ಸೂಫಿಯ ಕಣ್ಣುಗಳಲ್ಲಿ ಮಿನುಗಿದ ನಕ್ಷತ್ರಪುಂಜಗಳು!
ಅಬ್ದ್ ಅಲ್-ರಹಮಾನ್ ಅಲ್-ಸೂಫಿ ಅವರು ಪರ್ಷಿಯನ್ ಖಗೋಳಶಾಸ್ತ್ರಜ್ಞರಾಗಿದ್ದರು; ಪಶ್ಚಿಮದಲ್ಲಿ 'Azophi' ಅಥವಾ 'Azophi Arabus' ಹೆಸರಿನಿಂದ ಖ್ಯಾತಿಗಳಿಸಿದರು. ಶ್ರೀಯುತರು ಪರ್ಷಿಯಾದ ಇಸ್ಫಹಾನ್'ನಲ್ಲಿರುವ ಎಮಿರ್ ಅದುದ್ ಅದ್-ದೌಲಾ ಅವರ ಆಸ್ಥಾನದಲ್ಲಿ ಭೌತಜ್ಞರಾಗಿ [Astrophysicist] ದುಡಿದಿದ್ದರು; ಹಾಗೆಯೇ, ಗ್ರೀಕ್ ಖಗೋಳಶಾಸ್ತ್ರದ ಕೃತಿಗಳನ್ನು ಭಾಷಾಂತರಿಸಲು ಮತ್ತು ವಿಮರ್ಶಿಸಲು ಶ್ರಮಿಸಿದರು- ವಿಶೇಷತಃ ಟಾಲೆಮಿಯ ಅಲ್ಮಾಜೆಸ್ಟ್'ನ್ನು [Almagest of Ptolemy] ಸರಿಪಡಿಸಿದರು. ದೂರದರ್ಶಕಗಳು ಶೋಧಿಸುವ ಹಲವಾರು ವರುಷಗಳ ಹಿಂದೆಯೇ ಸರಿಸುಮಾರು 960ರ ಸುತ್ತ ಸೂಫಿಯವರು ನಮ್ಮ ನೆರೆಹೊರೆಯ ನಕ್ಷತ್ರಪುಂಜಗಳನ್ನು ಪ್ರಪ್ರಥಮವಾಗಿ ಬರಿಗಣ್ಣಿನಿಂದ ಕಂಡುಹಿಡಿದದ್ದು ಖಗೋಳಶಾಸ್ತ್ರವು ಲಕ್ಷಿಸಿದ ಮೈಲಿಗಲ್ಲುಗಳಲ್ಲಿ ಒಂದಾಗಿದೆ!!
ಅಲ್-ಸೂಫಿಯವರು 964 A.D.ಯಲ್ಲಿ 32.7° ಅಕ್ಷಾಂಶ ಇಸ್ಫಹಾನ್'ನಲ್ಲಿ ತಮ್ಮ ಖಗೋಳ ಸಫಲ ವೀಕ್ಷಣೆಯನ್ನು ನಡೆಸಿದರು: ಪರಿಣಾಮವಾಗಿ, ಅವರು ನಮ್ಮ [ಅರ್ಥಾತ್ ನಮ್ಮ ನಕ್ಷತ್ರಪುಂಜವಾದ Milky way] ನೆತ್ತಿಯ ಮೇಲೆ ಬೃಹತ್ ಆಕಾರದ ಅಂಬುಧರವನ್ನು ಗಮನಿಸಿ ಉತ್ಸಾಹದ ಪುಟಿ ಚೆಂಡಾದರು; ದೂರದರ್ಶಕವಿಲ್ಲದೆ ಅವರು ಆಕಾಶಗಂಗೆಯಲ್ಲಿದ್ದ Nebulaವನ್ನು ಕಂಡು ಅದನ್ನು ದಟ್ಟ ಮೋಡ ಅಥವಾ ಗದಾಂಬರವೆಂದು ಗ್ರಹಿಸಿ, ತಮ್ಮ ಮೇರುಕೃತಿ 'The Book of Stars'ನಲ್ಲಿ ತಾವು ಕಂಡಿದ್ದು ಬೃಹತ್ ಮೋಡವೆಂದು ಪ್ರಕಟಿಸಿದರು. ತರುವಾಯ, 1519 ADಯಲ್ಲಿ ಹಡಗಾಳು ಫರ್ಡಿನಾಂಡ್ ಮೇಗಲ್ಲಂ ಅವರು ದಾಕ್ಷಿಣಾತ್ಯ ಭೂಗೋಳಾರ್ಧದಿಂದ [Southern Hemisphere] ಆ ಕಾಲದ ಶಕ್ತಿಶಾಲಿ ದೂರದರ್ಶಕದ ನೆರವಿನಿಂದ ಅದೇ ನಕ್ಷರಪುಂಜವನ್ನು ಮತ್ತು ಅದರಲ್ಲಿರುವ Great Nebulaವನ್ನು ಪುನಃ ನೋಡಿದರು. ಪರಿಣಾಮವಾಗಿ, ಆ ನಕ್ಷತ್ರಪುಂಜವನ್ನು 'Large Magellanic Cloud' ಎಂದು ನಾಮಕರಣಗೊಳಿಸಲಾಯಿತು; ಆದರೆ, ಇಂದೂ ಪಶ್ಚಿಮ ವೈಜ್ಞಾನಿಕ ವಿಶೇಷತಃ ಖಗೋಳಶಾಸ್ತ್ರದಲ್ಲಿ Large ಮತ್ತು Small Magellanic Cloud ಕಂಡಿದ ಮನ್ನಣೆ ಅಲ್-ಸೂಫಿ ಅವರಿಗೆ ಸಲ್ಲಿಸಲಾಗುತ್ತಿದೆ!
ಹಾಗೆಯೇ, ಸೂಫಿಯವರು ನಮ್ಮ ನೆರೆಯ ಇನ್ನೊಂದು ಬೃಹತ್ ಆಕಾಶಗಂಗೆಯಾದ 'Andromeda Galaxy'ಯನ್ನು ಕಂಡು ಹಿಡಿದದ್ದು ನಿಖರವಾದ ಸಾಕ್ಷ್ಯಾಧಾರಗಳೊಂದಿಗೆ ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಬೃಹತ್ ಆಕಾಶಗಂಗೆಗಳೊಂದಿಗೆ, ಅಲ್-ಸೂಫಿಯವರು ಹಲವಾರು South of Canopusನ ಮುಖ್ಯ ನಕ್ಷತ್ರಗಳನ್ನು ಕಂಡಿದ್ದು ಖಗೋಳಶಾಸ್ತ್ರ ಕ್ಷೇತ್ರಕ್ಕೆ ಕರುಣಿಸಿದ ಗಮನಾರ್ಹ ಕೊಡುಗೆಯಾಗಿದೆ!
964 A.D.ಯಲ್ಲಿ ಅಲ್-ಸೂಫಿಯವರು ತಮ್ಮ ಮೇರುಕೃತಿಯಾದ 'ಕಿತಾಬ್ ಅಲ್-ಕವಾತಿಬ್ ಅಲ್-ಥಾಬಿತ್ ಅಲ್-ಮುಸವ್ವರ್' [ಆಂಗ್ಲ ಭಾಷೆಯಲ್ಲಿ: Book of Fixed Stars ಎಂದು ಕರೆಯುತ್ತಾರೆ] ಅನ್ನು ಪ್ರಕಟಿಸಿದರು. ಅವರು ಪುಸ್ತಕದಲ್ಲಿ ನಲವತ್ತೆಂಟು ರಾಶಿಗಳು ಮತ್ತು ಅವುಗಳನ್ನು ಕೂಡಿದ ನಕ್ಷತ್ರಗಳನ್ನು ವಿವರಿಸಿದರು. ಅಲ್ಲದೇ, ಸೂಫಿಯವರು ತಮ್ಮ ಕೃತಿಯಲ್ಲಿ ಟಾಲೆಮಿಯ ಹಲವಾರು ತಪ್ಪುಗಳನ್ನು ಸರಿಪಡಿಸಿದರು.
ಸೂಫಿ ಅವರು ನಕ್ಷತ್ರಮಂಡಲಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿದರು: ಇಪ್ಪತ್ತೊಂದು ಉತ್ತರ ನಕ್ಷತ್ರಮಂಡಲಿಗಳು, ಹನ್ನೆರಡು ರಾಶಿಚಕ್ರ ನಕ್ಷತ್ರಮಂಡಲಿಗಳು ಮತ್ತು ಹದಿನೈದು ದಕ್ಷಿಣ ನಕ್ಷತ್ರಮಂಡಲಿಗಳು. ಈ ನಲವತ್ತೆಂಟು ನಕ್ಷತ್ರಮಂಡಲಿಗಳಲ್ಲಿ ಪ್ರತಿಯೊಂದಕ್ಕೂ, ಅಲ್-ಸೂಫಿ ನಕ್ಷತ್ರಮಂಡಲಿವನ್ನು ರೂಪಿಸುವ ಎಲ್ಲಾ ನಕ್ಷತ್ರಗಳನ್ನು ಒಳಗೊಂಡಿರುವ ನಕ್ಷತ್ರ ಚಾರ್ಟ್ಅನ್ನು ಒದಗಿಸಿದ್ದಾರೆ. ಅಲ್-ಸೂಫಿ ತಮ್ಮ ಪ್ರತಿಯೊಂದು ರೇಖಾಚಿತ್ರಗಳಲ್ಲಿನ ನಕ್ಷತ್ರಗಳನ್ನು ಎರಡು ಗುಂಪುಗಳಾಗಿ ಸಂಘಟಿಸಿದರು: ನಕ್ಷತ್ರಮಂಡಲವು ಚಿತ್ರಿಸಲು ಉದ್ದೇಶಿಸಿರುವ ಚಿತ್ರವನ್ನು ರೂಪಿಸುವ ನಕ್ಷತ್ರಗಳು ಮತ್ತು ನಕ್ಷತ್ರಪುಂಜದ ಸಮೀಪದಲ್ಲಿರುವ ಆದರೆ ಒಟ್ಟಾರೆ ಚಿತ್ರಣಕ್ಕೆ ಕೊಡುಗೆ ನೀಡದ ನಕ್ಷತ್ರಗಳು.
Ecliptic Planeವು ಆಕಾಶದ ಸಮಭಾಜಕಕ್ಕೆ ಸಂಬಂಧಿಸಿದಂತೆ ಇಳಿಜಾರನ್ನು ಹೊಂದಿದೆ ಮತ್ತು ಉಷ್ಣವಲಯದ ವರ್ಷದ ಉದ್ದವನ್ನು ಹೆಚ್ಚು ನಿಖರವಾಗಿ ಸೂಫಿಯವರು ಲೆಕ್ಕ ಹಾಕಿದರು. ಅಲ್-ಸೂಫಿ ಆಸ್ಟ್ರೋಲೇಬ್ ಕುರಿತು ಸಹ ಬರೆದು, ಅದಕ್ಕಾಗಿ ಹಲವಾರು ಹೆಚ್ಚುವರಿ ಉಪಯೋಗಗಳನ್ನು ತೋರಿಸಿಕೊಟ್ಟಿದ್ದಾರೆ: ಖಗೋಳಶಾಸ್ತ್ರ, ಜ್ಯೋತಿಷ್ಯ, ಜಾತಕ, ಸಂಚರಣೆ, ಸಮೀಕ್ಷೆ, ಸಮಯಪಾಲನೆ, ಕಿಬ್ಲಾ, ನಮಾಜ್ ಪ್ರಾರ್ಥನೆ ಇತ್ಯಾದಿಗಳಂತಹ ವಿವಿಧ ಕ್ಷೇತ್ರಗಳಲ್ಲಿ ಸರಿಸುಮಾರು 1000ಕ್ಕೂ ಹೆಚ್ಚು ಅದರ ಉಪಯೋಗಗಳನ್ನು ಸರಳವಾಗಿ ವಿವರಿಸಿದರು. ಅಲ್-ಸೂಫಿಯ ಖಗೋಳಶಾಸ್ತ್ರದ ಕೊಡುಗೆಗಳಿಂದ - ಅವನ ನಂತರ ಬಂದ ಅನೇಕ ಖಗೋಳಶಾಸ್ತ್ರಜ್ಞರು - ಪ್ರೇರಿತರಾದರು; ರಾಜಕುಮಾರ ಮತ್ತು ಸುಪ್ರಸಿದ್ಧ ಖಗೋಳಶಾಸ್ತ್ರಜ್ಞರಾಗಿದ್ದ ಉಲುಗ್ ಬೇಗ್ ಸಹ ಸೂಫಿಯವರಿಂದ ಪ್ರೇರಿತರಾಗಿದ್ದರು. ದುರಾದೃಷ್ಠವಾತ್, ಅಲ್-ಸೂಫಿಯವರ ಹೆಚ್ಚಿನ ಸಂಶೋಧನೆಗಳು ಅರೇಬಿಕ್ ಮತ್ತು ಪಾರ್ಸಿ ಭಾಷೆಯಲ್ಲಿರುವ ಕಾರಣ, ಅವುಗಳನ್ನು ಅವಲೋಕಿಸಲು ಕಷ್ಟಕರವಾಗಿದೆ.
ಸೂಫಿ ಪ್ರಾಪ್ತಿಸಿದ ವಿಮೋಚನೆಗಳು :
೧. ಚಂದ್ರನ ಮೇಲ್ಮೈಯಲ್ಲಿರುವ ಬಾಂಬುಕುಳಿಯೊಂದನ್ನು ಮತ್ತು ಅಂತರೀಕ್ಷದಲ್ಲಿ ಗತಿಸುತ್ತಿರುವ Asteroid beltನಲ್ಲಿರುವ ಕ್ಷುದ್ರಗ್ರಹವಾದ '12621 Alsufi'ಯನ್ನು ಶ್ರೀಯುತರ ಶುಭನಾಮದಿಂದ ಹೆಸರಿಸಲಾಯಿತು.
೨. Sagitta ಬಳಿಯಿರುವ Constellation Vulpeculaದಲ್ಲಿರುವ ತಾರಾಸಮೂಹವಾದ 'Collinder 399'ವನ್ನು 'Al Sufi's Cluster' ಎಂದು ಮರುನಾಮಕರಣಗೊಳಿಸಲಾತು.
೩. 2006ರಿಂದ, ಇರಾನಿನ Astronomy Society of Iran ಹವ್ಯಾಸಿ ಖಗೋಳಶಾಸ್ತ್ರಜ್ಞರ ಸಮಿತಿಯು (ASIAC) ಅಲ್-ಸೂಫಿಯ ನೆನಸಿಕೆಗಾಗಿ ಅಂತರರಾಷ್ಟ್ರೀಯ ಸೂಫಿ ವೀಕ್ಷಣಾ ಸ್ಪರ್ಧೆಯನ್ನು ವಾರ್ಷಿಕವಾಗಿ ನಡೆಸುತ್ತದೆ.
೪. ಡಿಸೆಂಬರ್ 7, 2016ರಂದು ಗೂಗಲ್ ಡೂಡಲ್ ಸೂಫಿ ಅವರ 1113ನೇ ಜನ್ಮದಿನವನ್ನು ಸ್ಮರಿಸಿತು.
-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ