ಸೂರ್ಯೋದಯದ ಸೊಬಗು

ಸೂರ್ಯೋದಯದ ಸೊಬಗು

ಕವನ

ಸುತ್ತ ಮುತ್ತಿಹ ಅ೦ಧ ತಮವನು
ನೆತ್ತರಿನ ವರ್ಣವದೊ ಮುಸುಕಿತು
ಕತ್ತರಿಸಿ ಕತ್ತಲೆಯ ಪರದೆಯ ಸರಿಸಿ ಪೂರ್ವದಲಿ
ಎತ್ತರದ ಅ೦ಗಳದ ಬಾನಲಿ
ಚಿತ್ತವಿಸುತಿರುತಿರ್ಪ ದಿನಮಣಿ
ಬತ್ತಳಿಕೆಯಿ೦ದ೦ಬ ಬಿಲ್ಲಿಗೆ ಹೂಡಿದ೦ದದಲಿ 


ಓಕುಳಿಯು ಚೆಲ್ಲಾಡೆ ವರ್ಣದ
ಆಕರವೊ ಅಂಬರವು ಎನಿಸಲ
ನೇಕ ಕಂಠದೊಳುಲಿಯಿತಾ ಖಗ ಪಕ್ಷಿ ಸಂಕುಲವು
ಸೋಕುತಿರೆ ಹಿತಚಳಿಯ ಮಾರುತ
ಆಕಳುಗಳೆದ್ದೆದ್ದು ನಿಲ್ಲಲು
ಸೂಕಲವು ಕೆನೆಯುತಲಿ ಖುರಪುಟ ದನಿಯ ಮಾಡುತಿರೆ


ಕುಕ್ಕುಟವು ಸೊಬಗಿ೦ದ ಕೂಗಲು
ಕುಕ್ಕರವು ವೀಕ್ಷಿಸುತ ಕುಳಿತಿರೆ
ಕುಕ್ಕಲನುವಾಗಿಹನು ನೇಸರ ಕಿರಣದ೦ಬುಗಳ
ಪಕ್ಕವಾದ್ಯದ ರವದ ನಾದಕೆ
ಹೊಕ್ಕು ಬೆಳಕಿನ ಪ್ರಭೆಯು ನಾಲ್ದೆಸೆ
ಉಕ್ಕುತಿದೆ ಚಟುವಟಿಕೆ ಎಸೆಯುವ ಅ೦ಬುಧಿಯ ತೆರದಿ 


ನಸುಕಿನೆಸುಗೆಯ ದಿವ್ಯಸಮಯದಿ
ಮುಸುಕ ಹೊದ್ದಿಹ ಕ೦ದ ಮಲಗಿರೆ
ಎಸಳು ಹೂವಿನ ಅರಳಿ ರವಿಯನು ಎದುರುಗೊಳುತಿರಲು
ಹಸುರಿಗುಸಿರನು ಹೆಣೆಯುತಿರುತಲಿ
ಎಸೆಯುತಿಹ ದಿನಪನನು ಕಾಣುತ
ಒಸೆಯುತಿಹ ತನುಮನದಿ ನವ ಉಲ್ಲಾಸ ಮೂಡಿಹುದು 


ಮಿಗಿಲಿರದ ಕಾ೦ತಿಯನು ಧರಿಸುತ
ಸೊಗಸಿನಲಿ ರಥವೇರಿ ನಿಲುತೀ
ಜಗದ ವ೦ದ್ಯನು ಉದಿಪ ಸೊಬಗನು ನೋಡಿ ಮನತಣಿಯೆ
ಮುಗಿಲುಗಳ ಭೇದಿಸುವ ಕಾ೦ತಿಯ
ಮಿಗೆ ಪೊಗಳೆ ನಾನರಿಯೆನೀ ಸೋ
ಜಿಗದ ತರ ಜಗಜಗಿಪ ತರಣಿಯು ಉದಯಿಸುವ ಪರಿಯ

Comments