ಸೇವೆ ಎಂದರೇನು? ಸ್ವಾಮಿ ವಿವೇಕಾನಂದರ ಚಿಂತನೆ
ಜನವರಿ ೧೨ ಸ್ವಾಮಿ ವಿವೇಕಾನಂದರ ಜಯಂತಿ ದಿನ. ಗೊಂದಲದ ಬೀಡಾಗಿರುವ ನಮ್ಮ ಬದುಕಿನಲ್ಲಿ ಆದರ್ಶಪ್ರಾಯ ವ್ಯಕ್ತಿ ಯಾರೆಂಬ ಪ್ರಶ್ನೆಗೆ ಸಮರ್ಥ ಉತ್ತರವಾಗಿ ನಿಲ್ಲುವವರು ಸ್ವಾಮಿ ವಿವೇಕಾನಂದ. ಅವರ ಬರಹಗಳನ್ನು ಓದುತ್ತ, ಅವರ ಚಿಂತನೆಗಳನ್ನು ಮಥಿಸುತ್ತ ಹೋದಂತೆ ಈ ಮಾತು ಮತ್ತೆಮತ್ತೆ ಮನದಟ್ಟಾಗುತ್ತದೆ.
ಸ್ವಾಮಿ ವಿವೇಕಾನಂದರು ಇಂದಿನ ಕಾಲಮಾನದಲ್ಲಿ ಯಾಕೆ ಮುಖ್ಯವಾಗುತ್ತಾರೆ ಎಂದರೆ ಅವರು ನುಡಿದಂತೆ ನಡೆದವರು. ನುಡಿ ಒಂದು, ನಡೆ ಇನ್ನೊಂದು ಎಂಬಂತೆ ಜೀವಿಸುವ ಬಹುಪಾಲು ಜನರಿಗೆ ಹೋಲಿಸಿದಾಗ, ನುಡಿದಂತೆ ನಡೆದ ಸ್ವಾಮಿ ವಿವೇಕಾನಂದರದ್ದು ಪ್ರತಿಯೊಬ್ಬರನ್ನೂ ಪ್ರಭಾವಿಸಬಲ್ಲ ಪ್ರಖರ ವ್ಯಕ್ತಿತ್ವ.
ತ್ಯಾಗ ಮತ್ತು ಸೇವೆ ಬಗ್ಗೆ ಅವರ ವ್ಯಾಖ್ಯಾನ, ಚಿಂತನೆ ಹಾಗೂ ವಿವರಣೆ ನಮ್ಮ ಕಣ್ಣು ತೆರೆಸುವಂತಿದೆ. "ತ್ಯಾಗ ಮತ್ತು ಸೇವೆ ಭಾರತದ ಅವಳಿ ಆದರ್ಶಗಳು” ಎಂದಿರುವ ಸ್ವಾಮಿ ವಿವೇಕಾನಂದರು, “ಅವನ್ನು ನಾವು ಪಾಲಿಸಿದಷ್ಟೂ ರಾಷ್ಟ್ರದ ಉತ್ಥಾನದ ಸೋಪಾನಗಳು ಸುರಕ್ಷಿತವಾಗುತ್ತವೆ” ಎಂದು ಘೋಷಿಸಿದ್ದಾರೆ.
ಕಿಂಚಿತ್ ಸೇವೆ ಮಾಡುವವರು ತಮ್ಮ ಸೇವೆಯ ಬಗ್ಗೆ ಸುದ್ದಿ ಮಾಡಲಿಕ್ಕಾಗಿ, ಪತ್ರಿಕೆಗಳು, ರೇಡಿಯೋ ಮತ್ತು ಟಿವಿ ಚಾನೆಲುಗಳು ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುವ ಪರಿ ಕಂಡಿದ್ದೀರಾ? ಹತ್ತು ಶಾಲಾ ಮಕ್ಕಳಿಗೆ ತಲಾ ಒಂದೆರಡು ನೋಟ್ ಪುಸ್ತಕ ಕೊಟ್ಟು ಹತ್ತಾರು ಪತ್ರಿಕೆಗಳಲ್ಲಿ ಫೋಟೋ ಹಾಕಿಸಿಕೊಳ್ಳುವುದು, ದೇವಸ್ಥಾನಕ್ಕೆ ಪುಟ್ಟ ಕನ್ನಡಿಯೊಂದನ್ನು ಕೊಟ್ಟು “ಇದು ಇಂಥವರ ಕೊಡುಗೆ” ಎಂದು ಅಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆಸಿಕೊಳ್ಳುವುದು - ಇವೆಲ್ಲ ಸೇವೇ ಮಾಡುವವರ ಪ್ರಚಾರದ ಗೀಳನ್ನು ಜಗಜ್ಜಾಹೀರಾಗಿಸುತ್ತವೆ, ಅಲ್ಲವೇ?
ಈ ಹಿನ್ನೆಲೆಯಲ್ಲಿ, ಸೇವೆಯ ಬಗ್ಗೆ ಸ್ವಾಮಿ ವಿವೇಕಾನಂದರ ಒಳನೋಟ ನಮಗೆ ಸ್ಪಷ್ಟತೆ ಒದಗಿಸುತ್ತದೆ: “ಸೇವೆಯು ಭಾವುಕತೆಯಾಗದೆ ಜೀವನವಿಧಾನವಾಗಬೇಕು. ಸೇವೆ ಮಾಡುವವರು ಸೇವೆ ಪಡೆಯುವವರಿಗೆ ಋಣಿಯಾಗಿರಬೇಕು.”
ಸಮಾಜಕ್ಕೆ ಸೇವೆ ಮಾಡುವ ಬಗ್ಗೆ ಸ್ವಾಮಿ ವಿವೇಕಾನಂದರ ಚಿಂತನೆಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂದರೆ, ಅಮೇರಿಕಾದ ಆಗರ್ಭ ಶ್ರೀಮಂತ ಜಾನ್ ಡಿ. ರಾಕ್ಫೆಲರ್ ಸಹ ಅದರಿಂದ ಪ್ರಭಾವಿತರಾಗಿ, ತಮ್ಮ ಸೇವಾಕಾರ್ಯದ ವೈಖರಿಯನ್ನೇ ಬದಲಾಯಿಸಿದರು. ರಾಕ್ಫೆಲರ್ ಫೌಂಡೇಷನ್ ಮೂಲಕ ಇಂದಿಗೂ ಆ ಸೇವಾಕಾರ್ಯಗಳು ಮುಂದುವರಿದಿರುವುದು ಚರಿತ್ರೆ.
ಸೇವೆ ಮಾಡುವವರು ಮತ್ತು ಮಾಡದಿರುವವರ ಬಗ್ಗೆ ಸ್ವಾಮಿ ವಿವೇಕಾನಂದರ ಎದೆಸೀಳುವ ಮಾತುಗಳನ್ನು ನಾವೆಂದೂ ಮರೆಯಬಾರದು: "ಯಾರು ಇತರರಿಗಾಗಿ ಬದುಕುತ್ತಾರೆಯೋ ಅವರದ್ದೇ ಜೀವನ, ಉಳಿದವರು ಬದುಕಿದ್ದೂ ಸತ್ತಂತೆ …"
ಕೇವಲ ೩೯ ವರುಷಗಳ (೧೨.೦೧.೧೮೬೩ - ೦೪.೦೭.೧೯೦೨) ತಮ್ಮ ಬದುಕಿನಲ್ಲಿ ಈ ನೇರನುಡಿಗೆ ಜೀವಂತ ಪುರಾವೆಯಾಗಿ ಕ್ಷಣಕ್ಷಣವೂ ಬದುಕಿದವರು ಸ್ವಾಮಿ ವಿವೇಕಾನಂದ. ಇತರರ ಸೇವೆಗಾಗಿ, ಮಾನವ ಜನಾಂಗದ ಒಳಿತಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟರು. ೧೮೯೭ರಲ್ಲಿ ರಾಮಕೃಷ್ಣ ಮಠವನ್ನು ಸ್ಥಾಪಿಸಿ, ರಾಷ್ಟ್ರದ ಉತ್ಥಾನಕ್ಕಾಗಿ ಧ್ಯೇಯನಿಷ್ಠ ಸನ್ಯಾಸಿಗಳ ತಂಡ ಕಟ್ಟಿ ಮುನ್ನಡೆಸಿದರು.
“ನೀನು ಅಂತರಂಗದಿಂದ ಬಹಿರಂಗಕ್ಕೆ ಬೆಳೆಯಬೇಕು. ನಿನಗೆ ಯಾರೂ ಕಲಿಸಲು ಸಾಧ್ಯವಿಲ್ಲ, ಯಾರೂ ನಿನ್ನನ್ನು ಅಧ್ಯಾತ್ಮಿಕ ವ್ಯಕ್ತ್ಯಿಯಾಗಿ ರೂಪಿಸಲು ಸಾಧ್ಯವಿಲ್ಲ. ನಿನ್ನ ಆತ್ಮದ ಹೊರತಾಗಿ ನಿನಗೆ ಬೇರೆ ಯಾವ ಗುರುವೂ ಇಲ್ಲ” ಎಂಬ ಸ್ವಾಮಿ ವಿವೇಕಾನಂದರ ವಾಣಿ, ಬದುಕಿನಲ್ಲಿ ನಮ್ಮ ವಿಕಾಸಕ್ಕೆ ದಾರಿದೀಪವಾಗಲಿ.