ಸೂರ್ಯನ ಕುದುರೆ ಏರಿ ಬಂದ ಬೆಳಕಿನ ಹುಡುಗ

ಸೂರ್ಯನ ಕುದುರೆ ಏರಿ ಬಂದ ಬೆಳಕಿನ ಹುಡುಗ

ಕವನ

ನನಗೋ ಇನ್ನಿಲ್ಲದ ನಿದ್ದೆ

ಎಬ್ಬಿಸಿದಂತಾಯ್ತ ಯಾರೋ

ನೋಡುತ್ತೇನೆ,ಇದೆಂತಹ ಅಚ್ಚರಿ!

ಗೋಡೆಗೆ ಸಣ್ಣ ಬಿರುಕು ಬಿದ್ದಿದೆ

ಬೆಳಕಿನ ಕಿರಣವೊಂದು ತೂರಿ 

ಕೋಣೆಯ ಕತ್ತಲನು 

ಶಲಾಕೆಯಾಗಿ ಸೀಳಿದೆ!

ಕೋರೈಸುವ ಖಡ್ಗದಂತಹ ಬೆಳಕು!

 

ಕತ್ತಲನೆ ಉಂಡು ಕತ್ತಲನೆ ಹೊದ್ದು 

ಕತ್ತಲನೆ ಬಿತ್ತಿ ಕತ್ತಲನೆ ಬೆಳೆದು

ಆಳರಸರಾಗಿ ಮೆರೆದವರಿಗೆ

ಕತ್ತಲನು ಕಣ್ಣಿಟ್ಟು ಕಾದವರಿಗೆ

ಇಷ್ಟವಾದೀತು ಹೇಗೆ ಬೆಳಕು?

ಇರಿಸಿದ್ದು ಹಾಗೇ ಅಲ್ಲವೇ

ಎಲ್ಲರನೂ ಕತ್ತಲಲಿ

ಅನುಗಾಲದ ಮಂಪರಿನಲಿ

 

ಕತ್ತರಿಸುತ್ತಿದೆಯಲ್ಲ ಈಗ ಈ ಬೆಳಕು

ಗಾಜಿನಂಥ ಕಣ್ಣುಗಳಲಿ!

 

ಬಿಸಿಲು ಬೇಗೆಗಳಿಂದ ಬಾಧಿತರಾಗದ

ಕವಿಸಮಯಗಳ ಹಂಗಿಲ್ಲದ

ಮಳೆ ಚಳಿಗಳ ಸಂಗ ತೊರೆದ

ಕತ್ತಿ ನಗೆಯ ಹೊಸ ಮಂದಿ

ಹಾವಿನ ಪೂರೆಯಂತಹ 

ತಂಪು ಕತ್ತಲ ಕಂಬಳಿ ಹೊದ್ದು

ಮಲಗಿರಬೇಕಾದರೆ ನೆಮ್ಮದಿಯಲಿ

 

ಕುದುರಿಸಿ ಬೇಕಾದ ವ್ಯವಹಾರ

ಯಶದ ಏಣಿಯ ತುತ್ತ ತುದಿಗೇರಿ

ಬೇಡವಾದವರ ಕತ್ತು ಕುಯ್ದು

ಏಳದಂತೆ ಪಾತಾಳದಾಳಕೆ ಅಮುಕಿ

 

ಮೆದುಮಾತುಗಳಲಿ ಕತ್ತರಿಸುವ ಕತ್ತಲು

ನಗುಮೊಗದ ಪೀಠಸ್ಥ ಕತ್ತಲು

 

ಏನಿದೇನಿದು,ಸಖೇದಾಶ್ಚರ್ಯ

ಬೆಳೆಯುತ್ತಲೇ ಇದೆ ಬೆಳಕಿನ ಸೆಲೆ!

ಹಿಡಿದಿಡಲಾಗುತ್ತಿಲ್ಲ ಕಟ್ಟಿನೊಳಗೆ

ಸೋತು ಮೊಂಡಾಗುತ್ತಿವೆ

ಗರಗಸದ ಹಲ್ಲುಗಳೂ

ಜಗ್ಗುತ್ತಲಿಲ್ಲ ಠೇಂಕಾರದ ಬೀಸಿಗೂ

 

ಹರಿದು ಬಂದರೆ ಹೀಗೇ ಬೆಳಕಿನ ಹೊಳೆ 

ತುಂಬಿದರೆ ಇಡೀ ಕೋಣೆ 

ಗೀರಿದರೆ ಕತ್ತಲ ಬುಡಕೇ ಕಡ್ಡಿ 

ಭಗ್ಗನುರಿಯದೇ ಅಗ್ನಿಜ್ವಾಲೆ?

ಮುಕ್ಕದಿರುವುದೇ 

ತಮ್ಮ ಮೂಳೆ ಮಜ್ಜೆಗಳನೇ?

 

ಏನುಳಿದೀತು ಆಗ ತಮಗಲ್ಲಿ

ಸುಟ್ಟು ನಗರ ಸುಟ್ಟು ಬಣ್ಣದಂಗಡಿ

ಸುಟ್ಟು ಆಟಾಟೋಪ

ಬಾಜಾ ಬಜಂತ್ರಿ

ಬರಿ ಬೂದಿ

ಕತ್ತಿ ದೊಣ್ಣೆ ಬಿಲ್ಲು ಬಾಣ

ಲಾಠಿ ಖಡ್ಗ ಕೋವಿ ಗುಂಡು 

ಬಾಂಬರುಗಳು ಅಣುಬಾಂಬು

ಏನಾದರೂ ಸರಿ,ತನ್ನಿ ಈ ಕೂಡಲೇ

 

ಹಿಮ್ಮೆಟ್ಟಿಸುವುದು ಹೇಗೆ 

ಬೆಳಕನು 

ಬೇಗ ಹೇಳಿ

 

ಕತ್ತು ಹಿಡಿದು ಹುಷಾರಾಗಿ

ಹಂಡೆಯ ಬಿಲದೊಳಗೆ ಹೊಗಿಸಿ 

ಕರಗಿಸಬಿಡಬೇಕು ಇನ್ನೇನು 

ಕತ್ತಲ ಹೊಟ್ಟೆಯಲಿ ಬೆಳಕನು

ಯತ್ನ ಈ ಪರಿಯಾಗಿ 

ಜಾರಿ ಇರುವ ಹೊತ್ತಿಗೆ

ಬೆಳಗಾಯಿತು

ಬೆಳ್ಳನೆ!

 

ಸೂರ್ಯನ ಕುದುರೆಯನೇರಿ ಬಂದು

ಕಾಯುತ್ತಿದ್ದ ನನಗಾಗಿ ಬಾಗಿಲಲಿ 

ಬೆಳಕಿನ ಹುಡುಗ!

- ವಸಂತ ಬನ್ನಾಡಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್