಿಸಿ ನೋಡಿರಿ. ಮಾನವ ಶಕ್ತಿಯಿಂದ ತಿರುಗುವ ಈ ರಾಟೆ ಉಳಿಸಿದ ವೆಚ್ಚ ಅಗಾಧ. ಅಷ್ಟೇ ಅಲ್ಲ, ಇದು ಬಾವಿಯನ್ನು ಯಾವತ್ತೂ ಬರಿದು ಮಾಡಲಿಲ್ಲ. ಆದರೆ ಕೊಳವೆಬಾವಿಯೊಳಗೆ ಐನೂರು ಆರುನೂರು ಅಡಿಗಳ ಆಳಕ್ಕೆ ಇಳಿಸಿದ ಸಬ್-ಮರ್ಸಿಬಲ್ ಪಂಪ್ ಹೀಗಲ್ಲ. ಅದು ನೆಲದಾಳದ ನೀರನ್ನ ಬರಿದು ಮಾಡಿ, ಮೂರು-ನಾಲ್ಕು ವರುಷಗಳಲ್ಲೇ ಬಾವಿಯನ್ನು ಬತ್ತಿಸುತ್ತದೆ. ನಮ್ಮ ಗ್ರಾಮಗಳಿಗೆ ಬೇಕಾಗಿರುವುದು ಸರ್ವೋದಯ ರಾಟೆಯ ಸರಳ ತಂತ್ರಜ್ನಾನ ಎಂಬುದು ರಾಮಚಂದ್ರ ರಾಯರ ಪ್ರತಿಪಾದನೆ. (ಎರಡು ವರುಷಗಳಿಂದೀಚೆಗೆ ಅವರು ಬಾವಿಯ ನೀರೆತ್ತಲು ರಾಟೆ ಬಳಸುತ್ತಿಲ್ಲ, ನಿಜ. ಯಾಕೆಂದರೆ, ೮೫ ವರುಷ ವಯಸ್ಸಾದಾಗ, ರಾಟೆಯಿಂದ ನೀರೆತ್ತಲು ಕಷ್ಟವಾಗಿ ಪಂಪ್ ಸೆಟ್ ಹಾಕಿಸ ಬೇಕಾಯಿತು. ಆದರೆ, ರಾಟೆಯಿಂದಲೇ ಐವತ್ತು ವರುಷಗಳ ಅವಧಿ ನೀರೆತ್ತಿ ಅವರು ಆ ಬಾವಿ ಉಳಿಸಿಕೊಂಡದ್ದೂ ನಿಜ.)
ಗುಡ್ಡದ ಬಂಜರು ಭೂಮಿಯಲ್ಲಿಯೂ ಹುಲುಸಾಗಿ ಭತ್ತ ಬೆಳೆಸಲು ರಾಮಚಂದ್ರರಾಯರು ರೂಪಿಸಿದ ವಿಧಾನ “ಚೇರ್ಕಾಡಿ ಭತ್ತದ ಕೃಷಿ ವಿಧಾನ” ಎಂದೇ ಹೆಸರಾಗಿದೆ. ಇದು ಏರಿಯಲ್ಲಿ ಭತ್ತ ಬೆಳೆಸುವ ಪದ್ಧತಿ. ರಾಯರ ಲೆಕ್ಕಾಚಾರ ಸರಳ. ೧೦ ಸೆಂಟ್ಸ್ ಜಾಗದಲ್ಲಿ ೯ ಇಂಚು ಅಗಲದ ೧೫ ಅಡಿ ಉದ್ದದ ೧೬೦ ಏರಿ ಮಾಡಿ ೮ ಇಂಚು ಅಂತರದಲ್ಲಿ ಎರಡೆರಡು ಸಸಿ ನೆಟ್ಟರಾಯಿತು. ನಾಟಿ ಮಾಡುವಾಗ ಸೆಗಣಿ ನೀರು ಅಥವಾ ಹಟ್ಟಿ ಗೊಬ್ಬರ ಹಾಕಿ, ಅನಂತರ ಮೂರು-ನಾಲ್ಕು ದಿನಗಳಿಗೊಮ್ಮೆ ನೀರು ಹಾಕುತ್ತಿದ್ದರೆ ಸಾಕು. ಪುಳ್ಳೆ ಒಡೆದಾಗ ಇನ್ನೊಮ್ಮೆ ಹಟ್ಟಿ ಗೊಬ್ಬರ ಹಾಕಬೇಕು. ಇಷ್ಟೇ ಜಾಗದಿಂದ ನಾಲ್ಕು-ಐದು ಆಳು ಕೆಲಸದಿಂದ ಒಬ್ಬ ವ್ಯಕ್ತಿಗೆ ಒಂದು ವರುಷದ ಊಟಕ್ಕೆ ಬೇಕಾದಷ್ಟು ಭತ್ತ ಬೆಳೆಯಬಹುದು. "ಇದು ಇಷ್ಟು ಸುಲಭ. ಆದರೆ ನಮ್ಮ ರೈತರು ಯಾಕೆ ಹೀಗೆ ಭತ್ತ ಬೆಳೆಸೋದಿಲ್ಲ” ಎಂಬ ಪ್ರಶ್ನೆ ರಾಯರದು. “ಭತ್ತ, ತರಕಾರಿ ಮಾತ್ರ ಬೆಳಿತಾ ಇದ್ರೆ ಮುದಿ ವಯಸ್ಸಿನಲ್ಲಿ ಕಷ್ಟ ಆದೀತು ಅಂತ ಗೊತ್ತಿತ್ತು. ಅದಕ್ಕಾಗಿ ವರ್ಷಾನುಗಟ್ಟಲೆ ಫಲ ಕೊಡುವ ತೆಂಗು, ಹಲಸು, ಮಾವು, ಗೇರು ಇಂತಹ ಗಿಡಗಳನ್ನು ನೆಟ್ಟೆ. ಅವೆಲ್ಲ ಈಗ ಫಲ ಕೊಡ್ತಿವೆ. ಬನ್ನಿ ಮಾರಾಯರೇ, ನೋಡುವಾ" ಎಂದು ತಮ್ಮ ಕರ್ಮಭೂಮಿಗೆ ಕರೆದೊಯ್ದರು. ಅವರ ಲವಲವಿಕೆ ನನ್ನನ್ನು ಬಡಿದೆಬ್ಬಿಸಿತು. ಅಲ್ಲಿ ತೆಂಗು, ಬಾಳೆ, ಹಲಸು, ಮಾವು, ಗೇರು, ಅನಾನಸು, ಕರಿಮೆಣಸು, ಪಪ್ಪಾಯಿ ಎಲ್ಲವೂ ಇವೆ. ನೆಲದೊಳಗೆ ಅರಾರೋಟು, ಮರಗೆಣಸು, ಶುಂಠಿ ಗೆಡ್ಡೆಗಳು. “ಇವು ನನ್ನ ಬ್ಯಾಂಕ್ ಎಕೌಂಟು ಇದ್ದ ಹಾಗೆ. ಈ ವರುಷ ಮಾರ್ಕೆಟಿನಲ್ಲಿ ರೇಟು ಕಡಿಮೆ ಇದ್ದರೆ ಹಾಗೇ ಬಿಡುತ್ತೇನೆ. ಮುಂದಿನ ವರುಷಕ್ಕೆ ಇವು ಇನ್ನಷ್ಟು ಬೆಳೆದು ತೂಕ ಜಾಸ್ತಿ ಆಗ್ತದೆ - ಬ್ಯಾಂಕಿನ ದುಡ್ಡಿಗೆ ಬಡ್ಡಿ ಬೆಳೆದ ಹಾಗೆ. ನನಗೆ ಭೂಮಿ ತಾಯಿ ಎಲ್ಲವನ್ನೂ ಕೊಟ್ಟಿದ್ದಾಳೆ. ಇಲ್ಲಿ ನಾನು ಎಣಿಸಿದ್ದೆಲ್ಲ ಆಗಿದೆ ಮಾರಾಯ್ರೇ" ಎಂದು ರಾಮಚಂದ್ರ ರಾಯರು ಹೇಳೋದನ್ನು ಕೇಳ್ತಾ ಒಂದೊಮ್ಮೆ ಬಂಜರಾಗಿದ್ದ ಆ ಭೂಮಿ ನಗುತ್ತಿತ್ತು. ಕಡಿಮೆ ನೀರಿನಲ್ಲಿ ಯಂತ್ರಗಳ ಅವಲಂಬನೆಯಿಲ್ಲದೆ ಕೃಷಿ ಮಾಡಿದರೆ ಸಾಲ ಆಗೋದಿಲ್ಲ. ವರುಷದಿಂದ ವರುಷಕ್ಕೆ ರೈತನ ಉಳಿತಾಯದ ಠೇವಣಿ ಹೆಚ್ಚುತ್ತದೆ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ರಾಮಚಂದ್ರ ರಾಯರು. ನಮ್ಮ ದೇಶದ ಆರು ಲಕ್ಷ ಹಳ್ಳಿಗಳ ಉದ್ಧಾರಕ್ಕೆ ಏನು ಮಾಡಬೇಕೆಂಬ ಮಾದರಿ ಚೇರ್ಕಾಡಿಯ ಅವರ ತೋಟದಲ್ಲಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ಹತ್ತಿರದ ಚೇರ್ಕಾಡಿಯ ಅವರ ಜಮೀನಿನಲ್ಲಿ ತಂದೆಯ ಸುಸ್ಥಿರ ಕೃಷಿಯನ್ನು ಈಗಲೂ ಮುಂದುವರಿಸಿದ್ದಾರ ಅವರ ಇಬ್ಬರು ಮಗಂದಿರು.
"ಇಂದಿನ ಅಭಿವೃದ್ಧಿ ಯೋಜನೆಗಳು ಹಳ್ಳಿ ಜನರನ್ನು ಗುಲಾಮರನ್ನಾಗಿ ಮಾಡ್ತಿವೆ; ಸ್ವಾವಲಂಬಿಗಳನ್ನಾಗಿ ಮಾಡುತ್ತಿಲ್ಲ” ಎಂಬ ನೋವು ಅವರ ಮಾತಿನಲ್ಲಿತ್ತು. ಎರಡೂವರೆ ತಾಸುಗಳಲ್ಲಿ ತನ್ನ ಸಾಧನೆಗಳ ದರ್ಶನ ಮಾಡಿಸಿದ ಚೇರ್ಕಾಡಿ ರಾಮಚಂದ್ರ ರಾಯರ ಬದುಕು ದೊಡ್ಡದು. ತನ್ನ ಮುಗ್ಧತೆ, ಸಂತೃಪ್ತಿ, ಲವಲವಿಕೆಗಳನ್ನು ಬಂದವರಿಗೆಲ್ಲ ಹಂಚುವ ಅವರ ಉತ್ಸಾಹ ಅದಕ್ಕಿಂತ ದೊಡ್ಡದು.