ಸೃಷ್ಟಿಯ ಉಳಿವಿಗೆ ಅಳಿಲು ಸೇವೆ ಸಲ್ಲಿಸೋಣ...!
ನಾವು ಒಂದೇ ಬಾರಿಗೆ ರಷ್ಯಾದ 200 ಸೈನಿಕರನ್ನು ಕೊಂದೆವು....ಉಕ್ರೇನ್. ನಾವು ಅದಕ್ಕೆ ಪ್ರತೀಕಾರವಾಗಿ 600 ಉಕ್ರೇನ್ ಸೈನಿಕರನ್ನು ಕೊಂದೆವು......ರಷ್ಯಾ. ಮನುಷ್ಯನನ್ನು ಮತ್ತೊಬ್ಬ ಮನುಷ್ಯ ಕೊಂದು ಆ ಸಾವನ್ನು ಸಂಭ್ರಮಿಸುವುದನ್ನು ನೋಡಿದರೆ ರಾಕ್ಷಸ ಸಂತತಿ ಈಗಲೂ ಜೀವಂತವಿದೆ ಎನಿಸುತ್ತದೆ.
ಹೆಚ್ಚು ಕಡಿಮೆ ಇನ್ನೇನು ಒಂದು ವರ್ಷವಾಗುತ್ತಿದೆ ರಷ್ಯಾ ಉಕ್ರೇನ್ ದೇಶದ ಮೇಲೆ ಆಕ್ರಮಣ ಮಾಡಿ. ಸಾವಿನ ಸಂಖ್ಯೆ ಲಕ್ಷಗಳಲ್ಲಿ ಲೆಕ್ಕ ಹಾಕಬೇಕು, ಗಾಯಾಳುಗಳ ಸಂಖ್ಯೆ ಅದಕ್ಕಿಂತ ಹೆಚ್ಚು, ವಲಸಿಗರ ಸಂಖ್ಯೆ ಕೋಟಿಗಳಲ್ಲಿ, ಆರ್ಥಿಕನಷ್ಟ ಮಿಲಿಯನ್ ಡಾಲರ್ ಗಳಲ್ಲಿ, ಮಾನವೀಯತೆಯ ನಷ್ಟ ಲೆಕ್ಕಕ್ಕೆ ಸಿಗುವುದಿಲ್ಲ, ಆದರೆ ಯುದ್ಧದ ಸಾವು ನೋವುಗಳಿಗೆ ವಿಶ್ವದ ಜನರ ಪ್ರತಿಕ್ರಿಯೆಗಳ ಲೆಕ್ಕ ಮಾತ್ರ ಬಹುತೇಕ ಶೂನ್ಯ.
ಈ ಭೂಮಿ ಕೇವಲ ರಷ್ಯಾ ಉಕ್ರೇನ್ ನವರಿಗೆ ಮಾತ್ರ ಸೇರಿದ್ದಲ್ಲ. ಇಡೀ ವಿಶ್ವದ ಎಲ್ಲಾ ಜೀವರಾಶಿಗಳಿಗೂ ಇದರಲ್ಲಿ ಹಕ್ಕಿದೆ. ಗಾಳಿ ನೀರಿನ ಚಲನೆ ಇಡೀ ವಿಶ್ವವನ್ನೇ ವ್ಯಾಪಿಸುತ್ತದೆ. ಅವರ್ಯಾರೋ ಹೊಡೆದಾಡಿಕೊಂಡರೆ ಅದು ನಮಗೆ ಸಂಬಂಧಿಸಿಲ್ಲ ಎಂದು ಸುಮ್ಮನಿದ್ದರೆ ನಾವು ಸಹ ನಾಶವಾಗುವುದು ನಿಶ್ಚಿತ. ಏಕೆಂದರೆ ಇದು ಯುದ್ಧ. ಯಾರದೋ ತಂತ್ರ ಅಥವಾ ಕುತಂತ್ರದಿಂದ ಒಂದು ವೇಳೆ ಊಹಿಸಲಾಗದ ಅನಾಹುತ ರಷ್ಯಾದ ಮೇಲಾದರೆ ಅವರು ಅದಕ್ಕೆ ಪ್ರತಿಕಾರವಾಗಿ ಅಣುಬಾಂಬು - ಹೈಡ್ರೋಜನ್ ಬಾಂಬ್ ಪ್ರಯೋಗಿಸುವುದು ಖಚಿತ. ಆಗ ನಾವು ಸಹ ಅದರ ಫಲಾನುಭವಿಗಳು ಎಂದು ವಿಶ್ವದ ಇತರ ಜನರು ಅರ್ಥ ಮಾಡಿಕೊಳ್ಳುತ್ತಲೇ ಇಲ್ಲ.
ವಿಶ್ವಸಂಸ್ಥೆ ಏನು ಮಾಡುತ್ತಿದೆಯೋ ಮಾಹಿತಿ ಇಲ್ಲ. ಧರ್ಮಗುರುಗಳು ಏನು ಪ್ರಯತ್ನ ಮಾಡುತ್ತಿದ್ದಾರೋ ಗೊತ್ತಿಲ್ಲ. ಅಮೆರಿಕ ನೇತೃತ್ವದ ನ್ಯಾಟೋ ಒಕ್ಕೂಟ ಮಾತ್ರ ಯುದ್ಧದ ಬೆಂಕಿಗೆ ತುಪ್ಪ ಸುರಿಯುತ್ತಲೇ ಇದೆ. ಸಾಮಾನ್ಯ ಜನರಾದ ನಾವು ಏನು ಮಾಡಬಹುದು ಎಂದು ಯೋಚಿಸಿದಾಗ..
ವಿಶ್ವಸಂಸ್ಥೆ - ರಷ್ಯಾ ಮತ್ತು ಉಕ್ರೇನ್ - ಅಮೆರಿಕ ಮತ್ತು ನ್ಯಾಟೋ ಮುಖ್ಯಸ್ಥರ ವಿಳಾಸ ಮತ್ತು Mail ಗೆ ಇಂಗ್ಲೀಷ್ ಭಾಷೆಯಲ್ಲಿ " ದಯವಿಟ್ಟು ಯುದ್ಧ ನಿಲ್ಲಿಸಿ - ಸಂಧಾನ ಸಾಧಿಸಿ " ಎಂಬ ಶೀರ್ಷಿಕೆ ನೀಡಿ ಯುದ್ಧದ ಭೀಕರತೆ, ಮುಂದಿನ ಪರಿಣಾಮಗಳು, ನಮ್ಮ ನೋವುಗಳನ್ನು ವಿವರಿಸಿ ಒಂದು ಪುಟ್ಟ ಪತ್ರ ಚಳವಳಿ ಮಾಡುವ ಆಲೋಚನೆ ಇದೆ.
ಕೇವಲ ಭಾರತೀಯರು ಮಾತ್ರವಲ್ಲ ಇಡೀ ವಿಶ್ವದ ಜಾಗೃತಾವಸ್ಥೆಯ ಮನಸ್ಸುಗಳು ಸಾಧ್ಯವಾದಷ್ಟೂ ಹೆಚ್ಚು ಪತ್ರಗಳನ್ನು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರೆ ಯುದ್ಧ ಪೀಡಿತ ನಾಯಕರುಗಳ ಮೇಲೆ ಸ್ವಲ್ಪ ಒತ್ತಡವಾಗಿ ಏನಾದರೂ ಬದಲಾವಣೆ ಆಗಬಹುದು ಎಂಬ ನಿರೀಕ್ಷೆ ಇದೆ. ಅಥವಾ ಕನಿಷ್ಠ ಮನುಷ್ಯರಾದ ನಾವು ಯುದ್ಧದ ಬಗ್ಗೆ ಸ್ವಲ್ಪವಾದರೂ ಪ್ರತಿಕ್ರಿಯೆ ನೀಡಿದ ಸಮಾಧಾನವಾದರೂ ಸಿಗುತ್ತದೆ.
ಪ್ರತಿನಿತ್ಯ ಈ ಕೊಲ್ಲುವ - ಸಾಯುವ ಆಟ ನೋಡಿಕೊಂಡು ಸುಮ್ಮನಿರುವುದು ಮನುಷ್ಯತ್ವಕ್ಕೆ ನಾವು ಮಾಡುತ್ತಿರುವ ವಂಚನೆಯಾಗುತ್ತದೆ. ಸೃಷ್ಟಿಗೆ ನಾವು ಮಾಡುತ್ತಿರುವ ದ್ರೋಹವಾಗುತ್ತದೆ. ಗಾಳಿ ನೀರು ಭೂಮಿ ವಿಷಮಯವಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಎಲ್ಲಾ ಮುಗಿದ ಮೇಲೆ ಪಶ್ಚಾತ್ತಾಪ ಪಡುವ ಮೂರ್ಖತನ ಮಾಡಬಾರದು.
ಶೀಘ್ರದಲ್ಲಿಯೇ ಒಂದು ಯುದ್ಧ ವಿರೋಧಿ " ಕರಡು " ( DRAFT ) ಪ್ರತಿ ಬರೆದು ವಿಳಾಸದ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುವುದು. ಅದು ಸರಿ ಎನಿಸಿದಲ್ಲಿ ಸಾಧ್ಯವಿರುವ ಪ್ರತಿಯೊಬ್ಬರೂ ಅದನ್ನು ಮರು ಹಂಚಿಕೆ ಮಾಡುವ ಪ್ರಯತ್ನ ಮಾಡೋಣ. ಅಷ್ಟರಮಟ್ಟಿಗೆ ಸೃಷ್ಟಿಯ ಉಳಿವಿಗೆ ಅಳಿಲು ಸೇವೆ ಸಲ್ಲಿಸೋಣ.
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ