ಸೂರ್ಯ ರಶ್ಮಿಯಾಟ
ಕವನ
ಸೂರ್ಯರಶ್ಮಿಯಾಟ ಮಂಜು ಹನಿ ಕೂಟ
ಹಸಿರು ಗಿಡಮರಗಳ ವನರಾಶಿ ಮಾಟ
ತಲೆಯೆತ್ತಿ ನಿಂತಿಹ ರಮ್ಯ ಮೋಹಕ ನೋಟ
ರಸ್ತೆಗಳ ನಡುವೆ ಹಾದು ಹೋಗುವ ಸೌಂದರ್ಯದಾಟ
ಅಬ್ಬಬ್ಬಾ ಮೈ ನವಿರೇಳಿಸುವ ಚೆಲು ದೃಶ್ಯ
ವೈಶಾಲ್ಯತೆಯ ಮೇರೆ ಮೀರಿದ ಸ್ವರ್ಗ ಸಾದೃಶ್ಯ
ತೊಟ್ಟಿಕ್ಕುವ ಮುತ್ತಿನ ಮಣಿಗಳ ಬಿಂದು
ಸರಿಸಾಟಿಯಿಲ್ಲದ ಮುಂಜಾವಿನ ಕೊಡುಗೆ ಎಂದೆಂದು
ಪ್ರಕೃತಿಯಾಟವ ಮೀರಲಾಗದು ದೇವ
ಗಮ್ಯತೆಯ ಅಳೆಯಲಾಗದು ಶಿವನೇ
ಜೊತೆಗೆ ಒಯ್ಯುತಿದೆ ಗಿಡ ಮರಗಳ ಲಾಸ್ಯ ನರ್ತನ
ವರ್ಷ ಧಾರೆಯ ಸುಳಿಯಂತೆ ಸುಂದರ ತಾನನ
ಧೂಮದಂತೆ ಗೋಚರಿಪ ಪರಿಸರ ಥಳುಕು
ಹಸಿರು ಸಿರಿ ಹೊತ್ತ ಉಷೆಯ ಬಳುಕು
ಜಗದ ಜೀವರಿಗೆ ಉಸಿರ ಮಾತೆ ವಸುಂಧರೆ
ಒಂದಾಗಿ ಸ್ವಾಗತಿಪ ಖಗಮಿಗಗಳು ವಾಸಿಸುವ ಈ ಧರೆ
ನೇಸರನ ಉದಯ ಜೀವ ಸಂಚಾರ ನೋಡ
ಹಕ್ಕಿಗಳ ಕಲರವ ಬಡಿದೆಬ್ಬಿಸಿದೆ ನಾಡ
ಬದುಕಿನ ಹಾದಿ ಸಾಗುತಿದೆ ಅನಂತ ದಿಗಂತ
ನಿಮಿತ್ತ ಮಾತ್ರ ಪಾತ್ರಧಾರಿಗಳು ಭಗವಂತನ ಚಿತ್ತ
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
