ಸೇಬಿನ ಬೀಜ ಸೇವನೆ ಹಾನಿಕಾರಕವೇ ?

ಸೇಬಿನ ಬೀಜ ಸೇವನೆ ಹಾನಿಕಾರಕವೇ ?

‘ದಿನಕ್ಕೊಂದು ಸೇಬು ತಿಂದರೆ ವೈದ್ಯರನ್ನು ದೂರವಿಡಬಹುದು' ಎನ್ನುವುದು ಬಹಳ ಹಳೆಯ ಮಾತು. ಸೇಬು ಪೌಷ್ಟಿಕಾಂಶಗಳ ಆಗರವೇನೋ ನಿಜ. ಆದರೆ ಈಗ ಸೇಬಿನ ಬೆಲೆ ಮಾತ್ರ ಎಲ್ಲರ ಕೈಸುಡುತ್ತಿದೆ ಎನ್ನುವುದೂ ಅಷ್ಟೇ ನಿಜ. ಮೊದಲಾದರೆ ನೂರು ರೂಪಾಯಿಯ ಒಳಗೆ ಕೆಜಿ ಸೇಬು ದೊರಕುತ್ತಿತ್ತು. ಸೂಕ್ತ ಕಾಲಕ್ಕೆ ನಮ್ಮ ದೇಶದ್ದೇ ಆದ ಹಿಮಾಚಲ, ಶಿಮ್ಲಾ, ಕಾಶ್ಮೀರದ ಸೇಬುಗಳು ಮಾರುಕಟ್ಟೆಗೆ ಬರುತ್ತಿದ್ದವು. ಬದಲಾದ ಸನ್ನಿವೇಶದಲ್ಲಿ ಕೆಲವು ವರ್ಷಗಳಿಂದ ವಿದೇಶೀ ಸೇಬುಗಳದ್ದೇ ಕಾರುಬಾರು. ಫಿಜಿ, ವಾಷಿಂಗ್ಟನ್, ಇರಾನಿ, ರಾಯಲ್ ಗಾಲಾ ಮೊದಲಾದ ಹಲವಾರು ವಿಧದ ಹೊಳಪಿನ ಮೇಣದ ಲೇಪನವಿರುವ ಸೇಬುಗಳೇ ಈಗ ಮಾರುಕಟ್ಟೆಯಲ್ಲಿ ಸಿಗುತ್ತವೆ. ಈ ಹೊಳಪಿನ ಸೇಬಿನ ನಡುವೆ ನಮ್ಮ ದೇಶದ ಸೇಬು ಕಾಣಿಸುವುದೇ ಇಲ್ಲ.

ಈ ಮೇಣದ ಲೇಪನ (ವ್ಯಾಕ್ಸ್ ಕೋಟಿಂಗ್) ಇರುವ ಹಣ್ಣುಗಳು ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ? ವಿದೇಶದಿಂದ ಆಮದಾಗಿ ಭಾರತಕ್ಕೆ ತಲುಪುವಾಗ ತಾಜಾ ಹಣ್ಣುಗಳಂತೆ ಕಾಣಿಸುವ ಮತ್ತು ಬಹು ದಿನಗಳ ಕಾಲ ಹಾಳಾಗದಂತೆ ಉಳಿಸಲು ಈ ಮೇಣದ ಲೇಪನ ಮಾಡುತ್ತಾರೆ. ಸರಿಯಾಗಿ ತೊಳೆದು ತಿನ್ನುವುದು ಬಹಳ ಅಗತ್ಯ. ಆದರೆ ಇತ್ತೀಚಿಗೆ ಕೇಳಿ ಬರುತ್ತಿರುವ ಮತ್ತೊಂದು ಸಂಗತಿ ಎಂದರೆ ಸೇಬಿನ ಬೀಜ ಮಾನವನ ಜೀವಕ್ಕೆ ಬಹಳ ಅಪಾಯಕಾರಿ ಎಂಬ ಸುದ್ದಿ. ಸೇಬಿನ ಬೀಜ ತಿಂದರೆ ಅದರಲ್ಲಿ ಸಯನೈಡ್ ಇರುವುದರಿಂದ ತಿಂದ ವ್ಯಕ್ತಿ ಮರಣ ಹೊಂದುವ ಸಾಧ್ಯತೆ ಇದೆ ಎನ್ನುವ ಸುದ್ದಿ ಎಲ್ಲಾ ಸೇಬು ಪ್ರಿಯರನ್ನು ಆತಂಕಕ್ಕೆ ಈಡು ಮಾಡಿದೆ. 

ಸತ್ಯ ಸಂಗತಿ ಏನೆಂದರೆ ಸೇಬಿನ ಬೀಜದಲ್ಲಿ ಆಮ್ನೆಗ್ಡೆಲೆನ್ ಎಂಬ ಅಂಶವಿದೆ. ಬೀಜವನ್ನು ನುಂಗಿದಾಗ ಇದು ಮಾನವನ ಹೊಟ್ಟೆಯಲ್ಲಿರುವ ಜೀರ್ಣಕಾರಿ ಕಿಣ್ವಗಳೊಂದಿಗೆ ಸೇರಿದಾಗ ಸಯನೈಡ್ ಅಂಶವನ್ನು ಬಿಡುಗಡೆ ಮಾಡುತ್ತದೆ. ಈ ಕಾರಣದಿಂದ ಸೇಬಿನ ಬೀಜವನ್ನು ಸೇವಿಸಿದ ವ್ಯಕ್ತಿ ಅನಾರೋಗ್ಯಕ್ಕೀಡಾಗಬಹುದು, ಮಾತ್ರವಲ್ಲದೇ ಅತಿಯಾದ ಪ್ರಮಾಣದಲ್ಲಿ ಬೀಜವನ್ನು ಸೇವಿಸಿದರೆ ಜೀವಕ್ಕೂ ಅಪಾಯ ಬರಬಹುದು.

ನಿಮಗೆಲ್ಲಾ ತಿಳಿದಿರುವಂತೆ ಸಯನೈಡ್ ಎನ್ನುವುದು ಬಹಳ ಪ್ರಭಾವಶಾಲಿ ವಿಷ. ನಾಲಿಗೆಯ ಮೇಲೆ ಒಂದು ಚಿಟಿಕೆಯಷ್ಟು ಸಯನೈಡ್ ಹಾಕಿದರೂ ಕ್ಷಣ ಮಾತ್ರದಲ್ಲಿ ಪ್ರಾಣ ಹೋಗುತ್ತದೆ. ಈ ತನಕ ಯಾರೂ ಸಯನೈಡ್ ರುಚಿಯನ್ನೇ ನೋಡಿಲ್ಲವಂತೆ. ಏಕೆಂದರೆ ಆತನ ನಾಲಿಗೆ ಸಯನೈಡ್ ರುಚಿಯನ್ನು ಗ್ರಹಿಸಿ ಮೆದುಳಿಗೆ ತಲುಪಿಸುವಷ್ಟಲ್ಲೇ ಆ ವ್ಯಕ್ತಿ ಸಾವಿಗೀಡಾಗುತ್ತಾನೆ. ಕೇವಲ ಸೇಬು ಮಾತ್ರವಲ್ಲ ಇನ್ನೂ ಕೆಲವು ಹಣ್ಣುಗಳ ಬೀಜಗಳಲ್ಲಿ ಸಯನೈಡ್ ಅಂಶ ಇರುತ್ತದೆ. ಅಪ್ರಿಕೋಟ್, ಪ್ಲಮ್, ಚೆರ್ರಿ, ಪೀಚ್ ಮೊದಲಾದ ಹಣ್ಣುಗಳ ಬೀಜಗಳಲ್ಲಿ ಸಯನೈಡ್ ಅಂಶ ಇದೆ. ಆದರೆ ಈ ಹಣ್ಣುಗಳನ್ನು ನಾವು ಬಳಸುವ ಪ್ರಮಾಣ ತುಂಬಾ ಕಡಿಮೆ. ಸೇಬು ಮಾತ್ರ ಅಧಿಕವಾಗಿ ಬಳಕೆಯಾಗುವ ಹಣ್ಣು.

ಸೇಬು ತಿನ್ನುವ ಸಮಯದಲ್ಲಿ ಗೊತ್ತಿಲ್ಲದೇ ಅನಿರೀಕ್ಷಿತವಾಗಿ ಒಂದೆರಡು ಬೀಜಗಳನ್ನು ನುಂಗಿದರೆ ಏನಾಗುತ್ತದೆ? ಹಾಗೇನೂ ಗಾಬರಿ ಪಡಬೇಕಾಗಿಲ್ಲ. ಇದರಿಂದ ಜೀವಕ್ಕೇನೂ ಅಪಾಯವಾಗಲಾರದು. ಸುಮಾರು ಒಂದು ಕಪ್ ಅಥವಾ ೨೦೦ ಬೀಜಗಳನ್ನು ತಿಂದರೆ ಮಾತ್ರ ಜೀವಕ್ಕೆ ಅಪಾಯವಾಗಬಹುದು ಅಷ್ಟೇ. ಇಷ್ಟು ಬೀಜಗಳು ನಿಮ್ಮ ದೇಹವನ್ನು ಪ್ರವೇಶಿಸಿದರೆ ಅದರಿಂದ ನಿಮ್ಮ ಹೃದಯ ಮತ್ತು ಮೆದುಳು ಹಾನಿಯಾಗುವ ಸಂಭವವಿದೆ. ಆ ವ್ಯಕ್ತಿ ಕೋಮಾ ಸ್ಥಿತಿಗೆ ತಲುಪಬಹುದು. ಕ್ರಮೇಣ ಜೀವವನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ. ಸೇವನೆಯ ಪ್ರಮಾಣ ಸ್ವಲ್ಪ ಕಡಿಮೆ ಇದ್ದರೆ ತಲೆನೋವು, ವಾಂತಿ, ಅಜೀರ್ಣದಂತಹ ಸಮಸ್ಯೆಗಳು ತಲೆದೋರಬಹುದು. ಈ ಕಾರಣದಿಂದ ಮಕ್ಕಳಿಗೆ ಸೇಬಿನ ಹಣ್ಣನ್ನು ಕೊಡುವ ಸಮಯದಲ್ಲಿ ಬೀಜವನ್ನು ತೆಗೆದುಕೊಡುವುದು ಅಪೇಕ್ಷಣೀಯ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ