ಸೂರ್ಯೋದಯ

ಸೂರ್ಯೋದಯ

ಪುಸ್ತಕದ ಲೇಖಕ/ಕವಿಯ ಹೆಸರು
ರತ್ನಾ ಕೆ ಭಟ್ ತಲಂಜೇರಿ
ಪ್ರಕಾಶಕರು
ಕಥಾಬಿಂದು, ಕುಂಜತ್ತ್ ಬೈಲ್, ಮಂಗಳೂರು-೫೭೫೦೧೫, ಮೊ: ೯೩೪೧೪೧೦೧೫೩
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೪

ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾಗಿರುವ ರತ್ನಾ ಕೆ ಭಟ್ ಅವರು ‘ಸೂರ್ಯೋದಯ’ ಎನ್ನುವ ನೂತನ ಕೃತಿಯನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಬರೆಯುತ್ತಿದ್ದ ಸುವಿಚಾರಗಳನ್ನು ಸಂಗ್ರಹಿಸಿ ಈ ಅಮೂಲ್ಯವಾದ ಸಂಕಲನವನ್ನು ಮಾಡಿದ್ದಾರೆ. ಕೆಲವೇ ಕೆಲವು ವಾಕ್ಯಗಳಲ್ಲಿ ನಮಗೆ ಜೀವನ ಮೌಲ್ಯಗಳನ್ನು ಕಲಿಸಬಲ್ಲ ಶಕ್ತಿ ಈ ಸುವಿಚಾರಗಳಿಗಿವೆ. ತಮ್ಮ ಮನದಾಳದ ನುಡಿಗಳನ್ನು ರತ್ನಾ ಭಟ್ ಅವರು ಹಂಚಿಕೊಂಡಿರುವುದು ಹೀಗೆ…

“ ಮೊದಲಿನಿಂದಲೂ ಬರೆಯುವ ಹವ್ಯಾಸವಿಟ್ಟುಕೊಂಡಿದ್ದ ನನಗೆ ಸರಿಯಾದ ರೀತಿಯಲ್ಲಿ ಬರವಣಿಗೆಗೆ ಪ್ರೋತ್ಸಾಹ ದೊರೆತದ್ದು ವಾಟ್ಸಾಪ್ ಬಳಗದ ಓದುಗರು ಹಾಗೂ ಕವಿಬಂಧುಗಳಿಂದ. ಪ್ರತಿನಿತ್ಯ ಇಂದಿಗೊಂದು ನುಡಿ ಬರೆಯುವ ಹವ್ಯಾಸವಿತ್ತು. ಇದೇ ‘ಆನೆಬಲ’ವಾಗಿ ಈ ಹೊತ್ತಗೆ ಸಂಗ್ರಹ ಹೊನ್ನ ನುಡಿ ತಮ್ಮ ಮುಂದೆ ಪ್ರಕಟಿಸಲು ಕಾರಣವಾಯಿತು. ಬರವಣಿಗೆಗೆ ಮೊದಲ ಮೆಚ್ಚುಗೆ ನನ್ನ ಯಜಮಾನರಾದ, ನಿವೃತ್ತ ಮುಖ್ಯೋಪಾಧ್ಯಾರೂ, ಯಕ್ಷಗಾನ ಕಲಾವಿದರೂ ಆದ ತಲಂಜೇರಿ ಕೃಷ್ಣಭಟ್ ರವರದ್ದು. ನನ್ನ ಪ್ರತಿಯೊಂದು ಚಟುವಟಿಕೆಯ ಹಿಂದಿನ ಪ್ರೇರಕ ಶಕ್ತಿ ಅವರದೇ. ಬೇರೆ ಬೇರೆ ಪುಸ್ತಕಗಳನ್ನು ಓದುವ ಹವ್ಯಾಸ, ಸ್ವತಃ ತಾಳಮದ್ದಳೆ, ಯಕ್ಷಗಾನದಲ್ಲೂ ತೊಡಗಿಸಿಕೊಂಡದು ಈ ಬರವಣಿಗೆಗೆ ನಾಂದಿಯಾಯಿತು. ಜೊತೆಗೆ ಶಿಕ್ಷಕ ವೃತ್ತಿಯೂ ಇತ್ತು. ಓದಿದ ಅನುಭವ, ಜೀವನಾನುಭವ, ಕೆಲವೊಂದು ಪುಸ್ತಕಗಳ ನುಡಿ ವಿಸ್ತಾರ, ಕಂಡ ದೃಶ್ಯಗಳು, ನೋವು-ನಲಿವುಗಳ ಪ್ರತಿಬಿಂಬವೇ ಈ ಸಂಕಲನದಲ್ಲಿ ಕಾಣಬಹುದು.”

ಈ ಪುಸ್ತಕದ ಬೆನ್ನುಡಿಯಲ್ಲಿ ಒಂದು ಸುವಿಚಾರದ ನುಡಿಯನ್ನು ಬಳಸಿಕೊಳ್ಳಲಾಗಿದೆ. ಅದು ಬಹಳ ಸೊಗಸಾಗಿದೆ. “ಯಾರಾದರೂ ನಾನು ಬಹಳ ಜ್ಞಾನವಂತ ಎಂದರೆ ಅವನಷ್ಟು ದಡ್ಡರು ಯಾರೂ ಇರಲಾರರು. ಜೀವನದಲ್ಲಿ ಎಲ್ಲವೂ ಕಲಿತಾಯಿತು ಎಂದು ಹೇಳಲಾಗದು. ಕಲಿಯುವಿಕೆ, ಜ್ಞಾನ ಎಂಬುದು ನಿಂತ ನೀರಲ್ಲ, ಅದು ಸದಾ ಹರಿಯುವ ನೀರು. ಪ್ರತಿನಿತ್ಯ, ಪ್ರತಿಕ್ಷಣ ಹೊಸತು ಕಲಿಯುತ್ತಿರುತ್ತೇವೆ. ಕಲಿತ ಜ್ಞಾನವನ್ನು ಸಮಯ ಸಂದರ್ಭಕ್ಕೆ ಸರಿಯಾಗಿ ಅಳವಡಿಸಿಕೊಳ್ಳುವ ಚಾಕಚಾಕ್ಯತೆ ನಮ್ಮಲ್ಲಿರಬೇಕು. ಅನುಷ್ಟಾನಗೊಳಿಸಲು ವಿವೇಚನೆ ಇರಬೇಕು. ಜ್ಞಾನ ಮತ್ತು ಬುದ್ಧಿವಂತಿಕೆ ಸೇರಿದಾಗ ಎಲ್ಲವನ್ನೂ ಸಾಧಿಸಬಹುದು. ಕಳೆದು ಹೋದ ದಿನಗಳು ಮತ್ತೆಂದೂ ಬರದು. ಪಡೆದ ತಿಳುವಳಿಕೆಯನ್ನು ಉತ್ತಮ ಕೆಲಸಗಳಿಗಾಗಿ ಬಳಸಿಕೊಳ್ಳೋಣ. ದಾರಿ ತಪ್ಪುತ್ತಿರುವ ನಾಲ್ಕು ಜನರಿಗೆ ಉಪಕಾರವಾದರೆ ಅದಕ್ಕಿಂತ ದೊಡ್ಡ ಪ್ರಶಸ್ತಿ ಬೇಡ. ಆದಷ್ಟೂ ಉಪಕಾರಿಗಳಾಗಿರೋಣ. ಶೀಲವಂತರಾಗಿ, ಯಾವುದು ಒಳ್ಳೆಯದು? ಯಾವುದು ಕೆಟ್ಟದ್ದು? ಯಾವುದನ್ನು ಮಾಡಬಹುದು? ಯಾವುದು ಮಾಡಬಾರದು? ಎಂಬ ವಿವೇಚನೆಯನ್ನು ಪಡೆದ ಜ್ಞಾನದಲ್ಲಿ ಬಳಸಿದರೆ ಸಾಕು. ಸುಖಾಸುಮ್ಮನೆ ನಾನು ಜ್ಞಾನಿ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಹಾಗಾಗಿ ಇರುವ ಕ್ಷಣವನ್ನು ಬಳಸಿಕೊಳ್ಳೋಣ. ನಮ್ಮ ಕುಟುಂಬ ಕ್ಷೇಮದೊಂದಿಗೆ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸೋಣ.”

ಸುಮಾರು ೫೫ ಜ್ಞಾನದಾಹಕ ಸುವಿಚಾರಗಳನ್ನು ಹೊಂದಿರುವ ಈ ಕೃತಿಯ ಕೆಲವೆಡೆ ಸಣ್ಣ ಪ್ರಮಾಣದ ಅಕ್ಷರ ತಪ್ಪುಗಳು ಕಂಡುಬರುತ್ತಿವೆ. ಮುಂದಿನ ಮುದ್ರಣದಲ್ಲಿ ಅವೆಲ್ಲವನ್ನೂ ಸರಿ ಪಡಿಸಿದರೆ ಇದೊಂದು ಅಮೂಲ್ಯವಾದ ಪುಸ್ತಕವಾಗುವುದರಲ್ಲಿ ಸಂದೇಹವಿಲ್ಲ. ಲೇಖಕಿ ಈ ಕೃತಿಯನ್ನು ತಮ್ಮ ತಂದೆ ಪುತ್ರೋಡಿ ಈಶ್ವರ ಭಟ್ ಹಾಗೂ ತಾಯಿ ಪುತ್ರೋಡಿ ಶಂಕರಿ ಅಮ್ಮ ಹಾಲುಮಜಲು ಇವರಿಗೆ ಅರ್ಪಣೆ ಮಾಡಿದ್ದಾರೆ.