ಸೆಮಿಕಂಡಕ್ಟರ್ ಘಟಕ ಬರಲಿ

ಮೈಸೂರಿನಲ್ಲಿ ೨೨ ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ಆರಂಭವಾಗಲಿದೆ ಎಂದು ವರ್ಷದ ಹಿಂದೆ ಆಗಿನ ಸರಕಾರ ಘೋಷಿಸಿತ್ತು. ಈ ಘಟಕದಿಂದ ಕನಿಷ್ಜ ೧೦ ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯನ್ನೂ ಹೊಂದಲಾಗಿತ್ತು. ಈ ಸಂಬಂಧ ಖಾಸಗಿ ಕಂಪೆನಿಗಳೊಂದಿಗೆ ಸರಕಾರ ಒಪ್ಪಂದವನ್ನೂ ಮಾಡಿಕೊಂಡಿತ್ತು. ಆದರೆ, ನಾನಾ ಕಾರಣಗಳಿಂದಾಗಿ ಈ ಯೋಜನೆ ಭರವಸೆಯ ಹಂತವನ್ನು ದಾಟಿ ಮುಂದೆ ಸಾಗಿಲ್ಲ.
ಮೊಬೈಲ್ ಸೇರಿದಂತೆ ಆಯ್ದ ಎಲೆಕ್ಟ್ರಾನಿಕ್ ಉಪಕರಣಗಳು, ಆಟೋಮೊಬೈಲ್ ನ ಎಲೆಕ್ಟ್ರಾನಿಕ್ ಉಪಕರಣಗಳು, ಆಟೋಮೊಬೈಲ್ ನ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಅತ್ಯವಶ್ಯಕವಾಗಿ ಬಳಸುವ ಸಾಧನವಾದ ಸೆಮಿಕಂಡಕ್ಟರ್ ಚಿಪ್ ಗಳು, ದೇಶದಲ್ಲಿ ಉತ್ಪಾದನೆಯಾಗುವುದು ಕಡಿಮೆ. ಇದಕ್ಕೆ ಅನ್ಯದೇಶಗಳ ಕಂಪೆನಿಗಳನ್ನು ಅವಲಂಬಿಸಬೇಕಾಗಿದೆ. ಹಾಗಾಗಿ ಕೇಂದ್ರ ಸರಕಾರ ೨೦೨೦ರಲ್ಲಿ ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್' ಯೋಜನೆ ಘೋಷಿಸಿತ್ತು.
ಸೆಮಿಕಂಡಕ್ಟರ್ ಭವಿಷ್ಯದ ಬಹು ಬೇಡಿಕೆಯ ಉಪಕರಣವೂ ಆಗಿರುವುದರಿಂದ, ಈ ವಲಯದ ಮೇಲೆ ಎಲ್ಲರ ಕಣ್ಣೂ ಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೆಮಿಕಂಡಕ್ಟರ್ ‘ಉದ್ಯಮದಲ್ಲಿ ಹೂಡಿಕೆ ಮಾಡುವಂತೆ ಅಂತಾರಾಷ್ಟ್ರೀಯ ವಾಣಿಜ್ಯ ಶೃಂಗಗಳಲ್ಲಿ ನೀಡಿರುವ ಕರೆಗೆ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಲೇ ಇದೆ. ಜಾಗತಿಕ ಮಟ್ಟದ ಹಲವು ದಿಗ್ಗಜ ಕಂಪೆನಿಗಳು ಹೂಡಿಕೆಗೆ ಮುಂದೆ ಬಂದಿವೆ. ಅಮೇರಿಕದ ಮೈಕ್ರೋನ್, ತೈವಾನ್ ಮೂಲದ ಫಾಕ್ಸ್ ಕಾನ್ ಹಾಗೂ ದೇಶೀಯ ವೇದಾಂತ ಕಂಪೆನಿಗಳು ಭಾರತದಲ್ಲಿ ಸೆಮಿಕಂಡಕ್ಟರ್ ಘಟಕಗಳನ್ನು ತಯಾರಿಸಲು ಆಸಕ್ತಿ ತೋರಿಸಿವೆ. ಹೀಗಿದ್ದರೂ ರಾಜ್ಯದಲ್ಲಿ ವರ್ಷದ ಹಿಂದೆ ಒಡಂಬಡಿಕೆಯಾಗಿರುವ ಸೆಮಿಕಂಡಕ್ಟರ್ ಯೋಜನೆ ಇನ್ನೂ ಶುರುವಿನ ಹಂತದಲ್ಲಿಯೇ ಇರುವುದು ಬೇಸರದ ಸಂಗತಿ. ಈ ಘಟಕಕ್ಕಾಗಿ ಮೈಸೂರು ವಿಮಾನ ನಿಲ್ದಾಣ ಸಮೀಪ ಇರುವ ಕೋಚನಹಳ್ಳಿ ಬಳಿ ೨೪೦ ಎಕರೆ ಜಾಗವನ್ನು ಹಿಂದಿನ ಸರಕಾರ ಗುರುತಿಸಿದೆ. ಘಟಕಕ್ಕೆ ಸಮರ್ಪಕ ವಿದ್ಯುತ್, ನೀರು ನೀಡಲು ಐಟಿಬಿಟಿ ಇಲಾಖೆಯೂ ಒಪ್ಪಿದೆ. ಆದರೆ, ಘಟಕ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡಿರುವ ಕಂಪೆನಿ ಪ್ರಾಜೆಕ್ಟ್ ರಿಪೋರ್ಟ್ ಅನ್ನು ಸರಕಾರಕ್ಕೆ ಇನ್ನೂ ಸಲ್ಲಿಸದೇ ಇರುವ ಪರಿಣಾಮ ಯೋಜನೆ ನೆನೆಗುದಿಗೆ ಬಿದ್ದಿದೆ ಎಂಬ ಮಾತುಗಳಿವೆ. ಉದ್ಯೋಗ ಸೃಷ್ಟಿಯ ಮಾತುಗಳನ್ನಾಡುತ್ತಿರುವ ಸರಕಾರ ಈ ಯೋಜನೆಗೆ ಇರುವ ಅಡೆತಡೆಗಳನ್ನು ನಿವಾರಿಸಿ, ಘಟಕ ಸ್ಥಾಪನೆಗೆ ಆದ್ಯತೆ ನೀಡಬೇಕಾಗಿದೆ. ಖಾಸಗಿ ಕಂಪೆನಿಯು ಮತ್ತೆ ಹೊಸದಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಹೊಸ ಒಪ್ಪಂದ ಮಾಡಿಕೊಳ್ಳಬೇಕಿದೆ. ಇದೆಲ್ಲವೂ ತಾಂತ್ರಿಕ ತೊಡಕುಗಳಷ್ಟೇ. ಸರಕಾರ ಮನಸ್ಸು ಮಾಡಿದರೆ ಕ್ಷಣಮಾತ್ರದಲ್ಲಿ ಇವುಗಳಿಗೆ ಪರಿಹಾರ ಸಿಗುತ್ತದೆ. ಇನ್ನಾದರೂ ಸರಕಾರ ಈ ಬಗ್ಗೆ ಗಮನ ಹರಿಸಿದರೆ ಸೆಮಿಕಂಡಕ್ಟರ್ ಘಟಕ ಸ್ಥಾಪನೆಯ ಪ್ರಕ್ರಿಯೆ ವೇಗ ಪಡೆಯುತ್ತದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಸೆಮಿಕಂಡಕ್ಟರ್ ಘಟಕ ಶೀಘ್ರವಾಗಿ ಆರಂಭವಾಗಲಿ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೬-೦೮-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ