ಸೂಕ್ಷ್ಮತೆ ಕಳೆದುಕೊಂಡರಾ ಪ್ರಧಾನಿ....!
ಭಾರತದ ಅಧಿಕಾರ ರಾಜಕೀಯದ ಶ್ರಮಜೀವಿ ಮತ್ತು ಅದೃಷ್ಟವಂತ ವ್ಯಕ್ತಿ ಶ್ರೀ ನರೇಂದ್ರ ಮೋದಿ. 75 ವರ್ಷಗಳ ಇಲ್ಲಿಯವರೆಗಿನ ಬದುಕಿನಲ್ಲಿ 13 ವರ್ಷಗಳ ಮುಖ್ಯಮಂತ್ರಿ ಮತ್ತು ಈಗಿನ 10 ವರ್ಷಗಳ ಫ್ರಧಾನ ಮಂತ್ರಿಯಾಗಿ ಸೇರಿಸಿದರೆ ಒಟ್ಟು 23 ವರ್ಷಗಳಿಂದ ನಿರಂತರವಾಗಿ ರಾಜ್ಯ ಮತ್ತು ದೇಶದ ಅತ್ಯುನ್ನತ ಅಧಿಕಾರ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ. ಅದಕ್ಕೆ ಮೊದಲು ಸಹ ಅವರ ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿಯಂತ ಉನ್ನತ ಹುದ್ದೆಯಲ್ಲಿಯೂ ಇದ್ದರು.
ಈಗಲೂ ಅದೇ ಉತ್ಸಾಹದಿಂದ ಅತ್ಯಂತ ಚಟುವಟಿಕೆಯಲ್ಲಿ ಸರ್ಕಾರ ಮತ್ತು ಪಕ್ಷದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದ ಒಳಗೆ ಮತ್ತು ವಿದೇಶಗಳಿಗೂ ಸಹ ನಿರಂತರ ಪ್ರವಾಸ ಮಾಡುತ್ತಿರುತ್ತಾರೆ ಮತ್ತು ಅತಿಹೆಚ್ಚು ಎನಿಸುವಷ್ಟು ಭಾಷಣಗಳನ್ನು ಮಾಡುತ್ತಾರೆ. ಇಲ್ಲಿಯವರೆಗೆ ಹೆಚ್ಚು ಚುನಾವಣಾ ವಿಜಯದ ಯಶಸ್ಸು ಅವರ ಬೆನ್ನಿಗಿದೆ. ಈ ಹಿನ್ನೆಲೆ ವ್ಯಕ್ತಿಯೊಬ್ಬರಿಗೆ ಸಹಜವಾಗಿ ತನ್ನ ಬಗ್ಗೆ ಅತಿಯಾದ ಆತ್ಮವಿಶ್ವಾಸ ಮತ್ತು ಅಹಂಕಾರ ಬೆಳೆದಿರುವ ಸಾಧ್ಯತೆ ಇರುತ್ತದೆ ಮತ್ತು ಅದರ ಪರಿಣಾಮ ಮಾನಸಿಕ ಸೂಕ್ಷ್ಮತೆ ತನಗರಿವಿಲ್ಲದೆ ಮಂದವಾಗಿರುವ ಸಾಧ್ಯತೆಯೂ ಇದೆ. ಅತಿಯಾದ ಕಾರ್ಯದೊತ್ತಡದ ಪ್ರಭಾವವೂ ಸೇರಿರಬಹುದು.
ಬಹುಮುಖ್ಯವಾಗಿ ದೆಹಲಿಯ ಐತಿಹಾಸಿಕ ರೈತ ಪ್ರತಿಭಟನೆಯ ಸಂದರ್ಭದಲ್ಲಿ ಒಂದು ವರ್ಷಗಳ ಕಾಲ ರೈತರು ಚಳಿ ಮಳೆ ಗಾಳಿ ಲೆಕ್ಕಿಸದೆ ಚಳವಳಿ ನಡೆಸುವಾಗ ಸುಮಾರು 750 ಜನ ನಿಧನರಾದ ಸನ್ನಿವೇಶದಲ್ಲಿ ಪ್ರಧಾನಿಗಳ ದಿವ್ಯ ನಿರ್ಲಕ್ಷ್ಯ ಮತ್ತು ನಂತರ ಅವರ ಬೇಡಿಕೆಗಳಿಗೆ ಮಣಿದದ್ದು, ಕೇಂದ್ರ ಸಚಿವರೊಬ್ಬರ ಮಗ ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕಾರು ಚಲಾಯಿಸಿ ಕೆಲವರನ್ನು ಕೊಂದು ಅತ್ಯಂತ ಅಮಾನುಷವಾಗಿ ನಡೆದುಕೊಂಡಾಗ ಅವರ ಮೌನ, ಮಧ್ಯಪ್ರದೇಶದ ಕೇಂದ್ರ ಸಚಿವರೊಬ್ಬರು ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಸಾರ್ವಜನಿಕವಾಗಿ ಅತ್ಯಂತ ಕೆಟ್ಟದಾಗಿ ನಿಂದಿಸಿದಾಗಲೂ ಅವರಿಗೆ ಎಚ್ಚರಿಕೆ ನೀಡಿದಿದ್ದದ್ದು, ಇತ್ತೀಚಿನ ದಿನಗಳ ದೆಹಲಿಯ ಮಹಿಳಾ ಕುಸ್ತಿಪಟುಗಳು ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಅನೇಕ ದಿನಗಳ ಪ್ರತಿಭಟನೆಯ ನಂತರವೂ ಅವರು ತೋರುತ್ತಿರುವ ಅನಾಸಕ್ತಿ ಮತ್ತು ಇದೀಗ ಮಣಿಪುರ ಸುಮಾರು 2 ತಿಂಗಳಿನಿಂದ ನಾಗರಿಕ ಯುದ್ಧದಿಂದ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ಅವರ ನಡೆದುಕೊಳ್ಳುತ್ತಿರುವ ರೀತಿ ಸನ್ಮಾನ್ಯ ನರೇಂದ್ರ ಮೋದಿಯವರು ಬರಬರುತ್ತಾ ಸೂಕ್ಷ್ಮತೆ ಕಳೆದುಕೊಳ್ಳುತ್ತಿದ್ದಾರೆ ಎನಿಸುತ್ತಿದೆ.
ಕಾರಣಗಳು ಹಲವಾರು ಇರಬಹುದು, ಪರಿಸ್ಥಿತಿಗಳು ಬದಲಾಗುತ್ತಿರಬಹುದು, ಆದರೆ ಅವರ ಜನಪ್ರಿಯತೆಯ ನಡುವೆ ಜನಾಕ್ರೋಶ ಭುಗಿಲೇಳುತ್ತಿರುವುದನ್ನು ಅವರು ಗ್ರಹಿಸುವಲ್ಲಿ ವಿಫಲರಾಗುತ್ತಿದ್ದಾರೆ. ಅದನ್ನು ನಿರ್ವಹಿಸುವಲ್ಲಿ ಸೋಲುತ್ತಿದ್ದಾರೆ. ಪ್ರತಿಕ್ರಿಯಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಡಾಕ್ಟರ್ ಮನಮೋಹನ್ ಸಿಂಗ್ ಅವರ ಹತ್ತು ವರ್ಷಗಳ ಆಡಳಿತದ ಕೊನೆಯ ದಿನಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಮತ್ತು ದೆಹಲಿ ಜ್ಯೋತಿ ಸಿಂಗ್ ಎಂಬ ನಿರ್ಭಯ ಅವರ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂದರ್ಭದಲ್ಲಿ ಆದ ಇದೇ ರೀತಿಯ ಆಕ್ರೋಶ ನೆನಪಾಗುತ್ತಿದೆ ಮಣಿಪುರದ ಮಹಿಳೆಯರ ಮೇಲಿನ ಬೆತ್ತಲೆ ಮೆರವಣಿಗೆ ಘಟನೆ. ಸ್ವಾತಂತ್ರ್ಯ ನಂತರದ ರಾಜಕೀಯ ಇತಿಹಾಸವನ್ನು ನೋಡಿದರೆ ಸಾಮಾನ್ಯ ಜನ ಸರ್ವಾಧಿಕಾರ, ಭ್ರಷ್ಟಾಚಾರ, ಅತ್ಯಾಚಾರ, ಬೆಲೆ ಏರಿಕೆ, ವಿರೋಧಿಗಳ ಮೇಲಿನ ಸೇಡು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದುರ್ಘಟನೆಗಳ ಸಮಯದಲ್ಲಿ ನಿರ್ಲಕ್ಷ್ಯ ಇವುಗಳನ್ನು ಸಹಿಸುವುದಿಲ್ಲ ಎಂದು ತಿಳಿದುಬರುತ್ತದೆ.
ಶ್ರೀಮತಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಅವರ ಎರಡನೆಯ ಅವಧಿ, ಈ ಕಾಲಘಟ್ಟಗಳಲ್ಲಿ ಆದ ಸೋಲಿನ ಬದಲಾವಣೆಗಳನ್ನು ಗಮನಿಸಬಹುದು. ತೀರಾ ನಿಖರವಾದ ಕಾರಣ ಗುರುತಿಸುವುದು ಕಷ್ಟ. ಆದರೆ ಮೇಲ್ನೋಟಕ್ಕೆ ಹಾಗೆ ಕಂಡುಬರುತ್ತದೆ. ಈಗ ನರೇಂದ್ರ ಮೋದಿಯವರ ಒಂಬತ್ತು ವರ್ಷಗಳ ಆಡಳಿತದ ನಂತರ ಆ ರೀತಿಯ ವಾತಾವರಣ ಹೆಪ್ಪುಗಟ್ಟುತ್ತಿರುವಂತೆ ಕಾಣುತ್ತಿದೆ. ಇದು ಖಚಿತವಾದ ಅಧ್ಯಯನ ವರದಿಯಲ್ಲ. ನನ್ನ ಒಂದು ವೈಯಕ್ತಿಕ ಅನುಭವದ ಹಿನ್ನೋಟ ಮತ್ತು ಮುನ್ನೋಟ.
ಇಡೀ ರಾಷ್ಟ್ರಾದ್ಯಂತ ಮಣಿಪುರದ ಮಹಿಳೆಯರ ಮೇಲಿನ ದೌರ್ಜನ್ಯ ಜನರನ್ನು ಕೆರಳಿಸುತ್ತಿದೆ. ಅಲ್ಲಿ ಶಾಂತಿ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ದಿಷ್ಟವಾಗಿ ಮತ್ತು ಶೀಘ್ರವಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಭಾವನೆ ಉಂಟಾಗಿದೆ. ಈಗ ಮಾನ್ಯ ಪ್ರಧಾನಿಗಳು ಎಚ್ಚೆತ್ತುಕೊಳ್ಖುವ ಸಮಯ. ಅವರ ಬಳಿ ಎಲ್ಲಾ ಮಾಹಿತಿಯೂ ಇರುತ್ತದೆ. ಆದರೆ ಮನಸ್ಸು ಮಾತ್ರ ಸೂಕ್ಷ್ಮತೆ ಕಳೆದುಕೊಳ್ಳಬಾರದು. ಮನಸ್ಸು ಸದಾ ಮಾನವೀಯತೆಯ ಪರವಾಗಿ ತುಡಿಯುತ್ತಲೇ ಇರಬೇಕು. ಇಲ್ಲದಿದ್ದರೆ ಅದು ನಿರ್ಜೀವ ಶವದಂತೆ. ಪ್ರಧಾನಿಯವರಿಗೂ ಒಳ್ಳೆಯದಾಗಲಿ, ಮಣಿಪುರದ ಜನರಿಗೂ ಒಳ್ಳೆಯದಾಗಲಿ ಮತ್ತು ಸರ್ವೇ ಜನೋ ಸುಖಿನೋ ಭವಂತು.
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ