ಸೇಬು ಬಿಟ್ಟು ಸೀಬೆ ಹಣ್ಣು ತಿನ್ನಿರಿ !

ಸೇಬು ಬಿಟ್ಟು ಸೀಬೆ ಹಣ್ಣು ತಿನ್ನಿರಿ !

ಸೇಬು (ಆಪಲ್) ಹಣ್ಣನ್ನು ಪ್ರತೀ ದಿನ ತಿಂದರೆ ವೈದ್ಯರನ್ನು ದೂರವಿಡಬಹುದು ಎನ್ನುವುದು ಒಂದು ಹಳೆಯ ಮಾತು. ಆದರೆ ಇಂದಿನ ಸಮಯದಲ್ಲಿ ಸೇಬು ಹಣ್ಣಿಗಿಂತಲೂ ಅಧಿಕ ಸತ್ವಾಂಶ ಸೀಬೆ (ಪೇರಳೆ) ಹಣ್ಣಿನಲ್ಲಿರುವುದನ್ನು ಆಹಾರ-ಆರೋಗ್ಯ ತಜ್ಞರು ಕಂಡುಕೊಂಡಿದ್ದಾರೆ. ನಿಮ್ಮ ಪರಿಸರದಲ್ಲಿ ಬೆಳೆಯುವ ಹಣ್ಣುಗಳು ನಿಮ್ಮ ಆರೋಗ್ಯಕ್ಕೆ ಸೂಕ್ತ ಎನ್ನುವ ಮಾತೊಂದಿದೆ. ಏಕೆಂದರೆ ನೀವು ಎಲ್ಲಿ ವಾಸಿಸುತ್ತೀರೋ ಅಲ್ಲಿಯ ವಾತಾವರಣಕ್ಕೆ ನಿಮ್ಮ ದೇಹವು ಹೊಂದಿಕೊಂಡಿರುತ್ತದೆ. ಹಲವಾರು ವರ್ಷ ಒಂದೇ ಊರಿನಲ್ಲಿ ನೆಲೆಸಿದ ಬಳಿಕ ನಿಮಗೆ ಅಲ್ಲಿಯ ವಾತಾವರಣವೇ ಹಿತಕರವಾಗಿರುತ್ತದೆ. ಈ ಕಾರಣದಿಂದ ನೀವು ನೆಲೆ ನಿಂತ ಊರಿನಲ್ಲಿ ಬೆಳೆಯುವ ಹಣ್ಣು-ತರಕಾರಿಗಳು ನಿಮಗೆ ಅತ್ಯುತ್ತಮ ಎನ್ನುತ್ತಾರೆ ಬಲ್ಲವರು. 

ಸೇಬು ನಮ್ಮ ಕರ್ನಾಟಕ ರಾಜ್ಯದಲ್ಲಿ ಬೆಳೆಯುವುದಿಲ್ಲ. ಅದು ಬೆಳೆಯುವುದು ಉತ್ತರ ಭಾರತದ ರಾಜ್ಯಗಳಲ್ಲಿ. ಕೆಲವು ತಳಿಯ ಸೇಬುಗಳು ವಿದೇಶಗಳಿಂದ ಆಮದಾಗುತ್ತವೆ. ಅದು ಕೆಡಬಾರದೆನ್ನುವ ಕಾರಣಕ್ಕೆ ಮೇಣದ ಲೇಪನ (Wax Coating) ಮಾಡಿ ಕಳಿಸುತ್ತಾರೆ. ಈ ಹಣ್ಣುಗಳು ತಮ್ಮ ತಾಜಾತನ ಕಳೆದುಕೊಂಡರೂ ಮೇಣದ ಲೇಪನ ಇರುವುದರಿಂದ ಈಗಷ್ಟೇ ಗಿಡದಿಂದ ಕಿತ್ತ ಹಣ್ಣಿನಂತೆ ಹೊಳೆಯುತ್ತಿರುತ್ತವೆ. ಆದರೆ ಈ ಹಣ್ಣು ತಾಜಾ ಆಗಿರುವುದಿಲ್ಲ. ನಾವು ತಿನ್ನುವ ಸಮಯದಲ್ಲಿ ಈ ಹಣ್ಣಿನ ಮೇಲ್ಮೈನಲ್ಲಿರುವ ಮೇಣವನ್ನು ತೆಗೆಯದೇ ಹೋದರೆ ನಿಮ್ಮ ಆರೋಗ್ಯವೂ ಕೆಡುವ ಸಾಧ್ಯತೆ ಇರುತ್ತದೆ. ಸೇಬು ವಿಪರೀತ ದುಬಾರಿ. ಈ ಕಾರಣದಿಂದ ನಿಮ್ಮ ಪರಿಸರದಲ್ಲೇ ಬೆಳೆಯುವ ಸೀಬೆ ಹಣ್ಣನ್ನು ನೀವು ತಿನ್ನಬಹುದು. ಸೀಬೆಯು ಆರೋಗ್ಯದಾಯಕ ಹಣ್ಣು.

ಸೀಬೆಯಲ್ಲಿ ಅಧಿಕ ಪ್ರಮಾಣದ ಪೋಷಕಾಂಶಗಳು ಹಾಗೂ ಔಷಧೀಯ ಗುಣಗಳಿವೆ. ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಸೀಬೆ ಹಣ್ಣನ್ನು ಬಳಸುವುದರಿಂದ ನಿಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಸೀಬೆ ಹಣ್ಣು ಕರ್ನಾಟಕ ರಾಜ್ಯಾದ್ಯಂತ ಬೆಳೆಯುತ್ತದೆ. ಬೆಳಸಲೂ ಬಹಳ ಕಷ್ಟವೇನಿಲ್ಲ. ಈಗಂತೂ ಹಲವಾರು ಹೈಬ್ರಿಡ್ ತಳಿಗಳು ಬಂದಿವೆ. ಸೀಬೆಯಲ್ಲಿ ಕೆಲವು ಹಣ್ಣಿನ ತಿರುಳು ಕೆಂಪಗಾಗಿದ್ದು, ಕೆಲವು ಬಿಳಿ ಬಣ್ಣದ್ದಾಗಿರುತ್ತವೆ. ಬಹುತೇಕ ಸೀಬೆಯ ಹೊರಮೈಯ ಬಣ್ಣ ತಿಳಿ ಹಸಿರು ಆಗಿದ್ದರೂ ಕೆಲವು ಪ್ರಬೇಧದ ಸೀಬೆ ಹಣ್ಣಿನ ಹೊರಮೈ ಬಣ್ಣ ಕೆಂಪು ವರ್ಣದ್ದಾಗಿರುತ್ತದೆ. ಈಗಂತೂ ವಿದೇಶದಿಂದ ಆಮದಾಗಿರುವ ಸೀಬೆ ಹಣ್ಣುಗಳೂ ಬರುತ್ತವೆ. ಆಸ್ಟ್ರೇಲಿಯಾ ಸೀಬೆ, ಸ್ಟ್ರಾಬೆರಿ ಸೀಬೆ ಹೀಗೆ ನಾನಾ ವಿಧದ ಸೀಬೆ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸೀಬೆ ಕಾಯಿಯ ಬೆಲೆಯೂ ನಿಮ್ಮ ಜೇಬನ್ನು ಸುಡುವುದಿಲ್ಲ. ನಿಮ್ಮ ಮನೆಯಲ್ಲೂ ಇದರ ಒಂದು ಗಿಡ ಬೆಳೆಸಿಕೊಂಡರೆ ಇನ್ನೂ ಉತ್ತಮ.

ಸೀಬೆಯ ಹಣ್ಣು ಮಾತ್ರವಲ್ಲ, ಅದರ ಎಲೆಯೂ ಬಹಳಷ್ಟು ಆರೋಗ್ಯದಾಯಕ ಗುಣಗಳನ್ನು ಹೊಂದಿದೆ. ನಮ್ಮ ಹಿರಿಯರು ಸೀಬೆಯ ಹಣ್ಣಿನ ಗಿಡದ ಎಲೆಗಳನ್ನು ಬಳಸಿಯೇ ತಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಇದು ಕ್ರಿಮಿನಿವಾರಕ ಗುಣಗಳನ್ನು ಹೊಂದಿದೆ. ನಿಮ್ಮ ಹೊಟ್ಟೆ ಕೆಟ್ಟು ಹೋಗಿ ಬೇಧಿಯಾಗುತ್ತಿದ್ದರೆ ಸೀಬೆ ಹಣ್ಣಿನ ಮರದ ಚಿಗುರನ್ನು ಕಷಾಯ ಮಾಡಿ ಕುಡಿದರೆ ನಿಯಂತ್ರಣಕ್ಕೆ ಬರುತ್ತದೆ. ಸೀಬೆಯ ಹಣ್ಣನ್ನು ಸಿಪ್ಪೆ ಮತ್ತು ಬೀಜ ಸಹಿತವಾಗಿಯೇ ತಿನ್ನಬಹುದು. ಸೀಬೆಯು ವರ್ಷದ ಎಲ್ಲಾ ಸಮಯದಲ್ಲೂ ಲಭ್ಯವಿರುತ್ತದೆ.

ಸೀಬೆಯನ್ನು ಸಿಪ್ಪೆ ತೆಗೆದು ಸೇವಿಸುವುದಕ್ಕಿಂತಲೂ ಸಿಪ್ಪೆಯ ಜೊತೆಯೇ ಹಲ್ಲಿನಿಂದ ಕಚ್ಚಿ ತಿನ್ನುವುದು ಆರೋಗ್ಯದಾಯಕ. ಸೀಬೆಯ ಹಣ್ಣಿನ ಜೊತೆಗೆ ಎಲೆಯನ್ನೂ ಜಗಿದು ತಿಂದರೆ ಹಲ್ಲಿನಲ್ಲಿ ಹುಳುಕಾಗುವುದನ್ನು ತಪ್ಪಿಸಬಹುದು. ಅದೇ ರೀತಿ ಒಸಡುಗಳೂ ಬಲಿಷ್ಟವಾಗುತ್ತವೆ. ಹಲ್ಲು ಸ್ವಚ್ಛವಾಗುತ್ತದೆ. 

ಸೀಬೆ ಹಣ್ಣನ್ನು ದಿನಾಲೂ ತಿನ್ನುವುದರಿಂದ ನಿಮ್ಮ ಚರ್ಮದ ಕಾಂತಿ ಹೆಚ್ಚುತ್ತದೆ. ಸೀಬೆ ಕಾಯಿಯಲ್ಲಿ ಕಬ್ಬಿಣಾಂಶ, ಪೋಲೀಕ್ ಆಸಿಡ್, ನಾರಿನಂಶ, ಪ್ರೋಟೀನ್, ಕ್ಯಾಲ್ಸಿಯಂ ಇರುವುದರಿಂದ ಇದು ನಮ್ಮ ತ್ವಚೆಯನ್ನು ರಕ್ಷಣೆ ಮಾಡುತ್ತದೆ. ಅಕಾಲಿಕವಾಗಿ ಕಂಡು ಬರುವ ಚರ್ಮದ ನೆರಿಗೆಗಳನ್ನೂ ನಿವಾರಿಸುತ್ತದೆ. ಮಕ್ಕಳ ತಲೆಯಲ್ಲಿ ಬಹುವಾಗಿ ಕಂಡು ಬರುವ ಹೇನಿನ ಸಮಸ್ಯೆಗೆ ಸೀಬೆ ಹಣ್ಣಿನ ಗಿಡದ ಎಲೆಯನ್ನು ರುಬ್ಬಿ ಅದನ್ನು ಗಂಧದ ಜೊತೆ ಸೇರಿಸಿ ತಲೆಕೂದಲಿಗೆ ಹಚ್ಚಿದರೆ ಹೇನಿನ ಸಮಸ್ಯೆ ಮಂಗಮಾಯವಾಗುತ್ತದೆ. ನಿಮ್ಮ ಮೈಯಲ್ಲಾಗುವ ಹುಳಕಡ್ಡಿ, ತುರಿಕೆ ಮುಂತಾದ ಸಮಸ್ಯೆಗಳಿಗೆ ಸೀಬೆಯ ಗಿಡದ ಎಲೆ ರಾಮಬಾಣ. ಇದನ್ನು ಲೇಪವನ್ನಾಗಿ ಮಾಡಿ ಗಂಧದ ಜೊತೆ ಸೇರಿಸಿ ಹಚ್ಚಿಕೊಂಡರೆ ತುರಿಕೆಯ ಸಮಸ್ಯೆ ದೂರವಾಗುತ್ತದೆ.

ಗರ್ಭಿಣಿ ಸ್ತ್ರೀಯರ ಆರೋಗ್ಯಕ್ಕೂ ಸೀಬೆ ಹಣ್ಣು ಬಹಳ ಉತ್ತಮ. ಸೀಬೆಯ ಹಣ್ಣಿನ ಬೀಜಗಳನ್ನು ತೆಗೆದು ಅದರ ತಿರುಳಿಗೆ ಜೇನುತುಪ್ಪವನ್ನು ಬೆರೆಸಿ ತಿನ್ನುವುದು ಹಿತಕರ. ಕಾಮಾಲೆ, ಉಬ್ಬಸ ಹಾಗೂ ಕ್ಷಯರೋಗದಂತಹ ಸಮಸ್ಯೆಗಳಿಗೆ ಪರಿಹಾರ ಸೀಬೆ ಹಣ್ಣಿನಲ್ಲಿದೆ. ಸೀಬೆ ಹಣ್ಣಿನಿಂದ ರಸ ತೆಗೆದು ಕುಡಿಯದೇ, ಅದನ್ನು ಕಚ್ಚಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ. ಹದಿಹರೆಯದ ಸಮಯದಲ್ಲಿ ಕಂಡು ಬರುವ ಮೊಡವೆಯ ಸಮಸ್ಯೆಗಳಿಗೂ ಸೀಬೆಯಲ್ಲಿದೆ ಪರಿಹಾರ. ಈ ಮೊಡವೆಗಳಿಂದ ಬಹುತೇಕ ಹೆಣ್ಣುಮಕ್ಕಳಿಗೆ ಕೀಳರಿಮೆ ಕಾಡುತ್ತದೆ. ಸೀಬೆ ಹಣ್ಣನ್ನು  ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಬಳಕೆ ಮಾಡುವುದರಿಂದ ಮೊಡವೆಗಳ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಎಣ್ಣೆಯ ತ್ವಚೆ ಇರುವವರಿಗೆ ಈ ಹಣ್ಣು ಬಹು ಉಪಯೋಗಿ. 

ಸೀಬೆ ಹಣ್ಣಿನ ಬಹಳ ಉಪಯುಕ್ತ ಗುಣವೆಂದರೆ ಮಲಬದ್ಧತೆಯ ನಿವಾರಣೆ. ಸೀಬೆ ಹಣ್ಣಿನಲ್ಲಿ ಯಥೇಚ್ಛವಾಗಿ ನಾರಿನಂಶ ಇರುವುದರಿಂದ ಇದು ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ನಿಮ್ಮಲ್ಲಿ ಕಾಲ ಕಾಲಕ್ಕೆ ಕಾಡುವ ಮರೆವು, ಕಣ್ಣಿನ ದೃಷ್ಟಿಯ ಸಮಸ್ಯೆ ಮತ್ತು ಸಂಧಿವಾತದ ಸಮಸ್ಯೆಗಳಿಗೆ ಸೀಬೆ ಹಣ್ಣಿನಿಂದ ಪರಿಹಾರ ಕಂಡುಕೊಳ್ಳಬಹುದು. ಇಷ್ಟೊಂದು ಪ್ರಯೋಜನಕಾರಿಯಾಗಿರುವ ಸೀಬೆ ಹಣ್ಣನ್ನು ನೀವು ಪ್ರತೀ ದಿನ ನಿಮ್ಮ ಆಹಾರದ ಜೊತೆ ಬಳಸಿ, ಆರೋಗ್ಯದಾಯಕ ಬದುಕು ನಿಮ್ಮದಾಗಲಿ.

ಚಿತ್ರ ಕೃಪೆ: ಅಂತರ್ಜಾಲ ತಾಣ