ಸೇವಾ ಪುರಾಣ -10: ಸರಳುಗಳ ಹಿಂದಿನ ಲೋಕ -3
ಸರಳುಗಳ ಹಿಂದಿನ ಲೋಕ -3
ಹೊರಗೂ ಜೈಲು, ಒಳಗೂ ಜೈಲು!
ತುರ್ತು ಪರಿಸ್ಥಿತಿ ಸಮಯದಲ್ಲಿ ನನ್ನ ಮಟ್ಟಿಗೆ ಎಲ್ಲವೂ ಜೈಲಿನಂತೆಯೇ ಆಗಿತ್ತು. ಮನೆಯಲ್ಲಿದ್ದರೆ ಮನೆಯವರೆಲ್ಲರೂ ನನಗೆ ಏನಾಗುತ್ತದೆಯೋ, ನಾನು ದುಡುಕಿ ಏನಾದರೂ ಆಪತ್ತು ತಂದುಕೊಳ್ಳುತ್ತೇನೋ ಎಂದು ಗಮನಿಸುತ್ತಿದ್ದರು. ಹೊರಗೆ ಹೋದರೆ ಮಫ್ತಿ ಪೋಲಿಸರ ಕಾಟ. ನನ್ನನ್ನು ಮಾತನಾಡಿಸಲು ನನ್ನ ಸ್ನೇಹಿತರು, ಸಹೋದ್ಯೋಗಿಗಳು, ಬಂಧುಗಳು ಹಿಂಜರಿಯುತ್ತಿದ್ದರು. ನನ್ನಿಂದಾಗಿ ಅವರಿಗೂ ತೊಂದರೆಯಾಗಬಾರದು, ಮುಜುಗುರವಾಗಬಾರದು ಎಂದು ನಾನೂ ಸಹ ಅವರನ್ನು ಮಾತನಾಡಿಸುತ್ತಿರಲಿಲ್ಲ. ಹೀಗಾಗಿ ಒಂದು ರೀತಿಯ ಒಂಟಿತನದಿಂದ ಜೀವನ ಸಾಗುತ್ತಿತ್ತು. ಲೈಬ್ರರಿಗೆ ಹೋಗಿ ಮಹಾಪುರುಷರ ಜೀವನ ಚರಿತ್ರೆಗಳು, ಇಷ್ಟವಾಗುವ ಪುಸ್ತಕಗಳನ್ನು ಓದುತ್ತಾ ಕುಳಿತುಕೊಳ್ಳುತ್ತಿದ್ದೆ. ಸ್ವಾಮಿ ದಯಾನಂದ ಸರಸ್ವತಿಯವರ ಸತ್ಯಾರ್ಥ ಪ್ರಕಾಶ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳು, ಸುಭಾಷಚಂದ್ರ ಬೋಸರ ಸಾಹಸಗಾಥೆ, ಕ್ರಾಂತಿಕಾರಿಗಳ ಕುರಿತು ಪುಸ್ತಕಗಳನ್ನು ಓದಲು, ಅಭ್ಯಸಿಸಲು ಅವಕಾಶವಾಯಿತು. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಯಾವುದೇ ಪುಸ್ತಕ, ಸಂಗತಿಗಳು ನನಗೆ ಇಷ್ಟವಾಗುತ್ತಿತ್ತು. ಲೈಬ್ರರಿಗೆ ಹೋಗಿ ತುರ್ತು ಪರಿಸ್ಥಿತಿ ವಿರುದ್ಧ ಕರಪತ್ರಗಳನ್ನು ಹಾಕುತ್ತಿದ್ದೆನೆಂದು ಒಂದು ಪ್ರಕರಣ ಸಹ ನನ್ನ ಮೇಲೆ ದಾಖಲಾಯಿತು. ಮನೆಯಿಂದ ಹೊರಗೆ ಹೊರಟರೆ ಮನೆಗೆ ವಾಪಸು ಬರುತ್ತೇನೋ ಇಲ್ಲವೋ ಎಂದು ಮನೆಯಲ್ಲಿ ಆತಂಕಪಡುತ್ತಿದ್ದರು. ಮನೆಯಲ್ಲೇ ಇರಲೂ ಆಗುತ್ತಿರಲಿಲ್ಲ. ಹಾಸನಕ್ಕೆ ಯಾರೇ ಪ್ರಮುಖ ಕಾಂಗ್ರೆಸ್ ನಾಯಕರುಗಳು ಬಂದಾಗಲೆಲ್ಲಾ ನಾನೂ ಸೇರಿದಂತೆ 15-20 ಜನರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಠಾಣೆಯಲ್ಲಿ ಇರಿಸಿಕೊಂಡು ಅವರು ಹೋದ ನಂತರ ಬಿಟ್ಟು ಕಳುಹಿಸುತ್ತಿದ್ದರು. ಪೋಲಿಸರ ಪ್ರಕಾರ ವಿಧ್ವಂಸಕರ, ರಾಷ್ಟ್ರದ್ರೋಹಿಗಳ ಪೈಕಿ ನಾನೂ ಒಬ್ಬನಾಗಿದ್ದೆ. ಹೀಗಾಗಿ ನನಗೆ ಹೊರಗಿನ ಜೈಲಿಗಿಂತ ಒಳಗಿನ ಜೈಲೇ ಹಿತವೆನಿಸುತ್ತಿತ್ತು, ಅಲ್ಲೇ ಮುಕ್ತ ವಾತಾವರಣವಿತ್ತೆಂದು ಅನ್ನಿಸುತ್ತಿತ್ತು.
ಹೃದಯ ಕಲಕಿದ ಘಟನೆ
ವೈಯಕ್ತಿಕವಾಗಿ ನನಗೆ ಸಂಬಂಧಿಸಿರದಿದ್ದರೂ ಹೃದಯ ಕಲಕಿದ ಈ ಘಟನೆಯನ್ನು ಉಲ್ಲೇಖಿಸದೆ ಇರಲು ಆಗುತ್ತಿಲ್ಲ. ಕೇಂದ್ರ ಮಂತ್ರಿಯಾಗಿದ್ದ ಶ್ರೀ ಜಾಫರ್ ಶರೀಫ್ ಸಾಹೇಬರು ಎರಡು ದಿನಗಳ ಭೇಟಿಗಾಗಿ ಹಾಸನಕ್ಕೆ ಬರುತ್ತಾರೆಂದು ನಮ್ಮನ್ನು ಹಾಸನದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಕೂಡಿಟ್ಟಿದ್ದರು. ಶರೀಫ್ ಸಾಹೇಬರು ಬರುತ್ತಾರೆಂದು ನಮ್ಮನ್ನು ಠಾಣೆಯಲ್ಲಿ ಇರಿಸಿದಾಗಲೇ ನಮಗೆ ಗೊತ್ತಾಗಿದ್ದು. ನಾವು ಅಲ್ಲಿದ್ದಂತೆ ಸಾಯಂಕಾಲದ ಹೊತ್ತಿಗೆ ಹಳ್ಳಿಯವರಂತೆ ಕಾಣುತ್ತಿದ್ದ ಒಬ್ಬ ವೃದ್ಧ ಮತ್ತು ಸುಮಾರು 25 ವರ್ಷದ ಒಬ್ಬ ಹೆಣ್ಣುಮಗಳನ್ನು ತಂದು ಸೆಲ್ ನಲ್ಲಿರಿಸಿದರು. ಹೆಣ್ಣುಮಗಳು ಆ ವೃದ್ಧನ ಮಗಳಿರಬಹುದೆಂದು ಅಂದುಕೊಂಡೆವು. ರಾತ್ರಿ ಸುಮಾರು 10 ಘಂಟೆ ವೇಳೆಗೆ ಮುದುಕನ ಗೋಳಾಟ ತೂಕಡಿಸುತ್ತಿದ್ದ ನಮ್ಮನ್ನೆಚ್ಚರಿಸಿತು. 'ಬೇಡ ಸ್ವಾಮಿ, ನಿಮ್ಮ ಕಾಲಿಗೆ ಬೀಳುತ್ತೇನೆ, ನನ್ನ ಮಗಳಿಗೆ ಏನೂ ಮಾಡಬೇಡಿ,ನಿಮ್ಮ ದಮ್ಮಯ್ಯ, ಬಿಟ್ಟುಬಿಡಿ' ಎಂದು ಆ ಮುದುಕ ಕಲ್ಲೂ ಕರಗುವಂತೆ ಅಂಗಲಾಚುತ್ತಿದ್ದರೆ ಒಬ್ಬ ಪೇದೆ ಅವಳನ್ನು ನಿರ್ದಯವಾಗಿ ಅಲ್ಲಿಂದ ಕರೆದೊಯ್ದ. ಸ್ವಲ್ಪ ಹೊತ್ತಿಗೆಲ್ಲಾ ಆ ಹೆಣ್ಣುಮಗಳ ಭಯಭೀತ ಆಕ್ರಂದನ ಕೇಳಲಾರಂಭಿಸಿತು. ನಮಗೆ ಪರಿಸ್ಥಿತಿಯ ಅರಿವಾದರೂ ನಾವು ಒಳಗಿದ್ದರಿಂದ ನಾವು ಏನೂ ಮಾಡುವಂತಿರಲಿಲ್ಲ. ಒಳಗಿನಿಂದಲೇ ನಾವೂ ಕೂಗಾಡಿ, ಕಿರುಚಾಡಿ ಮಾಡಿದೆವು. ನಮ್ಮ ಕೈಯಲ್ಲಿ ಮಾಡಲು ಸಾಧ್ಯವಿದ್ದದ್ದು ಅಷ್ಟೇ ಆಗಿತ್ತು. ಅದನ್ನು ಯಾರೂ ಲೆಕ್ಕಿಸಲೂ ಇಲ್ಲ, ಹೊರಜಗತ್ತಿಗೆ ಏನೂ ಗೊತ್ತಾಗಲೇ ಇಲ್ಲ. ಮರುದಿನ ಬೆಳಿಗ್ಗೆ ಆ ಮುದುಕ ಮತ್ತು ಅವನ ಮಗಳನ್ನು ಠಾಣೆಯಿಂದ ಕರೆದುಕೊಂಡು ಹೋದರು. ನಮ್ಮನ್ನೂ ಆದಿನ ಸಾಯಂಕಾಲ ಬಿಟ್ಟುಕಳಿಸಿದರು.
ಈ ಘಟನೆ ನಡೆದ ಹಲವು ದಿನಗಳ ನಂತರ ಇನ್ನೊಂದು ಪ್ರಕರಣದ ಕಾರಣದಿಂದ ಹಾಸನದ ಜೈಲಿಗೆ ಮತ್ತೆ ಪ್ರವೇಶವಾಯಿತು. ಊಟಕ್ಕೆ ಬಿಟ್ಟ ವೇಳೆಯಲ್ಲಿ ಇನ್ನೊಂದು ಬ್ಯಾರಕ್ಕಿನಲ್ಲಿದ್ದ ವೃದ್ಧ ಕಣ್ಣಿಗೆ ಬಿದ್ದ. ಮಾತನಾಡಿಸಿ ವಿಚಾರಿಸಿದಾಗ ತಿಳಿದ ವಿಷಯ ಎಂತಹವರನ್ನೂ ಮರುಗಿಸದೆ ಇರಲಾರದು. ಆತನ ಮಗ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನದ ಸಮಯದಲ್ಲಿ ಆತನ ಮಗಳು ಅವನಿಗಾಗಿ ಊಟದ ಬುತ್ತಿ ತೆಗೆದುಕೊಂಡು ಹೋಗಿದ್ದಳು. ಊಟ ಮಾಡುತ್ತಿದ್ದ ಸಮಯದಲ್ಲಿ ಇವರ ಎತ್ತೊಂದು ಪಕ್ಕದ ಜಮೀನಿಗೆ ಹೋಗಿ ಮೇಯತೊಡಗಿತ್ತು. ಪಕ್ಕದ ಜಮೀನಿನವನು ದೊಣ್ಣೆಯಿಂದ ಎತ್ತಿಗೆ ಹೊಡೆದಾಗ ಎತ್ತಿನ ಮುಂಗಾಲು ಮುರಿದಿತ್ತು. ಸಿಟ್ಟಿಗೆದ್ದ ಇವನ ಮಗ ತಕ್ಷಣ ಕುಡುಗೋಲಿನಿಂದ ಪಕ್ಕದ ಜಮೀನಿನವನ ಕುತ್ತಿಗೆಗೆ ಹೊಡೆದಾಗ ಆತ ಅಲ್ಲೇ ಕುಸಿದು ಸತ್ತುಬಿದ್ದ. ಅಲ್ಲಿದ್ದ ಇವನ ಮಗಳು ತಮ್ಮನನ್ನು ಉಳಿಸುವ ಸಲುವಾಗಿ ಕುಡುಗೋಲನ್ನು ತಾನು ತೆಗೆದುಕೊಂಡು ತಮ್ಮನನ್ನು ಮನೆಗೆ ಕಳಿಸಿದಳು. ಜನ ಗುಂಪುಕೂಡಿದರು. ಇವನೂ ಅಲ್ಲಿಗೆ ಓಡಿ ಬಂದ. ಪೋಲಿಸರೂ ಬಂದರು. ಇವನ ಮಗಳು ಪಕ್ಕದ ಜಮೀನಿನವನು ತನ್ನನ್ನು ಕೆಡಿಸಲು ಬಂದನೆಂದೂ ರಕ್ಷಣೆಗಾಗಿ ತಾನು ಹಾಗೆ ಮಾಡಬೇಕಾಯಿತೆಂದು ಹೇಳಿಕೆ ಕೊಟ್ಟಳು. ಪೋಲಿಸರು ತನ್ನನ್ನೂ ಮತ್ತು ತನ್ನ ಮಗಳನ್ನೂ ಬಂಧಿಸಿ ಕರೆತಂದರೆಂದೂ, ಪೋಲಿಸ್ ಠಾಣೆಯಲ್ಲಿ ಪೋಲಿಸರು ತನ್ನ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದರೆಂದು ಹೇಳುವಾಗ ಆ ವೃದ್ಧನ ಗಂಟಲಿನ ನರಗಳು ಉಬ್ಬಿ ಮಾತನಾಡಲಾರದಾಗಿದ್ದ. ನನ್ನ ಕಣ್ಣುಗಳೂ ನೀರಾಡಿದವು. ಇದೇ ಜೈಲಿನ ಇನ್ನೊಂದು ಬ್ಯಾರಕ್ಕಿನಲ್ಲಿರುವ ತನ್ನ ಮಗಳನ್ನು ನೋಡಲೂ ಅವಕಾಶವಾಗಿಲ್ಲವೆಂದು ಕಣ್ಣೀರಿಟ್ಟ. ಜೈಲಿನಲ್ಲಿದ್ದ ಹಳೆಯ ಕೈದಿಗಳು ಹೇಳಿದ ಪ್ರಕಾರ ಮಹಿಳಾ ಕೈದಿಗಳನ್ನು ನೋಡಿಕೊಳ್ಳಲು ಒಬ್ಬರು ಮಹಿಳಾ ವಾರ್ಡನ್ ಇದ್ದರೂ ಆಕೆ ರಾತ್ರಿ ಹೊತ್ತು ಇರುವುದಿಲ್ಲವೆಂದೂ ಯಾವುದೇ ಮಹಿಳಾ ಕೈದಿ ಬಂದರೂ ಜೈಲಿನ ಸಿಬ್ಬಂದಿ ಅವರನ್ನು ಲೈಂಗಿಕವಾಗಿ ಹಿಂಸಿಸುವುದು ಸಾಮಾನ್ಯವೆಂದೂ, ಹಣ ಕೊಡುವ ಹಳೆಯ ಕೈದಿಗಳಿಗೂ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡುತ್ತಾರೆಂದೂ ಹೇಳಿದ ಸಂಗತಿ ಆಘಾತಕರವಾಗಿತ್ತು. ವಿಶ್ವಾಸದಿಂದಿದ್ದ ಜೈಲಿನ ಗಾರ್ಡ್ ಒಬ್ಬರು ಇದನ್ನು ಖಚಿತಪಡಿಸಿ ತನ್ನ ಸಹೋದ್ಯೋಗಿಗಳಿಂದ ಮುದುಕನ ಮಗಳಿಗೂ ತೊಂದರೆಯಾಗಿದೆಯೆಂದೂ ಹೇಳಿದರು. ಸುಮಾರು 90 ಸಂಖ್ಯೆಯಷ್ಟಿದ್ದ ನಾವುಗಳು ಪರಸ್ಪರ ಚರ್ಚಿಸಿ ಇದನ್ನು ಪ್ರತಿಭಟಿಸಲು ನಿರ್ಧರಿಸಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತೆವು. ಹೆದರಿಕೆ, ಬೆದರಿಕೆಗಳು ಬಂದರೂ ಜಗ್ಗಲಿಲ್ಲ. ನ್ಯಾಯಾಲಯಗಳಲ್ಲಿ ಹಿಯರಿಂಗ್ ಇದ್ದವರನ್ನು ನ್ಯಾಯಾಲಯಕ್ಕೆ ಕರೆದೊಯ್ಯಲು ಪೋಲಿಸರು ಬಂದಾಗ ಬಂದಿಗಳು ಹೋಗಲು ನಿರಾಕರಿಸಿದರು. ವಿಷಯ ತೀವ್ರಗೊಂಡಾಗ ಹಿರಿಯ ಅಧಿಕಾರಿಗಳು ಬಂದು ಇಬ್ಬರು ಗಾರ್ಡ್ ಗಳನ್ನು ಅಮಾನತ್ತಿನಲ್ಲಿಟ್ಟು ನ್ಯಾಯಯುತ ವಿಚಾರಣೆ ನಡೆಸುವುದಾಗಿ ಆಶ್ವಾಸನೆ ಕೊಟ್ಟ ನಂತರ ನಮ್ಮ ಎರಡು ದಿನಗಳ ಉಪವಾಸ
ಸತ್ಯಾಗ್ರಹ ಅಂತ್ಯಗೊಂಡಿತು. ಹೆಚ್ಚಿನ ವಿವರ ನೀಡದೇ ಕಥೆಯ ಅಂತ್ಯಕ್ಕೆ ಬಂದುಬಿಡುತ್ತೇನೆ. ಕೆಲವು ತಿಂಗಳುಗಳ ನಂತರದಲ್ಲಿ (ನಾನು ಆಗ ಜೈಲಿನಲ್ಲಿರಲಿಲ್ಲ) ಮುದುಕನ ಪತ್ನಿ ತೀರಿಕೊಂಡಾಗ ಅಂತ್ಯ ಸಂಸ್ಕಾರದ ಸಮಯದಲ್ಲಿ ಮುದುಕನನ್ನೂ ಆತನ ಮಗಳನ್ನೂ ಪೋಲಿಸ್ ರಕ್ಷಣೆಯಲ್ಲಿ ಕರೆದುಕೊಂಡು ಹೋಗಿದ್ದರಂತೆ. ಆ ಹುಡುಗಿ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಳಂತೆ. ಆ ಸಂದರ್ಭದಲ್ಲಿ ಅವಳು ಪೋಲಿಸರ ಕಣ್ಣು ತಪ್ಪಿಸಿ ಮನೆಯ ಹಿಂದಿನ ಬಾವಿಗೆ ಹಾರಿದಳಂತೆ. ನಂತರ ಹೊರಬಂದಿದ್ದು ಆಕೆಯ ಹೆಣ. ಪತ್ರಿಕೆಗಳಲ್ಲಿ ಈ ವಿಷಯ ಆತ್ಮಹತ್ಯೆ ಎಂದು ಪ್ರಕಟವಾಗಿತ್ತು. ನಿಜಕ್ಕೂ ಅದು ಆತ್ಮಹತ್ಯೆಯೇ? ಕೊಲೆಯೇ?