ಸೇವೆಯನ್ನೇ ಉಸಿರಾಗಿಸಿಕೊಂಡ ದಾದಿಯರನ್ನು ನೆನೆಯೋಣ…

ಸೇವೆಯನ್ನೇ ಉಸಿರಾಗಿಸಿಕೊಂಡ ದಾದಿಯರನ್ನು ನೆನೆಯೋಣ…

ಸಿಸ್ಟರ್, ನರ್ಸ್, ದಾದಿ, ಅಕ್ಕ ಎಂದೆಲ್ಲಾ ಹಲವು ಹೆಸರಿನಿಂದ ಕರೆಯುವ ಮಮತಾಮಯಿ ಮಹಿಳೆಯರನ್ನು ನಾವು ಪ್ರಸ್ತುತ ಸನ್ನಿವೇಶದಲ್ಲಿ ನೆನೆಯಲೇ ಬೇಕು. ನಾವು ಯಾವುದೇ ಆಸ್ಪತ್ರೆಗೆ ಹೋದಾಗ ಬಹುವಾಗಿ ಗಮನಿಸುವ ಸಂಗತಿಯೆಂದರೆ ವೈದ್ಯರು ರೋಗಿಯನ್ನು ಪರೀಕ್ಷಿಸುತ್ತಾರೆ, ಮದ್ದು ಹೇಳುತ್ತಾರೆ ಅಥವಾ ಶಸ್ತ್ರ ಚಿಕಿತ್ಸೆ ಮಾಡಲು ಸಲಹೆ ನೀಡುತ್ತಾರೆ. ಶಸ್ತ್ರ ಚಿಕಿತ್ಸೆಯನ್ನೂ ಮಾಡುತ್ತಾರೆ. ಆದರೆ ಬಹುತೇಕ ಎಲ್ಲಾ ಶುಶ್ರೂಷೆಯ ಕೆಲಸವನ್ನು ಮಾಡುವುದು ದಾದಿಯರೇ ಅಲ್ಲವೇ? ದಾದಿಯರ ನಿಸ್ವಾರ್ಥ ಸೇವೆ ಮತ್ತು ತ್ಯಾಗದ ಫಲವೇ ರೋಗಿ ಬೇಗನೇ ಚೇತರಿಸಿಕೊಂಡು ಗುಣಮುಖನಾಗಿ ಮನೆಗೆ ತೆರಳುವುದು. 

ಮೇ ೧೨ ಅನ್ನು ಅಂತರಾಷ್ಟ್ರೀಯ ದಾದಿಯರ ದಿನ ( International Nurses Day) ಎಂದು ಕರೆಯುತ್ತಾರೆ. ತನ್ನ ಶ್ರೀಮಂತಿಕೆ, ಸುಖದ ಜೀವನವನ್ನು ತ್ಯಜಿಸಿ ಜೀವನ ಪರ್ಯಂತ ಅಶಕ್ತರ, ಯುದ್ಧ ಗಾಯಾಳುಗಳ, ರೋಗಿಗಳ ಸೇವೆ ಮಾಡಿದ ಇಟಲಿಯ ಫ್ಲೋರೆನ್ಸ್ ನೈಟಿಂಗೇಲ್ ಎಂಬ ಧೀಮಂತ ಮಹಿಳೆಯ ಜನ್ಮ ದಿನವನ್ನೇ ನಾವಿಂದು ದಾದಿಯರ ದಿನ ಎಂದು ಆಚರಿಸುತ್ತೇವೆ. ನೈಟಿಂಗೇಲ್ ಅವರನ್ನು ಜನರು ‘ದೀಪದ ಮಹಿಳೆ' ಎಂದು ಕರೆಯುತ್ತಿದ್ದರು. ಅವರು ನಡು ರಾತ್ರಿಯಲ್ಲೂ ರೋಗಿಗಳನ್ನು ನೋಡಲು ಕೈಯಲ್ಲಿ ದೀಪವನ್ನು ಹಿಡಿದುಕೊಂಡು ಹೋಗುತ್ತಿದ್ದರಂತೆ. ಆ ಕಾರಣದಿಂದ ಅವರಿಗೆ ಈ ಹೆಸರು ಬಂತು. (ಫ್ಲಾರೆನ್ಸ್ ನೈಟಿಂಗೇಲ್ ಬಗ್ಗೆ ಅಧಿಕ ಮಾಹಿತಿಗಾಗಿ ಕೆಲವು ತಿಂಗಳ ಹಿಂದಿನ ಸಂಪದದ ಬರಹವನ್ನು ಗಮನಿಸಬಹುದು) 

ದಾದಿಯರ ಪ್ರಾಮುಖ್ಯತೆಯು ಇವರಿಂದಾಗಿಯೇ ಮುನ್ನಲೆಗೆ ಬಂತು. ಈಗಿನ ಪ್ರಸ್ತುತ ಕೋವಿಡ್ ಸಮಯದಲ್ಲಿ ಇವರ ಅಗತ್ಯತೆ ಬಹಳ ಹೆಚ್ಚಾಗಿದೆ. ಕಳೆದ ವರ್ಷ ನಾವು ಗಮನಿಸಿದಂತೆ ತಿಂಗಳು ಗಟ್ಟಲೇ ಮನೆಗೆ ಹೋಗದೇ, ತಮ್ಮ ಪುಟ್ಟ ಪುಟ್ಟ ಮಕ್ಕಳನ್ನು ಬೇರೆಯವರಿಗೆ ಒಪ್ಪಿಸಿ, ಮನಸ್ಸನ್ನು ಗಟ್ಟಿ ಮಾಡಿ ಆಹೋರಾತ್ರಿ ಆಸ್ಪತ್ರೆಗಳಲ್ಲಿ ಅಥವಾ ಕೋವಿಡ್ ಸೆಂಟರ್ ಗಳಲ್ಲಿ ಪಿ ಪಿ. ಇ  ಕಿಟ್ ಧರಿಸಿ ದುಡಿಯುತ್ತಿರುವ ಇವರದ್ದು ಬಹಳ ದೊಡ್ಡ ಸೇವೆ. ಪಿ ಪಿ ಇ ಕಿಟ್ ಹಾಕಿ ಕೆಲಸ ಮಾಡುವ ಪರಿಸ್ಥಿತಿ ಶತ್ರುವಿಗೂ ಬೇಡ. ಅದನ್ನು ಧರಿಸಿದ ಬಳಿಕ ಶೌಚಕ್ಕೂ ಹೋಗಲಾಗದು. ಅದಕ್ಕಾಗಿ ಇವರು ಆಹಾರ ಕಮ್ಮಿ ತಿನ್ನುತ್ತಾರೆ. ನೀರು ಕಮ್ಮಿ ಕುಡಿಯುತ್ತಾರೆ. ಎರಡನೇ ಅಲೆ ಬಂದಿರುವ ಈಗಿನ ಸಮಯವಂತೂ  ಇವರದ್ದು ಬಹಳ ಯಾತನಾಮಯ ಸನ್ನಿವೇಶ ಎಂದರೆ ತಪ್ಪಾಗದು. 

ಕೊರೋನಾ ರೋಗಿಗಳ ಶುಷ್ರೂಷೆ ಮಾಡಿಕೊಂಡು ತಮಗೆ ರೋಗ ಬರದಂತೆಯೂ ದಾದಿಗಳು ಎಚ್ಚರಿಕೆ ವಹಿಸಿಕೊಳ್ಳಬೇಕಾಗಿದೆ. ಹಲವಾರು ಮಂದಿ ದಾದಿಯರಿಗೆ ಕೊರೋನಾ ಸೋಂಕು ತಗುಲಿದ್ದೂ ಇದೆ. ಒಂದು ವೇಳೆ ಆಸ್ಪತ್ರೆಯಲ್ಲಿ ದಾದಿಯರೇ ಇಲ್ಲದೇ ಹೋದರೆ ನಮ್ಮ ರೋಗಿಗಳ ಪರಿಸ್ಥಿತಿ ಏನಾಗಬಹುದು? ಯೋಚನೆ ಮಾಡುವಾಗಲೇ ಹೆದರಿಕೆಯಾಗುತ್ತದೆ. ಬಹುತೇಕ ದಾದಿಯರು ತಮ್ಮ ರೋಗಿಗಳನ್ನು ಮಕ್ಕಳಂತೆ, ಸಹೋದರ-ಸಹೋದರಿಯರಂತೆ ನೋಡಿಕೊಳ್ಳುತ್ತಾರೆ. ವಾತ್ಸಲ್ಯದ ಮಾತೆಯಾಗಿರುತ್ತಾರೆ.

ಈ ದಾದಿಯರ ಕೆಲಸ ಕೇವಲ ಆಸ್ಪತ್ರೆಗೆ ಸೀಮಿತವಲ್ಲ. ಸುಮಾರು ಹನ್ನೆರಡು ಗಂಟೆಗಳ ಕೆಲಸ (ದಿನ ಅಥವಾ ರಾತ್ರಿ) ಮುಗಿಸಿ ಮನೆಗೆ ಹೋಗಿ ಮಲಗಲು ಸಾಧ್ಯವೇ? ತಮ್ಮನ್ನು ಶುಚಿಗೊಳಿಸಿ, ತಮ್ಮ ಬಟ್ಟೆ ಬರೆಗಳನ್ನು ಒಗೆಯಲು ಹಾಕಿ ನಂತರ ಆರಾಮ ತೆಗೆದುಕೊಳ್ಳಬೇಕಾಗುತ್ತದೆ. ಮನೆಯವರಿಗೆ ತಮ್ಮಿಂದ ಯಾವುದೇ ಸೋಂಕು ಹರಡದಂತೆಯೂ ನೋಡಿಕೊಳ್ಳಬೇಕಾಗುತ್ತದೆ. ಪುಟ್ಟ ಪುಟ್ಟ ಮಕ್ಕಳಿದ್ದರೂ ಮನಸ್ಸಿನಲ್ಲಿ ಅವರನ್ನು ಮುದ್ದಾಡಿಸಬೇಕೆಂದು ಆಸೆ ಇದ್ದರೂ ಅದನ್ನು ಅದುಮಿಟ್ಟುಕೊಳ್ಳಬೇಕಾಗುತ್ತದೆ. ಇದೇ ದಾದಿಯರ ಜಿಂದಗಿ.

ನಾವು ಸಮಾಜ ಅವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ದಾದಿಯವರಿಗೆ ಬಹಳವೇನೂ ಸಂಬಳ ಸಿಗುವುದಿಲ್ಲ. ಸಿಗುವ ಸಂಬಳಕ್ಕೆ ದಿನವಿಡೀ ಅಥವಾ ವಾರವಿಡೀ ದುಡಿಯುವ ಅಗತ್ಯವೂ ಅವರಿಗೆ ಇರುವುದಿಲ್ಲ. ಆದರೆ ಅವರು ಆ ನರ್ಸ್ ಅಥವಾ ಶುಷ್ರೂಕಿಯ ಬಿಳಿ ಸಮವಸ್ತ್ರ ಹಾಕಿ ದುಡಿಯುವಾಗ ಅವರಿಗೆ ಯಾವುದರ ಪರಿವೆಯೂ ಇರುವುದಿಲ್ಲ. ಬಹುತೇಕ ಎಲ್ಲರೂ (ಒಂದೆರಡು ಅಪವಾದ ಇರಲೂ ಬಹುದು) ರೋಗಿಯ ಚೇತರಿಕೆಯನ್ನೇ ಬಯಸುತ್ತಾರೆ ಮತ್ತು ಮನಪೂರ್ತಿಯಾಗಿ ಕೆಲಸ ಮಾಡುತ್ತಾರೆ. ಬಹಳಷ್ಟು ಮಂದಿ ಇಂತಹ ದಾದಿಯರ ಸೇವೆಯಿಂದ ಹಾಗೂ ಧೈರ್ಯ ತುಂಬುವ ಮಾತುಗಳಿಂದಲೇ ಗುಣಮುಖರಾಗುತ್ತಾರೆ. ಮನಸ್ಸನ್ನು ಗಟ್ಟಿ ಮಾಡಿಕೊಳ್ಳುತ್ತಾರೆ. ಹಲವಾರು ಮಂದಿ ಗಂಡಸರೂ ದಾದಿಯರಂತೆ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಅವರ ಸೇವೆಯನ್ನೂ ಮರೆಯುವಂತಿಲ್ಲ.

ಈ ದಾದಿಯರ ದಿನದ ಸಂದರ್ಭದಲ್ಲಿ ಹಾಗೂ ಕೊರೋನಾ ಸಾಂಕ್ರಾಮಿಕ ರೋಗ ಎಲ್ಲೆಡೆ ಹರಡಿರುವ ಸಂದರ್ಭದಲ್ಲಿ ವಾರಿಯರ್ (ಯೋಧ) ರೀತಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ದಾದಿಯರಿಗೆ ದೊಡ್ಡ ನಮಸ್ಕಾರ ಹೇಳುವ. ಅಲ್ಲವೇ?

ಚಿತ್ರ: ಅಂತರ್ಜಾಲ ತಾಣ