ಸೇನಾಧಿಪತಿಯಾದ ಬಡ ಕುಂಬಾರ

ಸೇನಾಧಿಪತಿಯಾದ ಬಡ ಕುಂಬಾರ

ಒಂದಾನೊಂದು ಕಾಲದಲ್ಲಿ ದೊಡ್ಡ ಹುಲಿಯೊಂದು ಕಾಡಿನ ಅಂಚಿನಲ್ಲಿ ನಡೆಯುತ್ತಿತ್ತು. ಆಗ ಜೋರು  ಮಳೆ ಶುರುವಾಯಿತು. ಮಳೆ ನೀರು ಬೀಳದಂತೆ ಎಲ್ಲಾದರೂ ಆಶ್ರಯ ಸಿಗುತ್ತದೆಯೋ ಎಂದು ನೋಡುತ್ತಾ ಅದು ಒಡತೊಡಗಿತು. ಕೊನೆಗೆ ಒಂದು ಗುಡಿಸಲು ಕಂಡಾಗ, ಅದರ ಪಕ್ಕದಲ್ಲಿ ನಿಂತಿತು.

ಸ್ವಲ್ಪ ಹೊತ್ತಿನ ನಂತರ ಮನೆಯೊಳಗಿನಿಂದ ಹೆಂಗಸೊಬ್ಬಳು ಮಾತನಾಡುವುದು ಕೇಳಿಸಿತು:”ಛೇ, ಛೇ. ಚಾವಣಿ ಸೋರುತ್ತಿದೆ, ಮಳೆ ಹನಿಗಳು ಮನೆಯೊಳಗೆ ಬೀಳುತ್ತಿವೆ.” ಅನಂತರ ಆಕೆ ಕೆಲವು ಮೇಜುಕುರ್ಚಿಗಳನ್ನು ಮಳೆನೀರು ಬೀಳದ ಜಾಗಕ್ಕೆ ಸರಿಸಿದಳು. ಹುಲಿಗೆ ಅವೆಲ್ಲ ಸದ್ದುಗಳು ಕೇಳಿಸಿತು; ಆದರೆ ಅದೇನೆಂದು ತಿಳಿಯಲಿಲ್ಲ. ಆಗ ಪುನಃ ಹೆಂಗಸು ಮಾತನಾಡುವುದು ಕೇಳಿಸಿತು, “ಓ, ಎಂತಹ ರಗಳೆ ಹನಿಯಪ್ಪ. ಎಷ್ಟು ತೊಂದರೆ!"

“ಇದ್ಯಾರು ರಗಳೆ ಹನಿಯಪ್ಪ? ಅವನೇ ಅವೆಲ್ಲ ಸದ್ದು ಮಾಡುತ್ತಿದ್ದರೆ ಅವನು ಬಹಳ ಶಕ್ತಿವಂತ ಆಗಿರಬೇಕು” ಎಂದು ಯೋಚಿಸಿತು ಆ ಹುಲಿ. ಅದು ಗುಡಿಸಲಿನ ಪಕ್ಕದಲ್ಲೇ ಮಳೆ ಕಡಿಮೆಯಾಗುವ ವರೆಗೆ ನಿಂತಿತ್ತು. ಆಗ ಕತ್ತಲಾಯಿತು.

ಆಗ ಅಲ್ಲೊಬ್ಬ ಕುಂಬಾರ ಹಾದು ಹೋಗುತ್ತಿದ್ದ. ಅವನ ಕತ್ತೆ ತಪ್ಪಿಸಿಕೊಂಡಿತ್ತು. ಕತ್ತಲಿನಲ್ಲಿ ಹುಲಿಯನ್ನು ಕಂಡ ಕುಂಬಾರ ಅದುವೇ ಅವನ ಕತ್ತೆ ಎಂದು ಭಾವಿಸಿದ. ಅದರ ಬೆನ್ನಿಗೆ ಜೋರಾಗಿ ಒಂದೇಟು ಕೊಟ್ಟು ಕೇಳಿದ, "ತುಂಟ ಪ್ರಾಣಿಯೇ, ಎಲ್ಲಿಗೆ ಹೋಗಿದ್ದೆ?” ಆ ವರೆಗೆ ಹುಲಿಗೆ ಯಾರೂ ಹೀಗೆ ಹೊಡೆದಿರಲಿಲ್ಲ. ಅದು ಹೀಗೆಂದು ಯೋಚಿಸಿತು, "ಇವನೇ ರಗಳೆ ಹನಿಯಪ್ಪ ಆಗಿರಬೇಕು. ಬಹಳ ಶಕ್ತಿವಂತನಾಗಿದ್ದಾನೆ. ಅವನು ಹೇಳಿದಂತೆ ಕೇಳುವುದು ಒಳ್ಳೆಯದು.”

ಹುಲಿಯ ಬೆನ್ನೇರಿದ ಕುಂಬಾರ, ತನ್ನನ್ನು ಮನೆಗೆ ಒಯ್ಯಬೇಕೆಂದು ಅದಕ್ಕೆ ಆದೇಶಿಸಿದ ಮತ್ತು ದಾರಿ ಹೇಳುತ್ತಾ ಹೋದ. ಹುಲಿ ತುಟಿ ಪಿಟಕ್ಕೆನ್ನದೆ ಅವನು ಹೇಳಿದಂತೆ ಮುಂದಕ್ಕೆ ನಡೆಯಿತು. ಮನೆ ಬಂದಾಗ ಕುಂಬಾರ ಹುಲಿಯಿಂದ ಕೆಳಗಿಳಿದು, ಅದನ್ನು ಮನೆಯ ಹೊರಗಿದ್ದ ಒಂದು ಕಂಬಕ್ಕೆ ಹಗ್ಗದಿಂದ ಕಟ್ಟಿದ. ಅನಂತರ ಆತ ಮನೆಯೊಳಗೆ ಹೋಗಿ ಮಲಗಿದ.

ಮರುದಿನ ಬೆಳಗ್ಗೆ ಕುಂಬಾರನ ಹೆಂಡತಿ ಕಿಟಕಿಯಿಂದ ಹೊರಗೆ ನೋಡಿದಾಗ ಕಂಬಕ್ಕೆ ಬಿಗಿದಿದ್ದ ಹುಲಿಯನ್ನು ಕಂಡು ಬೆಚ್ಚಿ ಬಿದ್ದಳು. “ನಿನ್ನೆ ರಾತ್ರಿ ನೀವು ಯಾವುದರ ಮೇಲೆ ಸವಾರಿ ಮಾಡಿಕೊಂಡು ಬಂದದ್ದು ಗೊತ್ತಾ?" ಎಂದು ಕೇಳಿದಳು. "ಆ ತುಂಟ ಕತ್ತೆಯನ್ನೇರಿ ಬಂದಿದ್ದೆ” ಎಂದ ಕುಂಬಾರ. "ಸರಿ, ಸರಿ. ಒಮ್ಮೆ ಕಿಟಕಿಯಿಂದ ಹೊರಗೆ ನೋಡಿ” ಎಂದಳು ಹೆಂಡತಿ. ಹಾಗೆ ನೋಡಿದ ಕುಂಬಾರ ಹೆದರಿ ಮೂರ್ಛೆ ತಪ್ಪಿ ಬೀಳುವುದರಲ್ಲಿದ್ದ!

ಆಗ ಅಲ್ಲಿ ಹಾದು ಹೋಗುತ್ತಿದ್ದ ಕೆಲವು ಹಳ್ಳಿಗರು ಕುಂಬಾರನ ಮನೆಯ ಪಕ್ಕದಲ್ಲಿ ಹುಲಿಯನ್ನು ಕಂಬಕ್ಕೆ ಹಗ್ಗದಿಂದ ಬಿಗಿದಿರುವುದನ್ನು ಕಂಡರು. “ಮಹಾಬಲ ನಿಜಕ್ಕೂ ಧೀರ. ನೋಡಿ, ಅವನು ಆ ಹುಲಿಯ ಮೇಲೆ ಸವಾರಿ ಮಾಡ್ತಿರಬೇಕು" ಎಂದರು. ಈ ಸುದ್ದಿ ಒಬ್ಬರಿಂದ ಇನ್ನೊಬ್ಬರಿಗೆ ಹರಡಿ, ಕೊನೆಗೆ ರಾಜನ ಕಿವಿಗೂ ಬಿತ್ತು. ಅಚ್ಚರಿ ಪಟ್ಟ ರಾಜ ಇದನ್ನು ಕಣ್ಣಾರೆ ಕಾಣಬೇಕೆಂದು ಕುಂಬಾರ ಮಹಾಬಲನ ಮನೆಗೇ ಬಂದ. ಕಂಬಕ್ಕೆ ಬಿಗಿದಿದ್ದ ಹುಲಿಯನ್ನು ಕಂಡು, ಈ ಮಹಾಬಲ ಬಹಳ ಧಿರ ಎಂದು ಕೊಂಡ. ಮಹಾಬಲನನ್ನು ತನ್ನ ಸೈನ್ಯದ ಸೇನಾಧಿಪತಿಯಾಗಿ ಮಾಡಿದರೆ, ಎಲ್ಲ ಸೈನಿಕರಿಗೂ ಒಳ್ಳೆಯ ಮಾದರಿಯಾಗುತ್ತದೆ ಎಂದು ಯೋಚಿಸಿದ ರಾಜ.

ಅಂತೆಯೇ ರಾಜ ಮಹಾಬಲನನ್ನು ಸೇನಾಧಿಪತಿಯಾಗಿ ನೇಮಿಸಿದ. ಮಹಾಬಲ ಒಮ್ಮೆ ಅಧೀರನಾದರೂ ನಂತರ ತನ್ನ ಹುದ್ದೆಯನ್ನು ಇಷ್ಟ ಪಟ್ಟ. ಯಾಕೆಂದರೆ ಅವನು ಶ್ರಮ ಪಟ್ಟು ಕೆಲಸ ಮಾಡಬೇಕಾಗಿರಲಿಲ್ಲ. ಸೈನಿಕರಿಂದ ದಿನದಿನವೂ ಸಾಕಷ್ಟು ದೈಹಿಕ ಚಟುವಟಿಕೆಗಳನ್ನು ಮಾಡಿಸಿದರೆ ಸಾಕಾಗಿತ್ತು.

ಅದೊಂದು ದಿನ ರಾಜ ಮಹಾಬಲನನ್ನು ಕರೆದು, “ಸೇನಾಧಿಪತಿ, ಪಕ್ಕದ ರಾಜ್ಯ ನಮ್ಮ ಮೇಲೆ ಯುದ್ಧ ಘೋಷಿಸಿದೆ. ನೀನು ಈಗಲೇ ಸೈನ್ಯವನ್ನು ಮುನ್ನಡೆಸಿ, ಅವರನ್ನು ತಡೆಯಬೇಕು” ಎಂದು ಆದೇಶಿಸಿದ.
ಮಹಾಬಲ ಭಯದಿಂದ ನಡುಗಿಹೋದ. ಅವನು ಯಾವತ್ತೂ ಯುದ್ಧದಲ್ಲಿ ಭಾಗವಹಿಸಿರಲಿಲ್ಲ. ಅದ್ಯಾಕೆ, ಅವನು ಕುದುರೆ ಸವಾರಿಯನ್ನೂ ಅಭ್ಯಾಸ ಮಾಡಿರಲಿಲ್ಲ. ರಾಜ ಅವನಿಗೆ ದೊಡ್ಡ ಕುದುರೆಯನ್ನೇ ನೀಡಿದ್ದ. ಬಹಳ ವೇಗವಾಗಿ ಓಡಬಲ್ಲ ಆ ಕುದುರೆಯನ್ನು ಮಹಾಬಲ ದಿಟ್ಟಿಸಿ ನೋಡಿದ. "ಇದರ ಮೇಲೆ ಸವಾರಿ ಮಾಡಿದರೆ ನಾನು ಬಿದ್ದು ಬಿಡುತ್ತೇನೆ” ಎಂದು ತನ್ನ ಹೆಂಡತಿಯ ಬಳಿ ಹೇಳಿದ ಮಹಾಬಲ. “ನೀನೇನೂ ಚಿಂತೆ ಮಾಡಬೇಡ” ಎಂದಳು ಅವನ ಹೆಂಡತಿ. ಅವಳು ಮಹಾಬಲನನ್ನು ಕುದುರೆಯ ಮೇಲೆ ಹತ್ತಿಸಿ, ಒಂದು ಹಗ್ಗದಿಂದ ಅವನನ್ನು ಕುದುರೆಯ ಜೀನಿಗೆ ಬಲವಾಗಿ ಬಿಗಿದಳು.

ಇವೆಲ್ಲದರಿಂದ ಗೊಂದಲಕ್ಕೆ ಒಳಗಾದ ಕುದುರೆ ಅದರ ಹಗ್ಗ ಬಿಚ್ಚಿದೊಡನೆ ಹುಚ್ಚುಗಟ್ಟಿ ಓಡತೊಡಗಿತು. ಪೊದೆಗಳು, ಹೊಂಡಗಳು ಯಾವುದನ್ನೂ ಲೆಕ್ಕಿಸದೆ ಶತ್ರು ಸೈನ್ಯದತ್ತ ಓಡುತ್ತಿದ್ದ ಕುದುರೆಯ ಮೇಲೆ ಕುಳಿತಿದ್ದ ಮಹಾಬಲ ಬೀಳಲಿಲ್ಲ. ಆದರೆ ಆತ ಹೆದರಿಕೆಯಿಂದ ಕಂಪಿಸುತ್ತಿದ್ದ. ಹೇಗದರೂ ಮಾಡಿ ಕುದುರೆಯನ್ನು ನಿಲ್ಲಿಸಬೇಕೆಂದು, ಪಕ್ಕದಲ್ಲಿದ್ದ ಮರದ ಕೊಂಬೆಯೊಂದನ್ನು ಗಟ್ಟಿಯಾಗಿ ಹಿಡಿದುಕೊಂಡ. ಆದರೆ ಆ ಮರದ ಬೇರುಗಳು ಗಟ್ಟಿಯಾಗಿರಲಿಲ್ಲ. ಹಾಗಾಗಿ ಮರವೇ ಕಿತ್ತು ಬಂತು! ಮಹಾಬಲ ಭಯದಿಂದ ಅದನ್ನು ಗಟ್ಟಿಯಾಗಿ ಹಿಡಿದುಕೊಂಡ.

ಶತ್ರು ಸೈನಿಕರು ಈ ದೃಶ್ಯವನ್ನು ನೋಡಿ ಕಂಗಾಲಾದರು. ದೌಡಾಯಿಸುತ್ತಿರುವ ಕುದುರೆ, ಅದರ ಮೇಲೆ ಕುಳಿತು ಒಂದು ಮರವನ್ನೇ ಬೀಸುತ್ತಿರುವ ಸೇನಾಧಿಪತಿ! ಆ ರಾಜ್ಯದ ಎಲ್ಲ ಸೈನಿಕರೂ ಇಷ್ಟು ಧೀರರಾಗಿದ್ದರೆ ತಮಗೆ ಉಳಿಗಾಲವಿಲ್ಲ ಎಂದು ಶತ್ರು ಸೈನಿಕರು ಹೆದರಿದರು. ಅವರೆಲ್ಲರೂ ರಣರಂಗದಿಂದ ಹಿಮ್ಮೆಟ್ಟಿದರು.

ರಾಜನ ಸೈನಿಕರು ರಣರಂಗಕ್ಕೆ ಬಂದು ಸೇರಿದಾಗ ಅಲ್ಲಿ ಶತ್ರು ಸೈನ್ಯವೇ ಇರಲಿಲ್ಲ! ಅನಂತರ ಸೇನಾಧಿಪತಿ ಮಹಾಬಲ ಹೇಗೋ ಮಾಡಿ ರಾಜನ ಅರಮನೆಗೆ ಮರಳಿದ. ರಾಜನಿಗೆ ವಿಷಯ ತಿಳಿಸಿದ. ರಾಜ ಸಂತೋಷದಿಂದ, "ನಾಳೆ ಎಲ್ಲರೂ ಅರಮನೆಯ ಬಯಲಿನಲ್ಲಿ ಒಟ್ಟು ಸೇರಬೇಕು. ನಾವು ವಿಜಯೋತ್ಸವ ಆಚರಿಸೋಣ” ಎಂದ.

ಮರುದಿನ “ನನಗೆ ಈ ಕುದುರೆಯ ಸಹವಾಸ ಬೇಡ" ಎಂದ ಮಹಾಬಲ ನಡೆದುಕೊಂಡೇ ಅರಮನೆಗೆ ಹೋದ. ಹಾದಿಯ ಇಬ್ಬದಿಗಳಲ್ಲಿ ಜಮಾಯಿಸಿದ್ದ ಜನರು ಜಯಘೋಷ ಕೂಗುತ್ತಿದ್ದರು. “ನಮ್ಮ ಸೇನಾಧಿಪತಿ ಎಂತಹ ಸರಳ ವ್ಯಕ್ತಿ! ಬೇರೆ ಸೇನಾಧಿಕಾರಿಗಳು ಕುದುರೆ ಮೇಲೆ ಬರುವಾಗ ಈತ ನಡೆದುಕೊಂಡೇ ಬರುತ್ತಿದ್ದಾನೆ” ಎಂದು ಆತನನ್ನು ಮೆಚ್ಚಿಕೊಂಡರು.

ಅಂದಿನ ಸಮಾರಂಭದಲ್ಲಿ ಸೇನಾಧಿಪತಿ ಮಹಾಬಲನಿಗೆ ರಾಜ ಪದಕವನ್ನಿತ್ತು ಗೌರವಿಸಿದ. ಕುದುರೆ ಮೇಲೆ ಕುಳಿತು, ಒಂದು ಮರವನ್ನೇ ಬೀಸುತ್ತ ರಣರಂಗಕ್ಕೆ ನುಗ್ಗಿದ ಮಹಾಬಲನ ಧೀರತನದ ಕತೆ ಸುತ್ತಮುತ್ತಲಿನ ರಾಜ್ಯಗಳಲ್ಲಿ ಸುದ್ದಿಯಾಯಿತು. ಅನಂತರ ಯಾವುದೇ ನೆರೆ ರಾಜ್ಯದ ಸೈನ್ಯ ಈ ರಾಜ್ಯದ ಧಾಳಿ ಮಾಡಲು ಮುಂದಾಗಲಿಲ್ಲ. ಹಾಗಾಗಿ ಸೇನಾಧಿಪತಿ ಮಹಾಬಲ
ನಿಶ್ಚಿಂತೆಯಿಂದ ದಿನಗಳೆಯುತ್ತಿದ್ದ.