ಸೃಷ್ಟಿಯೇ ನಿನ್ನ ಮುಷ್ಠಿಯಲ್ಲಿ...!
ಸರ್ಕಾರದ ತೆರಿಗೆ ಆದಾಯದಲ್ಲಿ ಗಣನೀಯ ಏರಿಕೆ. ಕರ್ನಾಟಕದ ಜಿಎಸ್ಟಿ ಸಂಗ್ರಹ ದೇಶದಲ್ಲೇ ಅತಿಹೆಚ್ಚು. ಇದರ ಕಾರಣಗಳು ಮತ್ತು ಎರಡು ಮುಖಗಳು.
ಒಂದು ಮುಖ, ವ್ಯಾಪಾರ ವಹಿವಾಟುಗಳು ಹೆಚ್ಚಾಗುತ್ತಿರುವುದು, ಡಿಜಿಟಲೀಕರಣದ ಪರಿಣಾಮ ಸಾಕಷ್ಟು ಜನ ತೆರಿಗೆ ವ್ಯಾಪ್ತಿಗೆ ಸೇರಿರುವುದು, ಮೊಬೈಲ್ ಬ್ಯಾಂಕಿಂಗ್ ಪಾವತಿ ಹೆಚ್ಚಾಗಿರುವುದು, ತೆರಿಗೆ ಸೋರಿಕೆ ಪ್ರಮಾಣ ಕಡಿಮೆಯಾಗಿರುವುದು, ಅಧಿಕಾರಿಗಳ ದಕ್ಷತೆ ಹೆಚ್ಚಾಗಿರುವುದು, ತೆರಿಗೆ ವಂಚನೆಗೆ ಕಡಿವಾಣ ಹಾಕಿರುವುದು, ಸರ್ಕಾರದ ಅಭಿವೃದ್ಧಿ ನೀತಿಗಳು ಉತ್ತಮ ಫಲಿತಾಂಶ ನೀಡುತ್ತಿರುವುದು ಹೀಗೆ ಹಲವು ಕಾರಣಗಳು ಇರಬಹುದು. ಅದಕ್ಕಾಗಿ ಹೆಮ್ಮೆ ಪಡಬಹುದು.
ಎರಡನೆಯ ಮುಖ, ತೀರಾ ಜೀವನಾವಶ್ಯಕ ವಸ್ತುಗಳಿಗೂ ಕೂಡ ಅನಾವಶ್ಯಕ ಜಿಎಸ್ಟಿ ತೆರಿಗೆ ವಿಧಿಸಿರುವುದು, ಬೆಲೆಗಳನ್ನು ನಿಯಂತ್ರಿಸದೆ ಅವು ಸಿಕ್ಕಾಪಟ್ಟೆ ಜಾಸ್ತಿಯಾಗಿರುವುದು, ಮುಖ್ಯವಾಗಿ ಡೀಸೆಲ್ ಪೆಟ್ರೋಲ್ ಅಡುಗಿ ಅನಿಲದ ಬೆಲೆ ಹೆಚ್ಚಳದಿಂದ ಇತರ ಎಲ್ಲಾ ವಸ್ತುಗಳ ಬೆಲೆ ಏರಿಕೆ, ವಿಶ್ವದ ಕೆಲವು ದೇಶಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಮತ್ತು ಮುಂದೆ ವಿಶ್ವದಲ್ಲಿ ಮತ್ತೊಮ್ಮೆ ಆರ್ಥಿಕ ಕುಸಿತ ಉಂಟಾಗಬಹುದು ಎಂಬ ಅತಿಯಾದ ಭಯದಿಂದ ಸರ್ಕಾರ ಹೆಚ್ಚು ಹಣ ಸಂಗ್ರಹಣೆಯಲ್ಲಿ ತೊಡಗಿರುವುದು, ಕೋವಿಡ್ ನಂತರ ಆರ್ಥಿಕ ಚಟುವಟಿಕೆಗಳು ಸಹಜವಾಗಿ ಹೆಚ್ಚಾದ ಕಾರಣ ಅದನ್ನು ಮರೆ ಮಾಚಿ ಆರ್ಥಿಕ ನೀತಿಗಳ ಸಮರ್ಥನೆಗಾಗಿ ಅಂಕಿ ಅಂಶಗಳ ವೈಭವೀಕರಣ ಹೀಗೆ ಹಲವು ಕಾರಣಗಳು ಇರಬಹುದು. ಅದಕ್ಕಾಗಿ ನೋವು ಮತ್ತು ಬೇಸರವೂ ಪಡಬಹುದು.
ಇವುಗಳ ಮಧ್ಯೆ ಸತ್ಯ ಮತ್ತು ವಾಸ್ತವವನ್ನು ಜನ ಮತ್ತು ದೇಶದ ಹಿತದೃಷ್ಟಿಯಿಂದ ನೋಡಬೇಕಿದೆ. ಒಂದು ಕಡೆ ಶ್ರೀಮಂತರು ಮತ್ತು ಶ್ರೀಮಂತಿಕೆಯ ಪ್ರಮಾಣ ಹೆಚ್ಚಾಗುತ್ತಿದ್ದರೆ ಮತ್ತೊಂದು ಕಡೆ ಅನೇಕ ಮದ್ಯಮ ವರ್ಗದವರು ಬಡತನಕ್ಕೆ ಜಾರುತ್ತಿದ್ದಾರೆ. ಗ್ರಾಹಕ ಸಂಸ್ಕೃತಿ ವ್ಯಾಪಕವಾಗಿ ಹರಡಿ ಕೊನೆಗೆ ರೋಗಿಗಳು, ವಿದ್ಯಾರ್ಥಿಗಳು, ಭಕ್ತರು, ವೀಕ್ಷಕರು ಸಹ ಆಯಾ ಕ್ಷೇತ್ರದ ಗ್ರಾಹಕರೇ ಎಂದು ಭಾವಿಸುವಷ್ಟು ವ್ಯಾಪರೀಕರಣವಾಗಿದೆ. ರಾಜಕೀಯವು ವ್ಯಾಪಾರವಾಗಿ ಸೇವೆ ಎಂಬುದು ಸಂಪೂರ್ಣ ಮರೆಯಾಗಿದೆ.
ಹಣ ಕೇಂದ್ರೀಕೃತ ಅಭಿವೃದ್ಧಿಯನ್ನು ಜಿಎಸ್ಟಿ ಸಂಗ್ರಹದ ಆಧಾರದ ಮೇಲೆ ಅಳೆಯಲಾಗುತ್ತಿದೆ. ಪರಿಸರ ಮಾಲಿನ್ಯ, ಗಾಳಿಯ ದೂಳು, ನೀರಿನಲ್ಲಿ ಬೆರೆತ ರಸಾಯನಿಕ, ಆಹಾರದ ಕಲಬೆರಕೆ, ಕ್ಯಾನ್ಸರ್ ರೋಗಿಗಳ ಸಂಖ್ಯೆ, ನಿದ್ರಾಹೀನತೆಯ ಸಮಸ್ಯೆ, ನೆಮ್ಮದಿಯ ಗುಣಮಟ್ಟ ಕುಸಿತ, ಶೈಕ್ಷಣಿಕ ಭ್ರಷ್ಟಾಚಾರ, ಚುನಾವಣಾ ಅಕ್ರಮ, ಮಾನವೀಯ ಮೌಲ್ಯಗಳ ಕುಸಿತ ಇವು ಯಾವುದನ್ನು ಪರಿಗಣಿಸದೆ ತೆರಿಗೆ ಸಂಗ್ರಹದ ಹೆಚ್ಚಳವನ್ನೇ ಸಾಧನೆ ಎಂದು ಹೆಮ್ಮೆ ಪಡುವ ಹಂತಕ್ಕೆ ನಾವು ತಲುಪಿದ್ದೇವೆ.
ಒಟ್ಟಾರೆ, ನೀರಿನ ಗುಣಮಟ್ಟ ಕಡಿಮೆಯಾಗುತ್ತಿದೆ,
ರಕ್ತ ಹರಿಯುವುದು ಜಾಸ್ತಿಯಾಗುತ್ತಿದೆ.
ಶುಧ್ಧ ಗಾಳಿ ಬೀಸುವುದು ಅಪರೂಪವಾಗುತ್ತಿದೆ,
ಗಾಳಿ ಸುದ್ದಿ ಹಬ್ಬುವುದು ಸರಾಗವಾಗುತ್ತಿದೆ.
ಮೌಲ್ಯಗಳು ಅಧಃಪತನವಾಗುತ್ತಿವೆ,
ಕ್ರೌರ್ಯಗಳು ವಿಜೃಂಭಿಸುತ್ತಿವೆ.
ನಂಬಿಕೆಗಳು ಸಾಮ್ರಾಜ್ಯ ಸ್ಥಾಪಿಸುತ್ತಿವೆ,
ವಾಸ್ತವಗಳು ಗೂಡು ಸೇರುತ್ತಿವೆ.
ದ್ವೇಷ ಭಾವನೆಗಳು ಉಕ್ಕುತ್ತಿವೆ,
ಪ್ರೀತಿಯ ಸೆಳೆತಗಳು ಬರಡಾಗುತ್ತಿವೆ..
ಅಕ್ಷರಗಳು ಕತ್ತಿಯಂತೆ ಮೊನಚಾಗುತ್ತಿವೆ,
ಅದೇ ಅಕ್ಷರಗಳು ಮನಸ್ಸುಗಳನ್ನು ಇರಿಯುತ್ತಿವೆ.
ವಿದ್ಯೆ - ಬುಧ್ಧಿಗಳು ಬೆಳೆಯುತ್ತಿವೆ,
ಸತ್ಯ - ಪ್ರಾಮಾಣಿಕತೆಗಳು ನಶಿಸುತ್ತಿವೆ.
ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ,
ಮಾನಸಿಕ ಸ್ಥಿತಿ ಕುಸಿಯುತ್ತಿದೆ.
ಎಲ್ಲವೂ ಫಳಫಳ ಹೊಳೆಯುತ್ತಿವೆ,
ಮನಸ್ಸುಗಳು ತರಾತರಾ ಕೊಳೆಯುತ್ತಿವೆ.
ಆದರೆ, ನಿಜಕ್ಕೂ ಮನುಷ್ಯ ಮೂಲಭೂತವಾಗಿ ಅಷ್ಟು ಕೆಡುಕನಲ್ಲ. ಪ್ರಕೃತಿಯ ಸವಾಲಿಗೆ ಎದೆಯೊಡ್ಡಿ ಇಡೀ ಸೃಷ್ಟಿಯನ್ನೇ ತನ್ನ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವಷ್ಟು ಮಹತ್ವಾಕಾಂಕ್ಷಿ ಮತ್ತು ಚಾಣಾಕ್ಷ. ಆದರೆ ಯಾಕೋ ಬರಬರುತ್ತಾ ತನ್ನ ಮನಸ್ಸಿನ ಮೇಲೆಯೇ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾನೆ. ದುರಾಸೆಗೆ ಬಿದ್ದು ಅಜ್ಞಾನಕ್ಕೆ ಶರಣಾಗಿ ಮುಖವಾಡದ ಮರೆಯಲ್ಲಿದ್ದಾನೆ ಮತ್ತು ಅದೇ ನಾನು ಎಂದೇ ಒಪ್ಪಿಕೊಂಡಿದ್ದಾನೆ.
ಅದು ಸುಳ್ಳು ಮನುಜ. ನಿನ್ನ ನಿಜ ರೂಪವೇ, ಅದ್ಭುತ - ಅಮೋಘ - ಅಪ್ರತಿಮ - ಅತ್ಯುತ್ತಮ - ಅಗಾಧ - ಅದನ್ನೇ ಉಳಿಸಿಕೋ - ಅದನ್ನೇ ಬೆಳೆಸಿಕೋ - ಅದನ್ನೇ ಗಳಿಸಿಕೋ - ಅದನ್ನೇ - ಒಪ್ಪಿಕೋ - ಅದನ್ನೇ ಅಪ್ಪಿಕೋ. ಸೃಷ್ಟಿಯ ಅತ್ಯದ್ಭುತ ಪ್ರಾಣಿ ನೀನೇ, ವಿವೇಚನೆ ಬೆಳೆಸಿಕೊಂಡಲ್ಲಿ ಸೃಷ್ಟಿಯೇ ನಿನ್ನ ಮುಷ್ಠಿಯಲ್ಲಿ...
-ವಿವೇಕಾನಂದ ಹೆಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ