ಸೂರಿನ ಕೂಗು
ಕೆಲಸ ನಡೆಯದೇ ಇದ್ದಾಗ, ತಾನು ಬಯಸಿದ್ದು ಸಿಗದೇ ಇದ್ದಾಗ "ಅತ್ತು ಕರೆದು ಮೈಯ್ಯನ್ನೆಲ್ಲಾ ಪರಚಿಕೊಳ್ಳುವುದು" ಮಗು. ಕೆಲವರು ಕೈಗೆ ಸಿಕ್ಕಿದ್ದನ್ನು ಗೋಡೆಗೆ ಅಪ್ಪಳಿಸಿ ತಮ್ಮ ಕೋಪವನ್ನು ವ್ಯಕ್ತಪಡಿಸು ತ್ತಾರೆ. ಇನ್ನೂ ಕೆಲವರು ಶತಪಥ ಹಾಕುತ್ತಾ ತಮ್ಮ ಕೋಪವನ್ನು ನೆಲದ ಮೇಲೆ, ಪಾಪಿ ಶರೀರ ಹೊತ್ತ ಪಾದಗಳ ಮೇಲೆ ತೋರಿಸುತ್ತಾರೆ, ಇಲ್ಲಾ ಕೈಗೆ ಸಿಗುವ ಮಕ್ಕಳ ಕಿವಿ ಹಿಂಡಿ, ಅವರ ಬಾಯಿಂದ ಸಪ್ತ ಸ್ವರ ಹೊರಡಿಸಿ ಕೋಪ ತೀರಿಸಿಕೊಳ್ಳುತ್ತೇವೆ. ಕೋಪ ಎನ್ನುವುದೇ ಹೀಗೆ. ವ್ಯಕ್ತಪಡಿಸಲೇ ಬೇಕು. ಇಲ್ಲದಿದ್ದರೆ ಹಿಡಿದಿಟ್ಟುಕೊಂಡ ಕೋಪ depression ಆಗಿಯೋ ಮತ್ತೇನಾದರೂ ಆಗಿಯೋ ಪರಿಣಮಿಸುತ್ತದೆ. pent up anger ಒಳ್ಳೆಯದಲ್ಲ. ವೈಯಕ್ತಿಕ ಜೀವನದಲ್ಲಿ ಹೀಗಾದರೆ ಪ್ರಜಾಪ್ರಭುತ್ವದಲ್ಲಿ ಈ ಕೋಪ, ನಿರಾಶೆ, ಹತಾಶೆಯನ್ನು ವ್ಯಕ್ತಪಡಿಸಲು ಹಲವು ಮಾರ್ಗಗಳು. ನಾಯಕನ ಅಥವಾ ವಿರೋಧಿಯ ಪ್ರತಿಕೃತಿ ಸುಟ್ಟೋ, ಘೋಷಣೆ ಕೂಗಿಯೋ (ಕಾಂಗ್ರೆಸ್ ಪಕ್ಷ ಎತ್ತು ಭಿಕ್ಷ, ೧೯೭೭ ರಲ್ಲಿ ಜನತಾ ಪಕ್ಷದವರು ಹೇಳುತ್ತಿದ್ದುದು, ಈಗ ಇದು ಹಳೆ ಫ್ಯಾಶನ್), ಕಪ್ಪು ಬಾವುಟ ಮೂತಿಗೆ ಹಿಡಿದೋ, ರಸ್ತೆ ತಡೆ ನಡೆಸಿಯೋ ಪ್ರಕಟ. ಮೇಲೆ ಹೇಳಿದವು run of the mill ಅಂತಾರಲ್ಲ ಹಾಗೆ. ಕೇಳಿ, ನೋಡಿ ಸಾಕಾಗಿ ಹೋದ ನಮೂನೆಗಳು. ಎಲ್ಲಿ ಹೋದರೂ, ಯಾವ ಸಂದರ್ಭಗಳಲ್ಲೂ ಎಲ್ಲಾ ಹೆಣ್ಣು ಮಕ್ಕಳ ಮೈ ಮೇಲೂ ನಡೆದಾಡುವ "ಮಾಕ್ಸಿ" ಗಳ ಹಾಗೆ. ಸರ್ವಾಂತರ್ಯಾಮಿ. ಇತ್ತೀಚೆಗೆ ಈ ಏಕತಾನತೆಗೆ, monotonous ಗೆ, ಬಿಡುವು ಸಿಕ್ಕಿತು. ನಮ್ಮಲ್ಲೂ ಇದೆ ಕ್ರಿಯಾಶೀಲತೆ ಎಂದು ತೋರಿಸಿದೆವು. ಪ್ರೇಮಿಗಳ ದಿನದಂದು ಈ ಆಚರಣೆ ಸಲ್ಲದು ಎಂದು ಪ್ರೇಮಿಗಳಿಗೆ ಎಚ್ಚರಿಸಿದವರ ಅಂಡುಗಳಿಗೆ ಕೆಂಪು ಕೆಂಪಾದ ಚಡ್ಡಿಗಳ ವಿತರಣೆ. ಜಯಲಲಿತಾಳ ಸೀರೆ ವಿತರಣೆ ಥರ, ಐಶ್ವರ್ಯಾ ರೈ ವಿವಾಹದ ಲಡ್ಡುಗಳ ಥರ ಅತ್ಯುತ್ಸಾಹದ ಚಡ್ಡಿ ವಿತರಣೆ. ಪ್ರತಿಭಟಿಸಲು ನಾವು ಕಂಡುಕೊಂಡ ಈ ವಿನೂತನ ವಿಧಾನ ನಮ್ಮ ದೇಶದಲ್ಲಿ ಮಾತ್ರವಲ್ಲ, ಹೊರ ದೇಶಗಳಲ್ಲೂ ಜನಪ್ರಿಯವಾಗಿ ಅಮೆರಿಕೆಯ ಪ್ರಸಿದ್ಧ NPR ರೇಡಿಯೋ ಸಹ ಬಿತ್ತರಿಸಿತು. ಈಗಾಗಲೇ ಚಡ್ಡಿಗಳು ಸವೆದೋ, ಹರಿದೋ ಹೋದರೂ ಈ ಪ್ರತಿಭಟನೆಯ "ರೂವಾರಿಣಿ" ಮಾತ್ರ ಅಜರಾಮರಳಾದಳು. ಕ್ರಿಯಾಶೀಲತೆಗೆ "ಚಡ್ಡಿ ಸಾಕ್ಷಿ" ಯಾದಳು.
ಬಹಳ ಸಂಭಾವಿತರಾದ, ಸುಸಂಸ್ಕೃತರಾದ ನಾವು ಜನ ಚಡ್ಡಿ ಹಾಕಿಕೊಳ್ಳಲಿ ಎಂದು ಸರಬರಾಜು ಮಾಡಿದರೆ ಮತ್ತೊಂದೆಡೆ ಪ್ಯಾಂಟ್ ಬಿಚ್ಚಿ ಪ್ರತಿಭಟನೆ. ಆಂ, ಏನ್ರೀ ಇದು ಉದ್ಧಟತನ ಎಂದಿರಾ? ಯಾರಿಗ್ರೀ ಉದ್ಧಟತನ? ಉದ್ಧತನ ನಮಗೆ. ನಗ್ನತೆಯೇ ನೈಜತೆ ಎಂದು ನಂಬುವ, ನಂಬಿದಂತೆ ನಡೆಯುವ ಪಾಶ್ಚಾತ್ಯರಿಗೆ ಏನ್ರೀ ಉದ್ಧಟತನ? ಮೇಲೆ ಹೇಳಿದ ಪ್ಯಾಂಟ್ ಅವರೋಹಣ ಮಾಡಿ ಪ್ರತಿಭಟನೆ ನಡೆದಿದ್ದು ಇಟಲಿಯ ರೋಮ್ ನಗರದಲ್ಲಿ. ಇಟಲಿ ಎಂದ ಕೂಡಲೇ ಕಿವಿ ನಿಮಿರುತ್ತವೆ ನಮ್ಮದು, ಎಷ್ಟಿದ್ದರೂ ನಮ್ಮ ಬೀಗರಲ್ಲವೇ ಅವರು? ರೋಮ್ ನಗರದ ಮೇಯರ್ ಹೊಸ ತೆರಿಗೆ ಒಳಗೊಂಡಿದ್ದ ಆಯ-ವ್ಯಯ ಪತ್ರ ಮಂಡಿಸಲು ತಯಾರಿಲ್ಲ. ಚುನಾವಣೆ ಹತ್ರ ಬಂತು ಎಂದು ಆಯ-ವ್ಯಯ ಪತ್ರ ಅಡಿಗಿಟ್ಟು ಕೂತು ಬಿಟ್ಟ ಪರಮ ಪೂಜ್ಯ ಮೇಯರ್. ಇದನ್ನು ತೆಗೆಸಲು ಮಾಡಿದ ಎಲ್ಲಾ ಪ್ರಯತ್ನವೂ ವಿಫಲವಾದ ಮೇಲೆ ಈ ಅವರೋಹಣ ಕಾರ್ಯಕ್ರಮ. ಇದರ ಉದ್ಘಾಟನೆ ಯಾರು ಮಾಡಿದರೋ ಗೊತ್ತಿಲ್ಲ, ಅವರೋಹಣ ಸಾಂಗವಾಗಿ ಜರುಗಿತು. ಜನರ ಅವಸ್ಥೆ ಕಂಡು ಬಂಡೆ ಕರಗಿದರೂ ಮೇಯರ್ ನ ಹೃದಯ ಕರಗದೆ ಆಯ ವ್ಯಯ ಪತ್ರ ಬಚ್ಚಲು ಸೇರಿಕೊಂಡಿತು.
ಅಮೆರಿಕೆಯ ಆಪ್ತ ಮಿತ್ರ, ತಾನು ಪಶ್ಚಿಮ ಎಂದರೆ ಪೂರ್ವ ಎನ್ನುವ ಇರಾನ್ ದೇಶದಲ್ಲಿ ಅಧ್ಯಕ್ಷೀಯ ಚುನಾವಣೆ. ಹಾಲಿ ಅಧ್ಯಕ್ಷ "ಅಹ್ಮದಿ ನಿಜಾದ್" ಸೋತರೂ ಸೋಲೊಪ್ಪದೆ ಅಮೆರಿಕೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಬುಶ್ ಸಾಹೇಬರು ಪ್ರತಿಸ್ಪರ್ದಿ "ಅಲ್ ಗೋರ್" ಗೆ ಹಾಕಿದ ಟೋಪಿಯನ್ನೇ ತಮ್ಮ ಎದುರಾಳಿಗೆ ತೊಡಿಸಿ recycling ನ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಜಗಕ್ಕೆ, ವಿಶೇಷವಾಗಿ ಪಾಶ್ಚಾತ್ಯರಿಗೆ (recycling ಪಾಶ್ಚಾತ್ಯರ ಕೂಸು) ಪಾಠ ಹೇಳಿಕೊಟ್ಟರು. ಈ ವಿಷಯದಲ್ಲಿ ಅಹ್ಮದಿ ನಿಜಾದ್ ಬುಶ್ ಅಭಿಮಾನಿ. ಪ್ರಪಂಚದ ಯಾವುದೇ ದಿಕ್ಕುಗಳಲ್ಲಿ ಹರಡಿ ಹೋದರೂ ತಮ್ಮ ಗುಣ ವೈಶಿಷ್ಟ್ಯಗಳ ಜನರನ್ನು ಕಂಡುಕೊಳ್ಳುತ್ತಾರೆ ಖದೀಮರು. ವಿರೋಧ ಪಕ್ಷದ ಅಭ್ಯರ್ಥಿ ಬಿಡುತ್ತಾನೆಯೇ, ಅದೂ ಉರಿಯುವ ಬೆಂಕಿಗೆ ಅಮೇರಿಕಾ ಗಾಳಿ ಹಾಕಲು ತಯಾರಾಗಿರುವಾಗ? ವಿದ್ಯಾರ್ಥಿಗಳು ಬೀದಿಗೆ ಬಂದರು. ನಮ್ಮ ನೆರೆಯ ಮಿತ್ರ ೧೯೮೯ ರಲ್ಲಿ "ತಿಯಾನನ್ಮೆನ್ ಚೌಕ" ದ ಬಳಿ ಸೇನೆಯ ಟ್ಯಾಂಕರು ಗಳನ್ನು ಕಳಿಸಿ ರಸ್ತೆಯನ್ನು ಕೆಂಬಣ್ಣಕ್ಕೆ (ಪ್ರದರ್ಶನಕಾರರ ರಕ್ತದಿಂದ) ತಿರುಗಿಸಿದ ಹಾಗೆ ಮಾಡಲಿಲ್ಲ ಪ್ರೊಫೆಸರ್ ಅಹ್ಮದಿ ನಿಜಾದ್. ಡ್ರಿಲ್ ಮಾಸ್ತರ್ ನಂತೆ ಒಂದಿಷ್ಟು ಲಾಠಿ, ಮತ್ತೊಂದಿಷ್ಟು ಬೆದರಿಕೆ ಹಾಕಿ ಒಳಕ್ಕೆ ಕಳಿಸಿದರು ಪ್ರದರ್ಶನಕಾರರನ್ನು. ಈಗ "ಪೆಂಟ್ ಅಪ್" ಕೋಪವನ್ನೇನು ಮಾಡೋದು? ನೆಲೆ ಕಾಣದ ಕೋಪ ಸೂರು ಹತ್ತಿತು. ಜನ ತಮ್ಮ ಮನೆಗಳ ಸೂರಿನ ಮೇಲೆ ನಿಂತು ಅರಚಿದರು ಘೋಷಣೆಗಳನ್ನು. ದಿನವೂ ನಿರ್ದಿಷ್ಟ ಸಮಯಕ್ಕೆ ಕಿರುಚುವುದು. ಪಾಪ ಇವರಿಗೆ ಗೊತ್ತಿಲ್ಲ ರಾಜಕಾರಣಿಗಳು ತಾವು ಅಧಿಕಾರ ವಹಿಸಿಕೊಂಡ ಕೂಡಲೇ ಮೊದಲನೆಯದಾಗಿ ಕಳೆದುಕೊಳ್ಳುವುದು ಕಿವಿಗಳನ್ನು ಎಂದು. ಎರಡನೆಯದಾಗಿ ಕಳಕೊಳ್ಳೋದು ಮಾನವನ್ನು. ಟೆಹರಾನಿನಲ್ಲೂ, ಇರಾನಿನ ಇತರೆ ನಗರಗಳಲ್ಲೂ ನಡೆದ ಗದ್ದಲ ಬೇರೆಲ್ಲ ದೇಶಗಳ ನಿದ್ದೆಗೆಡಿಸಿ ಗಡದ್ದಾಗಿ ಮಲಗಿದ್ದ ಶ್ವೇತ ಭವನವನ್ನು ಎಚ್ಚರಿಸಿತು. ಎಂದಿನಂತೆ ಕಟುವಾದ ಶಬ್ದಗಳು ಉರುಳಲಿಲ್ಲ ತಡಬಡಿಸಿ ಎದ್ದ ಶ್ವೇತ ಭವನದ ಹಸಿರು ಹುಲ್ಲು ಹಾಸಿನಿಂದ. ಏಕೆಂದರೆ ಇದು ಬುಶ್ ಶ್ವೇತ ಭವನವಲ್ಲ, ಒಬಾಮ ಭವನ. ಸ್ವಲ್ಪ ನಯವಾಗಿಯೇ ಗದರಿಸಿತು ಅಮೇರಿಕಾ. ನೋಡಪ್ಪಾ ಹೀಗೆಲ್ಲ ಮಾಡಬಾರದು, ಸರಿಯಾಗಿ ಮತಗಳನ್ನೂ ಎಣಿಸು, ಎಣಿಸಲು ಬರದಿದ್ದರೆ ಬೇಕಾದರೆ ನಮ್ಮ ಜನಗಳನ್ನು ಕಳಿಸುತ್ತೇವೆ ಎಂದು. ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕರೂ ಆದ ಇರಾನಿನ ಅಧ್ಯಕ್ಷರು ಅಮೆರಿಕೆಗೆ ತಮ್ಮದೇ ಭಾಷೆಯಲ್ಲಿ mind your business ಎಂದು ಹೇಳಿ ಅಮೆರಿಕೆಯ ಪ್ರತಿಭಟನೆಗೂ, ವಿದೇಶೀ ಸರಕಾರಗಳ ಮೂದಲಿಕೆಗೂ, ಮಾಧ್ಯಮಗಳ ತಿವಿತಗಳಿಗೂ ಅಸಾಧಾರಣವಾದ ಕಿವುಡುತನ ಪ್ರದರ್ಶಿಸಿದರು. ತಾವು ತಮಗರಿವಿಲ್ಲದೆಯೇ ಮಹಾತ್ಮ ಬುಶ್ ರ ಅಭಿಮಾನಿ ಎಂದು ತೋರಿಸಿಕೊಟ್ಟರು ಪ್ರಪಂಚಕ್ಕೆ.
ಥಾಯ್ಲೆಂಡಿನಲ್ಲಿ ಪದಚ್ಯುತ ಪ್ರಧಾನಿ "ಥಕ್ಸಿನ್ ಶಿನಾವತ್ರ" ರನ್ನು ಮರಳಿ ಅಧಿಕಾರಕ್ಕೆ ತರಬೇಕೆಂದು ಪಟ್ಟು ಹಿಡಿದು ಜನ ಬೀದಿಗಿಳಿದರು ಕೆಂಪು ಅಂಗಿ ಧರಿಸಿ. ನಗರವೆಲ್ಲಾ ಕೆಂಪೋ ಕೆಂಪು. ಪ್ರತಿಭಟನೆಯ ವ್ಯಾಲೆಂಟೈನ್. ಜಪ್ಪಯ್ಯ ಎನ್ನಲಿಲ್ಲ ಸೇನಾ ಬೆಂಬಲಿತ "ಅಭಿಸಿತ್ ವೆಜ್ಜಜೀವ". ೪೫ ರ, ಆಕ್ಸ್ಫೋರ್ಡ್ ನಲ್ಲಿ ಕಲಿತ ಸ್ಫುರದ್ರೂಪಿ ರಾಜಕಾರಣಿ ಥಾಯಿಲೆಂಡ್ ಅನ್ನು ವಿದೇಶೀ ಬಂಡವಾಳ ಹೂಡಿಕೆದಾರರಿಗೆ ಆಕರ್ಷಕವನ್ನಾಗಿ ಮಾಡಿದ್ದರು. ಆದರೆ ಶಿನಾವತ್ರ ಬೆಂಬಲಿಗರಿಗೆ ಈ ಬದಲಾವಣೆಯಾಗಲಿ, ಪ್ರಗತಿಯಾಗಲಿ ಬೇಕಿಲ್ಲ. ತರಬೇಕು ಮರಳಿ ತಮ್ಮ ನಾಯಕನನ್ನು ಗದ್ದುಗೆಗೆ. ಕೊನೆಗೆ ಎಲ್ಲರೂ ತಮ್ಮ ತಮ್ಮ ರಕ್ತ ಶೇಖರಿಸಿಕೊಂಡು ಬಕೇಟು ಗಳಲ್ಲಿ ತುಂಬಿ ಅಭಿಸಿತ್ ನಿವಾಸದ ಮುಂದೆ ಸುರಿದರು. ಅಭಿಸಿತ್ ಅವರ ಜಗುಲಿ ನೆತ್ತರುಮಯವಾಯಿತು, ಕ್ಷಣಗಳಲ್ಲಿ ರಕ್ತ ಹೆಪ್ಪುಗಟ್ಟಿತು. ಅದರೊಂದಿಗೆ ಅಭಿಸಿತ್ ನ ಅಧಿಕಾರದ ಮೋಹವೂ ಇನ್ನಷ್ಟು ಹೆಪ್ಪುಗಟ್ಟಿತು.
ಹೀಗೆ ಪ್ರತಿಭಟನೆಗಳು ಒಂದಲ್ಲ ಒಂದು ತಮ್ಮದೇ ಆದ ರೀತಿಯಲ್ಲಿ ಪ್ರತ್ಯಕ್ಷಗೊಂಡು, ಸೋತ, ನೀರಸ ವಿಶ್ವಕ್ಕೆ ಗೆಲುವನ್ನೂ, ಲವಲವಿಕೆಯನ್ನು ತಂದು ಕೊಡುತ್ತವೆ. ನಿಮ್ಮದೂ ಏನಾದರೂ ವಿಶಿಷ್ಟ ವಿಧಾನಗಳಿದ್ದರೆ ಹೇಳಿ. ನಿಮಗಾಗದ ಸಹೋದ್ಯೋಗಿ ಸಮೀಪ ಇಲ್ಲದಾಗ ಅವನ ಹೆಸರಿನಲ್ಲಿ (ಆತ ತೆರೆದಿಟ್ಟು ಹೋದ office outlook ಮೂಲಕ) ಬೇಡದ ಮೇಲ್ ಕಳಿಸಿ ಆತನ ಬಾಳನ್ನು ಬಂಗಾರ ಮಾಡಿದ ನಿದರ್ಶನಗಳಿದ್ದರೆ ಹಂಚಿಕೊಳ್ಳಿ.