ಸೆಗಣಿ ಪ್ರಪಂಚದ ಚಮತ್ಕಾರ

ಸೆಗಣಿ ಪ್ರಪಂಚದ ಚಮತ್ಕಾರ

ಯಾವುದೇ ಬೆಳೆ ಬೆಳೆಸುವುದಿದ್ದರೂ ಸೆಗಣಿಯಿಂದ ತಯಾರಿಸಿದ ಗೊಬ್ಬರ ಅಥವಾ ಕಂಪೋಸ್ಟ್ ಅಗತ್ಯ. ಸಾವಯವ ಕೃಷಿಗಂತೂ ಸೆಗಣಿ ಗೊಬ್ಬರ ಬೇಕೇ ಬೇಕು.
ಆದರೆ, ಸೆಗಣಿ ಪ್ರಪಂಚ ಕೇವಲ ಗೊಬ್ಬರಕ್ಕೆ ಸೀಮಿತವಲ್ಲ. ಅದರ ಬಳಕೆಗಳು ಹಲವು. ಉದಾಹರಣೆಗೆ ಸೆಗಣಿಯಿಂದ ಕಾಗದ ತಯಾರಿ ಒಂದು ಉದ್ಯಮ. ಯಾವುದೇ ಸಸ್ಯದ ನಾರಿನಿಂದ ಕಾಗದ ತಯಾರಿಸಬಹುದು. ಹಾಗೆಯೇ ಸೆಗಣಿಯಿಂದಲೂ ಕಾಗದ ತಯಾರಿ ಸಾಧ್ಯ. ಆದರೆ ದೊಡ್ಡ ಪ್ರಮಾಣದಲ್ಲಿ ಸೆಗಣಿ ಸಂಗ್ರಹಿಸುವುದು ಕಷ್ಟಸಾಧ್ಯವಾದ ಕಾರಣ ಇದು ದೊಡ್ಡ ಉದ್ಯಮವಾಗಿ ಬೆಳೆದಿಲ್ಲ.
ಆನೆ ಲದ್ದಿಯ ಕಾಗದಕ್ಕೆ ಬಹಳ ಬೇಡಿಕೆ ಇದೆ. ಆನೆ ಜಗಿದು ನುಂಗುವ ಸಸ್ಯಜನ್ಯ ಆಹಾರ ಅದರ ದೊಡ್ಡ ಜೀರ್ಣಾಂಗವ್ಯೂಹ ಹಾದು ಲದ್ದಿಯಾಗಿ ಹೊರಬರುತ್ತದೆ. ಈ ಪ್ರಕ್ರಿಯೆಯಲ್ಲಿ, ಪೋಷಕಾಂಶಗಳನ್ನು ಸಣ್ಣ ಪ್ರಮಾಣದಲ್ಲಿ ಹೀರಿಕೊಳ್ಳುವುದರ ಹೊರತಾಗಿ, ಒಳಹೋದ ಆಹಾರ ಲದ್ದಿಯಾಗಿ ಹೊರಬರುವಾಗ ಹೆಚ್ಚಿನ ಬದಲಾವಣೆ ಆಗಿರುವುದಿಲ್ಲ. ಆನೆಲದ್ದಿ ಕಾಗದದ ವಾಣಿಜ್ಯ ಯಶಸ್ಸು ದೊಡ್ಡ ಸುದ್ದಿಯಾಯಿತು. ಅದರಿಂದ ಪ್ರೇರಣೆ ಪಡೆದ ಹಲವರು ಈಗ ಕುದುರೆ, (ಅಮೆರಿಕದ) ಕಡವೆ, ಕತ್ತೆ, ದೊಡ್ಡ ಪಾಂಡಾಗಳ ಲದ್ದಿ ಮತ್ತು ಕಾಗೆಯ ಹಿಕ್ಕೆಯಿಂದಲೂ ಕಾಗದ ತಯಾರಿಸಿ ಮಾರಿ ಯಶಸ್ವಿಯಾಗಿದ್ದಾರೆ.
ಆನೆಯ ಜೀರ್ಣಾಂಗವ್ಯೂಹದ ಇತ್ತೀಚೆಗಿನ ಬಳಕೆ ಏನು ಗೊತ್ತೇ? ಕಾಫಿ ಬೀಜಗಳನ್ನು ಭಾಗಶಃ ಜೀರ್ಣ ಮಾಡಲು ಅದನ್ನು ಬಳಸುವುದು! ಆ ಕಾಫಿ ಬೀಜಗಳನ್ನು ಆನೆಯ ಸೆಗಣಿಯಿಂದ ಬೇರ್ಪಡಿಸಿ ಬಳಸಲಾಗುತ್ತದೆ. ಯಾಕಂತೀರಾ? “ಬ್ಲ್ಯಾಕ್ ಐವರಿ” ಎಂಬ ವಾಣಿಜ್ಯ ಹೆಸರಿನ ಕಾಫಿ ತಯಾರಿಸಲಿಕ್ಕಾಗಿ! ಅಥವಾ ಆನೆಲದ್ದಿ ಕಾಫಿ ಬಿಯರ್ ತಯಾರಿಸಲಿಕ್ಕಾಗಿ. ಇವೆರಡೂ ವಿಚಿತ್ರ ಬಳಕೆಗಳು ಎಂದು ಕೆಲವರು ಹುಬ್ಬೇರಿಸಬಹುದು; ಹಲವರು ಇದೇನು ಅಸಹ್ಯ ಬಳಕೆ ಎಂದು ಮುಖ ತಿರುಗಿಸಬಹುದು. ಆದರೆ ಇವೆರಡೂ ಲಾಭ ಗಳಿಸುವ ಯಶಸ್ವಿ ಉದ್ಯಮಗಳಾಗಿ ಬೆಳೆದಿವೆ. ಜೊತೆಗೆ, ೨೧ನೇ ಶತಮಾನದ ಪ್ರಧಾನ ವನ್ಯಜೀವಿ ರಕ್ಷಣಾ ಹೋರಾಟಗಳಲ್ಲಿ ಒಂದಾದ “ಆನೆ ಸಂರಕ್ಷಣೆ” ಬಗ್ಗೆ ಅಂತರರಾಷ್ಟ್ರೀಯ ಜಾಗೃತಿ ಮೂಡಿಸಲು ಸಹಕರಿಸಿವೆ.
ಇವೆರಡು ವಿನೂತನ ಪೇಯಗಳ ಯಶಸ್ಸು, ಇಂತಹದೇ ಇನ್ನೊಂದು ಮಿಲಿಯಗಟ್ಟಲೆ ಡಾಲರಿನ ಉದ್ಯಮವನ್ನು ನೆನಪಿಗೆ ತರುತ್ತದೆ. ಅದುವೇ ಏಷ್ಯಾದ ಸಿವೆಟ್ ಬೆಕ್ಕು ಕಾಫಿ. ಈ ಸಿವೆಟ್ (ಪಾರಡೊಕ್ಸುರಸ್ ಹೆರ್ಮಾ-ಪ್ರೊಡೈಟೆಸ್) ಪುನಗಿನ ಬೆಕ್ಕಿನಂತಹ ಪ್ರಾಣಿ. ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ವಾಸವಿರುವ ಇದು ಅಲ್ಲಿ ಬೆಳೆಯುವ ಕಾಫಿ ಹಣ್ಣುಗಳನ್ನು ತಿನ್ನುತ್ತದೆ.
ಸುಮಾತ್ರಾ ಮತ್ತು ಜಾವಾ ದ್ವೀಪಗಳಲ್ಲಿ ೧೮ ಮತ್ತು ೧೯ನೇ ಶತಮಾನಗಳಲ್ಲಿ ಕಾಫಿ ಗಿಡಗಳನ್ನು ಬೆಳೆಯಲು ಶುರುವಿಟ್ಟವರು ಡಚ್ಚರು. ಆಗ ಸ್ಥಳೀಯ ಕೆಲಸಗಾರರು ತಮ್ಮ ಬಳಕೆಗಾಗಿ ಕಾಫಿ ಹಣ್ಣು ಸಂಗ್ರಹಿಸಬಾರದೆಂದು ಡಚ್ಚರು ನಿಷೇಧಿಸಿದರು. ಯಾಕೆಂದರೆ, ಆಗ ಕಾಫಿಗೆ ಅಂತಹ ದುಬಾರಿ ಬೆಲೆ. ಸ್ಥಳೀಯ ಕೆಲಸಗಾರರು ಸುಮ್ಮನಿರಲಿಲ್ಲ. ಸಿವೆಟ್ ಬೆಕ್ಕಿನ ಹಿಕ್ಕೆಗಳನ್ನು ಸಂಗ್ರಹಿಸಿದರು – ಅವುಗಳಲ್ಲಿದ್ದವು ಕಾಫಿ ಬೀಜಗಳು! ಇವನ್ನು ಶುಚಿಗೊಳಿಸಿ, ಹುರಿದು, ಹುಡಿ ಮಾಡಿದರು. ಈ ಕಾಫಿ ಹುಡಿಗೆ ವಿಶಿಷ್ಠ ಪರಿಮಳ; ಕಹಿಯಿಲ್ಲದ ರುಚಿ.
ಈ ಬದಲಾವಣೆ ಹೇಗಾಯಿತು? ಕಾಫಿ ಬೀಜಗಳಲ್ಲಿರುವ ಪ್ರೊಟೀನಿನಿಂದಾಗಿ ಕಾಫಿ ಪೇಯಕ್ಕೆ ಕಹಿ ರುಚಿ ಬರುತ್ತದೆ. ಸಿವೆಟ್ ಬೆಕ್ಕಿನ ಜೀರ್ಣಾಂಗವ್ಯೂಹ ಹಾದು ಬರುವ ಕಾಫಿಬೀಜಗಳನ್ನು ಕಂಡರೆ, ಅವು ಏನೂ ಬದಲಾಗಿಲ್ಲ ಅನಿಸುತ್ತದೆ. ಆದರೆ ಸಿವೆಟ್ ಬೆಕ್ಕಿನ ಜೀರ್ಣಾಂಗವ್ಯೂಹದ ಕಿಣ್ವಗಳು ಕಾಫಿಬೀಜಗಳ ಕಹಿ ಪ್ರೊಟೀನುಗಳನ್ನು ಗಮನಾರ್ಹವಾಗಿ ಬದಲಾಯಿಸುತ್ತವಂತೆ. ಅದರಿಂದಾಗಿಯೇ ಹಿತವಾದ ರುಚಿ ಮೂಡಿ ಬರುತ್ತಿರಬಹುದು. ಈ ಸಿವೆಟ್ ಬೆಕ್ಕಿನ ಕಾಫಿಯ ಪ್ರಸಿದ್ಧಿ ಹರಡಿದಂತೆ, ಅದಕ್ಕೆ ಬೇಡಿಕೆ ಹೆಚ್ಚಿತು. ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಬೆಲೆ ಕಿಲೋಕ್ಕೆ ಸುಮಾರು ೪೯,೦೦೦ ರೂಪಾಯಿ (೭೦೦ ಡಾಲರ್).
ಇದೀಗ ಚೀನಾದಲ್ಲಿ ಕಂಬಳಿಹುಳದ ಚಹಾ ಲಭ್ಯ! ಇದು ಕಂಬಳಿಹುಳ ಅರೆ-ಜೀರ್ಣಿಸಿದ ಎಲೆಗಳಿಂದ ತಯಾರಿಸಿದ ಚಹಾ. ಪಚನಕ್ರಿಯೆಗೆ ಪೂರಕವಾಗಿ ಇದನ್ನು ಸೇವಿಸುತ್ತಾರಂತೆ. ಬ್ಲ್ಯಾಕ್-ಐವರಿ ಕಾಫಿ, ಸಿವೆಟ್ ಬೆಕ್ಕಿನ ಕಾಫಿ, ಕಂಬಳಿಹುಳದ ಚಹಾ – ಇವೆಲ್ಲ ವಿನೂತನ ಉತ್ಪನ್ನಗಳೆಂಬ ಪ್ರಚಾರದ ಬಲದಿಂದ ಮಾರಾಟವಾಗುತ್ತವೆ ಎನ್ನಬಹುದು. ಯಾಕೆಂದರೆ ವಿನೂತನವಾದ, ದುಬಾರಿಯಾದ ಮತ್ತು “ಬೇರೆಲ್ಲೂ ಸಿಗದ” ವಸ್ತುಗಳನ್ನು ಖರೀದಿಸುವವರು ಇದ್ದೇ ಇರುತ್ತಾರೆ. ಹಾಗೆಯೇ ಬುಲ್‍ಬುಲ್ ಹಕ್ಕಿಯ ಹಿಕ್ಕೆಯಿಂದ ಜಪಾನಿನಲ್ಲಿ ತಯಾರಿಸಿದ ಮುಖಸೌಂದರ್ಯ ಹೆಚ್ಚಿಸುವ ಉತ್ಪನ್ನಗಳನ್ನು, ಬೋಳುತಲೆ ಚಿಕಿತ್ಸೆಗಾಗಿ ಕೋಳಿಹಿಕ್ಕೆಯ ಉತ್ಪನ್ನಗಳನ್ನು ಖರೀದಿಸುವವರೂ ಇರುತ್ತಾರೆ.
ಮತ್ತೊಂದು ಹೆಸರುವಾಸಿ ಲದ್ದಿ ಸಿಂಹದ್ದು. ಖಾಸಗಿ ಜಮೀನಿನ ಸರಹದ್ದಿನೊಳಗೆ ಬಾರದಂತೆ ಜಿಂಕೆ, ಮೊಲ, ಬೆಕ್ಕು ಇತ್ಯಾದಿ ಉಪದ್ರಕಾರಿ ಪ್ರಾಣಿಗಳ ಪ್ರವೇಶ ತಡೆಗಟ್ಟಲು ಇದರ ಬಳಕೆ ಎನ್ನಲಾಗಿದೆ. ಅಪಾಯಕಾರಿ ಪ್ರಾಣಿ ಸಿಂಹದ ಲದ್ದಿಯ ವಾಸನೆ ಗ್ರಹಿಸಬಲ್ಲ ಈ ಪ್ರಾಣಿಗಳು ದೂರ ಇರುತ್ತವೆ ಎಂಬ ತರ್ಕ ಸರಿಯಾಗಿದೆ. ಆದರೆ, ಯುರೋಪಿನಲ್ಲಿ ಸಿಂಹಗಳಿಲ್ಲ. ಅಲ್ಲಿನ ಉಪದ್ರಕಾರಿ ಪ್ರಾಣಿಗಳಿಗೆ ಸಿಂಹದ ಲದ್ದಿ ಅಪಾಯದ ಮುನ್ಸೂಚನೆ ನೀಡಲು ಹೇಗೆ ಸಾಧ್ಯ?
ಸೆಗಣಿ ಚಿಪ್ಪುಹುಳ (ಡಂಗ್ ಬೀಟಲ್)ಗಳದ್ದು ರೋಚಕ ಕತೆ. ಅವು ಆಕರ್ಷಕ ಜೀವಿಗಳು. ಕೆಲವು ಪ್ರಭೇದಗಳ ಚಿಪ್ಪು ಗಾಢ ಲೋಹದ ಬಣ್ಣದ್ದು. ಪ್ರಾಚೀನ ಈಜಿಪ್ಟಿನ ಜನರು ಕೆಲವು ಪ್ರಭೇದಗಳ ಚಿಪ್ಪುಹುಳಗಳನ್ನು ಆರಾದಿಸುತ್ತಿದ್ದರು. ಇತರ ಕೆಲವು ಕೀಟಗಳೂ ಸೆಗಣಿ ತಿನ್ನುತ್ತವೆ. ಆದರೆ ಸೆಗಣಿ ಉರುಳಿಸಿ ಒಯ್ಯುವ ಮತ್ತು ಸೆಗಣಿ ಹೂತಿಡುವ ವರ್ತನೆಗಳಿಂದಾಗಿ ಸೆಗಣಿ ಚಿಪ್ಪುಹುಳಗಳು ಭಿನ್ನ ಎನಿಸುತ್ತವೆ. ಪ್ರಾಣಿ ಹೊರಹಾಕಿದ ಸೆಗಣಿ ನೆಲಕ್ಕೆ ಬಿದ್ದ ಕೆಲವೇ ಕ್ಷಣಗಳಲ್ಲಿ ಅವು ಧಾವಿಸಿ ಬರುತ್ತವೆ. ಕೆಲವೊಮ್ಮೆ ಸಾವಿರ ಸಂಖ್ಯೆಯಲ್ಲಿ ಅವುಗಳ ದಂಡಿನ ಆಗಮನ. ಕೆಲವೇ ಗಂಟೆಗಳಲ್ಲಿ ಕಿಲೋಗಟ್ಟಲೆ ತೂಕದ ಸೆಗಣಿಯನ್ನು ಅವು ತಮ್ಮ ಗಮ್ಯಕ್ಕೆ ಹಿಮ್ಮುಖವಾಗಿ ಉರುಳಿಸಿ ಉರುಳಿಸಿ ಸಾಗಿಸುವುದನ್ನು ನೋಡುವುದೇ ರೋಚಕ ಅನುಭವ.
ಅಂತೂ ಸೆಗಣಿ ಪ್ರಪಂಚ ಬಹಳ ಕುತೂಹಲಕಾರಿ. ಸಸ್ತನಿಗಳ (ಮುಖ್ಯವಾಗಿ ಸಸ್ಯಾಹಾರಿ) ಸೆಗಣಿ ಅಥವಾ ಲದ್ದಿ ನೆಲಕ್ಕೆ ಬಿದ್ದೊಡನೆ, ಅದನ್ನು ಅವಲಂಬಿಸಿರುವ ಇತರ ಜೀವಿಗಳ ದಂಡು ಅಲ್ಲಿ ಪ್ರತ್ಯಕ್ಷ. ಯಾಕೆಂದರೆ, ಸಸ್ತನಿ ತಿನ್ನುವ ಆಹಾರದಲ್ಲಿ ಅವುಗಳ ಜೀರ್ಣಾಂಗವ್ಯೂಹ ಜೀರ್ಣಿಸಿಕೊಳ್ಳುವ ಅಂಶ ಶೇಕಡಾ ೧೦ – ೨೦ರಷ್ಟು ಮಾತ್ರ. ಉಳಿದದ್ದೆಲ್ಲ ಅದಕ್ಕಾಗಿ ಕಾಯುತ್ತಿರುವ ಇತರ ಜೀವಿಗಳಿಗೆ ಆಹಾರ. ತನಗಾಗಿ ಹಾಗೂ ತನ್ನ ಸಂತಾನಕ್ಕಾಗಿ ಈ ಜೀವಿಗಳು ಸೆಗಣಿ ಅಥವಾ ಲದ್ದಿಯನ್ನು ದಕ್ಷತೆಯಿಂದ ಬಳಸಿಕೊಳ್ಳುತ್ತವೆ. ಉಳಿದ ಸೆಗಣಿ ಅಥವಾ ಲದ್ದಿ, ಎರಡನೆಯ ಹಂತದ ಕಿರುಜೀವಿಗಳ ಪಾಲು. ಕ್ರಮೇಣ ಸೆಗಣಿ ಅಥವಾ ಲದ್ದಿ ಕೊಳೆಯುವಾಗ ಅಲ್ಲಿ ಶುರುವಾಗುತ್ತದೆ ಕೋಟಿಗಟ್ಟಲೆ ಬ್ಯಾಕ್ಟೀರಿಯಾ ಮತ್ತು ಬೂಸ್ಟು ಇತ್ಯಾದಿ ಸೂಕ್ಷ್ಮಜೀವಿಗಳ ಕಾರುಬಾರು. ಅಂತಿಮವಾಗಿ ಸೆಗಣಿ ಮಣ್ಣಾಗುತ್ತದೆ. ಈ ಪರಿವರ್ತನೆಯೇ ಭೂಮಿಯ ಜೀವಜಾಲದ ಮುಂದುವರಿಕೆಗೆ ಅತ್ಯಗತ್ಯವಾದ ಚಮತ್ಕಾರ.
(ಆಧಾರ: ರಿಚರ್ಡ್ ಜೋನ್ಸ್ ಬರೆದ “ಕಾಲ್ ಆಫ್ ನೇಚರ್” ಪುಸ್ತಕ. ಪ್ರಕಾಶಕರು: ಸ್ಪೀಕಿಂಗ್ ಟ್ರೀ)