ಸೂರತ್ ಕೋರ್ಟ್ ತೀರ್ಪು ನಾಯಕರಿಗೆ ಪಾಠವಾಗಲಿ
೨೦೧೯ರ ಏ.೧೩ರಂದು ಕರ್ನಾಟಕದ ಕೋಲಾರದಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ನೀಡಿದ್ದ ಅವಹೇಳನಕಾರಿ ಹೇಳಿಕೆಯ ಸಂಬಂಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣದ ವಿಚಾರಣೆ ನಡೆಸಿದ ಸೂರತ್ ನ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರಾಹುಲ್ ರನ್ನು ದೋಷಿ ಎಂದು ಘೋಷಿಸಿದೆ. ಅಲ್ಲದೆ ಈ ಸಂಬಂಧ ರಾಹುಲ್ ಗಾಂಧಿ ಅವರಿಗೆ ೨ ವರ್ಷದ ಜೈಲು ಶಿಕ್ಷೆ ಮತ್ತು ೧೫,೦೦೦ ರೂ. ದಂಡವನ್ನು ವಿಧಿಸಿದೆ. ಇದೇ ವೇಳೆ ಶಿಕ್ಷೆಯ ಜಾರಿಯನ್ನು ೩೦ ದಿನಗಳವರೆಗೆ ತಡೆ ಹಿಡಿದಿರುವ ನ್ಯಾಯಾಧೀಶರು ಅಲ್ಲಿಯವರೆಗೆ ರಾಹುಲ್ ಗೆ ಜಾಮೀನು ಮಂಜೂರು ಮಾಡಿದ್ದು ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದ್ದಾರೆ.
ಸೂರತ್ ನ್ಯಾಯಾಲಯದ ಈ ತೀರ್ಪು ಇದೀಗ ದೇಶದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ. ನಾಯಕರೊಬ್ಬರು ನೀಡಿದ ರಾಜಕೀಯ ಹೇಳಿಕೆಗೆ ನ್ಯಾಯಾಲಯ ಇಷ್ಟೊಂದು ಮಹತ್ವ ನೀಡಿರುವ ಕುರಿತಂತೆಯೂ ಜನಸಾಮಾನ್ಯನಿಂದ ಹಿಡಿದು ಕಾನೂನು ಪಂಡಿತರವರೆಗೂ ಚರ್ಚೆಗಳು ನಡೆಯತೊಡಗಿದೆ. ಇನ್ನು ರಾಜಕೀಯ ವಲಯದಲ್ಲಂತೂ ಈ ತೀರ್ಪು ಬಿರುಗಾಳಿಯನ್ನೇ ಎಬ್ಬಿಸಿದೆ. ಕಾಂಗ್ರೆಸ್ ಅಂತೂ ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಹರಿಹಾಯ್ದಿದೆ. ವಿಪಕ್ಷಗಳನ್ನು ಹಣಿಯಲು ಬಿಜೆಪಿ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟ ಬಳಿಕ ಈಗ ನ್ಯಾಯಾಲಯದಲ್ಲಿ ಅನವಶ್ಯಕ ಎಫ್ ಆರ್ ಐ ಗಳನ್ನು ದಾಖಲಿಸಿ ವಿಪಕ್ಷ ನಾಯಕರಿಗೆ ವಿನಾಕಾರಣ ಕಿರುಕುಳ ನೀಡುತ್ತಿದೆ. ಮಾತ್ರವಲ್ಲದೆ ಈ ಪ್ರಕರಣಗಳ ವಿಚಾರಣೆಯಲ್ಲೂ ಹಸ್ತಕ್ಷೇಪ ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಬಿಜೆಪಿ ಮಾತ್ರ ಈ ಎಲ್ಲಾ ಅರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದು ತನ್ನ ನಾಯಕನಿಗೆ ಶಿಕ್ಷೆ ವಿಧಿಸಿದ್ದನ್ನು ಸಹಿಸಿಕೊಳ್ಳಲಾಗದೆ ಕಾಂಗ್ರೆಸ್ ಸರಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದೆ. ರಾಹುಲ್ ಗಾಂಧಿ ಅವರು ಹೋದಲ್ಲಿ ಬಂದಲ್ಲಿ ತಮ್ಮ ನಾಲಗೆಯನ್ನು ಹರಿಯಬಿಡುವ ಮೂಲಕ ತೀರಾ ಬಾಲಿಶವಾಗಿ ವರ್ತಿಸುತ್ತಲೇ ಬಂದಿದ್ದು ಇದಕ್ಕೆ ಸೂಕ್ತ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ ಎಂದು ಪ್ರತಿಪಾದಿಸಿದೆ.
ಮುಂದಿನ ದಿನಗಳಲ್ಲಿ ಈ ತೀರ್ಪಿನ ವಿರುದ್ಧ ರಾಹುಲ್ ಗಾಂಧಿ ಸಲ್ಲಿಸಲಿರುವ ಮೇಲ್ಮನವಿಯ ವಿಚಾರಣೆ ನಡೆಸುವ ಉನ್ನತ ನ್ಯಾಯಾಲಯಗಳೂ ಈ ತೀರ್ಪನ್ನು ಎತ್ತಿ ಹಿಡಿದಲ್ಲಿ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ರದ್ದಾಗಲಿದೆ. ಮಾತ್ರವಲ್ಲದೆ, ಎರಡು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಆರು ವರ್ಷಗಳ ಕಾಲ ಅವರು ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಇವೆಲ್ಲವನ್ನು ಮುಂದಿನ ಕಾನೂನು ಹೋರಾಟದ ಫಲಿತಾಂಶ ನಿರ್ಧರಿಸಲಿದೆ. ಇವೆಲ್ಲವನ್ನು ಒಂದಿಷ್ಟು ಪಕ್ಕಕ್ಕಿಟ್ಟು ನೋಡಿದಾಗ ಇಡೀ ಪ್ರಕರಣ ಮತ್ತು ನ್ಯಾಯಾಲಯ ನೀಡಿದ ತೀರ್ಪು ಎಲ್ಲ ಪಕ್ಷಗಳ ನಾಯಕರಿಗೆ ಎಚ್ಚರಿಕೆಯ ಕರೆಗಂಟೆ ಎನ್ನಬಹುದು. ರಾಹುಲ್ ಗಾಂಧಿ ಅವರ ಮಟ್ಟಿಗಂತೂ ಈ ತೀರ್ಪು ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾದುದಾಗಿದೆ.
ಈ ತೀರ್ಪನ್ನು ಅತ್ಯಂತ ಸೂಕ್ಸ್ಮವಾಗಿ ಅವಲೋಕಿಸಿದ್ದೇ ಆದಲ್ಲಿ ರಾಜಕೀಯ ನಾಯಕರಿಗೆಲ್ಲರಿಗೂ ಇದೊಂದು ಚಾಟಿ ಏಟು. ನಾಯಕನಾದವ ತನ್ನ ಮಾತು, ಕೃತಿ, ವರ್ತನೆಗಳಲ್ಲಿ ಎಷ್ಟೊಂದು ಜಾಗರೂಕನಾಗಿರಬೇಕು ಎಂಬುದನ್ನು ಇದು ಬೆಟ್ಟು ಮಾಡಿ ತೋರಿಸಿದೆ. ಉನ್ನತ ಸ್ಥಾನದಲ್ಲಿರುವ ನಾಯಕರಿಂದ ಹಿಡಿದು ತಳಹಂತದ ನಾಯಕನಾದವನಿಗೂ ಈ ತೀರ್ಪು ಅನ್ವಯವಾಗುತ್ತದೆ. ಸೂರತ್ ನ್ಯಾಯಾಧೀಶರು ನೀಡಿರುವ ತೀರ್ಪು, ಉಲ್ಲೇಖಿಸಿರುವ ಅಂಶಗಳು ಪಕ್ಷಾತೀತವಾಗಿ ಪ್ರತಿಯೊಬ್ಬ ನಾಯಕನ ಹೊಣೆಗಾರಿಕೆಯನ್ನು ನೆನಪಿಸಿಕೊಟ್ಟಿದೆ. ರಾಜಕೀಯ ನಾಯಕರು ತಮ್ಮ ನಾಲಗೆಯನ್ನು ಹರಿಯ ಬಿಡುವುದಕ್ಕೂ ಎಚ್ಚರ ವಹಿಸುವುದು ಅತ್ಯಗತ್ಯ ಎಂಬುದನ್ನು ಮತ್ತೊಮ್ಮೆ ನೆನಪಿಸಿಕೊಟ್ಟಿದೆ. ಅದೆಷ್ಟೇ ಉನ್ನತ, ಜನಪ್ರಿಯ ನಾಯಕನಾಗಿರಲಿ, ಆರೋಪ, ಟೀಕೆ, ವ್ಯಂಗ್ಯ, ವಿಡಂಬನೆಯ ಮಾತು ಬಂದಾಗ ಇವೆಲ್ಲವೂ ತಮ್ಮ ಇತಿಮಿತಿ, ಚೌಕಟ್ಟಿನ ಪರಿಧಿಯೊಳಗೆ ಇದ್ದರೆ ಮಾತ್ರ ಸೊಗಸು. ಇಲ್ಲವಾದಲ್ಲಿ ಆ ನಾಯಕನ ಸಾಧನೆ, ವರ್ಚಸ್ಸು, ಜನಪ್ರಿಯತೆ ಎಲ್ಲವೂ ನೀರ ಮೇಲಿಟ್ಟ ಹೋಮದಂತೆಯೇ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೪-೦೩-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ