ಸೈಕಲಿನಿಂದ ಚಲಿಸುವ ನೀರೆತ್ತುವ ಪಂಪ್

ಸೈಕಲಿನಿಂದ ಚಲಿಸುವ ನೀರೆತ್ತುವ ಪಂಪ್

ಒಂದೆಕ್ರೆ ಹೊಲದಲ್ಲಿ ಭತ್ತದ ಸಸಿಗಳು ಒಣಗುತ್ತಿವೆ. ನೀರೆರೆಯಲು ವಿದ್ಯುತ್ ಮೋಟರೂ ಇಲ್ಲ, ಡೀಸಿಲ್ ಎಂಜಿನೂ ಇಲ್ಲ. ಒಡಹುಟ್ಟಿದವನನ್ನು ವಿದ್ಯುತ್ ಮೋಟರಿಗಾಗಿ ವಿನಂತಿಸಿದರೆ ಅವನಿಂದಲೂ ಅದನ್ನು ಕೊಡಲು ನಿರಾಕರಣೆ.

ಆದರೆ ಆಂಧ್ರಪ್ರದೇಶದ ಅದಿಲಾಬಾದ್ ಜಿಲ್ಲೆಯ ಉತನೂರು ಮಂಡಲದ ವಿಕ್ರಮ್ ರಾತೋರ್ ಹತಾಶನಾಗಲಿಲ್ಲ. ಹೊಲದ ಹತ್ತಿರ ತೊರೆಯೊಂದು ಹರಿಯುತ್ತಿತ್ತು. ಅದರಿಂದ ಹೇಗಾದರೂ ಮಾಡಿ ನೀರೆತ್ತಬೇಕೆಂದು ನಿರ್ಧರಿಸಿದ. ಅಲೆಮಾರಿ ಬಂಜಾರ ಸಮುದಾಯದ ವಿಕ್ರಮ್ ಸೈಕಲುಗಳು ಹಾಗೂ ಸಣ್ಣಪುಟ್ಟ ಯಂತ್ರಗಳನ್ನು ರಿಪೇರಿ ಮಾಡಿ ಒಂದಷ್ಟು ಹಣ ಗಳಿಸುತ್ತಿದ್ದ. ಈ ಅನುಭವದಿಂದ ವಿಕ್ರಮನಿಗೊಂದು ಐಡಿಯಾ ಮಿಂಚಿತು - ಸೈಕಲಿನ ಶಕ್ತಿಯಿಂದಲೇ ನೀರೆತ್ತುವ ಐಡಿಯಾ!

ಪ್ರಯೋಗ ಮಾಡಿ ನೋಡಬೇಕೆಂದರ ವಿಕ್ರಮನ ಬಳಿ ಸೈಕಲೂ ಇರಲಿಲ್ಲ. ತನ್ನ ನಾಲ್ಕು ಎಕ್ರೆ ಹೊಲದಲ್ಲಿ ಹತ್ತಿ ಬೆಳೆಯುತ್ತಿದ್ದ ವಿಕ್ರಮ್ ಈ ಬಾರಿ ಒಂದೆಕ್ರೆಯಲ್ಲಿ ಭತ್ತ ಬೆಳೆದಿದ್ದ. ಭತ್ತದ ಸಸಿಗಳನ್ನು ಸಾಯಲು ಬಿಡೋದೇ? ಅದಾಗದು ಎಂದು ನಿರ್ಧರಿಸಿದ ವಿಕ್ರಮ್. ಮನೆಯಲ್ಲಿ ಊಟಕ್ಕಾಗಿ ಶೇಖರಿಸಿಟ್ಟಿದ್ದ ಸಣ್ಣಜೋಳ ಮಾರಿ, ಹಳೆಯ ಸೈಕಲೊಂದನ್ನು ತಂದೇ ಬಿಟ್ಟ.

ಆಗಿನಿಂದ ಶುರುವಾಯಿತು ಸೈಕಲಿನ ಶೈಕ್ತಿಯಿಂದ ನೀರೆತ್ತುವ ಅವನ ಗೀಳು. ವಿದ್ಯುತ್ ಮೋಟರ್ ಹೇಗೆ ನೀರೆತ್ತುತ್ತದೆ ಎಂದು ಗಮನಿಸಿದ. ಅದರ ಫ್ಯಾನ್ ತಿರುಗಿದಂತೆ ನೀರು ಮೇಲೇರುವುದನ್ನು ಕಂಡ. ಅದೇ ರೀತಿಯಲ್ಲಿ ಸೈಕಲಿನಿಂದ ಫ್ಯಾನ್ ತಿರುಗಿಸುವ ಕಲ್ಪನೆ ಮೂಡಿತು. ಊರಿನ ಎಣ್ಣೆ ಮಿಲ್ಲಿನಲ್ಲಿ ಕೆಲವು ಹಳೆಯ ಗೇರ್-ಚಕ್ರಗಳು ಇದ್ದವು. ಮಾಲೀಕನನ್ನು ವಿನಂತಿಸಿ ಅವನ್ನು ತಂದ. ಗುಜರಿ ಅಂಗಡಿಯಿಂದ ಇನ್ನೂ ಕೆಲವು ಯಂತ್ರಭಾಗಗಳನ್ನು ಖರೀಸಿಸಿದ. ಒಂದು-ಎಚ್.ಪಿ. ಮೋಟರನ್ನೂ ಖರೀಸಿಸಿದ.

ವಿಕ್ರಮನ ವಿನೂತನ ಪಂಪ್ ರಚನೆಗೆ ರಂಗ ಸಜ್ಜಾಯಿತು. ಇವನ್ನೆಲ್ಲ ವ್ಯವಸ್ಥಿತವಾಗಿ ಜೋಡಿಸಿದ. ಹಳೆಯ ಸೈಕಲಿನ ಹಿಂಚಕ್ರದ ಟೈರ್-ಟ್ಯೂಬ್ ಕಿತ್ತು ತೆಗೆದ. ಅನಂತರ ಹಿಂಚಕ್ರದ ರಿಮ್ ಮೂಲಕ ಹಗ್ಗ ಹಾಯಿಸಿ ಗೇರ್-ಚಕ್ರಗಳಿಗೆ ತಗಲಿಸಿದ. ಗೇರ್-ಚಕ್ರಗಳನ್ನು ಫ್ಯಾನಿಗೆ ಜೋಡಿಸಿದ. ಅದಾಗಿ, ವಿಕ್ರಮ್ ಸೈಕಲಿನ ಪೆಡಲ್ ತುಳಿದಾಗ ಫ್ಯಾನ್ ತಿರುಗಿ ಪಂಪ್ ಚಾಲೂ ಆಯಿತು. ಅಗೋ, ಅವನ ಹೊಲಕ್ಕೆ ಹರಿದು ಬಂತು ತೊರೆಯ ನೀರು! ಆ ಭತ್ತದ ಸಸಿಗಳು ಚೇತರಿಸಿಕೊಂಡಾಗ ವಿಕ್ರಮನ ಸಂತೋಷ ಮುಗಿಲು ಮುಟ್ಟಿತು.

ಸೈಕಲ್, ರಿಮ್, ಬೆಲ್ಟ್-ರಾಟಿ, ಇಂಪೆಲ್ಲರ್, ನೀರು ಸೆಳೆಯುವ ಪೈಪ್ ಮತ್ತು ನೀರು ಬಿಡುವ ಪೈಪ್ - ಇಷ್ಟಿದ್ದರೆ ವಿಕ್ರಮನ ನೀರೆತ್ತುವ ಸೆಂಟ್ರಿಫ್ಯುಗಲ್ ಪಂಪ್ ತಯಾರಿಸಬಹುದು.  ಸೈಕಲನ್ನು ನಿಲ್ಲಿಸಿ, ಪೆಡಲ್ ಮಾಡಿದಂತೆ ಇದು ಕೆಳಮಟ್ಟದಿಂದ ನೀರೆತ್ತುತ್ತದೆ. ಸೈಕಲಿನ ಹಿಂಚಕ್ರದ ಟಯರ್ ಕಿತ್ತು ತೆಗೆದು, ರಿಮ್ಮನ್ನು ಸಣ್ಣವ್ಯಾಸದ ರಾಟಿಗೆ ಜೋಡಿಸಬೇಕು. ಇದರ ಷಾಫ್ಟ್ ಇನ್ನೊಂದು ರಿಮ್‌ಗೆ ಜೋಡಣೆ (ಎರಡನೇ ಹಂತದ ವೇಗೋತ್ಕರ್ಷಕ್ಕಾಗಿ). ಈ ಷಾಫ್ಟಿಗೆ ಫ್ಲೈವೀಲ್ ಅಳವಡಿಸಬೇಕು. ಅಂತಿಮ ಹಂತದ ಷಾಫ್ಟನ್ನು ಇಂಪೆಲ್ಲರಿಗೆ ಜೋಡಿಸಬೇಕು. ಅತಿವೇಗವಾಗಿ ತಿರುಗುವ ಇಂಪೆಲ್ಲರ್ ಕೆಳಮಟ್ಟದಿಂದ ಮೇಲ್ಮಟ್ಟಕ್ಕೆ ನೀರನ್ನು ಎತ್ತಿ, ಪೈಪಿನಲ್ಲಿ ತಳ್ಳುತ್ತದೆ. ಈ ಪಂಪ್  ಬಳಸಿ ಬಾವಿ, ಕೆರೆ, ತೊರೆ ಅಥವಾ ನದಿಯಿಂದ ಹೊಲಗಳಿಗೆ ನೀರೆತ್ತಬಹುದು.

ವಿಕ್ರಮನ ಸೆಂಟ್ರಿಫ್ಯುಗಲ್ ಪಂಪಿಗೆ ವಿದ್ಯುತ್ ಮೋಟರ್ ಅಥವಾ ಡೀಸಿಲ್ ಎಂಜಿನ್ ಬೇಡ. ಹಾಗಾಗಿ ಬಡರೈತರಿಗೆ ಇದು ಸೂಕ್ತ. ಹೊಗೆಯುಗುಳದ ಇದು ಪರಿಸರಸ್ನೇಹಿ ಪಂಪ್. ವೆಚ್ಚವಂತೂ ತೀರಾ ಕಡಿಮೆ. ವಿಕ್ರಮ್‌ಗೆ ತಗಲಿದ್ದು ಕೇವಲ ಮೂರು ಸಾವಿರ ರೂಪಾಯಿ ವೆಚ್ಚ. ಇದರ ದುರಸ್ತಿ ವಿರಳ ಮತ್ತು ಸರಳ. ಒಂದೆಡೆಯಿಂದ ಇನ್ನೊಂದೆಡೆಗೆ ಇದನ್ನು ಸಾಗಿಸುವುದೂ ಸುಲಭ.

ಇಂತಹ ಸರಳ ಹಾಗೂ ಉಪಯುಕ್ತ ಸಾಧನ ರೂಪಿಸಿದ ವಿಕ್ರಮ್ ರಾತೋರ್ ಗೆ ಕಹಿ ಅನುಭವಗಳೂ ಆಗಿವೆ. ಕ್ರಮೇಣ ಅದಿಲಾಬಾದ್ ಜಿಲ್ಲೆಯಲ್ಲಿ ವಿಕ್ರಮನ ಸೈಕಲ್-ಪಂಪ್ ದೊಡ್ಡ ಸುದ್ದಿಯಾಯಿತು. ಹಲವರು ಬಂದು ಕಣ್ಣಾರೆ ಕಂಡರು. ಒಮ್ಮೆ ಹೈದರಾಬಾದಿನಿಂದ ಕೆಲವರು ಬಂದರು. "ನಿನಗೆ ದೊಡ್ಡ ಬಹುಮಾನ ಕೊಡ್ತೇವೆ. ನಮ್ಮೊಂದಿಗೆ ಬಾ" ಎಂದು ಆಮಿಷ ತೋರಿಸಿ ವಿಕ್ರಮನನ್ನು ಕರೆದೊಯ್ದರು. ಅಲ್ಲಿ ಅವನನ್ನೊಂದು ಕೋಣೆಯಲ್ಲಿ ಆರು ದಿನ ಕೂಡಿ ಹಾಕಿ, ಸರಿಯಾಗಿ ಆಹಾರವನ್ನೂ ಕೊಡಲಿಲ್ಲ. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ವಿಕ್ರಮ್ ಹಳ್ಳಿಗೆ ಹಿಂತಿರುಗಿದ.

“ಪೇಟೆಂಟಿಗೆ ಅರ್ಜಿ ಹಾಕು" ಎಂದು ವಿಕ್ರಮನಿಗೆ ಯಾರೋ ಸಲಹೆ ಕೊಟ್ಟರು. ಅದೆಲ್ಲ ಈ ಬಡರೈತನಿಗೇನು ಗೊತ್ತು? ಅವನು ಜಿಲ್ಲಾಧಿಕಾರಿಗೆ ಅರ್ಜಿ ಕೊಟ್ಟ. ಅವರು ಮೇಲಧಿಕಾರಿಗೆ ಪತ್ರ ಬರೆದರು. ಆದರೆ ಮುಂದೇನೂ ಆಗಲಿಲ್ಲ. ಅಂತಿಮವಾಗಿ, ಅಹ್ಮದಾಬಾದಿನ ನ್ಯಾಷನಲ್ ಇನ್ನೋವೇಷನ್ ಫೌಂಡೇಷನ್ ಈ ಆವಿಷ್ಕಾರದ ಪೇಟೆಂಟಿಗೆ ೨೦೦೪ರಲ್ಲಿ ಅರ್ಜಿ ಸಲ್ಲಿಸಿತು.
ವಿಕ್ರಮ್ ಅವರ ಈ ಅನುಶೋಧನೆಗೆ ೨೦೦೫ರಲ್ಲಿ ಜರಗಿದ ೩ನೇ ರಾಷ್ಟ್ರೀಯ ತಳಮಟ್ಟದ ಅನುಶೋಧನೆಗಳು ಮತ್ತು ಪಾರಂಪರಿಕ ಜ್ನಾನದ ಸ್ಪರ್ಧೆಯಲ್ಲಿ ಪುರಸ್ಕಾರ ನೀಡಲಾಯಿತು.

ವಿಕ್ರಮ್ ರಾತೋರ್ ರೂಪಿಸಿದ ಈ ಸೈಕಲ್-ಪಂಪನ್ನು ಸರಕಾರಿ ಅಧಿಕಾರಿಗಳು ಗುರುತಿಸಿದ್ದಾರೆ. ಆತನ ಜಿಲ್ಲೆ ಅದಿಲಾಬಾದ್ ಬರಪೀಡಿತ ಜಿಲ್ಲೆ. ಅಲ್ಲಿ ವಾರ್ಷಿಕ ಮಳೆ ಕೇವಲ ೨೦ ಇಂಚು. ಹಾಗಾಗಿ ಆ ಪ್ರದೇಶಕ್ಕೆ ಈ ಪಂಪ್ ಅತ್ಯಂತ ಉಪಯುಕ್ತ. ಇದರ ಬಗ್ಗೆ ತಿಳಿದ ಅಲ್ಲಿನ ಉತನೂರಿನ ಸಮಗ್ರ ಬುಡಕಟ್ಟು ಅಭಿವೃದ್ಧಿ ಏಜೆನ್ಸಿಯ ಅಧಿಕಾರಿಯು ವಿಕ್ರಮನಿಗೆ ಆರ್ಥಿಕ ನೆರವು ನೀಡಿದ್ದಾರೆ - ಪಂಪಿನ ವಿನ್ಯಾಸ ಸುಧಾರಿಸಲಿಕ್ಕಾಗಿ. ಅದನ್ನು ಬಳಸಿ, ಪಂಪಿನ ಸುಧಾರಿತ ಮಾದರಿ ರಚಿಸಿದ್ದಾನೆ ವಿಕ್ರಮ್. ಇದು ಮೂರು ಎಚ್.ಪಿ. ವಿದ್ಯುತ್ ಮೋಟರ್ ಮೇಲೆತ್ತುವಷ್ಟೇ ನೀರನ್ನು ಮೇಲೆತ್ತುತ್ತದೆ.

ವಿಕ್ರಮನ ಸೈಕಲ್-ಪಂಪನ್ನು ಹಿಟ್ಟಿನ ಮಿಲ್ ಚಲಾಯಿಸಲಿಕ್ಕೂ ಬಳಸಬಹುದು. ಹಲವಾರು ಹಿನ್ನಡೆಗಳನ್ನು ಪರಿಹರಿಸಿ, ಅಂತಹ ಮಾದರಿಯೊಂದನ್ನು ರಚಿಸಿದ್ದಾರೆ ವಿಕ್ರಮ್. ಇದು ಐದಾರು ನಿಮಿಷಗಳಲ್ಲಿ ಒಂದು ಕಿಲೋಗ್ರಾಮ್ ಧಾನ್ಯವನ್ನು ಹುಡಿ ಮಾಡುತ್ತದೆ. ಆತನ ವಿಳಾಸ: ಜೈತರಾಮ್ ತಾಂಡ, ನರಸಾಪುರ, ಉತನೂರು, ಅದಿಲಾಬಾದ್ ಜಿಲ್ಲೆ, ಆಂಧ್ರಪ್ರದೇಶ.

ವಿಕ್ರಮ್ ರಾತೋರ್ ಶಾಲೆಯಲ್ಲಿ ಕಲಿತದ್ದು ಐದನೇ ಕ್ಲಾಸಿನ ತನಕ. ಪ್ರತಿಭೆ ಪಟ್ಟಣಗಳಿಗೆ ಮಾತ್ರ ಸೀಮಿತವಲ್ಲ ಎಂಬುದಕ್ಕೊಂದು ಪ್ರಬಲ ನಿದರ್ಶನ ವಿಕ್ರಮ್. ನಮ್ಮ ದೇಶದ ಮೂಲೆಮೂಲೆಯ ಹಳ್ಳಿಗಳಲ್ಲಿ ಇಂತಹ ಪ್ರತಿಭಾವಂತರು ಎಷ್ಟಿದ್ದಾರೋ! ಇನ್ನಾದರೂ ಅವರನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸಕ್ಕೆ ಕೈಜೋಡಿಸೋಣ.
ಫೋಟೋ ೧: ವಿಕ್ರಮ್ ರಾತೋರ್
ಫೋಟೋ ೨: ಸೈಕಲಿನಿಂದ ಚಲಿಸುವ ನೀರೆತ್ತುವ ಪಂಪ್