ಸೈಕಲ್ ರಿಕ್ಷಾಗೆ ಸೌರಶಕ್ತಿ

ಸೈಕಲ್ ರಿಕ್ಷಾಗೆ ಸೌರಶಕ್ತಿ

ಬರಹ

ಸೈಕಲ್ ರಿಕ್ಷಾಗಳು ನಮ್ಮ ದೇಶದ ರಾಜಧಾನಿಯಲ್ಲೂ ಇವೆ.ಪರಿಸರ ಮಾಲಿನ್ಯ ಉಂಟು ಮಾಡದ ಈ ರಿಕ್ಷಾಗಳು,ಅಗ್ಗದ ಸೇವೆಯನ್ನು ನೀಡಿ ಜನಪ್ರಿಯತೆ ಉಳಿಸಿಕೊಂಡಿವೆ. ಸಾಮಾನ್ಯವಾಗಿ ಇವನ್ನು ಸೈಕಲ್‌ವಾಲಾ ಸೈಕಲ್ ತುಳಿದೇ ನಡೆಸುತ್ತಾನೆ. ಆದರೆ ಏರು ರಸ್ತೆಯಲ್ಲಿ, ರಣ ಬಿಸಿಲಿನಲ್ಲಿ ಸೈಕಲ್ ತುಳಿಯುವುದು ಪ್ರಯಾಸಕರ. ಅಂತಹ ಸಂದರ್ಭದಲ್ಲಿ ಬ್ಯಾಟರಿ ಚಾಲಿತ ಮೋಟಾರನ್ನು ಚಾಲೂ ಮಾಡಿ ಸೈಕಲ್‌ವಾಲಾ ತನ್ನ ಕಷ್ಟವನ್ನು ಕಡಿಮೆ ಮಾಡಬಹುದು.ಗಂಟೆಗೆ ಹದಿನೈದು ಕಿಲೋಮೀಟರ್ ವೇಗದಲ್ಲಿ ಚಲಾಯಿಸಲು.ಒಂದು ಐವತ್ತು ಕಿಲೋಮೀಟರ್ ಓಡಿಸಲು ಬ್ಯಾಟರಿ ಅವಕಾಶ ನೀಡುತ್ತದೆ.ಬ್ಯಾಟರಿ ಚಾರ್ಜ್ ಮಾಡಲು ಸೌರಶಕ್ತಿಯನ್ನು ಬಳಸಲು ತಂತ್ರಜ್ಞಾನವನ್ನು CMERI ಸಂಶೋಧನಾ ಸಂಸ್ಥೆ ಒದಗಿಸಿದೆ. ಸದ್ಯ ಇನ್ನೂರು ಕೇಜಿ ತೂಗುವ ಸೈಕಲ್ ರಿಕ್ಷಾವನ್ನು ಹಗುರಗೊಳಿಸಿ, ಬ್ಯಾಟರಿಯಿಂದ ಅಧಿಕ ಕೆಲಸ ತೆಗೆಯುವ ತಂತ್ರಗಳ ಬಗ್ಗೆ ಸಂಶೋಧಕರು ಗಮನ ಹರಿಸಿದ್ದಾರೆ.
------------------------------------------------------
ಪ್ರಶ್ನೆಗೆ ಉತ್ತರ ಶೋಧಿಸಲು ಸೂಕ್ತ ಜಾಲತಾಣ
ಗೂಗಲ್ ಅಂತರ್ಜಾಲದ ಶೋಧ ಕಾರ್ಯಕ್ಕೆ ಇನ್ನೊಂದು ಹೆಸರಾಗಿಬಿಟ್ಟಿದೆ.ಹೆಚ್ಚು ಕಮ್ಮಿ ಶೇಕಡಾ ಎಪ್ಪತ್ತು ಬಳಕೆದಾರರು ಗೂಗಲ್ ಬಳಸಿ ಅಂತರ್ಜಾಲದ ಶೋಧ ಕೈಗೊಳ್ಳುವುದು ಕಂಡುಬಂದಿದೆ.ಹಿಂದೆ ಈ ಸೇವೆ ಒದಗಿಸಿ ಜನಪ್ರಿಯವಾಗಿದ್ದ ತಾಣ ಆಸ್ಕ್.ಕಾಮ್ ತನ್ನ ಜನಪ್ರಿಯತೆಯಲ್ಲಿ ರಸಾತಳಕ್ಕಿಳಿದಿದೆ.ಈಗದು ತನ್ನ ಮುಖಪುಟವನ್ನು ಬದಲಾಯಿಸಿಕೊಂಡು ತನ್ನ ಇಮೇಜ್ ಬದಲಿಸಿ, ಶೋಧ ಕಾರ್ಯದಲ್ಲಿ ಹೊಸ ನೆಲೆಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಆರ್‍ಅಂಭಿಸಿದೆ. ಪ್ರಶ್ನೆಗಳಿಗೆ ಉತ್ತರ ಅರಸುವವರಿಗೆ ಮೊದಲಿನಿಂದಲೂ www.ask.com ಇಷ್ಟವಾಗಿತ್ತು. ಆ ಅಂಶವನ್ನು ಬಳಸಿ ಜನಪ್ರಿಯವಾಗಲು ತಾಣ ಬಯಸಿದೆ. ಪ್ರಶ್ನೆಗಳಿಗೆ ಉತ್ತರ ಬೇಕಾದರೆ, ಅಸ್ಕ್.ಕಾಂ ತಾಣವೇ ಸೂಕ್ತ ಎಂದು ಜನಮನದಲ್ಲಿ ನೆಲೆನಿಲ್ಲಲು ತಾಣವು ಉದ್ದೇಶಿಸಿದೆ.ಶೋಧ ತಂತ್ರಜ್ಞಾನವನ್ನೂ ಬಳಸಿ, ಕಡಿಮೆ ಸಮಯದಲ್ಲಿ ಶೋಧ ಫಲಿತಾಂಶ ಒದಗಿಸಲು ಅದಕ್ಕೆ ಸಾಧ್ಯವಾಗಿದೆ.
-----------------------------------------------------
ಚೀನಾ:ಬಾಹ್ಯಾಕಾಶ ನಡಿಗೆಯಿಂದ ಬಾಹ್ಯಾಕಾಶ ಪ್ರಯೋಗಾಲಯದತ್ತspace
ಚೀನಾವಿ ಯಶಸ್ವಿಯಾಗಿ ತನ್ನ ಬಾಹ್ಯಾಕಾಶ ಯೋಜನೆಯಲ್ಲಿ ಭಾರೀ ಮುನ್ನಡೆ ಕಂಡಿದೆ. ಮಾನವ ಸಹಿತ ಯಾನ ಯೋಜನೆಯ ಪ್ರಕಾರ, ಬಾಹ್ಯಾಕಾಶಕ್ಕೆ ಯಾನಿಗಳನ್ನು ಕಳುಹಿಸಿದ್ದೇ ಅಲ್ಲದೆ ಅವರು ಬಾಹ್ಯಾಕಾಶದಲ್ಲಿ ನಡಿಗೆಯನ್ನೂ ಯಶಸ್ವಿಯಾಗಿ ಕೈಗೊಂಡರು.ಈ ಇಪ್ಪತ್ತು ನಿಮಿಷದ ನಡಿಗೆಯ ವೇಳೆ ಗಗನಯಾನಿ ಜಾಯ್ ಜಿಗಾಂಗ್ ಅವರು ಚೀನಾ ನಿರ್ಮಿತ ಉಡುಗೆಯನ್ನೇ ಬಳಸಿದ್ದರು. ಒಂದು ವೇಳೆ ಜಿಯಾನ್ ಅವರಿಗೆ ಸಮಸ್ಯೆಯಾದರೆ ರಕ್ಷಿಸಲು ರಶ್ಯನ್ ನಿರ್ಮಿತ ಉಡುಗೆಯನ್ನು ತೊಟ್ಟ ಸಹ ಗಗನಯಾನಿ ಸಿದ್ಧವಾಗಿದ್ದರು. ಆದರೆ ಅಂತಹ ಪ್ರಸಂಗವೇನೂ ಬರಲಿಲ್ಲ.ಇನ್ನು ಚೀನಾವು ಬಾಹ್ಯಾಕಾಶದಲ್ಲಿ ಪ್ರಯೋಗಾಲಯವನ್ನು ಸ್ಥಾಪಿಸುವತ್ತ ತನ್ನ ಗುರಿಯನ್ನಿಟ್ಟಿದೆ.ಇನ್ನೆರಡು ವರ್ಷಗಳಲ್ಲಿ ಈ ಕನಸೂ ನನಸಾಗುವ ಸೂಚನೆಯಿದೆ. ಮೊದಲೆರಡು ಮಾನವ ಯಾನಗಳು ಅಗತ್ಯ ವಸ್ತುಗಳನ್ನು ಗಗನಕ್ಕೆ ಕೊಂಡು ಹೋಗಿ,ಅಲ್ಲಿ ಜತೆಯಾಗಿ ಭೂಮಿಗೆ ಪ್ರದಕ್ಷಿಣೆ ಬರಲು ಆರಂಭಿಸುತ್ತವೆ. ಮೂರನೇಯ ಯಾನ ಮಾನವ ಸಹಿತವಾಗಿದ್ದು,ಬಾಹ್ಯಾಕಾಶ ಪ್ರಯೋಗಶಾಲೆಯಲ್ಲಿ ಉಳಿದು ಪ್ರಯೋಗ ನಡೆಸುವ ಯಾನಿಗಳನ್ನೂ ಕರೆದೊಯ್ಯುತ್ತದೆ.ಇನ್ನೊಂದೆಡೆ ಚೀನಾವು ಚಂದ್ರನ ಮೇಲೆ ತನ್ನ ನೆಲೆ ಸ್ಥಾಪಿಸುವ ಆಸಕ್ತಿಯನ್ನು ಹೊಂದಿದೆ. ಚಂದ್ರನತ್ತ ಮಾನವ ಸಹಿತ ಯಾನಕ್ಕೆ ಅದು ಸಿದ್ಧತೆ ನಡೆಸಿದೆ.ಅಮೆರಿಕಾದಿಂದ ಮೊದಲೇ ಚಂದ್ರನ ಮೇಲೆ ಮಾನವ ಸಹಿತವಾದ ನೆಲೆಯನ್ನು ಸ್ಥಾಪಿಸುವ ಮಹತ್ತ್ವಾಕಾಂಕ್ಷೆ ಚೀನಾದ್ದು.
ಇತ್ತ ಭಾರತವೂ ಚಂದ್ರಯಾನ್ ಉಡ್ಡಯನಕ್ಕೆ ಸಿದ್ಧತೆ ನಡೆಸಿದೆ. ಈ ತಿಂಗಳ ಕೊನೆಯ ವಾರದಲ್ಲಿ ಮಾನವ ರಹಿತ ಯಾನ ನಡೆಸಿ, ಚಂದ್ರನ ಮೇಲೆ ರಾಕೆಟ್ ಇಳಿಸಿ, ಪ್ರಯೋಗಗಳನ್ನು ಕೈಗೊಳ್ಳುವುದು ಇಸ್ರೋ ಗುರಿ.ಪಿಎಸೆಲ್ವಿ ಉಡಾವಣಾ ರಾಕೆಟ್‌ನಲ್ಲಿ ಹನ್ನೊಂದು ಪೇಲೋಡುಗಳನ್ನು ಒಯ್ಯಲಿದೆ. ಚಂದ್ರಯಾನದಲ್ಲಿ ರಾಕೆಟು ಚಂದ್ರನತ್ತ ಸಾಗಿ,ಚಂದ್ರನಿಂದ ನೂರು ಕಿಲೋಮೀಟರ್ ಎತ್ತರದಲ್ಲಿ ಸುತ್ತಿ,ಮಾಹಿತಿ ಸಂಗ್ರಹಿಸುವ ಕೆಲಸವನ್ನು ಇಸ್ರೋದ ವಾಹನ ಮಾಡಲಿದೆ. ಅಲ್ಲದೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಅವಶ್ಯಕವಾದ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ನೆರವಾಗುವ ಪ್ರಯೋಗವನ್ನೂ ಈ ಯಾನದ ಸಮಯ ಕೈಗೊಳ್ಳಲಾಗುವುದು.
------------------------------------------------
ಟ್ರಕ್ ಚಾಲನೆಯಲ್ಲಿಲ್ಲದ ವೇಳೆಯೂ ತಂಪಾಗಿಡುವ ತಂತ್ರಜ್ಞಾನtruck
ಟ್ರಕ್ ಕ್ಯಾಬಿನ್ ಬಿಸಿಯೇರುವಾಗ ತಂಪಾಗಿಡಲು ಏಸಿ ಚಾಲೂ ಇಡುವುದು ವಿದೇಶಗಳಲ್ಲಿ ಸಾಮಾನ್ಯ. ಟ್ರಕ್ ಓಡುತ್ತಿರುವಾಗ ಇದು ಸಮಸ್ಯೆಯಲ್ಲ. ಆದರೆ ಟ್ರಕ್ ತಂಗಿದಾಗ ಏಸಿ ಚಾಲೂ ಇಡಬೇಕಿದ್ದರೆ,ಇಂಜಿನ್ ಚಾಲೂ ಇಡಬೇಕು. ಇದು ಡಿಸೇಲ್ ಖರ್ಚು ಮತ್ತು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಇದಕ್ಕೆ ಪರಿಹಾರವೇನು?ವೆಬ್ಸ್ಟೋ ಎನ್ನುವ ಅಮೆರಿಕನ್ ಕಂಪೆನಿಯೊಂದು ಇದಕ್ಕೆ ಬ್ಲೂಕೂಲ್ ಎಂಬ ಹೊಸ ತಂತ್ರಜ್ಞಾನವನ್ನು ಸಂಶೋಧಿಸಿದೆ. ಇದರಲ್ಲಿ ರೆಫ್ರಿಜರೇಂಟ್ ಮತ್ತು ನೀರು ಹಾಗೂ ಗ್ಲೈಕಾಲ್ ಮಿಶ್ರಣವನ್ನು ಬಳಸಲಾಗುತ್ತದೆ.ಇದಕ್ಕೆ ಯಾವುದೇ ಶಕ್ತಿಯ ಬಳಕೆ ಅಗದು. ಮಾಲಿನ್ಯದ ತೊಂದರೆಯೂ ಇಲ್ಲ.ಇದು ಕೆಲಸ ಮಾಡಲು ಟ್ರಕ್‌ನ ಫ್ಯಾನ ಚಾಲೂ ಇಡಬೇಕಾಗುತ್ತದೆ. ಇದಕ್ಕೆ ಬ್ಯಾಟರಿ ಶಕ್ತಿ ಬಳಸಿದರೂ ಇಂಜಿನ್ ಚಾಲೂ ಇಡಬೇಕಿಲ್ಲ.

 

--------------------------------------------------------

ಕೋಳಿ ಹಿಕ್ಕೆಯಿಂದಲೇ ನಡೆಯುವ ವಿದ್ಯುತ್ ಸ್ಥಾವರ
ಜೈವಿಕ ವಸ್ತುವನ್ನು ಬಳಸಿ ನಡೆಯುವ ವಿಶ್ವದ ಅತಿ ದೊಡ್ಡ ಬಯೋಮಾಸ್ ವಿದ್ಯುತ್ ಸ್ಥಾವರ
ನೆದರ್ಲ್ಯಾಂಡಿನಲ್ಲಿ ಸ್ಥಾಪನೆಯಾಗಿದೆ. ಮೂವತ್ತಾರು ಮೆಗಾವ್ಯಾಟ್ ಸಾಮರ್ಥ್ಯದ ಈ
ಸ್ಥಾವರ ತೊಂಭತ್ತು ಸಾವಿರ ಮನೆಗಳಿಗೆ ಅಗತ್ಯವಾದ ವಿದ್ಯುತ್ ಉತ್ಪಾದಿಸುತ್ತದೆ. ಅಂದರೆ
ವರ್ಷಕ್ಕೆ ಇನೂರೆಪ್ಪತ್ತು ದಶಲಕ್ಷ ಯುನಿಟ್ ವಿದ್ಯುತ್ ಇಲ್ಲಿ
ಉತ್ಪಾದನೆಯಾಗುತ್ತದೆ.ವರ್ಷವೊಂದಕ್ಕೆ ಈ ಸ್ಥಾವರ ಬಳಸುವ ಕೋಳಿ ಹಿಕ್ಕೆ
ನಾಲ್ಕುನೂರನಲುವತ್ತು ಸಾವಿರ ಟನ್. ಆ ದೇಶದಲ್ಲಿ ಉತ್ಪಾದನೆಯಾಗುವ ಕೋಳಿ ಹಿಕ್ಕೆಯ
ಮೂರನೇ ಒಂದು ಭಾಗ ಇಲ್ಲಿಯೇ ಬಳಕೆಯಾಗುತ್ತದೆ.

---------------------------------------------------

*ಅಶೋಕ್‌ಕುಮಾರ್ ಎ

ಇ-ಲೋಕ 96 13/10/2008 

ಉದಯವಾಣಿ

ಅಶೋಕ್ ವರ್ಲ್ಡ್