ಸೆಕ್ಸ್ ಗುರು ಎಂಬ ಆಪಾದನೆಗೆ ಪ್ರತಿಕ್ರಿಯೆ (ಓಷೋ ರಜನೀಶ್ ಚಿಂತನೆಗಳು)
(ಗಾಂಧೀವಾದ, ಸಮಾಜವಾದಗಳ ಮೇಲೆ ಉಪನ್ಯಾಸಗಳನ್ನು ನೀಡಿ ಚರ್ಚಾಸ್ಪದ ವ್ಯಕ್ತಿ ಎನಿಸಿಕೊಂಡಿದ್ದ ಶ್ರೀರಜನೀಶರು ೧೯೬೬ರಲ್ಲಿ ಜಬಲ್ಪುರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ದೆಗೆ ರಾಜಿನಾಮೆ ನೀಡಿದ ಮೇಲೆ ಕಾಮದ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ದೇಶದಾದ್ಯಂತ ವಿವಾದಾತ್ಮಕ ವ್ಯಕ್ತಿ ಎನಿಸಿಕೊಂಡರು. ೨೮ನೇ ಆಗಸ್ಟ್ ೧೯೬೮ರಂದು ಮುಂಬಯಿಯ ಭಾರತೀಯ ವಿದ್ಯಾಭವನದಲ್ಲಿ ಓಷೋ ರಜನೀಶರ ಉಪನ್ಯಾಸ ಮಾಲೆಯನ್ನು ಏರ್ಪಡಿಸಲಾಯಿತು. ’ಪ್ರೀತಿ’ ಎಂಬ ಕಲ್ಪನೆಯ ಕುರಿತು ಇವರು ಹೇಳಿದ ಕೆಲವು ಮಾತುಗಳು ದೊಡ್ಡ ವಿವಾದವನ್ನೇ ಉಂಟುಮಾಡಿ ಉಪನ್ಯಾಸ ಸಪ್ತಾಹವನ್ನು ಮೊದಲ ದಿನವೇ ರದ್ದು ಮಾಡಲಾಯಿತು. ಸಾಂಪ್ರದಾಯಿಕ ಮನಸ್ಸುಗಳ ಈ ವರ್ತನೆಯನ್ನು ಖಂಡಿಸಿ ರಜನೀಶರು ಗ್ವಾಲಿಯಾ ಟ್ಯಾಂಕ್ ಮೈದಾನದಲ್ಲಿ ತಮ್ಮ ಉಪನ್ಯಾಸವನ್ನು ಐದು ದಿನಗಳ ಕಾಲ ಮುಂದುವರೆಸಿದರು. ಕಾಮ ಪ್ರೇಮಗಳ ಕುರಿತು ತುಂಬ ದೀರ್ಘವಾಗಿ, ವಿವರವಾಗಿ ಚರ್ಚಿಸಿದ ಈ ಪ್ರವಚನ ಮಾಲೆಗೆ ಪ್ರತಿದಿನ ಸಾವಿರಾರು ಜನ ಸೇರುತ್ತಿದ್ದರು. ಎಲ್ಲ ಪತ್ರಿಕೆಗಳೂ ಇವರ ಮಾತುಗಳನ್ನು ಪ್ರಚೋದನಕಾರಿ ಸುದ್ದಿಯನ್ನಾಗಿ ಬಿಂಬಿಸಿದ್ದಲ್ಲದೆ ’ಸೆಕ್ಸ್‌ಗುರು’ ಎಂದು ಅವರ ಬಗ್ಗೆ ಅಪಪ್ರಚಾರ ಮಾಡಿದವು. ಆ ಉಪನ್ಯಾಸಗಳು ’ಸಂಭೋಗದಿಂದ ಸಮಾಧಿಯೆಡೆಗೆ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿ ಇಂಗ್ಲೀಷಿಗೂ ತರ್ಜುಮೆಗೊಂಡಿತಾದರೂ ತಟ್ಟಿದ ಕಳಂಕ ಮಾತ್ರ ಕೊನೆಯವರೆಗೂ ಹೋಗಲಿಲ್ಲ)
ಇವರು ಪ್ರೇಮದ ಬಗ್ಗೆ ಮಾತನಾಡಲು ನನ್ನನ್ನು ಕರೆದರು. ಆದರೆ ಕಾಮದ ಬಗ್ಗೆ ಇಷ್ಟೆಲ್ಲ ಪೂರ್ವಗ್ರಹ ಇಟ್ಟುಕೊಂಡಿದ್ದರೆ ಪ್ರೀತಿ ನಿಜವಾಗಿಯೂ ಅರ್ಥವಾಗದು ಎಂದು ನನಗನ್ನಿಸಿತು. ಹಾಗಾಗಿ ಪ್ರೇಮದ ಕುರಿತು ವಿವೇಚಿಸುವ ಮುನ್ನ ಕಾಮವನ್ನು ಸರಿಯಾಗಿ ತಿಳಿಯುವುದು ಅಗತ್ಯವೆಂದು ತಿಳಿದು ಕಾಮವನ್ನು ಕುರಿತು ದೀರ್ಘವಾದ ಪ್ರವಚನ ನೀಡಿದೆ. ಆದರೆ ಪ್ರವಚನ ಮುಗಿದು ವೇದಿಕೆಯ ಕಡೆಗೆ ತಿರುಗಿ ನೋಡಿದರೆ ವೇದಿಕೆಯ ಮೇಲೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಒಬ್ಬ ಪದಾಧಿಕಾರಿಯೂ ಇರಲಿಲ್ಲ. ನನಗೆ ವಂದನಾರ್ಪಣೆ ಸಲ್ಲಿಸಬೇಕಾದ ಸಂಘಟಕರೂ ಕಣ್ಮರೆಯಾಗಿದ್ದರು. ಆದರೆ ಸಭಿಕರಲ್ಲಿ ನೂರಾರು ಜನ ಮುಂದೆ ಬಂದು ಧನ್ಯವಾದಗಳನ್ನು ಅರ್ಪಿಸಿದರು. ನಮ್ಮ ಎಷ್ಟೋ ಸಂಶಯಗಳು ಬಗೆಹರಿದವು, ಈ ಉಪನ್ಯಾಸ ಮಾಲೆಯನ್ನು ದಯವಿಟ್ಟು ಮುಂದುವರೆಸಿ ಎಂದು ಕೇಳಿಕೊಂಡರು. ಅವರ ಕಣ್ಣುಗಳಲ್ಲಿ ಆ ಧನ್ಯತೆ ನನಗೆ ಕಾಣಿಸುತ್ತಿತ್ತು. ಆದರೆ ಸಭೆಯನ್ನು ಏರ್ಪಡಿಸಿದ್ದ ಸಂಘಟಕರು ವೇದಿಕೆಯಿಂದ ಓಡಿಹೋದದ್ದಲ್ಲದೆ ನಾನು ಸಮಾಜವನ್ನು ದಿಕ್ಕು ತಪ್ಪಿಸುತ್ತಿದ್ದೇನೆ ಎಂದು ಎಲ್ಲೆಡೆ ಪ್ರಚಾರ ಮಾಡಲಾರಂಭಿಸಿದರು. ಕಾಮದ ಕುರಿತ ಉಪನ್ಯಾಸ ಕೇಳಿದರೆ ಸಮಾಜ ಹಾಳಾಗುವುದೇ? ಹಾಗೆ ನೋಡಿದರೆ ಕಾಮದ ಕುರಿತು ವಿವೇಚಿಸದ ಸಮಾಜ ದಾರಿತಪ್ಪುತ್ತದೆ ಎಂದು ನನ್ನ ಅಭಿಮತ. ಕಾಮದ ವಿಷಯದಲ್ಲಿ ಸಮಾಜ ವಿಕೃತಗೊಂಡರೆ ಅದಕ್ಕೆ ಕಾಮವನ್ನು ವಿಶ್ಲೇಷಿಸುವ ನನ್ನಂಥವರು ಕಾರಣರಲ್ಲ. ಅದಕ್ಕೆ ಕಾಮವನ್ನು ಪಾಪಕರವೆಂದು ಬೋಧಿಸುವ ನೈತಿಕವಾದಿಗಳು, ಧಾರ್ಮಿಕ ವ್ಯಕ್ತಿಗಳು ಕಾರಣ. ನಾನು ಕಾಮವನ್ನು ವಿಶ್ಲೇಷಿಸಿದರೆ, ಅವರು ಕಾಮುಕತೆಯನ್ನು ಬಿತ್ತುತ್ತಾರೆ. ನಾನು ಅಜ್ಞಾನದ ವಿರೋಧಿ, ಅದು ಕಾಮದ ಕುರಿತ ಅಜ್ಞಾನವಿರಲಿ, ದೈವದ ಕುರಿತ ಅಜ್ಞಾನವಿರಲಿ. ಕಾಮದ ವಿಶ್ಲೇಷಣೆ ನಿಜವಾಗಿಯೂ ವ್ಯಕ್ತಿಗಳನ್ನು ಕಾಮುಕರನ್ನಾಗಿಸುವುದೇ ಎಂದು ಪ್ರಯೋಗತಃ ತಿಳಿಯಲೆಂದೇ ನಾನು ಕಾಮವನ್ನು ಕುರಿತು ದೀರ್ಘವಾಗಿ ಮಾತನಾಡಿದೆ. ಹೀಗೆ ಕಾಮದ ಕುರಿತ ನನ್ನ ಪ್ರವಚನಗಳಿಗೆ ನಾನು ಹೊಣೆಯಲ್ಲ ಹಾಗೆ ಪ್ರವಚನಗಳನ್ನು ನೀಡಲು ಆ ನೈತಿಕವಾದಿಗಳೇ ನನಗೆ ಪ್ರೇರಣೆ ನೀಡಿದರು. ಹಾಗಾಗಿ ನಾನು ಅವರಿಗೆ ಕೃತಜ್ಞನಾಗಿರಬೇಕು. ಹಾಗಾಗಿ ನಿಮ್ಮ ಸಂಶಯಗಳು ಬಗೆಹರಿದ ಕೃತಜ್ಞತೆಯನ್ನು ನನಗೆ ಸಲ್ಲಿಸ ಬೇಕಾಗಿಲ್ಲ, ಅದು ಅವರಿಗೆ ಸಲ್ಲುತ್ತದೆ ಎಂದು ಕೇಳುಗರಿಗೆ ಹೇಳಿದೆ.
ನಾನು ಕಾಮದ ಬಗ್ಗೆ ಮಾತನಾಡಲಾರಂಭಿಸಿದಾಗ ನನ್ನ ಪ್ರವಚನಗಳನ್ನು ಉಗ್ರವಾಗಿ ಖಂಡಿಸಿ ಹಲವು ಪತ್ರಗಳು ಬಂದವು. ಪ್ರವಚನವನ್ನು ಹೀಗೆಯೇ ಮುಂದುವರೆಸಿದರೆ ಗುಂಡಿಟ್ಟು ಕೊಲ್ಲುವುದಾಗಿ ಬೆದರಿಕೆಗಳೂ ಬಂದವು. ಮಾರನೆಯ ದಿನ ನಾನು ಹಾಗೆ ಬೆದರಿಸಿದ ವ್ಯಕ್ತಿಯನ್ನು ಉದ್ದೇಶಿಸಿ ಬಹಿರಂಗವಾಗಿಯೇ ಮಾತನಾಡಿದೆ “ನಿಮ್ಮ ಪತ್ರಕ್ಕೆ ಉತ್ತರಿಸೋಣವೆಂದರೆ ಆ ಪತ್ರದಲ್ಲಿ ನಿಮ್ಮ ಹೆಸರಾಗಲಿ, ವಿಳಾಸವಾಗಲಿ ಕೊನೆಯ ಪಕ್ಷ ಸಹಿಯಾಗಲಿ ಇರಲಿಲ್ಲ. ನಾನೇನೂ ಯಾವ ಪೋಲೀಸಿನವರಿಗೂ ದೂರು ನೀಡುತ್ತಿರಲಿಲ್ಲ, ನೀವು ಇಲ್ಲೇ ಎಲ್ಲೋ ಕುಳಿತಿರಬಹುದು ಎಂದು ನಾನು ಬಲ್ಲೆ. ಹಾಗಾಗಿ ನಿಮಗೆ ಬಹಿರಂಗವಾಗಿಯೇ ಕೆಲವು ವಿಷಯಗಳನ್ನು ತಿಳಿಸುತ್ತೇನೆ. ಮೊದಲನೆಯದಾಗಿ ನೀವು ದಯವಿಟ್ಟು ನನ್ನ ಮೇಲೆ ಗುಂಡು ಹಾರಿಸ ಬೇಡಿ. ಏಕೆಂದರೆ ಆಗ ನಾನು ಹೇಳುತ್ತಿರುವ ಮಾತುಗಳು ಶಾಶ್ವತ ಸತ್ಯಗಳಾಗಿ ಉಳಿದುಬಿಡುತ್ತವೆ. ಒಂದು ವೇಳೆ ಯೇಸುವನ್ನು ಶಿಲುಬೆಗೇರಿಸದಿದ್ದರೆ ಆತ ಇತಿಹಾಸದ ನೆನಪುಗಳಿಂದ ಎಂದೋ ಅಳಿಸಿಹೋಗುತ್ತಿದ್ದ. ಶಿಲುಬೆಗೇರಿಸಿದವರು ಒಂದರ್ಥದಲ್ಲಿ ಯೇಸುವಿಗೆ ಉಪಕಾರವನ್ನೇ ಮಾಡಿದರು. ಆದ್ದರಿಂದ ನನಗೆ ಗುಂಡಿಕ್ಕಿದರೆ ನೀವು ಕೊನೆಯತನಕ ಪಶ್ಚಾತ್ತಾಪ ಪಡಬೇಕಾದೀತು ನೆನಪಿರಲಿ. ಹೀಗೆ ಹುತಾತ್ಮನಾದರೆ ನನ್ನ ಬದುಕು ಸಾಧಿಸಲಾರದ್ದನ್ನು ನನ್ನ ಸಾವು ಸಾಧಿಸಿಬಿಡುತ್ತದೆ. ಎರಡನೆಯದಾಗಿ ನನಗೇನೂ ಹಾಸಿಗೆಯ ಮೇಲೆ ಮಲಗಿಕೊಂಡೇ ಸಾಯಬೇಕು ಎಂಬ ಬಯಕೆ ಇಲ್ಲ. ಹಾಗಾಗಿ ಕೊಲ್ಲುವ ವಿಷಯದಲ್ಲಿ ಯಾರೂ ಆತುರ ಪಡುವ ಅಗತ್ಯವಿಲ್ಲ. ಮೂರನೆಯದಾಗಿ ಇನ್ನು ಮುಂದೆ ಯಾವುದೇ ಪತ್ರವನ್ನು ಬರೆದರೆ ಸಹಿ ಮಾಡಲು ಹಿಂಜರಿಯಬೇಡಿ. ಒಂದುವೇಳೆ ನಾನು ಗುಂಡೇಟು ಪಡೆಯಲು ಅರ್ಹ ಎಂದು ನನಗನ್ನಿಸಿದರೆ ನಿಮ್ಮನ್ನು ಕರೆಸಿಕೊಳ್ಳಲು ನನಗೆ ಅನುಕೂಲವಾಗುತ್ತದೆ”.
ಇನ್ನೊಬ್ಬ ಸ್ನೇಹಿತರು “ಸಾಧು ಸಂತರೆನಿಸಿಕೊಂಡವರು ಹೀಗೆಲ್ಲ ಕಾಮದ ಕುರಿತು ಬಹಿರಂಗವಾಗಿ ಚರ್ಚಿಸುವರೇ? ನಿಮ್ಮನ್ನು ಮಹಾತ್ಮರೆಂದು ಗೌರವಿಸುತ್ತಿದ್ದ ನನಗೆ ನಿಮ್ಮ ವಿಷಯದಲ್ಲಿ ಭ್ರಮನಿರಸನವಾಗಿದೆ” ಎಂದು ಖೇದ ವ್ಯಕ್ತಪಡಿಸಿ ಚೀಟಿ ಬರೆದು ಕಳಿಸಿದರು. “ಮೊದಲಿಗೆ, ನನ್ನ ವಿಷಯದಲ್ಲಿ ಭ್ರಮನಿರಸನ ಉಂಟುಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಒಂದು ವೇಳೆ ಈ ಹಿಂದೆ ನನ್ನ ಬಗ್ಗೆ ಗೌರವಭಾವ ಇಟ್ಟುಕೊಂಡಿದ್ದರೆ ಅದು ನಿಮ್ಮ ತಪ್ಪು, ನನ್ನದಲ್ಲ. ನನ್ನನ್ನು ಗೌರವಿಸುವ ನಿಮ್ಮ ಉದ್ದೇಶವೇನು? ಹೀಗೆ ಬರೆದು ನನ್ನಲ್ಲಿ ಮಹಾತ್ಮನ ಪಟ್ಟಕ್ಕೆ ಪ್ರಲೋಭನೆ ಹುಟ್ಟಿಸಲಾರಿರಿ. ನಾನು ಮಹಾತ್ಮನಲ್ಲ. ಮಹಾತ್ಮನಾಗುವ ಆಸೆ ಎಳ್ಳಷ್ಟಾದರೂ ನನಗೆ ಇದ್ದಿದ್ದರೆ ಇಂಥ ವಿಷಯವನ್ನು ಚರ್ಚಿಸುವ ಗೋಜಿಗೇ ಹೋಗುತ್ತಿರಲಿಲ್ಲ. ತಾನು ಆಡಬೇಕಾದ, ಆಡಬಾರದ ಮಾತುಗಳನ್ನು ಮುನ್ನವೇ ನಿರ್ಧರಿಸಿಕೊಳ್ಳದ ವ್ಯಕ್ತಿ ಮಹಾತ್ಮನಾಗಲು ಸಾಧ್ಯವೇ ಇಲ್ಲ. ಇಡೀ ಮನುಷ್ಯತ್ವವು ಮಹತ್ವಕ್ಕೆ ಏರಬೇಕೇ ವಿನಃ ಮಾನವಜಾತಿಗೆ ಮಹಾತ್ಮರುಗಳ ಅಗತ್ಯವಿಲ್ಲ. ಮಹಾತ್ಮನ ಬಗ್ಗೆ ಒಬ್ಬ ವ್ಯಕ್ತಿಗಾದರೂ ಭ್ರಮನಿರಸನವಾಯಿತಲ್ಲ ಅದೇ ನನ್ನ ದೊಡ್ಡ ಸಾಧನೆ. ಸಾಲದ್ದಕ್ಕೆ ’ಈ ವಿಷಯಗಳನ್ನು ಇಲ್ಲಿಗೇ ಬಿಟ್ಟರೆ ನೀವು ಮಹಾತ್ಮ ಎನಿಸಿಕೊಳ್ಳುವ ಸಾಧ್ಯತೆ ಇದೆ’ ಎಂದು ಕೆಲವರು ಸಲಹೆ ನೀಡಿದ್ದಾರೆ. ಈವರೆಗಿನ ಮಹಾತ್ಮರುಗಳು ಈ ವಿಷಯಗಳ ಕುರಿತು ಮಾತನಾಡದೆ ಸುಮ್ಮನಿದ್ದುದಕ್ಕೇ ಅವರು ಮಹಾತ್ಮ ಪಟ್ಟ ಉಳಿಸಿಕೊಂಡಿರುವುದು ಮತ್ತು ಕಾಮದ ವಿಷಯದಲ್ಲಿ ಸಮಾಜ ಹೀಗೆ ವಿಕೃತ ಮಟ್ಟಕ್ಕೆ ಇಳಿದಿರುವುದು. ನನಗೆ ನನ್ನ ಮಹಾತ್ಮ ಸ್ಥಾನ ಮುಖ್ಯವಲ್ಲ. ಅಂತಹ ಯೋಜನೆಗಳೂ ನನ್ನ ಮನಸ್ಸಿನಲ್ಲಿಲ್ಲ. ನನ್ನ ಕಾಳಜಿ ಇರುವುದು ನನ್ನನ್ನು ಮಹಾತ್ಮನನ್ನಾಗಿಸುವ ಆತುರದಲ್ಲಿರುವ ಈ ಕೆಲವು ಸ್ನೇಹಿತರ ಬಗ್ಗೆ. ಈಗ ನಮ್ಮ ಮುಂದಿರುವ ಪ್ರಶ್ನೆ ಸಮಾಜದಲ್ಲಿ ಮಹಾತ್ಮರುಗಳನ್ನು ಹುಟ್ಟಿಸುವುದು ಹೇಗೆ ಎಂಬುದಲ್ಲ. ಸಮಾಜದಲ್ಲಿ ಮಹಾತ್ಮಗಳ ಸಂಖ್ಯೆ ಸಮೃದ್ಧವಾಗಿಯೇ ಇದೆ. ನಿಜವಾದ ವ್ಯಕ್ತಿಗಳನ್ನು ರೂಪಿಸುವುದು ಹೇಗೆ ಎಂಬುದು ಇಂದಿನ ಪ್ರಶ್ನೆಯಾಗಿದೆ” ಎಂದು ಉತ್ತರಿಸಿದ್ದೆ.
ಕಾಮದ ಆಧ್ಯಾತ್ಮೀಕರಣ ಸಾಧ್ಯ. ನಿನ್ನೆಯ ದಿನ ಸ್ನೇಹಿತರೊಬ್ಬರು “ನಿಮ್ಮ ಮಾತುಗಳು ಸರಿ ಎನಿಸುತ್ತದೆ. ಆದರೆ ಸಭೆಯ ಮಧ್ಯದಿಂದ ಯಾರಾದರೂ ಎದ್ದುನಿಂತು ನಿಮ್ಮ ಭಾಷಣವನ್ನು ನಿಲ್ಲಿಸಿ ಎಂದು ಪ್ರತಿಭಟಿಸಿದರೆ ಏನು ಗತಿ?” ಎಂದು ತಮ್ಮ ಆತಂಕವನ್ನು ತೋಡಿಕೊಂಡಿದ್ದರು. ಅಂಥ ಧೈರ್ಯವಂತರು ನಮ್ಮ ಸಮಾಜದಲ್ಲಿ ಹುಟ್ಟಿಕೊಳ್ಳಬೇಕೆಂದೇ ನಾನು ಈ ವಿಷಯಗಳನ್ನು ಕುರಿತು ವಿವೇಚಿಸುತ್ತಿರುವುದು. ನನಗೆ ಅಂಥ ಧೈರ್ಯವಂತರು ಬೇಕು. ಆದರೆ ಎಲ್ಲಿಯೂ ಕಾಣಸಿಗುತ್ತಿಲ್ಲವಲ್ಲ! ಅಂಥವರು ಇದ್ದಿದ್ದರೆ ವೇದಿಕೆಗಳ ಮೇಲೆ ನಿಂತು ಧರ್ಮ, ದೇವರು, ನೀತಿ ಇತ್ಯಾದಿ ಸುಳ್ಳುಗಳನ್ನು ನೂರಾರು ವರ್ಷಗಳಿಂದ ಹೇಳುತ್ತ ಬಂದಿರುವ ಎಲ್ಲ ಸಾಧು ಸಂತರನ್ನು ಮೊದಲು ಪ್ರಶ್ನಿಸುತ್ತಿದ್ದರು. ಕಾಮದ ಕುರಿತ ನನ್ನ ವಿಚಾರಗಳು ಭಾರತೀಯ ಸಂಸ್ಕೃತಿಯ ಹಿನ್ನೆಲೆಯವು. ತಾಂತ್ರಿಕ ಸಿದ್ಧಾಂತವನ್ನು ಅವಲಂಬಿಸಿದವು. ಕಾಮ ನಮ್ಮ ಒತ್ತಡಗಳ ಬಿಡುಗಡೆಗೆ ಹೊರದಾರಿಯಲ್ಲ, ನಿಮ್ಮಲ್ಲಿ ಪ್ರೀತಿ, ಭಕ್ತಿ, ಧಾರ್ಮಿಕ ಪ್ರವೃತ್ತಿ ಜಾಗೃತವಾದಾಗ ಮಾತ್ರ ಕಾಮದಲ್ಲಿ ತೊಡಗತಕ್ಕದ್ದು ಎಂದು ನಾನು ಬೋಧಿಸುತ್ತೇನೆ. ಆ ಪ್ರವೃತ್ತಿಗಳು ಜಾಗೃತವಾದಾಗ ಮಾತ್ರ ಕಾಮದಿಂದ ಬಿಡುಗಡೆ ಸಾಧ್ಯ. ಕಾಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಬ್ರಹ್ಮಚರ್ಯವನ್ನು ಪಾಲಿಸಲಾಗುವುದೇ?
ಕಾಮದ ತೊಡಕುಗಳಿಂದ ಹೊರಬಂದಾಗ ಮಾತ್ರ ಪ್ರೀತಿಯ ಅರ್ಥ ನಮಗೆ ತಿಳಿಯುವುದು. ಆ ತೊಡಕು ಇಲ್ಲವಾಗಬೇಕಾದರೆ ಕಾಮವನ್ನು ಸರಿಯಾಗಿ ಅನುಭವಿಸಬೇಕು. ನಮಗೆ ಅದರ ಪಾವಿತ್ರ್ಯ ಮನವರಿಕೆಯಾಗಬೇಕು. ಅದು ಸುಲಭವಾಗಿ ಅರ್ಥವಾಗುವಂಥದಲ್ಲ. ಕಾಮಸುಖದ ತೀವ್ರ ಅನುಭವದ ಕ್ಷಣಗಳಲ್ಲಿ ಮನುಷ್ಯಜಾತಿಗೆ ಸಮಾಧಿಯ ಅನುಭವದ ಮೊದಲ ಒಳನೋಟಗಳು ಗೋಚರಿಸಿವೆ ಎಂದು ನನ್ನ ಅನಿಸಿಕೆ. ಆ ಕ್ಷಣವನ್ನು ಸರಿಯಾಗಿ ಧ್ಯಾನಿಸಿದಾಗ ಮನಸ್ಸಿನ ಹಂಗನ್ನು ತೊರೆದ ಬದುಕಿನ ತೀವ್ರವಾದ ಅನುಭವ ನಮಗೆ ಉಂಟಾಗುತ್ತದೆ. ಕಾಮದ ಅನುಭವವನ್ನು ಸಾಕ್ಷಾತ್ ಭಗವಂತನ ದಿವ್ಯ ಅನುಭವದಷ್ಟೇ ಕೃತಾರ್ಥಭಾವದಿಂದ ಸ್ವೀಕರಿಸಿದಾಗ ಮಾತ್ರ ಕಾಮದಿಂದ ಬಿಡುಗಡೆ ಸಾಧ್ಯವಾಗುವುದು. ಕಾಮವನ್ನು ನಿಗ್ರಹಿಸಿದಷ್ಟೂ ಕಾಮುಕತೆ ಉಲ್ಬಣವಾಗುತ್ತದೆ. ಇನ್ನೊಬ್ಬ ವ್ಯಕ್ತಿಯಲ್ಲಿ ಹೀಗೆ ತೀವ್ರವಾಗಿ ಸಂಯೋಗ ಹೊಂದುವುದೇ ಪ್ರೇಮ ಹಾಗು ಇಡೀ ಸೃಷ್ಟಿಯೊಡನೆ ಹೀಗೆ ವಿಲೀನವಾಗುವುದೇ ಸಮಾಧಿ.
ಲೋಕದಲ್ಲಿ ದೇವರು ಎಂಬ ಒಂದು ಪದಾರ್ಥವಿಲ್ಲ, ಹಾಗೆ ಇರಲು ಸಾಧ್ಯವೂ ಇಲ್ಲ. ಇರುವುದು ಲೋಕ ಮಾತ್ರ. ಹಾಗಾಗಿ ನಾವು ಲೋಕವನ್ನು ಸರಿಯಾಗಿ ಗ್ರಹಿಸತಕ್ಕದ್ದು. ಆದರೆ ಈ ಧಾರ್ಮಿಕರೆನಿಸಿಕೊಂಡವರು ಇರುವ ಲೋಕವನ್ನು ಇಲ್ಲವೆಂದೂ ಇಲ್ಲದ ದೇವರನ್ನು ಇರುವನೆಂದೂ ಸುಳ್ಳು ಹೇಳುತ್ತಿದ್ದಾರೆ. ನಾವು ಲೋಕವನ್ನು ಅರಿಯದಂತೆ ಎಲ್ಲ ಬಗೆಯ ಅಡೆತಡೆ ಉಂಟು ಮಾಡುತ್ತಿದ್ದಾರೆ. ಮನುಷ್ಯನ ಕೇಂದ್ರ ಯಾವುದು? ಅದು ಹೋಗಲಿ ಪ್ರಾಣಿ ಪಕ್ಷಿಗಳ ಅಥವ ಗಿಡಮರಗಳ ಮೂಲ ಆಶಯವೇನು? ಆಲೋಚಿಸಿ,.. ಪ್ರತಿಯೊಂದು ಜೀವವೂ ಹೊಸ ಸೃಷ್ಟಿಯಲ್ಲಿ ನಿರತವಾಗಿದೆ. ಹೂಗಳ ಅರಳುವಿಕೆ, ಪಕ್ಷಿಗಳ ಕಲರವ ಎಲ್ಲವೂ ಕಾಮ ಪ್ರೇರಿತವಾಗಿವೆ. ಒಟ್ಟು ಸೃಷ್ಟಿಯೇ ಕಾಮಕ್ರಿಯೆಯಲ್ಲಿ ನಿರತವಾಗಿದೆ. ಆದರೆ ಮನುಷ್ಯರ ವಿಷಯದಲ್ಲಿ ಹಾಗಾಗಿಲ್ಲ, ನಾವು ಕಾಮವನ್ನು ಪಾಪವೆಂದು ಭಾವಿಸುತ್ತೇವೆ, ಎಲ್ಲ ರೀತಿಯಲ್ಲೂ ನಿಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಜೀವಿತದಲ್ಲಿ ಅದಕ್ಕೆ ಜಾಗವೇ ಇಲ್ಲ ಎಂದು ತೋರಿಸಿಕೊಂಡು ಓಡಾಡುತ್ತಿದ್ದೇವೆ. ನಮ್ಮ ಸಮಾಜದಲ್ಲಿ ಅದಕ್ಕೆ ನ್ಯಾಯವಾಗಿ ಸಲ್ಲ ಬೇಕಾದ ಸ್ಥಾನ ಸಂದಿಲ್ಲ. ಹೀಗೆ ಅದನ್ನು ನಿಗ್ರಹಿಸುವ ಪ್ರಯತ್ನದಲ್ಲಿ ನಾವು ಇನ್ನೂ ಬಲವಾಗಿ ಅದರ ಸುಳಿಯಲ್ಲಿ ಸಿಲುಕಿಬಿಟ್ಟಿದ್ದೇವೆ.
ಮನುಷ್ಯ ಸೃಷ್ಟಿಸಿಕೊಂಡ ಹಲವು ವಿಕೃತಿಗಳಲ್ಲಿ ಮದುವೆ ಎಂಬುದೂ ಒಂದು. ಮದುವೆಯ ಕಲ್ಪನೆಯ ಹಿಂದಿರುವ ಆಶಯವನ್ನು ನಾನು ಅನುಮಾನಿಸುವುದಿಲ್ಲ. ಆದರೆ ಮನುಷ್ಯನ ಬುದ್ಧಿಶಕ್ತಿ ಹಾಗು ವಿವೇಕದ ಬಗ್ಗೆ ನನಗೆ ಅನುಮಾನವಿದೆ. ವಿವೇಕಿಯಾದವನು ನಾಳೆಯ ಬಗ್ಗೆ ಬೇರೆಯವರಿಗೆ ಭರವಸೆ ನೀಡುವುದೂ ಇಲ್ಲ, ತಾನೂ ಆ ಬಗ್ಗೆ ಭರವಸೆ ಹೊಂದಿರುವುದಿಲ್ಲ. ನಾನು ಮದುವೆಯನ್ನು ದ್ವೇಷಿಸುತ್ತೇನೆ, ಮನುಷ್ಯ ಬದುಕಿನ ಎಲ್ಲ ಸಮಸ್ಯೆಗಳ ಮೂಲಬೀಜಗಳು ಮದುವೆಯಲ್ಲಿವೆ. ಮದುವೆ ಬಹುತೇಕ ಜನರನ್ನು ಹಾಸ್ಯಾಸ್ಪದ ವ್ಯಕ್ತಿಗಳನ್ನಾಗಿ ಮಾಡಿದೆ. ಮುಖವಾಡದವರನ್ನಾಗಿಸಿದೆ. ಇಂತಹ ವಿಷಪೂರಿತ ವಾತಾವರಣದಲ್ಲಿ ಹುಟ್ಟುವ ಮಕ್ಕಳು ಖಂಡಿತ ಆರೋಗ್ಯಕರವಾಗಿ ಬೆಳೆಯಲಾರರು. ಅವಿವಾಹಿತರನ್ನು ಜನ “ಏಕೆ ಮದುವೆಯಾಗುವುದಿಲ್ಲವೇ?” ಎಂದು ಅಷ್ಟು ಆತಂಕದಿಂದ ಅದೇಕೆ ವಿಚಾರಿಸುತ್ತಾರೋ ನನಗೆ ಅರ್ಥವಾಗುವುದಿಲ್ಲ. ಅದೇನು ನಿಸರ್ಗದ ಒಂದು ನಿಯಮವೇ? ಇಂತಹ ಹಿಂಸೆಗಳಿಂದ ಪಾರಾಗಲೆಂದೇ ಎಷ್ಟೋ ಜನ ಮದುವೆಯಾಗಿಬಿಡುವರೋ ಏನೋ ತಿಳಿಯದು. ಆದರೆ ಇವರಿಂದ ಹೀಗೆಲ್ಲ ಪಾರಾಗಲು ಸಾಧ್ಯವೇ? ಮದುವೆಯಾದ ಮೇಲೆ ಈ ಜನ “ಏಕೆ, ಇನ್ನೂ ಮಕ್ಕಳಾಗಿಲ್ಲವೇ?” ಎಂದು ಕೇಳುತ್ತ ತಮ್ಮ ಹಿಂಸೆಯನ್ನು ಮುಂದುವರೆಸುತ್ತಾರೆ. ನನ್ನ ಕೋಣೆಯಲ್ಲಿ ಕುಳಿತು ಅತ್ತಿತ್ತ ಕದಲದೆ ಹಲವು ದಿನಗಳನ್ನು, ರಾತ್ರಿಗಳನ್ನು ಕಳೆಯುವ ನನಗೆ ಇನ್ನೊಬ್ಬರನ್ನು ಕುರಿತು “ಏಕೆ ಮದುವೆಯಾಗಿಲ್ಲ, ಏಕೆ ಮಕ್ಕಳನ್ನು ಹುಟ್ಟಿಸಿಲ್ಲ” ಈ ತರಹದ ಪ್ರಶ್ನೆಗಳನ್ನು ಕೇಳಲು ಸಾಧ್ಯವೇ ಆಗುವುದಿಲ್ಲ. ಇನ್ನೊಬ್ಬರ ಸ್ವಾತಂತ್ರ್ಯದೊಳಗೆ ಹಾಗೆ ತಲೆಹಾಕುವುದು ಸಾಧುವೂ ಅಲ್ಲ.
ಭಾರತೀಯ ಬುದ್ಧಿಗೆ ನನ್ನ ಚಿಂತನೆಗಳು ಅರ್ಥವಾಗುವುದಿಲ್ಲ. ತುಂಬ ಆತ್ಮೀಯರೂ ಸಹ “ನಿಮ್ಮ ಆಶ್ರಮದಲ್ಲಿ ಬೇರೆಲ್ಲ ಸರಿ ಆದರೆ ಆ ವಿದೇಶೀಯರು ತುಂಬ ಅಸಭ್ಯವಾಗಿ ವರ್ತಿಸುತ್ತಾರೆ. ಆಶ್ರಮದ ಪವಿತ್ರ ಪರಿಸರದಲ್ಲಿ ಹೆಗಲ ಮೇಲೆ ಕೈ ಇಟ್ಟುಕೊಂಡು ಸಲಿಗೆಯಿಂದ ಓಡಾಡುವುದೇನು, ಗಂಡು ಹೆಣ್ಣುಗಳು ಹೊರ ಪ್ರಪಂಚದ ಅರಿವಿಲ್ಲದೆ ಚುಂಬಿಸುವುದೇನು, ಭಾರತೀಯರಾದ ನಮಗೆ, ನಮ್ಮ ಸಮಾಜಕ್ಕೆ, ಇದೆಲ್ಲ ತುಂಬ ಮುಜುಗರ ಉಂಟು ಮಾಡುತ್ತದೆ. ಅಲ್ಲದೆ ಇದರಿಂದ ನಿಮ್ಮ ಹೆಸರಿಗೂ ಕಳಂಕ” ಎಂದು ಹೇಳಿದ್ದಾರೆ.
ಕೊಳೆತು ನಾರುತ್ತಿರುವ ಮನಸ್ಸು ಮಾತ್ರ ಹೀಗೆಲ್ಲ ಯೋಚಿಸುವುದು. ಮನಸ್ಸಿಲ್ಲದವರನ್ನು ಆಲಂಗಿಸುವುದು, ಚುಂಬಿಸುವುದು ನಿಜಕ್ಕೂ ಅಶ್ಲೀಲ, ಅಸಭ್ಯತೆ. ಅದನ್ನೇ ಈ ಭಾರತೀಯರೆನಿಸಿಕೊಂಡವರು ಮದುವೆಯ ಹೆಸರಿನಲ್ಲಿ ಸಾವಿರಾರು ವರ್ಷಗಳಿಂದ ಮಾಡಿಕೊಂಡು ಬಂದಿರುವುದು. ಆದರೆ ಒಲಿದವರು ಪರಸ್ಪರ ಅಪ್ಪಿದರೆ, ಚುಂಬಿಸಿದರೆ ಇವರಿರೇಕೆ ಕಷ್ಟವಾಗಬೇಕು? ನಾನು ನನ್ನ ವಿದೇಶೀ ಸನ್ಯಾಸಿನಿಯರಿಗೆ ಆಗಾಗ ಹೇಳುತ್ತಿರುತ್ತೇನೆ. “ಭಾರತೀಯರು ಓಡಾಡುವ ರಸ್ತೆಗಳಲ್ಲಿ ಒಮ್ಮೆ ಸುತ್ತಿಬನ್ನಿ. ಅವರು ನಿಮ್ಮನ್ನು ಹೇಗೆ ನುಂಗುವಂತೆ ನೋಡುತ್ತಾರೆ, ಅವಕಾಶ ಸಿಕ್ಕರೆ ರಸ್ತೆಗಳಲ್ಲಿ ಹೇಗೆ ನಿಮ್ಮ ಅಂಗಾಂಗಗಳನ್ನು ಸ್ಪರ್ಶಿಸಲು ಮುನ್ನುಗ್ಗುತ್ತಾರೆ” ಎಂದು. ಆ ಸನ್ಯಾಸಿನಿಯರಿಗೆ ಈಗಾಗಲೇ ಅಂತಹ ಅನುಭವಗಳಾಗಿವೆಯಂತೆ. ಇದು ನಿಜವಾಗಿಯೂ ಅಸಭ್ಯ ವರ್ತನೆ, ನನ್ನ ಆಶ್ರಮದ ಸನ್ಯಾಸಿಗಳದ್ದಲ್ಲ. ಪ್ರೇಮಿಗಳಿಬ್ಬರು ಸಲಿಗೆಯಿಂದ ನಡೆದುಕೊಂಡಾಗ ಅದು ರೋಗಗ್ರಸ್ತ ಮನಸ್ಸುಗಳಿಗೆ ಮಾತ್ರ ಅಸಭ್ಯವಾಗಿ ಕಾಣಿಸುತ್ತದೆ. ಇವರಿಗೂ ಹಾಗೆಲ್ಲ ವರ್ತಿಸಬೇಕೆನಿಸುವುದುಂಟು ಆದರೆ ಸಾಧ್ಯವಾಗುವುದಿಲ್ಲ ಅದಕ್ಕೇ ಇವರಿಗೆ ಪ್ರೇಮಿಗಳ ಬಗ್ಗೆ ಸಿಟ್ಟು. ತಮ್ಮಿಂದಾಗದ್ದನ್ನು ಬೇರೆಯವರೂ ಮಾಡಬಾರದು ಎಂದು ಅಂಥ ಮನಸ್ಸು ಯೋಚಿಸುತ್ತದೆ. ಇಬ್ಬರು ಪ್ರೇಮಿಗಳನ್ನು ಕಂಡಾಗ ಇವರ ಬಲವಂತವಾಗಿ ನಿಗ್ರಹಿಸಿದ ಕಾಮನೆಗಳು ಹೊರಬರುತ್ತವೆ. ಅದಕ್ಕೇ ಇವರು ಹೀಗೆಲ್ಲ ಸಿಡಿಮಿಡಿಗೊಳ್ಳುವುದು. ನಿಜಕ್ಕೂ ಇವರನ್ನು ಬಾಧಿಸುತ್ತಿರುವುದು ವಿದೇಶಿಯರ ವರ್ತನೆಯಲ್ಲ, ತಮ್ಮದೇ ಅದುಮಿಟ್ಟ ಕಾಮುಕತೆಯಿಂದ ಇವರು ಬಾಧಿತರಾಗಿದ್ದಾರೆ. ಭಾರತೀಯರಾದ ನಾವು ಒಳಗೆ ಕುದಿಯುತ್ತಿದ್ದರೂ ಹೊರಗೆ ಸಂಯಮದ ವೇಷ ತೊಟ್ಟು ಓಡಾಡುತ್ತಿದ್ದೇವೆ. ಸಾವಿರಾರು ವರ್ಷಗಳಿಂದಲೂ ನಾವು ಹೀಗೆಯೇ ವರ್ತಿಸುತ್ತ ಬಂದಿರುವುದು. ಆದರೆ ನಮ್ಮೊಳಗಿನ ರೋಗವನ್ನೆಲ್ಲ ಸುಲಭವಾಗಿ ವಿದೇಶೀಯರ ಮೇಲೆ ಹೊರಿಸಿಬಿಡುತ್ತೇವೆ. ನನ್ನ ಆಶ್ರಮಕ್ಕೆ ಪ್ರತಿ ವರ್ಷ ೫೦ ಸಾವಿರಕ್ಕೂ ಹೆಚ್ಚು ಸಂಖ್ಯೆಯ ವಿದೇಶೀ ಸನ್ಯಾಸಿಗಳು ಬರುತ್ತಾರೆ. ಒಬ್ಬ ಸನ್ಯಾಸಿಯೂ ಒಂದು ಭಾರತೀಯ ಹೆಣ್ಣು ಮಗುವಿನತ್ತ ಕೆಟ್ಟ ದೃಷ್ಟಿಯಿಂದ ನೋಡಿಲ್ಲ, ಆದರೆ ಭಾರತೀಯರು ನನ್ನ ವಿದೇಶೀ ಸನ್ಯಾಸಿನಿಯರ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ ನೂರಾರು ಪ್ರಕರಣಗಳು ನಡೆದಿವೆ. ನಾನು ಮದರ್ ತೇರೇಸಾ ಹಾಗು ಪೋಪ್‌ರ ವಿರುದ್ಧ ಮಾತನಾಡುತ್ತಿರುವೆನೆಂಬ ಸಿಟ್ಟಿಗೆ ಮೀತನ್ ಎಂಬ ನನ್ನ ಸನ್ಯಾಸಿಯನ್ನು ಹತ್ಯೆ ಮಾಡಿದ್ದಾರೆ. ಹಾಗು ಆರು ಸನ್ಯಾಸಿಗಳ ಗುಡಿಸಲುಗಳನ್ನು ಸುಟ್ಟು ಬೂದಿಮಾಡಿದ್ದಾರೆ. ಸಮಾಜ ಸೇವೆ, ಬಡವರ ಉದ್ಧಾರ ಎಂದು ಹೇಳಿಕೊಳ್ಳುವ ಈ ಕೊಲೆಪಾತಕಿಗಳು ನನ್ನ ಮೇಲೆ ಸೇಡು ತೀರಿಸಿಕೊಳ್ಳಲಾಗದೆ ನನ್ನ ಸನ್ಯಾಸಿಗಳನ್ನು ಕೊಲೆ ಮಾಡುತ್ತಿದ್ದಾರೆ.
ಅಲ್ಲದೆ “ಇದರಿಂದ ನಿಮ್ಮ ಹೆಸರಿಗೂ ಕಳಂಕ” ಎಂಬ ಎಚ್ಚರಿಕೆಯ ಮಾತನ್ನು ಬೇರೆ ಸೇರಿಸುತ್ತಾರೆ. ಈ ಮಾತನ್ನು ನಾನು ಖಂಡಿತ ಒಪ್ಪಲಾರೆ. ನಾನು ಬೋಧಿಸುತ್ತಿರುವುದೇ ಪ್ರೀತಿಯನ್ನು, ಪ್ರೀತಿಯಿಂದ ನಡೆದುಕೊಳ್ಳುದನ್ನು. ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿ ಗುದ್ದಾಡುತ್ತಿದ್ದರೆ ಅದು ನಮಗೆ ಅಶ್ಲೀಲ ಎನ್ನಿಸುವುದಿಲ್ಲವಲ್ಲ! ಚಾಕು ಹಿಡಿದು ರಕ್ತಪಾತ ಮಾಡಲು ಮುನ್ನುಗ್ಗಿದರೂ ಮುಂದೇನಾಗುತ್ತದೆ ಎಂಬ ಕುತೂಹಲದಿಂದ ಆ ಬಿಟ್ಟಿ ಮನರಂಜನೆಯನ್ನು ಪಡೆಯುತ್ತಿರುತ್ತೇವೆ. “ಛೇ, ಇಷ್ಟು ಹೊತ್ತಾದರೂ ಯಾವ ಅನಾಹುತವೂ ಸಂಭವಿಸಲಿಲ್ಲವಲ್ಲ” ಒಳಗೇ ಚಡಪಡಿಸುತ್ತೇವೆ. ಇಂಥ ಜನಕ್ಕೆ ನನ್ನ ಆಶ್ರಮ ಅಶ್ಲೀಲವಾಗಿ ತೋರುವುದಂತೆ! ನಾನು ಹಾಗು ನನ್ನ ಸನ್ಯಾಸಿಗಳಾದರೂ ತುಂಬ ಸರಳ ಜೀವಿಗಳು; ಈ ವಿಷಯಗಳಲ್ಲಿ ನಾವು ಇವರಂತೆ ಜಟಿಲ ಮನಸ್ಸಿನವರಲ್ಲ. ನನ್ನ ಆಶ್ರಮದ ಈ ತರಹದ ವರ್ತನೆ ಖಂಡಿತ ನನಗೆ ಕಳಂಕವನ್ನು ತರದು. ನನ್ನ ವಿಷಯದಲ್ಲಿ ನೀವು ಮುತುವರ್ಜಿ ತೋರಿಸಲು ಬರಬೇಡಿ. ಎಂದಿನಿಂದಲೂ ನಾನು ಕಂಡದ್ದನ್ನು ಕಂಡ ಹಾಗೆ ಹೇಳುತ್ತ, ನನಗೆ ಸತ್ಯವೆನಿಸಿದ್ದನ್ನು ಆಚರಿಸುತ್ತ ಬಂದಿರುವವನು. ಹಾಗೊಂದು ವೇಳೆ ನಿಮ್ಮ ಸಲಹೆಯಂತೆ ನಡೆದುಕೊಂಡುಬಿಟ್ಟರೆ ನಾನು ಕಳಂಕಗಳಿಂದ ಮುಕ್ತನಾಗಿ ಬಿಡುವೆನೇ? ಈಚೆಗೆ, ಏಳು ವರ್ಷಗಳಿಂದ ವಿದೇಶಿಗಳು ಬರಲಾರಂಭಿಸಿದ್ದಾರೆ. ಅದಕ್ಕೂ ಹಿಂದೆ ನನ್ನ ಮೇಲೆ ಕಳಂಕಗಳಿರಲಿಲ್ಲವೇ? ನನ್ನಂತಹ ಲೋಕವಿರೋಧಿಯನ್ನು ಆಕ್ಷೇಪಿಸಲು ಯಾವ ಕಾರಣಗಳನ್ನಾದರೂ ಸುಲಭವಾಗಿ ಹೊಂದಿಸಿಕೊಳ್ಳಬಹುದು. ಹಾಗೆ ನೋಡಿದರೆ ವಿದೇಶೀಯರ ಈ ವರ್ತನೆಗಳಿಂದ ನನಗೆ ಉಪಕಾರವೇ ಆಗಿದೆ. ಅವರ ವರ್ತನೆಯಿಂದ ನಾನು ಹಿಂದಿನ ಎಲ್ಲ ಆಪಾದನೆಗಳಿಂದ ಪಾರಾಗಿದ್ದೇನೆ. ಈಗ ಪತ್ರಿಕೆಗಳು “ಶ್ರೀ ರಜನೀಶರ ವಿಚಾರಗಳು ಸರಿ ಆದರೆ ಅವರ ಶಿಷ್ಯರ ವರ್ತನೆ ಸರಿಯಿಲ್ಲ” ಎಂದು ಹೇಳಲಾರಂಭಿಸಿವೆ. ಇಷ್ಟು ದಿನ ನನ್ನ ಮಾತುಗಳಿಗೆ, ವಿಚಾರಗಳಿಗೆ ಸಲ್ಲದಿದ್ದ ಗೌರವ ಘನತೆಗಳು ನನ್ನ ಶಿಷ್ಯರ ವರ್ತನೆಯಿಂದ ಸಿಗಲಾರಂಭಿಸಿದೆ. ಇವರ ಮೂರ್ಖತನ ನನಗೆ ಮೊದಲಿನಿಂದಲೂ ಮನರಂಜನೆ ನೀಡುತ್ತ ಬಂದಿದೆ. ನನ್ನೊಂದಿಗೆ ಮಾತನಾಡಲು, ನನ್ನ ವಿಚಾರಗಳನ್ನು ಪ್ರಶ್ನಿಸಲು ಧೈರ್ಯವಿಲ್ಲದ ಈ ಜನ ಈಗ ನನ್ನ ಶಿಷ್ಯರ ಮೇಲೆ ಗೂಬೆ ಕೂರಿಸಲು ಮುಂದಾಗಿದ್ದಾರೆ. “ಭಾರತೀಯರಾದ ನಮಗೆ ನಮ್ಮ ಸಮಾಜಕ್ಕೆ ಇದರಿಂದ ತುಂಬ ಮುಜುಗರ ಉಂಟಾಗುತ್ತದೆ” ಎನ್ನುತ್ತಾರೆ. ಸಮಾಜದ ಸ್ವರೂಪವನ್ನು ಬದಲಾಯಿಸಲು ನಿರ್ಧರಿಸಿದಾಗ ಹಳೆಯ ಸಂಸ್ಕಾರಗಳಿಗೆ ಮುಜುಗರವಾಗಲೇ ಬೇಕು. ಆಶ್ರಮದ ಒಳಗೆ ಮಾತ್ರವಲ್ಲ ಭಾರತದ ಬೀದಿ ಬೀದಿಗಳಲ್ಲಿ ಹೀಗೆ ಸಲಿಗೆಯಿಂದ ವರ್ತಿಸಿ, ಎಲ್ಲರಿಗೂ ಮುಜುಗರ ಉಂಟು ಮಾಡಿಕೊಂಡು ಓಡಾಡಿ ಎಂದು ನನ್ನ ಸನ್ಯಾಸಿಗಳಿಗೆ ನಾನು ಆದೇಶ ನೀಡಿದ್ದೇನೆ. ನನ್ನ ದೃಷ್ಟಿಯಲ್ಲಿ ಪ್ರೀತಿ ಎನ್ನುವುದು ತುಂಬ ಪವಿತ್ರವಾದ ವಸ್ತು. “ನಿನ್ನ ಮುಖವನ್ನು ನೋಡಿ ನಾನು ನಗುತ್ತೇನೆ, ಕಣ್ಣೀರಿಡುತ್ತೇನೆ, ಚುಂಬಿಸುತ್ತೇನೆ, ಅಪ್ಪಿಕೊಳ್ಳುತ್ತೇನೆ,..ಹೀಗೆ ನಾನು ಒಳಗೆ ಖಾಲಿಯಾಗುತ್ತೇನೆ. ನನ್ನೊಳಗೆ ಪರಮಾತ್ಮ ತುಂಬಿಕೊಳ್ಳುವ ಅವಕಾಶವನ್ನು ಕಾಣುತ್ತೇನೆ” ಎಂದು ಒಬ್ಬ ಸೂಫೀ ಸಂತ ಹಾಡುತ್ತಾನೆ. ಪ್ರೀತಿಯ ನೆರವಿಲ್ಲದೆ ನಮ್ಮನ್ನು ನಾವು ಹೇಗೆ ಖಾಲಿ ಮಾಡಿಕೊಳ್ಳಬಲ್ಲೆವು?
ನಾನು ಮುಕ್ತಕಾಮವನ್ನು ಎಂದೂ ಬೋಧಿಸಿದವನಲ್ಲ, ಕಾಮದ ಪಾವಿತ್ರ್ಯವನ್ನು ಬೋಧಿಸಿದವನು. ಕಾಮವನ್ನು ಪ್ರೀತಿಯ ಮಟ್ಟದಿಂದ ಕಾನೂನು ಕಟ್ಟಳೆಗಳ ಮಟ್ಟಕ್ಕೆ ಇಳಿಸಬೇಡಿ ಎಂದು ಬೋಧಿಸಿದವನು. ಹೆಂಡತಿಯನ್ನು ಪ್ರೀತಿಸುವುದು ಕರ್ತವ್ಯ ಎಂದು ಭಾವಿಸುವುದು ವೇಶ್ಯಾವಾಟಿಕೆಗಿಂತ ಹೀನಾಯ ಎಂದು ಬೋಧಿಸಿದವನು. ನನ್ನ ೬೦೦ ಪುಸ್ತಕಗಳಲ್ಲಿ ಒಂದೇ ಒಂದು ಕೃತಿಯು ಕಾಮದ ಕುರಿತದ್ದಾಗಿದೆ. ಇವರ ಕಣ್ಣಿಗೆ ಉಳಿದ ಪುಸ್ತಕಗಳು ಏಕೆ ಬೀಳುವುದಿಲ್ಲ? ಭಾರತದ ಪತ್ರಿಕೋದ್ಯಮ ತನ್ನ ಸ್ವಾಸ್ಥ್ಯ ಕಳೆದುಕೊಂಡ ಪರಿಣಾಮದಿಂದ ಹೀಗಾಗಿದೆ. ಆ ಒಂದು ಪುಸ್ತಕ ಕೂಡ ಕಾಮದ ಪರವಾದುದಲ್ಲ. ಕಾಮವನ್ನು ಇಲ್ಲವಾಗಿಸುವಲ್ಲಿ ನೆರವಾಗುವ ಪುಸ್ತಕ ಅದು. ಖಜುರಾಹೋ ಕೋನಾರ್ಕ್‌ಗಳಂತಹ ಕಲೆಗೆ ಜನ್ಮ ನೀಡಿದ ದೇಶಕ್ಕೆ, ತಂತ್ರವೆಂಬ ಆಧ್ಯಾತ್ಮಿಕ ವಿಜ್ಞಾನವನ್ನು ಜಗತ್ತಿಗೆ ಪರಿಚಯಿಸಿದ ಈ ನೆಲದ ಜನಗಳಿಗೆ ನನ್ನ ಮಾತುಗಳು ಅರ್ಥವಾಗಲಿಲ್ಲವಲ್ಲ! ಪತ್ರಿಕೋದ್ಯಮದವರಿಗೆ ಬೇಕಾಗಿರುವುದು ವಾಸ್ತವಗಳಲ್ಲ, ಪ್ರಚೋದನಕಾರೀ ಸುದ್ದಿಗಳು ಮಾತ್ರ ಬೇಕು ಅನ್ನಿಸುತ್ತದೆ. ನಾನು ಕಾಮದ ಗುರುವಲ್ಲ, ನನ್ನ ಮಾತುಗಳನ್ನು ಪಾಲಿಸಿದರೆ ಲೋಕದಲ್ಲಿ ಲೈಂಗಿಕ ಸಾಹಿತ್ಯವಿರುವುದಿಲ್ಲ, ಅಶ್ಲೀಲ ಚಿತ್ರಗಳಿರುವುದಿಲ್ಲ, ಸಲಿಂಗ ಕಾಮಿಗಳಿರುವುದಿಲ್ಲ, ಅನೈತಿಕ ಚಟುವಟಿಕೆಗಳಿರುವುದಿಲ್ಲ. ಎಲ್ಲ ಕಾಮವಿಕಾರಗಳೂ ನಮ್ಮ ನಡುವಿನಿಂದ ತಿರೋಧಾನವಾಗಿಬಿಡುತ್ತವೆ. ನನ್ನಂಥವನನ್ನು ’ಸೆಕ್ಸ್ ಗುರು’ ಎನ್ನುವುದೇ?