ಸೇವಾ ಸಂಸ್ಥೆಗಳು ವ್ಯಾಪಾರೀಕರಣವಾದರೆ…!

ಸೇವಾ ಸಂಸ್ಥೆಗಳು ವ್ಯಾಪಾರೀಕರಣವಾದರೆ…!

ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಎಂಬ ಜೀವ ಭದ್ರತೆಯ ಸೇವಾ ಸಂಸ್ಥೆಗೆ ಹಣದ ದುರಾಸೆ ಮೂಡಿದ್ದಾದರೂ ಹೇಗೆ ಮತ್ತು ಏಕೆ ? ಭಾರತ ದೇಶದ ಅತ್ಯಂತ ಮಹತ್ವದ ಮತ್ತು ಪ್ರಾಮಾಣಿಕ ಬೃಹತ್ ಸಂಸ್ಥೆಗಳಲ್ಲಿ ಎಲ್ಐಸಿಗೆ ಪ್ರಮುಖ ಸ್ಥಾನವಿದೆ. ಬಹುತೇಕ ಜನ ನಂಬಿರುವ, ತಮ್ಮ ಬದುಕಿನ ರಕ್ಷಣೆಗಾಗಿ ಒಂದಷ್ಟು ಹಣ ತೊಡಗಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಆರಾಮವಾಗಿ ಇರುವ ಅನೇಕ ಕುಟುಂಬಗಳ ಆಶಾಕಿರಣ ಎಲ್ಐಸಿ.

ವ್ಯವಹಾರ ಮತ್ತು ಸೇವಾ ಮನೋಭಾವ ಎರಡನ್ನೂ ಸಮೀಕರಿಸಿ ಕೆಲವೇ ಪರ್ಸೆಂಟ್ ಬಡ್ಡಿಯ ವ್ಯತ್ಯಾಸದಲ್ಲಿ ಗ್ರಾಹಕರು ಮತ್ತು ತಮ್ಮ ಆಡಳಿತ ವೆಚ್ಚಗಳನ್ನು ನಿಭಾಯಿಸುತ್ತಾ, ಸಾಲ ಸೌಲಭ್ಯ ಕೊಡುತ್ತಾ ಈಗಲೂ ಒಂದಷ್ಟು ಲಾಭ ಮಾಡುತ್ತಾ ಇರುವ ಸಂಸ್ಥೆ ಎಲ್ಐಸಿ.

ಒಂದು ಯಶಸ್ವಿ ಜೀವಾ ವಿಮಾ ಕಂಪನಿಗೆ ಇಷ್ಟು ಸಾಕಿತ್ತು. ಆದರೆ ಇನ್ನೂ ಹಣ ಮಾಡುವ ದುರಾಸೆಗೆ ಬಲಿಯಾಯಿತು. ಆ ದುರಾಸೆ ಸಹ ಪ್ರಾಮಾಣಿಕ ಬೆಳವಣಿಗೆಯ ಹೊಸ ಹೊಸ ಯೋಜನೆ ರೂಪಿಸಿ ಹಣ ಗಳಿಸುವುದಕ್ಕಿಂತ ಸುಲಭವಾಗಿ ಜೂಜಿಗೆ ಸ್ವಲ್ಪ ಸಮೀಪವಿರುವ ಷೇರು ಮಾರುಕಟ್ಟೆ ಪ್ರವೇಶಿಸಿ ದೊಡ್ಡ ಲಾಭ ಮಾಡುವ ದಿಢೀರ್ ಶ್ರೀಮಂತಿಕೆಯ ಮೋಹ. ಬಹಳಷ್ಟು ಜನ ವಿವಿಧ ಕಾರಣಗಳಿಗಾಗಿ ಎಲ್ಐಸಿ ಷೇರು ಮಾರುಕಟ್ಟೆ ಪ್ರವೇಶಿಸಿರುವುದನ್ನು ಸಮರ್ಥಿಸಬಹುದು. ಆದರೆ..

ಷೇರುಪೇಟೆ ಎಂಬ ಹುಚ್ಚು ಮನಸ್ಸಿನ ಹಲವು ಮುಖಗಳು. ಕಳೆದ ಸುಮಾರು 35 ವರ್ಷಗಳಿಂದ ಷೇರು ಮಾರುಕಟ್ಟೆಯ ಅಂಕಿ ಸಂಖ್ಯೆಗಳನ್ನು ಗಮನಿಸುತ್ತಿದ್ದೇನೆ. ಅದರ ಏರಿಳಿತಗಳು ಕೆಲವೊಮ್ಮೆ ಊಹೆಗೂ ನಿಲುಕುವುದಿಲ್ಲ. ಇದು ಸಂಪೂರ್ಣ ಜೂಜಲ್ಲ. ಆದರೆ ಸಾಕಷ್ಟು ಜೂಜಿನ ಗುಣಲಕ್ಷಣಗಳನ್ನೇ ಹೊಂದಿರುವ ಒಂದು ವ್ಯಾಪಾರ ವಹಿವಾಟು ವ್ಯವಸ್ಥೆ. ಸಾಧಾರಣ ಸಾಮಾನ್ಯ ದಿನಗಳಲ್ಲಿ ಇದು ಸಾಕಷ್ಟು ನಿಯಂತ್ರಣದಲ್ಲಿಯೇ ಕಾರ್ಯನಿರ್ವಹಿಸುತ್ತದೆ. ಆಗ ಸಣ್ಣ ಪ್ರಮಾಣದ ಬದಲಾವಣೆ ಮಾತ್ರ ಇರುತ್ತದೆ.

ಆದರೆ ಕೆಲವು ಸುದ್ದಿಗಳು - ಗಾಳಿ ಸುದ್ದಿಗಳು - ಇನ್ನೂ ವಾಸ್ತವಕ್ಕೆ ತುಂಬಾ ದೂರವಿರುವಾಗಲೇ ವಿವೇಚನೆಯೂ ಬಳಸದೆ ದಿಡೀರನೇ ಆಘಾತಕಾರಿ ಬೆಳವಣಿಗೆಗಳು ಕಂಡುಬರುತ್ತವೆ. ಆಗ ಅದರಲ್ಲಿ ತೊಡಗಿರುವ ಜನಗಳ ಮಾನಸಿಕತೆಯ ಬಗ್ಗೆ ತುಂಬಾ ಕುತೂಹಲ ಮೂಡುತ್ತದೆ.

ಇದಕ್ಕೆ ಹಲವಾರು ಕಾರಣಗಳು ಇರಬಹುದು. ಹಣದ ಮೇಲಿನ ಅತಿಯಾದ ವ್ಯಾಮೋಹ, ನಷ್ಟದ ಭೀತಿ,

ಏಜೆಂಟರುಗಳು ಸೃಷ್ಟಿಸುವ ಕೃತಕ ತಂತ್ರಗಳು, ಕೆಲವು ಕಂಪನಿಗಳ ಸುಳ್ಳು ಲೆಕ್ಕಗಳು ಇನ್ನೂ ಏನೇನೂ ಇರಬಹುದು. ಕಾರಣಗಳು ಏನೇ ಇರಲಿ, ಹೊರಗೆ ನಿಂತು ನೋಡುವವರಿಗೆ ಷೇರು ಮಾರುಕಟ್ಟೆಯ ವಹಿವಾಟು ನಡೆಸುವವರಿಗೆ ತಾಳ್ಮೆ ಕಡಿಮೆ ಇರಬೇಕು ಎನಿಸುತ್ತದೆ. ಏಕೆಂದರೆ ಅವರ ದಿಢೀರ್ ತೀರ್ಮಾನಗಳು ಹಾಗೆಯೇ ಇರುತ್ತದೆ.

ದೀರ್ಘಕಾಲದ ಬಂಡವಾಳ ಹೂಡಿಕೆ ಮಾಡುವವರನ್ನು ಹೊರತುಪಡಿಸಿ, ದಿನನಿತ್ಯದ ವ್ಯವಹಾರ ಮಾಡುವವರು 

ದುಡ್ಡಿನ ಜೊತೆ ತಮ್ಮ ಭಾವನೆಗಳನ್ನು ಜೋಡಿಸಿರುತ್ತಾರೆ. ಯಾವುದೋ ಒಂದು ಸುದ್ದಿಯನ್ನು ನೋಡಿ ದಿಢೀರನೆ ತೀರ್ಮಾನ ಕೈಗೊಳ್ಳುತ್ತಾರೆ. ಅದರಿಂದಾಗಿಯೇ  ಆಸೆ, ನಿರಾಸೆ, ಒತ್ತಡಗಳು, ಕನಸುಗಳು ಎಲ್ಲವೂ ರಕ್ತದೊತ್ತಡದಂತೆ ಏರಿಳಿತ ದಾಖಲಿಸುತ್ತದೆ.

ಸುದ್ದಿ ಯಾವುದೇ ಇರಲಿ, ಅದರ ಪರಿಣಾಮ ಫಲಿತಾಂಶ ಎಲ್ಲವೂ ಸಮಯವನ್ನು ಅವಲಂಬಿಸಿರುತ್ತದೆ. ಆದರೆ ಈ ಷೇರು ಮಾರುಕಟ್ಟೆ ಜನಗಳು ಅದಕ್ಕೆ ಕಾಯದೆ ಬೇಗ ಪ್ರತಿಕ್ರಿಯಿಸುತ್ತಾರೆ. ಅದನ್ನು ಏರು ಮುಖದಲ್ಲಿ ಇದ್ದಾಗ ಗೂಳಿ ಓಟ ಎನ್ನುತ್ತಾರೆ, ಕೆಳ ಮುಖವಾಗಿ ಬಿದ್ದಾಗ ಕರಡಿ ಕುಣಿತ ಎನ್ನುತ್ತಾರೆ. ಈ ಷೇರು ಮಾರುಕಟ್ಟೆಯ ಇನ್ನೊಂದು ವಿಚಿತ್ರವೆಂದರೆ....

ಹಲವಾರು ಆರ್ಥಿಕ ತಿಳಿವಳಿಕೆಯವರು, ಏಜೆಂಟರುಗಳು ಕೆಲವು ಶಿಬಿರಗಳನ್ನು ಏರ್ಪಡಿಸಿ ‌ಸಾಮಾನ್ಯ ಜನರನ್ನು ಈ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಲು ಭೋದನೆ ಮಾಡುತ್ತಾರೆ. ಬಹಳಷ್ಟು ಲಾಭದ ಭರವಸೆ ನೀಡುತ್ತಾರೆ. ಅದಕ್ಕೆ ತಾವು ಸಲಹೆ ಸೂಚನೆ ಮಾರ್ಗದರ್ಶನ ನೀಡುವುದಾಗಿ ಹೇಳುತ್ತಾರೆ.

ನನ್ನ ಕುತೂಹಲ ಏನೆಂದರೆ, ಈ ರೀತಿಯಲ್ಲಿ ಸಲಹೆ ನೀಡುವವರೆ ತಮ್ಮಲ್ಲಿರುವ ಹಣವನ್ನು ಷೇರು ಪೇಟೆಯಲ್ಲಿ ತೊಡಗಿಸಿ‌ ಸಾಧ್ಯವಿರುವ ಎಲ್ಲಾ ಲಾಭಗಳನ್ನು ಮಾಡಿಕೊಳ್ಳಬಹುದಲ್ಲವೇ ಅಥವಾ ಜನರ ಹಣವನ್ನು ಪಡೆದು ಅದಕ್ಕೆ ಗ್ಯಾರಂಟಿ ನೀಡಿ‌ ಅವರೂ ಲಾಭ ಮಾಡಿಕೊಂಡು ಜನರಿಗೂ ಲಾಭ ಮಾಡಿಕೊಡಬಹುದಲ್ಲವೇ ?

ಆದರೆ ಅದರಲ್ಲಿ ತುಂಬಾ ರಿಸ್ಕ್ ಇರುತ್ತದೆ. ಅದನ್ನು ಅವರು ಮರೆ ಮಾಚುವಂತೆ ಹೇಳುತ್ತಾರೆ. ಎಚ್ಚರಿಕೆ ಇರಬೇಕು ಎಂದು ಸಲಹೆ ನೀಡುತ್ತಾರೆ. ಸಮಸ್ಯೆ ಇರುವುದೇ ಅಲ್ಲಿ. ಯಾವ ರೀತಿಯ ಎಚ್ಚರಿಕೆ ಎಂಬುದೇ ಗೊಂದಲ. ಷೇರು ಪೇಟೆಯ ವ್ಯವಹಾರಗಳು ಅನೇಕ ಬಾರಿ ಯಾರ ಊಹೆಗೂ ನಿಲುಕುವುದಿಲ್ಲ. ಆಗ ಬಹಳಷ್ಟು ನಷ್ಟ ಸಂಭವಿಸುತ್ತವೆ. ಅದನ್ನು ತಡೆದುಕೊಳ್ಳಲು ಸಾಮಾನ್ಯರಿಗೆ ಸಾಧ್ಯವಾಗುವುದಿಲ್ಲ.

ಷೇರು ಪೇಟೆಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ, ಪತ್ರಿಕೆಗಳಲ್ಲಿ ಬರೆಯುವ, ಟಿವಿಯಲ್ಲಿ ಮಾತನಾಡುವ, ಅದರಲ್ಲಿ ಸಾಕಷ್ಟು ಬಂಡವಾಳ ಹೂಡಿರುವ ಜನರೊಂದಿಗೆ ಇದರ ಬಗ್ಗೆ ಚರ್ಚಿಸಿದಾಗ ನನ್ನ ಗ್ರಹಿಕೆಗೆ ಸಿಕ್ಕ ವಿಷಯವೇನೆಂದರೆ.. ಷೇರು ಮಾರುಕಟ್ಟೆಯ ಜ್ಞಾನ ಎಂದಿಗೂ ನೇರ ಮತ್ತು ಸ್ಪಷ್ಟವಾಗಿಲ್ಲ. ಅದು ಯಾರಿಗೂ ಸಂಪೂರ್ಣ ನಿಯಂತ್ರಣಕ್ಕೆ ಸಿಗುವುದಿಲ್ಲ.

ಅದು ಅನೇಕ ಸಮಯ ಸಂದರ್ಭಗಳನ್ನು ಅವಲಂಬಿಸಿರುತ್ತೆ. ಅದೃಷ್ಟ ದುರಾದೃಷ್ಟಗಳು ಎಂದು ಕರೆಯಲ್ಪಡುವ ಸಮಯ ಪ್ರಜ್ಞೆ ಇಲ್ಲಿ ಸ್ವಲ್ಪ ಕೆಲಸ ಮಾಡುತ್ತದೆ. ಕೆಲವರಿಗೆ ಮಾತ್ರ ಲಾಭವಾಗಿ ಬಹಳಷ್ಟು ಜನರಿಗೆ ನಷ್ಟವಾಗುತ್ತದೆ. ಷೇರು ಮಾರುಕಟ್ಟೆಯ ಬಗ್ಗೆ ನಮಗೆ ಸಂಪೂರ್ಣ ತಿಳಿದಿದೆ ಎಂಬುದು ಜ್ಯೋತಿಷಿಗಳ ಭವಿಷ್ಯದಂತೆ ಕೇವಲ ಸಾಧ್ಯತೆಗಳು ಮಾತ್ರ.

ಇಂತಹ ಅನಿಶ್ಚಿತ ವ್ಯವಹಾರದಲ್ಲಿ ಎಲ್ಐಸಿ ಮತ್ತು ಎಸ್ ಬಿ ಐ ಸೇರಿ ಕೆಲವು ಪ್ರಮುಖ ಬ್ಯಾಂಕುಗಳು ಸಾರ್ವಜನಿಕ ಹಣವನ್ನು ತೊಡಗಿಸುವುದು ಎಷ್ಟು ಸರಿ ಮತ್ತು ಎಷ್ಟು ಅವಶ್ಯ. ಠೇವಣಿಗಳಿಗೆ ಒಂದಷ್ಟು ಬಡ್ಡಿ ನೀಡಿ, ಸಾಲಗಳಿಗೆ ಅದಕ್ಕಿಂತ ಸ್ವಲ್ಪ ಹೆಚ್ಚು ಬಡ್ಡಿ ವಸೂಲಿ ಮಾಡಿಕೊಂಡು ಆಡಳಿತ ವೆಚ್ಚ ಸರಿದೂಗಿಸಿ ಜನರಿಗೆ ಒಳ್ಳೆ ನಂಬಿಕೆಯ ಸೇವೆ ಸಲ್ಲಿಸುತ್ತಾ ಅತ್ಯಂತ ಸುರಕ್ಷಿತವಾಗಿ ದೀರ್ಘಕಾಲ ವ್ಯವಹಾರ ಮಾಡುವುದು ಒಳ್ಳೆಯದಲ್ಲವೇ?

ಅದರಿಂದ ದೇಶದ ನಂಬುಗೆಯ ಸುಭದ್ರ ಆರ್ಥಿಕ ತಳಹದಿ ಪರೋಕ್ಷವಾಗಿ ಅಭಿವೃದ್ಧಿ ಸಾಧಿಸುತ್ತದೆಯಲ್ಲವೇ. ಕಳೆದ ದಶಕದ ವಿಶ್ವ ಆರ್ಥಿಕ ಕುಸಿತದ ಸಂದರ್ಭದಲ್ಲಿ ಭಾರತದ ಸರ್ಕಾರಿ ಬ್ಯಾಂಕಿಂಗ್ ವ್ಯವಸ್ಥೆ ವಿಶ್ವದಲ್ಲೇ ಹೆಚ್ಚು ಸ್ಥಿರತೆ ಕಾಪಾಡಿಕೊಂಡು ಒಂದು ಮಾದರಿ ಎನಿಸಿತಲ್ಲವೇ. ಯಾರೋ ಖಾಸಗಿ ವ್ಯಕ್ತಿಗಳು ರಿಸ್ಕ್ ತೆಗೆದುಕೊಂಡು ಷೇರು ಮಾರುಕಟ್ಟೆಯಲ್ಲಿ ಬಂಡವಾಳ ತೊಡಗಿಸಿ ಲಾಭ ನಷ್ಟ ಮಾಡಿಕೊಳ್ಳಲಿ. ಅದು ಅವರ ಆಯ್ಕೆ.

ಶಿಕ್ಷಣ ಮತ್ತು ಆರೋಗ್ಯ ವ್ಯಾಪರೀಕರಣವಾಗಿದೆ. ಈಗ ಎಲ್ಐಸಿ ಮತ್ತು ಭಾರತದ ಸರ್ಕಾರಿ ಬ್ಯಾಂಕುಗಳು ಸಹ ಆರ್ಥಿಕ ಸೇವಾ ಸಂಸ್ಥೆಗಳಾಗಿ ತಮ್ಮ ಪ್ರಾಮಾಣಿಕ ನಂಬಿಕೆಯ ಸಂಸ್ಥೆಗಳಾಗದೆ ಹಣದ ಹಿಂದೆ ಬಿದ್ದು ಅಂದರೆ ಸೇವೆಯೂ ವ್ಯಾಪಾರವಾದರೆ ಮನುಷ್ಯ ಗ್ರಾಹಕನಾದರೆ ನಾಗರಿಕ ಸಮಾಜ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಮತ್ತೆ ಅನಾಗರಿಕ ಸಮಾಜ ಜಾರಿಯಲ್ಲಿರುತ್ತದೆ. ಈಗ ಅದು ಪ್ರಾರಂಭವಾಗಿದೆ.

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ