ಸೃಷ್ಟಿ ನನಗಾಗಿ ಕಾಲ ಮೀಸಲಿಡುವ ತನಕ...

ಸೃಷ್ಟಿ ನನಗಾಗಿ ಕಾಲ ಮೀಸಲಿಡುವ ತನಕ...

ಪ್ರೀತಿ ಎಂಬ ಭಾವನೆಗಳ ಆಳಕ್ಕೆ ಅರಿವಿಲ್ಲದೇ ಪ್ರವೇಶಿಸುವ ಯುವಕ ಯುವತಿಯರು ಮತ್ತು ಅದರ ಒಳ ಸುಳಿಗಳ ಹಿಡಿತದಲ್ಲಿ ಅನುಭವಿಸುವ ಯಾತನೆಗಳು. ಯಾವುದೋ ಸಂದರ್ಭ, ಸನ್ನಿವೇಶ, ಆಕಸ್ಮಿಕ ಅಥವಾ ಇನ್ನೇನೋ ಕಾರಣದಿಂದ ಪ್ರೇಮಿಗಳು ಪ್ರೀತಿಯ ಆಳಕ್ಕೆ ಇಳಿದು ಬಿಡುತ್ತಾರೆ. ಅದು ಎಷ್ಟು ಆಳವಾಗಿ ಇರುತ್ತದೆಯೆಂದರೆ ಎಷ್ಟೋ ಮುಗ್ಧ ಮನಸ್ಸುಗಳು ಅಲ್ಲಿಂದ ಹೊರ ಬರುವ ದಾರಿಯನ್ನೇ ಗುರುತಿಸಲು ವಿಫಲರಾಗುತ್ತಾರೆ. 

ಒಂದು ವೇಳೆ ಪ್ರೀತಿಯ ಆಳದಲ್ಲಿ ಅವರಿಗೆ ಒಂದಷ್ಟು ಕಷ್ಟ ಬೇಸರ ಜಗಳ ಅಸಮಾಧಾನ ನಿರಾಸೆಯ ಅನುಭವವಾದರು ಪ್ರೀತಿ ಎಂಬ ಭಾವ ತೀವ್ರತೆ  ಅದನ್ನೆಲ್ಲಾ ಹೇಗೋ ಸಹಿಸಿಕೊಳ್ಳುತ್ತದೆ. ಕೊನೆಗೆ ತೀರಾ ಹೊಂದಾಣಿಕೆ ಸಾಧ್ಯವಾಗದಿದ್ದರೆ ಮುಂದೆ ಬಿಡುಗಡೆ ಹೊಂದಬಹುದು ಅಥವಾ ಅದು ಕೋಪವಾಗಿ ಪರಿವರ್ತನೆ ಹೊಂದಿ ಬೇರೆ ಬೇರೆಯಾಗಬಹುದು. ಇದೊಂದು ಸಹಜ ಪ್ರಕ್ರಿಯೆ.

ಆದರೆ ಪ್ರೀತಿಯಲ್ಲಿ ಇದನ್ನು ಮೀರಿದ ಈ ಎರಡು ಘಟನೆಗಳು ಪ್ರೀತಿಸುವ ಜೀವಗಳನ್ನು ವಯಸ್ಸು ಲಿಂಗದ ಭೇದವಿಲ್ಲದೆ ತುಂಬಾ ನೋವು ಸಂಕಟ ಜಿಗುಪ್ಸೆ ಯಾತನೆ ಕೊನೆಗೆ ಪದಗಳಲ್ಲಿ - ಮಾತುಗಳಲ್ಲಿ ವಿವರಿಸಲಾಗದ ಮನಸ್ಥಿತಿಗೆ ತಲುಪಿಸಿಬಿಡುತ್ತದೆ. ನಮ್ಮ ಸುತ್ತಮುತ್ತಲಿನ ಯಾವ‌ ಸಂಬಂಧವೂ ಇದನ್ನು ‌ಗುರುತಿಸುವ ಅಥವಾ ಅರ್ಥಮಾಡಿಕೊಳ್ಳುವ ಹಂತವನ್ನು ‌ದಾಟಿ ಬಿಡುತ್ತದೆ. ಅಂತಹ ಸಮಯದಲ್ಲಿ ನಿಜವಾದ ನರಕ ಎಂಬುದು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ.

ಒಂದು, ಪರಿಸ್ಥಿತಿಯ ಒತ್ತಡದ ಕಾರಣದಿಂದಾಗಿ ಪ್ರೀತಿಸುವ ಎರಡು ಜೀವಗಳು ಅನಿವಾರ್ಯವಾಗಿ ಬೇರ್ಪಡಲೇ ಬೇಕಾದಾಗ. ಇನ್ನು ಈ ಜನ್ಮದಲ್ಲಿ ನಾವು ಪ್ರೇಮಿಗಳಾಗಿ ಇರುವುದು ಸಾಧ್ಯವೇ ಇಲ್ಲ ಮತ್ತು ಆ ಜಾಗದಲ್ಲಿ ನಮ್ಮ ಜೊತೆ ಇನ್ನೊಬ್ಬರು ಬರುತ್ತಾರೆ ಎಂಬುದೇ ಆ ಕ್ಷಣದಲ್ಲಿ  ಮನಸ್ಸು ವಿಲವಿಲ ಒದ್ದಾಡುವಂತೆ ಮಾಡಿ ಬಿಡುತ್ತದೆ. ಅಬ್ಬಾ ಆ ಯಾತನೆ ಯಾವ ಶತ್ರುವಿಗೂ ಬೇಡ. ಒಳಗೊಳಗೆ ಮನಸ್ಸನ್ನು ದಹಿಸಿ ಬಿಡುತ್ತದೆ. 

ಇನ್ನೊಂದು, ಗಾಢ ಪ್ರೀತಿಯಲ್ಲಿ ಇರುವಾಗ ಗಂಡು ಅಥವಾ ಹೆಣ್ಣು ವೈಯಕ್ತಿಕವಾಗಿ ಮೋಸ ಮಾಡಿ ಇನ್ನೊಬ್ಬರ ಜೊತೆ ಸ್ವತಃ ಸೇರುವುದು. ಇಲ್ಲಿ ಅಗಲಿಕೆಯ ವಿರಹ ಮಾತ್ರವಿರುವುದಿಲ್ಲ. ಮೋಸ ಮಾಡಿದ, ಮೋಸ ಹೋದ, ನಮ್ಮ ನಂಬಿಕೆಗೆ ದ್ರೋಹ ಬಗೆದ, ನಮ್ಮ ಸರ್ವಸ್ವವೂ ಆಗಿದ್ದ ಒಂದು ಜೀವ ಇನ್ನೊಬ್ಬರ ಜೊತೆಗೆ ಸೇರುವುದು ಮುಂತಾದ ಭಾವಗಳು  ಒಟ್ಟಿಗೆ ಸೇರಿ ಮನಸ್ಸು - ದೇಹವನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. 

ಪ್ರತಿ ಕ್ಷಣವೂ ಅದೇ ನೆನಪಾಗಿ ದುಃಖ ಉಕ್ಕಿ ಉಕ್ಕಿ ಬರುತ್ತದೆ. ಸಾವಿನ ಭಯಕ್ಕಿಂತ ತೀವ್ರ ನೋವನ್ನು ಇದು ಕೊಡುತ್ತದೆ.  ಎಷ್ಟೇ ವಿದ್ಯೆ ಬುದ್ದಿ ಶ್ರೀಮಂತಿಕೆ ಗೆಳೆತನ ಮಾರ್ಗದರ್ಶನ ಇದ್ದರು ಈ ವೈಯಕ್ತಿಕ ಹಿಂಸೆಯನ್ನು ಸಹಿಸುವುದು ಅಸಾಧ್ಯ. ಹೌದು, ಕಾಲ ಎಲ್ಲವನ್ನೂ ಗುಣಪಡಿಸುತ್ತದೆ ಎಂಬುದೇನೋ ನಿಜ. ಆದರೆ ಆ ಕಾಲವನ್ನು ಸವೆಸುವುದು ಹೇಗೆ ? ಹೊರಗಿನ ಜನ ಸಾಕಷ್ಟು ತಿಳಿವಳಿಕೆ ಸಮಾಧಾನ ಧೈರ್ಯ ಉತ್ಸಾಹದ ಮಾತುಗಳನ್ನು ಆಡಬಹುದು. ಆದರೆ ಅದು ಕೇವಲ ಸಮಯ ಕೊಲ್ಲುವ ಕ್ರಿಯೆ ಮಾತ್ರವಾಗಿರುತ್ತದೆ. ಅಂತಹ ನೋವಿನ ಪ್ರೇಮಿಯೊಬ್ಬರ ಹೃದಯದಲ್ಲಿ ಜ್ವಾಲಾಮುಖಿಯಂತೆ ಸಿಡಿಯುತ್ತಿದ್ದ ಭಾವನೆಗಳಿಗೆ ಅಕ್ಷರ ರೂಪ ನೀಡಿದಾಗ ಮೂಡಿದ...

ಹೃದಯದೊಳಗಿನ ಕಿಚ್ಚು ಇನ್ನೂ ಉರಿಯುತ್ತಲೇ ಇದೆ. ನೋವು, ಪಶ್ಚಾತ್ತಾಪ, ಅಸಹಾಯಕತೆ ಬೆರೆತ ಕಿಚ್ಚಿನ ಜ್ವಾಲೆ ದಿನಕಳೆದಂತೆ ಹೆಚ್ಚಾಗುತ್ತಲೇ ಇದೆ. ಜ್ವಾಲಾಮುಖಿಯಂತೆ ಸಿಡಿದು ಅಗ್ನಿಪರ್ವತವೂ ಆಗುತ್ತಿಲ್ಲ. ಹಿಮಪಾತಕ್ಕೆ ಸಿಲುಕಿ ತಣ್ಣಗಾಗುತ್ತಲೂ ಇಲ್ಲ. ಕೆಲವೊಮ್ಮೆ ತನ್ನಷ್ಟಕ್ಕೆ ತಾನೇ ತನ್ನಿಷ್ಟದಂತೆ ಉರಿಯುತ್ತದೆ.  ಆಗಾಗ ಬಿರುಗಾಳಿ ಅಬ್ಬರಕ್ಕೆ ಧಗಧಗನೆ ಧಹಿಸಿ ಸುತ್ತಲೂ ಹರಡುತ್ತದೆ ಕಿಚ್ಚು. ಆರಿಸುವವರೂ ಯಾರಿಲ್ಲ, ಆಲಿಸುವವರೂ ಯಾರಿಲ್ಲ. ಹಾರಿಸುವವರೇ ಎಲ್ಲರೂ.

ಆಗೊಮ್ಮೆ ಆ ದಿನಗಳೂ ಇದ್ದವು.

ಶೀತಗಾಳಿಯ ನಡುವೆ 

ಮಳೆಯ ತುಂತುರು ಹನಿಗಳ ಮಧ್ಯೆ 

ಕಿಚ್ಚಿಗೆ ಜಾಗವೂ ಇಲ್ಲದ,

ಅವಕಾಶವೂ ಇಲ್ಲದ ಕಾಲದಲ್ಲಿ ಪ್ರಶಾಂತತೆ ಮನೆ ಮಾಡಿತ್ತು. 

ಸುತ್ತಲೂ ಸಂಭ್ರಮವೋ ಸಂಭ್ರಮ.

ಸ್ವರ್ಗಕ್ಕೇ ಕಿಚ್ಚು ಹಚ್ಚಿದ ದಿನಗಳವು.

ಎಲ್ಲಿಂದಲೋ ತೂರಿ ಬಂದವು,

ಅಜ್ಞಾನ ಅಹಂಕಾರ ದುರಾಸೆ ಅಹಂಗಳೆಂಬ ಕಿಡಿಗಳು,

ಹತ್ತಿಸಿಯೇ ಬಿಟ್ಟವು ಕಿಚ್ಚು.

ಕೆಲ ಸಮಯದಲ್ಲೇ ಎಲ್ಲವೂ ಚೆಲ್ಲಾಪಿಲ್ಲಿ.

ಅಂದು ಉರಿ ಹತ್ತಿದ ಕಿಚ್ಚು ಇನ್ನೂ ಉರಿಯುತ್ತಲೇ ಇದೆ.

ಇನ್ನೆಷ್ಟು ದಿನವೋ, ಉರಿದುರಿದು ಸ್ಪೋಟಿಸುತ್ತದೋ

ಅಥವಾ 

ಉರುದುರಿದು ತಾನೇ ನಿರ್ನಾಮವಾಗುತ್ತದೋ

ಅಥವಾ 

ಉರಿದುರಿದು ಆರಿ ಮತ್ತೆ ತಣ್ಣನೆಯ ಹಿಮಪಾತದಲ್ಲಿ ಲೀನವಾಗುತ್ತದೋ ಬಲ್ಲವರಾರು.

ಕಾಯುತ್ತಲೇ ಇದ್ದೇನೆ ಕಿಚ್ಚು ಆರುವುದನ್ನು. 

ಇನ್ನೂ ಕಾಯುತ್ತಲೇ ಇರುತ್ತೇನೆ.

ಸೃಷ್ಟಿ ನನಗಾಗಿ ಕಾಲ ಮೀಸಲಿಡುವ ತನಕ.

ಕಾಲದ ನಿರ್ಣಯಕ್ಕೆ ಕಾಯುವುದು ಮತ್ತು ಪ್ರಕೃತಿಗೆ ನಿಷ್ಠೆ ತೋರುವುದು ಮಾತ್ರ ಸದ್ಯ ನನಗೆ ಉಳಿದಿರುವ ಆಯ್ಕೆಗಳು. ಅದರೊಂದಿಗೆ ನನ್ನ ಬದುಕಿನ ತಿರುವುಗಳ ಜೊತೆಯಾಗಿ ಜೀವಿಸುತ್ತಿದ್ದೇನೆ ಮತ್ತು ಜೀವಿಸುತ್ತಲೇ ಇರುತ್ತೇನೆ...

  • 375 ನೆಯ ದಿನ ಸಹ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಬೆಂಗಳೂರು ಜಿಲ್ಲೆಯ  ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿಯೇ ವಾಸ್ತವ್ಯ ಮುಂದುವರಿಸಿತು. ಇಂದು 11/11/2021 ಗುರುವಾರ 376 ನೆಯ ದಿನ ನಮ್ಮ ಕಾಲ್ನಡಿಗೆ ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಿಂದ ಸುಮಾರು 32 ಕಿಲೋಮೀಟರ್ ದೂರದ ನೆಲಮಂಗಲ ತಾಲ್ಲೂಕು ತಲುಪಲಿದೆ. ನಾಳೆ 12/11/2021 ಶುಕ್ರವಾರ 377 ನೆಯ ದಿನ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕು ತಲುಪಲಿದೆ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ