ಸೈಕಲ್ ಸವಾರಿಯ ಮರೆಯಲಾಗದ ನೆನಪುಗಳು !
ಎರಡು ದಿನಗಳ ಹಿಂದೆ ನಾನು ‘ಸಂಪದ' ದಲ್ಲಿ ‘ಸೈಕಲ್ ಸವಾರಿ ಮಾಡೋಣ ಬನ್ನಿ...' ಎಂಬ ಲೇಖನ ಬರೆದಿದ್ದೆ. ಸೈಕಲ್ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಾ ನನ್ನ ಬಾಲ್ಯದ ಸೈಕಲ್ ಸವಾರಿಯ ದಿನಗಳ ನೆನಪಾದವು. ಬಾಲ್ಯದಲ್ಲಿ ಸೈಕಲ್ ಓಡಿಸುವುದು ಹಲವಾರು ಮಂದಿಯ ಕನಸಾಗಿರುತ್ತದೆ. ಕಳೆದ ಶತಮಾನದಲ್ಲಿ ಹುಟ್ಟಿದ ಬಹುತೇಕರು ಸೈಕಲ್ ಸವಾರಿ ಮಾಡುವುದನ್ನು, ಈಜಾಡುವುದನ್ನು ಕಲಿತಿರುತ್ತಾರೆ. ಅಂದಿನ ನೆನಪುಗಳೇ ಸುಮಧುರ. ನನ್ನ ಅಳಿದುಳಿದ ನೆನಪುಗಳನ್ನು ದಾಖಲಿಸಲು ಪ್ರಯತ್ನ ಮಾಡಿರುವೆ. ಇದನ್ನು ಓದಿದ ನಿಮಗೂ ನಿಮ್ಮ ಬಾಲ್ಯದ ಸೈಕಲ್ ಸವಾರಿಯ ನೆನಪಾದರೆ ಅದೇ ಖುಷಿ ನನಗೆ.
ಅದು ೧೯೮೯-೯೦ರ ಸಮಯವಿರಬೇಕು. ನಾನು ೮ ಅಥವಾ ೯ ನೇ ತರಗತಿಯಲ್ಲಿದ್ದಿರಬೇಕು ಎಂದು ನೆನಪು. ಒಂದು ದಿನ ನನಗೆ ಸೈಕಲ್ ಬೇಕು ಎಂದು ಅನಿಸಿತು. ಅಪ್ಪನ ಬಳಿ ಬೇಡಿಕೆಯೂ ಸಲ್ಲಿಸಿಯಾಯಿತು. ಆ ವರ್ಷ ಬೇಸಿಗೆ ರಜೆಯಲ್ಲಿ ತೆಗೆದುಕೊಡುತ್ತೇನೆ ಎಂದು ಅಪ್ಪ ಹೇಳಿದರು. ಬೇಸಿಗೆ ರಜೆಯೂ ಬಂತು. ಅಪ್ಪನ ಹತ್ತಿರ ಕೇಳಿದಾಗ, ಮುಂದಿನ ವರ್ಷ ಹತ್ತನೇ ತರಗತಿಯಲ್ಲಿ ಪಾಸಾದರೆ ಸೈಕಲ್ ತೆಗೆಸಿಕೊಡುತ್ತೇನೆ ಎಂದು ಹೇಳಿದರು. ನನಗೆ ತುಂಬಾನೇ ನಿರಾಶೆಯಾಯಿತು. ಅಪ್ಪನ ಬಳಿ ತುಂಬಾ ಹಠ ಮಾಡಿದೆ. ಅತ್ತೆ. ಆದರೆ ಫಲಿತಾಂಶ ಶೂನ್ಯ. ಕೋಪದಿಂದ ಮನೆಗೆ ಒಂದೈದು ಸುತ್ತು ಹಾಕಿದೆ. ಒಂದೆರಡು ಹೊತ್ತು ತಿನ್ನದೇ ಇದ್ದೆ. ಮತ್ತೆ ನನ್ನ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಲು ನನ್ನ ಹೊಟ್ಟೆ ಅನುಕೂಲ ಮಾಡಿಕೊಡಲಿಲ್ಲ. ಹಸಿವು ಜೋರಾಯಿತು. ಊಟ ಮಾಡಲೇ ಬೇಕಾಯಿತು. ಹೀಗೆ ನನ್ನ ಪ್ರಥಮ ಸೈಕಲ್ ಸಂಗ್ರಾಮ ವಿಫಲವಾಯಿತು. ಈಗ ಅನಿಸುತ್ತೆ, ಅಪ್ಪನಿಗೆ ಆಗ ಏನು ಕಷ್ಟವಿತ್ತೋ ಏನೋ? ಆಗೆಲ್ಲಾ ಹಣಕ್ಕೆ ತುಂಬಾನೇ ಬೆಲೆ ಇತ್ತು. ಸಂಬಳವೂ ಕಮ್ಮಿ ಇತ್ತು. ಈಗಿನಷ್ಟು ಅನುಕೂಲತೆಯೂ ಇರಲಿಲ್ಲ.
ನನ್ನ ಬಳಿ ಸೈಕಲ್ ಇಲ್ಲದೇ ಹೋದರೂ ನಾನು ೭ನೇ ತರಗತಿಗೆ ಬರುವ ಹೊತ್ತಿಗೆ ಸೈಕಲ್ ಸವಾರಿ ಮಾಡುವುದನ್ನು ಕಲಿತಿದ್ದೆ. ನನಗಿಂತ ವಯಸ್ಸಿನಲ್ಲಿ ದೊಡ್ಡವನಾಗಿದ್ದ ವಿಶ್ವ ಎಂಬ ಹುಡುಗನಿಗೆ ನನಗೆ ಸೈಕಲ್ ಕಲಿಸಬೇಕೆಂದು ಅಪ್ಪ ಹೇಳಿದ್ದರು. ನಮ್ಮ ಮನೆಯ ಎದುರೇ ದೊಡ್ಡ ಮೈದಾನ ಇದ್ದುದರಿಂದ ನನಗೆ ಕಲಿಯಲು ಸ್ಥಳದ ಕೊರತೆಯಿರಲಿಲ್ಲ. ಅವನು ನನ್ನನ್ನು ಬೆಳಿಗ್ಗೆ ಅವನ ಸೈಕಲ್ ನಲ್ಲಿ ಕರೆದುಕೊಂಡು ಹೋಗಿ ಕಲಿಸುತ್ತಿದ್ದ. ಹಿಂದೆ ಸೀಟ್ ಹಿಡಿದು ಹ್ಯಾಂಡಲ್ ಬ್ಯಾಲೆನ್ಸ್ ಮಾಡಲು ಹೇಳುತ್ತಿದ್ದ. ಅವನು ಹಿಂದೆ ಸೈಕಲ್ ಹಿಡಿದಿದ್ದಾನೆ ಎಂಬ ಧೈರ್ಯದಿಂದ ನಾನೂ ಜೋರಾಗಿಯೇ ಪೆಡಲ್ ಮಾಡುತ್ತಿದ್ದೆ. ನಾನು ಆಗಲೇ ಸಾಕಷ್ಟು ಎತ್ತರವಾಗಿದ್ದುದರಿಂದ ಕಾಲುಗಳು ಸೈಕಲ್ ಪೆಡಲ್ ಗೆ ಎಟಕುತ್ತಿದ್ದುವು. ಆದರೆ ಕಾಲುಗಳು ನೆಲಕ್ಕೆ ಎಟಕುತ್ತಿರಲಿಲ್ಲ. ಒಂದು ದಿನ ವಿಶ್ವ ಹಿಂದೆ ಸೀಟು ಹಿಡಿದುಕೊಂಡಿದ್ದಾನೆ ಎಂಬ ಧೈರ್ಯದಿಂದ ನಾನು ಪೆಡಲ್ ಮಾಡಿದ್ದೇ ಮಾಡಿದ್ದು. ನಾನು ಮಾತನಾಡಿದಾಗ ಹಿಂದಿನಿಂದ ಉತ್ತರ ಬಾರದೇ ಇದ್ದಾಗ ಹಿಂದೆ ತಿರುಗಿ ನೋಡಿದಾಗ ವಿಶ್ವ ಸುಮಾರು ದೂರದಲ್ಲಿ ನಗುತ್ತಾ ನಿಂತಿದ್ದ. ನನ್ನ ಕೈಕಾಲುಗಳು ನಡುಗಿದವು. ಬ್ರೇಕ್ ಹಿಡಿಯಲೂ ನೆನಪಾಗದೇ ಸಣ್ಣದಾದ ಹೊಂಡಕ್ಕೆ ಬಿದ್ದೆ. ಅದೃಷ್ಟ ದೊಡ್ದದಿತ್ತು, ಸ್ವಲ್ಪ ತರಚಿದ ಗಾಯಗಳಾದುವು ಅಷ್ಟೇ. ಅದೇ ದಿನ ಮತ್ತೆ ಸುಧಾರಿಸಿಕೊಂಡು ಸೈಕಲ್ ಸವಾರಿ ಮಾಡಿದೆ. ಈ ಸಲ ಸ್ವಲ್ಪ ಧೈರ್ಯ ಬಂದಿತ್ತು. ಹಾಗಾಗಿ ಅನಾಯಾಸವಾಗಿ ಪೆಡಲ್ ಮಾಡುತ್ತಾ ಸೈಕಲ್ ಸವಾರಿ ಕಲಿತೆ.
ಒಂಬತ್ತನೇ ತರಗತಿಯಲ್ಲಿ ನನಗೆ ಗೆಳೆಯನಾದದ್ದು ನಂದಕಿಶೋರ್ ಎಂಬ ಹುಡುಗ. ಅವನ ಮನೆ ನನ್ನ ಮನೆಯ ಹತ್ತಿರವೇ ಇತ್ತು. ಅವನ ಬಳಿ ಒಂದು ಸ್ಪೋರ್ಟ್ಸ್ ಸೈಕಲ್ ಇತ್ತು. ಸಪೂರ ಟಯರ್, ಅಷ್ಟೇನೂ ದೊಡ್ಡದಲ್ಲದ ಹಗುರವಾದ ಸೈಕಲ್ ಅದು (ಬಿ.ಎಸ್.ಎ. ಎಸ್ಸೆಲ್ಲಾರ್ ಎಂದು ನೆನಪು). ಅವನು ಸೈಕಲ್ ತೆಗೆದುಕೊಂಡು ನನ್ನ ಮನೆಗೆ ಬರುವುದು. ನಾವು ಡಬಲ್ ರೈಡಿಂಗ್ ಮಾಡಿಕೊಂಡು ಊರೆಲ್ಲಾ ತಿರುಗಾಡುವುದು ಎಲ್ಲಾ ನಡೆಯುತ್ತಿತ್ತು. ಡಬಲ್ ರೈಡಿಂಗ್ ನಲ್ಲಿ ನಾನೇ ರೈಡ್ ಮಾಡುವುದು. ಅವನು ಹಿಂದೆ ಕ್ಯಾರಿಯರ್ ನಲ್ಲಿ ಅಥವಾ ಎದುರಿಗಡೆ ಬಾರ್ ರಾಡ್ ನಲ್ಲಿ ಕುಳಿತುಕೊಳ್ಳುತ್ತಿದ್ದ. ನನ್ನ ಅಪ್ಪ ಕಡೆಗೂ ನನ್ನ ಹತ್ತನೇ ತರಗತಿ ಮುಗಿಯುವ ಮೊದಲೇ ಸೈಕಲ್ ತೆಗೆದುಕೊಡಿಸುವ ಮನಸ್ಸು ಮಾಡಿದರು. ಆದರೆ ಅದು ಸೆಕೆಂಡ್ ಹ್ಯಾಂಡ್ ಸೈಕಲ್ ಆಗಿತ್ತು!
ಏನಾದರಾಗಲಿ ಸೈಕಲ್ ಬಂದರೆ ಸಾಕು ಎನ್ನುವ ಮನಸ್ಥಿತಿ ಆ ಸಮಯದಲ್ಲಿ ನನ್ನದಾಗಿತ್ತು. ನಾನು ಮತ್ತು ಅಪ್ಪ ಹೋಗಿ ಮಂಗಳೂರಿನ ಪಿವಿಎಸ್ ಸರ್ಕಲ್ ಬಳಿಯ ಒಂದು ಸೈಕಲ್ ರಿಪೇರಿ ಶಾಪ್ ಗೆ ಹೋಗಿ ಒಂದು ದೊಡ್ಡದಾದ ಅಟ್ಲಾಂಟಾ ಕಂಪೆನಿಯ ಸೈಕಲ್ ತೆಗೆದುಕೊಂಡೆವು. ಆಗ ಅದಕ್ಕೆ ಕೊಟ್ಟದ್ದು ೨೦೦ ರೂಪಾಯಿ. ಆ ಸಮಯ ಆ ಹಣಕ್ಕೆ ತುಂಬಾ ಬೆಲೆ ಇತ್ತು. ಬಹುಷಃ ಆಗ ಸೈಕಲ್ ಗಳಿಗೆ ಅಂತಹ ಬಹಳ ದೊಡ್ದ ಬೆಲೆ ಇರಲಿಲ್ಲ. ಅಪ್ಪನ ಪ್ರಕಾರ ಆಗೆಲ್ಲಾ ಸೈಕಲ್ ತಯಾರಿಸುವವರಿಗೆ ಸರಕಾರ ಸಬ್ಸಿಡಿ ಕೊಡುತ್ತಿತ್ತಂತೆ. ಬಡವರ ಸಾರಿಗೆ ಹಾಗೂ ಪರಿಸರಕ್ಕೆ ಹಾನಿ ಇಲ್ಲದೇ ಇರುವುದರಿಂದ ಮಾರಾಟ ಉತ್ತೇಜನಕ್ಕಾಗಿ ಸಬ್ಸಿಡಿ ಇತ್ತಂತೆ. ಸೈಕಲ್ ಬಿಡಿಭಾಗಗಳೂ ಬಹಳ ಕಮ್ಮಿ ಬೆಲೆಗೆ ದೊರೆಯುತ್ತಿದ್ದುವಂತೆ. ಆಗ ಈಗಿನಂತೆ ಗೇರ್ ಎಲ್ಲಾ ಇರಲಿಲ್ಲ. ಎರಡು ದೊಡ್ಡ ಟಯರ್ ಗಳು, ಪೆಡಲ್, ಚೈನ್, ಸೀಟು, ಕ್ಯಾರಿಯರ್ ಇಷ್ಟೇ. ಲೈಟ್ ಸಹಾ ಅವಶ್ಯಕತೆ ನನಗೆ ಕಂಡು ಬರಲಿಲ್ಲ. ಸೈಕಲ್ ತೆಗೆದುಕೊಂಡು ನಾನೇ ಅದನ್ನು ಮನೆಯವರೆಗೆ ಪೆಡಲ್ ಮಾಡಿಕೊಂಡು ಬಂದೆ. ಮರುದಿನದಿಂದ ನಾನೂ, ಕಿಶೋರ್ ತಿರುಗಾಡಿದ್ದೇ ತಿರುಗಾಡಿದ್ದು. ಎಲ್ಲಿ ಹೋಗುವಾಗಲೂ ಸೈಕಲ್ ಬೇಕೇ ಬೇಕು.
ಒಮ್ಮೆ ಮನೆಯಲ್ಲೂ ಹೇಳದೇ ೫-೬ ಕಿಮೀ ದೂರವಿರುವ ದೊಡ್ಡಪ್ಪನ ಮನೆಗೂ ಹೋಗಿದ್ದೆ. ಆಗೆಲ್ಲಾ ಮೊಬೈಲ್ ಇಲ್ಲದೇ ಇದ್ದುದರಿಂದ ನಾನು ಬರುವ ತನಕ ಮನೆಯವರೆಲ್ಲಾ ಗಾಬರಿಯಿಂದ ಕಾಯುತ್ತಿದ್ದರು. ಮತ್ತೆ ಸಹಸ್ರನಾಮಗಳ ಸುರಿಮಳೆ. ಸೈಕಲ್ ತೆಗೆದುಕೊಟ್ಟದ್ದರಿಂದಲೇ ಇವನು ಹೀಗೆ ಮಾಡುತ್ತಾನೆ ಎಂದೆಲ್ಲಾ ಅಮ್ಮನ ದೂರು. ಒಂದು ದಿನವಂತೂ ನಾನು ಮತ್ತು ಕಿಶೋರ್ ಅವನ ಸೈಕಲ್ ಅನ್ನು ರಿಪೇರಿಗೆ ನೀಡಲು ಜೊತೆಯಾಗಿ ಹೋಗುವಾಗ ಬಸ್ ನವನು ವೇಗವಾಗಿ ನಮ್ಮ ಹತ್ತಿರದಿಂದಲೇ ಸರಿದುಹೋಗಿ ನಾವು ಕೂದಲೆಳೆಯ ಅಂತರದಲ್ಲಿ ಪಾರಾದ ಸಂದರ್ಭವನ್ನು ನೆನಪಿಸುವಾಗ ಈಗಲೂ ಮೈಜುಮ್ಮೆನ್ನುತ್ತದೆ. ಈ ಘಟನೆ ನಡೆದು ಮೂರು ದಶಕಗಳೇ ಸಂದರೂ ನಾನು ಮತ್ತು ಕಿಶೋರ್ ಈಗಲೂ ಈ ಘಟನೆಯನ್ನು ಮೆಲುಕು ಹಾಕಿಕೊಳ್ಳುತ್ತೇವೆ.
ಸುಮಾರು ೨-೩ ವರ್ಷ ನಾನು ಆ ಹಳೆಯ ಸೈಕಲ್ ಸವಾರಿ ಮಾಡಿದೆ. ಪಿಯುಸಿ ಮುಗಿಯುವ ಹೊತ್ತಿಗೆ ಸೈಕಲ್ ಆಸೆ ತೀರಿಹೋಗಿತ್ತು. ಸೈಕಲ್ ನ ಮುಂದುಗಡೆಯ ರಾಡ್ ತುಂಡಾದ ಬಳಿಕವಂತೂ ಅದು ಮೂಲೆಗೆ ಸೇರಿತು. ಮೋಟಾರ್ ಸೈಕಲ್ ಕಲಿತ ನಂತರವಂತೂ ಸೈಕಲ್ ಅನ್ನು ಕೇಳುವವರೇ ಇಲ್ಲವಾದರು. ಒಂದು ದಿನ ಆ ನನ್ನ ಸೈಕಲ್ ಅನ್ನು ಗುಜುರಿಯವನಿಗೆ ಕೊಟ್ಟು ಬಿಟ್ಟರು. ಇಲ್ಲಿಗೆ ನನ್ನ ಸೈಕಲ್ ಪುರಾಣ ಮುಕ್ತಾಯವಾಯಿತು. ಅದರ ನಂತರ ನಾನು ಸೈಕಲ್ ಸವಾರಿ ಮಾಡಿದ್ದು ಬಹಳ ಕಮ್ಮಿ. ಆದರೂ ಅಂದಿನ ಸೈಕಲ್ ಜೊತೆಗಿನ ಹಿತ ಮಿತವಾದ ಒಡನಾಟ ಈಗಲೂ ನೆನಪಾಗಿ, ರೋಮಾಂಚನವಾಗುತ್ತದೆ.
ಚಿತ್ರ ಕೃಪೆ: ಅಂತರ್ಜಾಲ ತಾಣ