ಸೂಡೋಮೊನಾಸ್ : ಉತ್ಪಾದನಾ ತಾಂತ್ರಿಕತೆ ಮತ್ತು ರೋಗ ನಿಯಂತ್ರಣದಲ್ಲಿ ಪಾತ್ರ

ಸೂಡೋಮೊನಾಸ್ : ಉತ್ಪಾದನಾ ತಾಂತ್ರಿಕತೆ ಮತ್ತು ರೋಗ ನಿಯಂತ್ರಣದಲ್ಲಿ ಪಾತ್ರ

ಆಧುನಿಕ ಕೃಷಿಯಲ್ಲಿ ಬೆಳೆಗಳಿಗೆ ಅನೇಕ ರೋಗಗಳು ತಗಲುತ್ತವೆ. ರೋಗಗಳು ಶಿಲೀಂಧ್ರ ದುಂಡಾಣು, ನಂಜಾಣು ಜಂತು, ಪೈಟೊಪ್ಲಾಸ್ಮ ವೈರಸ್‌ಗಳಿಂದ ಬರುತ್ತವೆ. ಈ ರೋಗಾಣುಗಳು ಪೈರುಗಳ ಭಾಗಗಳಿಗೆ ಅಂಟಿಕೊಂಡು ಜೀವನ ಚಕ್ರಕ್ಕೆ ಅವಶ್ಯಕವಾದ ಆಹಾರವನ್ನು ಪರಾವಲಂಬಿಗಳಾಗಿ ಪಡೆಯುತ್ತವೆ. ಇದರಿಂದ ಬೆಳೆಗಳ ಬೆಳವಣಿಗೆ ಕುಂಟಿತವಾಗಿ ಇಳುವರಿಯ ಮೇಲೆ ದುಷ್ಪರಿಣಾಮವಾಗುವುದು, ಅಲ್ಲದೇ ಕೆಲವೊಂದು ಹಾನಿಕಾರಕ ರೋಗಗಳಿಂದ ಪೈರು ಸಂಪೂರ್ಣನಾಶವಾಗುತ್ತದೆ.

ರೋಗ ನಿಯಂತ್ರಣದ ಕ್ರಮಗಳು: ರಾಸಾಯನಿಕ, ಜೈವಿಕ, ಬೇಸಾಯ ಕ್ರಮ ಪದ್ಧತಿ ಹಾಗೂ ರೋಗ ನಿರೋಧಕ ತಳಿಗಳ ಉಪಯೋಗ ಇತ್ಯಾದಿಗಳಿವೆ. ಕೃಷಿಯಲ್ಲಿ ರಾಸಾಯನಿಕಗಳ ಉಪಯೋಗ ಒಂದು ಶತಮಾನದಷ್ಟು ಹಳೆಯದಾದರೂ ಇವುಗಳ ಹೆಚ್ಚಿನ ಬಳಕೆ ಕಳೆದ ನಾಲ್ಕೈದು ದಶಕಗಳಿಂದ ಎಂದು ಹೇಳಬಹುದು. ಈ ರಾಸಾಯನಿಕಗಳ ಉಪಯೋಗದಿಂದ ಮೊದ-ಮೊದಲು ಹೆಚ್ಚಿನ ಇಳುವರಿ ರೋಗ ನಿಯಂತ್ರಣ ಕಂಡು ಬಂದರೂ ಆ ನಂತರ ಈ ರಾಸಾಯನಿಕಗಳಿಂದ ಆಗುವ ದುಷ್ಪರಿಣಾಮಗಳು ಕೂಡ ಬೆಳಕಿಗೆ ಬರಲಾರಂಭಿಸಿದವು. ಈ ಹೆಚ್ಚಿನ ರಾಸಾಯನಿಕಗಳ ಉಪಯೋಗದಿಂದ ಆಗುವ ಲಾಭಕ್ಕಿಂತ ಹಾನಿಯೇ ಜಾಸ್ತಿ ಎಂದು ಇತ್ತಿತ್ತಲಾಗಿ ಜನರು ಮನಗಾಣಲು ಆರಂಭಿಸಿದ್ದಾರೆ. ಆದ್ದರಿಂದ ಜೈವಿಕ ಸಸ್ಯರೋಗ ನಿರ್ವಹಣೆ ಇತ್ತೀಚಿನ ದಿನಗಳಲ್ಲಿ ಪ್ರಮುಖ ಪಾತ್ರವಹಿಸಿದೆ.

ಫ್ಲೋರೋಸೆಂಟ್ ಸೂಡೋಮೊನಾಸ್: ಇದೊಂದು ಗ್ರಾಮ್ ನೆಗೆಟಿವ್ ದುಂಡಾಣು ಜೈವಿಕ ರೋಗ ನಾಶಕವಷ್ಟೆಯಲ್ಲದೆ, ಬೆಳವಣಿಗೆ ಪ್ರಚೋದಕವಾಗಿದ್ದು, ವಿಶಾಲ ತಾಪಮಾನ ವ್ಯಾಪ್ತಿಯಲ್ಲಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಇದರ ಬಳಕೆಯಿಂದಾಗಿ ಅತ್ಯಂತ ಅಪಾಯಕಾರಿ ರೋಗಗಳನ್ನುಂಟು ಮಾಡುವ, ಮಣ್ಣಿನಲ್ಲಿ ವಾಸಿಸುವ ಹಾಗೂ ಎಲೆಗಳ ಮೇಲೆ ಪಸರಿಸುವ ಗಾಮಿನೊಮೈಸಿಸ್, ಪಿರಿಕ್ಯುಲೇರಿಯಾ, ರೈಜಕ್ಟೋನಿಯ, ಕ್ಸಾಂತೊಮಾನಾಸ್, ರ‍್ವಿನಿಯಾ ಮತ್ತು ಕೊಲೆಟೋಟ್ರಿಕಂ ಮುಂತಾದ ಸಿಡಿ/ಸೊರಗು ರೋಗ, ಬೇರು ಕೊಳೆ ರೋಗ, ಹಣ್ಣು ಕೊಳೆ ರೋಗ ಮತ್ತು ಚಿಬ್ಬು ರೋಗಗಳನ್ನುಂಟು ಮಾಡುವ ಶಿಲೀಂದ್ರಗಳು ಮತ್ತು ದುಂಡಾಣುಗಳನ್ನು ನಿರ್ವಹಣೆ ಮಾಡುತ್ತದೆ. ಭಾರತದಲ್ಲಿ ಸುಡೋಮಾನಾಸ್ ದುಂಡಾಣು ಪ್ರಭೇದವು, ಪಿ.ಎಫ್-೧, ಪಿ.ಎಫ್-೨ ಮತ್ತು ಪಿ.ಎಫ್-೯ ಎಂಬ ವಾಣಿಜ್ಯ ಹೆಸರುಗಳಲ್ಲಿ ಲಭ್ಯವಾಗುತ್ತದೆ. 

ರಂಜಕವನ್ನು ರೈತರು ಬೆಳೆಗೆ ಕೊಟ್ಟಕೂಡಲೇ ಮಣ್ಣಿನ ರಸಸಾರವನ್ನು ಶೇ.೫೦-೭೦ ರಷ್ಟು ಮಣ್ಣಿನಲ್ಲಿ ಉಳಿಯುವುದು. ಕ್ಷಾರ ಮಣ್ಣಿನಲ್ಲಿ ರಂಜಕದ ಲಭ್ಯತೆ ಕಡಿಮೆ. ಇಂತಹ ಸಂದರ್ಭಗಳಲ್ಲಿ ರಂಜಕವನ್ನು ಪೂರೈಸುವ ಸೂಕ್ಷಜೀವಿಗಳಾದ ಸುಡೋಮಾನಾಸ್‌ನ್ನು ಬೀಜೋಪಚಾರದ ಮೂಲಕ ಉಪಯೋಗಿಸಿರೆ, ರಂಜಕವು ಸಸ್ಯಗಳ ಬೆಳವಣಿಗೆಗೆ ಪೂರಕವಾಗಿ, ಇಳುವರಿಯಲ್ಲಿಯೂ ಶೇ. ೧೦-೧೨ ರಷ್ಟು ಅಭಿವೃದ್ಧಿ ಆಗುತ್ತದೆ. ಇದಲ್ಲದೇ ಕೆಲವು ಸುಡೋಮಾನಾಸ್ ಪ್ರಭೇದಗಳು ಸಿಡೆರೋಫರ್ಸ್ ಎಂಬ ಕಿಣ್ವಗಳನ್ನು ಉತ್ಪಾದಿಸುತ್ತದೆ ಈ ಸಿಡೆರೋಫರ್ಸ್ ಕಿಣ್ವಗಳು ಕಬ್ಬಿಣ ಹೀರುವ ಆಕರ್ಷಣೆ ಬಲವನ್ನು ಹೊಂದಿರುತ್ತವೆ. ಈ ಸಿಡೆರೋಫರ್ಸ್ ಕಿಣ್ವಗಳು ಮಣ್ಣಿನಲ್ಲಿರುವ ಕಬ್ಬಿಣವನ್ನು ಕರಗಿಸಿ ಸಸ್ಯಗಳ ಬೆಳವಣಿಗೆಗೆ ಪೂರಕವಾಗುವಂತೆ ಮಾಡುತ್ತವೆ. ಸುಡೋಮಾನಾಸ್ ಬೆಳೆಗಳಲ್ಲಿ ಅಂತರ್ವ್ಯಾಪಿಯಾಗಿ ರೋಗ ಹಾಗೂ ಪೀಡೆ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ಷಣಾತ್ಮಕ ಕಿಣ್ವಗಳಿಂದ ಸಸ್ಯಗಳಿಗೆ ಹೆಚ್ಚಿನ ಶಕ್ತಿ ಒದಗಿಸಬಲ್ಲದು ಎಂದು ಇತ್ತೀಚಿನ ಸಂಶೋಧನೆಯಿಂದ ಕಂಡುಬಂದಿದೆ. 

ಸೂಡೋಮೋನಾಸ್‌ಗಳ ರೋಗನಾಶಕ ಮತ್ತು ಇತರ ಗುಣಗಳು: ಈ ದುಂಡಾಣುವು ಬೇರುಗಳ ಸಮೀಪದಲ್ಲಿ ಬೆಳೆದು ಬೇರಿನ ಸುತ್ತಲೂ ಅತ್ಯಂತ ಪ್ರಬಲ ಕವಚವನ್ನು ನಿರ್ಮಿಸಿ ಹಾನಿಕಾರಕ ಶಿಲೀಂಧ್ರ ಹಾಗೂ ರೋಗ ಜಂತುಗಳಿಂದ ಬೇರನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ. ರೋಗಕಾರಕ ಶಿಲೀಂಧ್ರಗಳ ಮೇಲೆ ಪರವಲಂಬಿಯಾಗಿ ಬೆಳೆದು ಅವುಗಳಿಗೆ ಆಹಾರ ಮತ್ತು ಸ್ಥಳ ಸಿಗದ ಹಾಗೆ ಮಾಡಿ ಅವುಗಳ ಸಂಖ್ಯೆ ಮತ್ತು ಸಂತಾನೋತ್ಪತ್ತಿಯನ್ನು ಕಡಿಮೆ ಮಾಡುತ್ತದೆ.

ಮೊಳಕೆಯೊಡೆದ ಬೀಜಗಳ ಸುತ್ತಲೂ ರೋಗಾಣುಗಳಿಂದ ರಕ್ಷಿಸುತ್ತದೆ. ವಿಶೇಷವಾಗಿ ಮಣ್ಣಿನಲ್ಲಿರುವ ರೋಗಾಣುಗಳಾದ ಪೀಥಿಯಂ, ಫೈಟೋಫ್ತರಾ, ಪ್ಯುಜೇರಿಯಂ ಹಾಗೂ ಇತರೆ ಮಣ್ಣಿನ ಶಿಲೀಂದ್ರ ಹಾಗೂ ಬೀಜ ಶಿಲೀಂಧ್ರಗಳಿಂದ ಪ್ರಥಮ ಹಂತದಲ್ಲಿ ರಕ್ಷಣೆ ನೀಡುತ್ತದೆ. ಮಣ್ಣಿನಲ್ಲಿರುವ ಅಂಟಿಬಯೋಟಿಕ್ ವಸ್ತುಗಳಾದ ಫಿನಾಜಿನ್, ಡಿಎಪಿಜಿ ಪೈಯೋಕಿಲಿನ್, ಪೈರೋಲ್ನಿಟ್ರಿನ್, ಪೈಯೋವಿರಿಡಿನ್ ಮತ್ತು ಅನೇಕ ಕಿಣ್ವಗಳನ್ನು ಬಿಡುಗಡೆ ಮಾಡಿ, ಬೀಜ ಮತ್ತು ಮಣ್ಣಿನಿಂದ ಹರಡುವ ಅನೇಕ ರೋಗಾಣುಗಳನ್ನು ನಿರ್ವಹಣೆ ಮಾಡುತ್ತದೆ. ಈ ದುಂಡಾಣುವು ರೋಗಕಾರಕ ಶಿಲೀಂದ್ರ, ದುಂಡಾಣು ಹಾಗೂ ಜಂತುಗಳನ್ನು ನಿಯಂತ್ರಿಸುವುದಲ್ಲದೇ ತಕ್ಕ ಮಟ್ಟಿಗೆ ನಂಜಾಣು ರೋಗವನ್ನು ನಿರ್ವಹಿಸಬಲ್ಲ ಶಕ್ತಿ ಹೊಂದಿದೆ ಸೂಡೋಮಾನಾಸ್ ಬೆಳೆ ಪ್ರಚೋದಕ ಗುಣವನ್ನು ಹೊಂದಿದ್ದು ಬೆಳೆಗಳಲ್ಲಿ ಅಂತರ್ವ್ಯಾಪಿಯಾಗಿ ರೋಗ ಹಾಗೂ ಪೀಡೆ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ಷಣಾತ್ಮಕ ಕಿಣ್ವಗಳಿಂದ ಸಸ್ಯಗಳಿಗೆ ಹೆಚ್ಚಿನ ಶಕ್ತಿ ಒದಗಿಸಬಲ್ಲದು ಎಂದು ಸಂಶೋಧನೆಯಿಂದ ಕಂಡು ಬಂದಿದೆ.                 

ಸೂಡೋಮೋನಸ್ ತಯಾರಿಸುವ ವಿಧಾನ : ಸೂಡೋಮೋನಸ್ ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳ ಮಣ್ಣಿನಲ್ಲಿ ಬದುಕುತ್ತದೆ. ಪರಿಸರ ಸ್ನೇಹಿಯಾಗಿದೆ. ಮೊದಲಿಗೆ ಸೂಡೋಮೋನಸ್ ದುಂಡಾಣುಗಳನ್ನು ಆರೋಗ್ಯಕರವಾದ ಮಣ್ಣು, ಬೆಳೆಯ ಬೇರು, ಎಲೆ ಹಾಗೂ ಕಾಂಡದ ಭಾಗದಿಂದ ಬೇರ್ಪಡಿಸಿ ಸಿರಿಯಾಲ್ ಡೈಲೂಸನ್ ವಿಧಾನದ ಮುಖಾಂತರ ಒಂದು ಮಿ. ಲೀ. ಡೈಲೂಸನನ್ನು ಸೂಕ್ತವಾದ ಪರಿಸ್ಕರಿಸಿದ ಸೂಡೋಮೋನಸ್ ಅಗಾರ್ ಅಥವಾ ನ್ಯೂಟ್ರಿಯಂಟ್ ಅಗಾರ್ ಆಹಾರ ಮಾಧ್ಯಮವನ್ನು ಉಪಯೊಗಿಸಿಕೊಂಡು ಬೆಳೆಸಿಕೊಳ್ಳಬೇಕು. ಮಾಧ್ಯಮದಲ್ಲಿ ಸೂಡೋಮೋನಸ್ ದುಂಡಾಣು ವೃದ್ದಿಸಿದ ನಂತರ, ೪೮ ಗಂಟೆಗಳ ಕಾಲಾವಧಿಯನಂತರ ಬೆಳವಣೆಗೆಯಾದ ಜೈವಿಕ ರೋಗನಾಶಕಗಳನ್ನು ಪರಿಸ್ಕರಿಸಿದ ಸೂಡೋಮೋನಸ್ ಬ್ರಾತ್ನ ಅಥವಾ ನ್ಯೂಟ್ರಿಯಂಟ್ ಬ್ರಾತ್ನಲ್ಲಿ ಇನಾಕ್ಯುಲೇಟ್ ಮಾಡಿ ೨೦-೩೦ ದಿನಗಳ ನಂತರ ಸಂಮೃದ್ಧವಾಗಿ ವೃದ್ಧಿಸಿದ ನಂತರ ಪ್ರತಿ ಲೀ ದ್ರಾವಣಕ್ಕೆ ಸ್ವತಾಪಹರಿಸಿದ ೪ ಕೆ. ಜಿ. ಪರಿಸ್ಕರಿಸಿದ ಟಾಲ್ಕಮ್ ಪೌಡರ ಜೊತೆಗೆ ಬೆರೆಸಿ ಒಂದು ವಾರ ನೆರಳಲ್ಲಿ ಒಣಗಿಸಿ ಒಂದು ಕೆ. ಜಿ. ಪ್ಯಾಕೇಟುಗಳನ್ನು ತಯಾರಿಸಿಕೊಳ್ಳಬೇಕು. ನಂತರ ತಯಾರಿಸಿದ ಸೂಡೋಮೋನಸ್ ಪ್ಯಾಕೇಟುಗಳನ್ನು ಆಳವಾದ ಶೈತ್ಯೀಕರಣದಲ್ಲಿ ಶೇಖರಣೆ ಮಾಡಬೇಕು. ತಯಾರಿಸಿದ ಸೂಡೋಮೋನಸ್ ಜೈವಿಕ ರೋಗನಾಶಕ ಪ್ಯಾಕೇಟುಗಳಲ್ಲಿ ಕನಿಷ್ಠ ೨ x ೧೦೮ ಸಿ. ಎಫ್. ಯು/ ಗ್ರಾಂ. ಇರಲೇಬೇಕು.

ಸೂಡೋಮೋನಸ್ ಉಪಯೋಗಿಸುವ ವಿಧಾನ : ಬೀಜೋಪಚಾರ:  ೫-೧೦ ಗ್ರಾಂ. ನಂತೆ ಸೂಡೋಮೋನಸ್ ಪುಡಿಯನ್ನು ೧೦ ಲೀ ಅಂಟಿನ ನೀರಿನೊಂದಿಗೆ ಬೆರೆಸಿ ದ್ರಾವಣ ತಯಾರಿಸಿ ಅದರಿಂದ ಬೀಜೋಪಚಾರ ಮಾಡಬೇಕು. ಬೀಜೋಪಚಾರವನ್ನು ಬಿತ್ತನೆಗೆ ೪-೬ ಗಂಟೆಗಳ ಕಾಲ ಮುಂಚಿತವಾಗಿ ಮಾಡಬೇಕು. ಬೀಜೋಪಚಾರ ಮಾಡಿದ ಬೀಜಗಳನ್ನು ನೆರಳಿನಲ್ಲಿ ಒಣಗಿಸಿ ನಂತರ ಬಿತ್ತನೆ ಮಾಡಬೇಕು.

ಮಣ್ಣಿಗೆ ಬೆರೆಸುವ ವಿಧಾನ: ಬಿತ್ತುವ ಪೂರ್ವದಲ್ಲಿ ಅಥವಾ ಬಿತ್ತನೆ ಮಾಡುವಾಗ ಕೃಷಿ ಬೆಳೆಗಳಿಗೆ ಎರಡು ಕಿಲೋ ಸೂಡೋಮೋನಸ್ ಫ್ಲೋರೆಸೆನ್ಸ ಜೀವಾಣು ಪುಡಿಯನ್ನು ೫೦ ಕಿಲೋ ತಿಪ್ಪೆಗೊಬ್ಬರದೊಂದಿಗೆ ಬೆರೆಸಿ ಬಿತ್ತುವ ಕೂರಿಗೆ ಹಿಂದೆ ಅಥವಾ ಕೋಲುಗಳ ಮೂಲಕ ಭೂಮಿಗೆ ಸೇರಿಸಬೇಕು.

ಗಿಡಗಳಿಗೆ ಬಳಸುವ ವಿಧಾನ: ಹಣ್ಣಿನ ಗಿಡಗಳು, ತೆಂಗು, ಕಾಳುಮೆಣಸು, ಶುಂಠಿ ಮತ್ತು ಏಲಕ್ಕಿ ಗಿಡಗಳಿಗೆ ಪ್ರತಿ ಗಿಡಕ್ಕೆ ೧೦-೧೫ ಗ್ರಾಂ ಸೂಡೋಮೋನಸ್ ಫ್ಲೋರೆಸೆನ್ಸ ಜೈವಿಕ ನಿಯಂತ್ರಕ ಪುಡಿಯನ್ನು ೩-೫ ಕಿಲೋ ತಿಪ್ಪೆಗೊಬ್ಬರದೊಂದಿಗೆ ಬೆರೆಸಿ ಗಿಡಗಳ ಸುತ್ತಲೂ ಉಂಗುರ ಪದ್ದತಿಯಲ್ಲಿ ಹಾಕಿ ಮಣ್ಣಿನಿಂದ ಮುಚ್ಚಿ ನೀರು ಹಾಯಿಸಬೇಕು. 

ಸಸಿಮಡಿಗಳಲ್ಲಿ ಬಳಸುವ ವಿಧಾನ: ಅರ್ಧ ಕಿಲೋ ಸೂಡೋಮೋನಸ್ ಫ್ಲೋರೆಸೆನ್ಸ ಜೀವಾಣು ಪುಡಿಯಲ್ಲಿ ೫೦ ಲೀಟರ್ ನೀರಿಗೆ ಬೆರೆಸಿ ಕಾಲು ಎಕರೆ ಪ್ರದೇಶದ ಸಸಿಮಡಿಗಳಲ್ಲಿ ಬೀಜ ಬಿತ್ತನೆ ಮಾಡಿದ ಕೂಡಲೇ ಮಣ್ಣಿನ ಮೇಲೆ ಸಿಂಪಡಿಸಬೇಕು. ಪ್ರತಿ ಲೀ. ನೀರಿನಲ್ಲಿ ೧೦ ಗ್ರಾಂ. ಜೈವಿಕ ಶಿಲೀಂಧ್ರನಾಶಕವನ್ನು ಬೆರೆಸಿ ಸಸಿಗಳ ಬೇರುಗಳನ್ನು ಉಪಚರಿಸಬೇಕು. ಸಿಂಪರಣೆಗೆ ೨ x ೧೦೮ (ಸಿ. ಎಫ್. ಯು) ಗ್ರಾಂ/ಲೀಟರ್ ಜೀವ ಕಣಗಳು ಅವಶ್ಯವಾಗಿದೆ.

ಸೂಡೋಮೋನಸ್ ಬಳಸುವಾಗ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು: ಬಳಸುವ ಜೈವಿಕ ರೋಗನಾಶಕಗಳಲ್ಲಿ ೨ x ೧೦-೮ ಸಿ. ಎಫ್. ಯು/ ಗ್ರಾಂ. ಇರಲೇಬೇಕು. ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಕಾಪಾಡುವುದರಿಂದ ಜೈವಿಕ ಕ್ರಿಯೆ ಉತ್ತಮಗೊಳ್ಳುತ್ತದೆ. ಬೀಜೋಪಚಾರ ಮಾಡುವಾಗ ರಾಸಾಯನಿಕ ಶಿಲೀಂಧ್ರನಾಶಕ/ ಪೀಡೆನಾಶಕಗಳ ಜೊತೆಗೆ ಬಳಸದೇ ಇರುವುದು ಉತ್ತಮ. ಜೈವಿಕ ಶಿಲೀಂಧ್ರನಾಶಕವನ್ನು ಬಳಸುವಾಗ ಮಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಪದಾರ್ಥಗಳಾದ ಕೊಟ್ಟಿಗೆ ಗೊಬ್ಬರ/ ಬೇವಿನ ಹಿಂಡಿ/ ಕಾಂಪೋಸ್ಟ್ ಇರುವಂತೆ ನೋಡಿಕೊಳ್ಳುವುದರಿಂದ ಅವುಗಳ ಅಭಿವೃದ್ದಿ ಉತ್ತಮವಾಗಿರುತ್ತದೆ.

ಶೇಖರಣೆ ಮಾಡುವಾಗ ರಾಸಾಯನಿಕ ಗೊಬ್ಬರ ಶಿಲೀಂಧ್ರನಾಶಕ/ಕಳೆನಾಶಕ/ಕೀಟನಾಶಕಗಳೊಂದಿಗೆ ಎಂದೂ ಸೇರಿಸಬಾರದು. ಜೈವಿಕ ರೋಗನಾಶಕಗಳ ಡಬ್ಬಿಯನ್ನು ತಂಪಾದ ಹಾಗು ಒಣ ಪ್ರದೇಶದಲ್ಲಿಡಬೇಕು. ಬೀಜೋಪಚಾರ ಮಾಡಿದ ಬೀಜಗಳನ್ನು ನೇರವಾದ ಬಿಸಿಲಿನಿಂದ ರಕ್ಷಿಸಿ ನೆರಳಿನಲ್ಲಿ ಒಣಗಿಸಿ ಬಿತ್ತುವುದರಿಂದ ಉತ್ತಮ ರೋಗ ರಹಿತ ಮೊಳಕೆಗಳನ್ನು ಕಾಣಬಹುದಾಗಿದೆ. ಉತ್ಪಾದನೆಯಾದ ೬ ತಿಂಗಳೊಳಗೆ ಜೈವಿಕ ರೋಗನಾಶಕವನ್ನು ಉಪಯೋಗಿಸಿದರೆ ಹೆಚ್ಚಿನ ಲಾಭವಾಗುವುದು. 

ಸೂಡೋಮೋನಸ್ ಜೈವಿಕ ರೋಗನಾಶಕದಿಂದಾಗುವ ಲಾಭಗಳು: ಜೈವಿಕ ಸಮತೋಲನವನ್ನು ಕಾಪಾಡಲು ಸಹಕಾರಿಯಾಗಿದೆ. ಅತೀ ಕಡಿಮೆ ಖರ್ಚಿನಲ್ಲಿ ರೋಗಗಳನ್ನು ನಿಯಂತ್ರಣ ಮಾಡಬಹುದು. ವಾತಾವರಣದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮಗಳಾಗುವುದಿಲ್ಲ. ಮಣ್ಣಿನಲ್ಲಿ ಸಾವಯವ ಪದಾರ್ಥ ಹಾಗೂ ತೇವಾಂಶವಿದ್ದಲ್ಲಿ ತಾನಾಗಿಯೇ ಅಭಿವೃದ್ದಿ ಹೊಂದುತ್ತದೆ.

ಮಾಹಿತಿ ಕೃಪೆ: ಶೃತಿ, ಟಿ. ಹೆಚ್. ಮಧುಶ್ರೀ ಕೆರಕಲಮಟ್ಟಿ, ರಂಜನಾ ಜೋಶಿ, ಅನನ್ಯ ಕಟ್ಟಿಮನಿ,  ಕೃಷಿ ವಿಶ್ವವಿದ್ಯಾಲಯ ರಾಯಚೂರು – ತೋಟಗಾರಿಕಾ ವಿಶ್ವವಿದ್ಯಾಲಯ ಬಾಗಲಕೋಟೆ