ಸೈಕಲ್ ಸವಾರಿ ಮಾಡೋಣ ಬನ್ನಿ…
ಸೈಕಲ್ ಅಥವಾ ಬೈಸಿಕಲ್ (ಬೈಸೈಕಲ್) ಒಂದು ಕಾಲದಲ್ಲಿ ಬಹು ಜನರ ಅಚ್ಚು ಮೆಚ್ಚಿನ ಹಾಗೂ ಅನಿವಾರ್ಯ ವಾಹನವಾಗಿತ್ತು. ಒಂದೂರಿನಿಂದ ಮತ್ತೊಂದು ಊರಿಗೆ ಹೋಗಲು, ಸಾಮಾನು ಸರಂಜಾಮು ತರಲು, ಕಟ್ಟಿಗೆ ತರಲು, ಮಕ್ಕಳನ್ನು ಶಾಲೆಗೆ ಬಿಡಲು, ತಿರುಗಿ ಮನೆಗೆ ಕರೆದುಕೊಂಡು ಬರಲು, ಅಂಚೆ ಪೇದೆಗೆ ಕಾಗದ ಪತ್ರಗಳನ್ನು ಬಟವಾಡೆ ಮಾಡಲು ಎಲ್ಲದಕ್ಕೂ ಸೈಕಲ್ ಬೇಕಿತ್ತು. ಕಾಲ ಸರಿದಂತೆ ಸೈಕಲ್ ಮನೆಯ ಮೂಲೆ ಸೇರಿದೆ. ಅದರ ಜಾಗಕ್ಕೆ ಮೋಟಾರ್ ಬೈಕ್ ಬಂದಿದೆ. ಪೆಡಲ್ ಮಾಡಬೇಕೆಂದಿಲ್ಲ, ಕೇವಲ ಪೆಟ್ರೋಲ್ ಹಾಕುವುದು ಆಕ್ಸಿಲೆಟರ್ ತಿರುವುದು ಇದು ಸುಲಭದ ಮಾತಾಗಿದೆ. ಆದರೆ ಸೈಕಲ್ ಪೆಡಲ್ ಮಾಡುತ್ತಿದ್ದಾಗ ನಮಗೆ ಗೊತ್ತಿಲ್ಲದೆಯೇ ನಮ್ಮ ದೇಹಕ್ಕೆ ವ್ಯಾಯಾಮ ಸಿಗುತ್ತಿತ್ತು.
ಆಧುನಿಕತೆಯ ಭರಾಟೆಯಲ್ಲಿ ನಾವಿಂದು ಸೈಕಲ್ ಮರೆತಿದ್ದೇವೆ. ಆದರೂ ಕೆಲವರು ತಮ್ಮ ಪ್ರತಿಷ್ಟೆಗಾಗಿ ಹಲವಾರು ಗೇರ್ ಹೊಂದಿರುವ, ಸಾವಿರಾರು ರೂಪಾಯಿ ಬೆಲೆ ಬಾಳುವ ಸೈಕಲ್ ಖರೀದಿಸಿ ಬೆಳ್ಳಂಬೆಳಿಗ್ಗೆ ಸೈಕಲ್ ಸವಾರಿ ಮಾಡುವುದಿದೆ. ಕೆಲವು ದಿನಗಳ ನಂತರ ಮತ್ತೆ ಮಾಮೂಲಿ. ಸೈಕಲ್ ಮೂಲೆಗೆ ಸೇರುತ್ತದೆ. ಮಕ್ಕಳು ಸೈಕಲ್ ಸವಾರಿ ಮಾಡಿದರೆ ತುಂಬಾ ಒಳ್ಳೆಯದು. ಒಳ್ಳೆಯ ವ್ಯಾಯಾಮ ಸಿಗುತ್ತದೆ. ಕಾಲಿನ ಮಾಂಸಖಂಡಗಳು ಬಲವಾಗುತ್ತವೆ. ಸೈಕಲ್ ಬಡವರ ಸವಾರಿ ಎಂಬ ಕಲ್ಪನೆ ಈಗ ಬಹುತೇಕ ಹೊರಟು ಹೋಗಿದೆ. ಸೈಕಲ್ ನ ಇತಿಹಾಸದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ ಬನ್ನಿ…
ಸೈಕಲ್ ಎಂಬ ಎರಡು ಚಕ್ರದ ವಾಹನದ ಕಲ್ಪನೆ ಮೂಡಿದ್ದೇ ವಿಶೇಷ. ಸಂಶೋಧಕರ ಪ್ರಕಾರ ಇದಕ್ಕೆ ಮೂಲ ಕಾರಣ ಬಹುಷಃ ರಥ ಹಾಗೂ ಎತ್ತಿನ ಬಂಡಿಗಳು ಆಗಿರಬಹುದು. ರಥಕ್ಕೆ ಕುದುರೆಗಳನ್ನು ಕಟ್ಟಿದರೆ ಮಾತ್ರ ಅದು ಮುಂದಕ್ಕೆ ಚಲಿಸುತ್ತದೆ. ಇದಕ್ಕಿಂತ ಹಗುರ ಹಾಗೂ ಸ್ವತಃ ಚಲಾಯಿಸಿಕೊಂಡು ಹೋಗುವ ಕಲ್ಪನೆ ಮಾನವನಿಗೆ ಬಂದಿರಲೂ ಸಾಕು. ಲಭ್ಯ ಮಾಹಿತಿಗಳ ಪ್ರಕಾರ ಕ್ರಿ.ಶ. ೧೫೩೪ರಲ್ಲಿ ಖ್ಯಾತ ಕಲಾವಿದ ಲಿಯೋನಾರ್ಡೋ ಡಾವಿಂಚಿಯ ಶಿಷ್ಯ ಗಿಯಮೋ ಕ್ಯಾಪ್ರೊಟ್ಟಿ ಎಂಬಾತ ಈ ಸೈಕಲ್ ರೀತಿಯ ವಾಹನದ ರಚನೆ ಮಾಡಿದ. ಇದರ ಬಗ್ಗೆ ಮಾಹಿತಿ ಇರುವ ರೇಖಾಚಿತ್ರವೊಂದು ಲಿಯೋನಾರ್ಡೋ ಅವರ ‘ಕೋಡೆಕ್ಸ್ ಅಟ್ಲಾಂಟಿಕಸ್' ಎಂಬ ಪುಸ್ತಕದಲ್ಲಿದೆ. ಆದರೂ ಸೈಕಲ್ ಮೂಲದ ಬಗ್ಗೆ ನಿಖರವಾದ ನಿರ್ಧಾರಕ್ಕೆ ಬರಲು ಸಂಶೋಧಕರಿಗೆ ಸಾಧ್ಯವಾಗಲಿಲ್ಲ.
೧೮೧೭ರಲ್ಲಿ ಫ್ರಾನ್ಸ್ ದೇಶದ ಕಾರ್ಲ್ ವಾನ್ ಡ್ರೈಸ್ ಎಂಬಾತ ಚಕ್ರಗಳ ಸಹಾಯದಿಂದ ಚಲಿಸಬಲ್ಲ ಒಂದು ವಾಹನವನ್ನು ಆವಿಷ್ಕಾರ ಮಾಡಿದ. ಈ ವಾಹನಕ್ಕೆ ಅವನು ವೆಲೋಸಿಪೆಡೆ ಅಥವಾ ಲಾಫ್ ಮೆಶೀನ್ ಎಂದು ಹೆಸರಿಸಿದ. ಅದನ್ನು ನಂತರದ ದಿನಗಳಲ್ಲಿ ‘ಡ್ಯಾಂಡಿ ಹಾರ್ಸ್' ಎಂದು ಕರೆಯಲಾಯಿತು. ಸ್ವಲ್ಪ ಸಮಯದ ಬಳಿಕ ದೊಡ್ಡ ದೊಡ್ದ ಚಕ್ರಗಳ ‘ಪೆನ್ನಿ ಫಾರ್ದಿಂಗ್' ಎಂಬ ವಾಹನ ಬಳಕೆಗೆ ಬಂದು ಮರೆಯಾಯಿತು. ಒಂದೇ ಚಕ್ರದ ‘ಯೂನಿಸೈಕಲ್' ಎಂಬ ಮಾದರಿಯ ಸೈಕಲ್ ಮಾರುಕಟ್ಟೆಗೆ ಬಂದರೂ ಬಹು ಸಮಯದ ತನಕ ನಿಲ್ಲಲಿಲ್ಲ. ನಂತರದ ದಿನಗಳಲ್ಲಿ ಅವುಗಳು ಸರ್ಕಸ್ ಗೆ ಮಾತ್ರ ಸೀಮಿತವಾದುವು.
೧೮೬೧ರಲ್ಲಿ ಪಿಯರೆ ಮಕಾಕ್ಸ್ ಎಂಬ ಫ್ರೆಂಚ್ ಕಮ್ಮಾರ ಎರಡು ಚಕ್ರಗಳ ವಾಹನವೊಂದನ್ನು ತಯಾರಿಸಿ ಪೇಟೆಂಟ್ ಪಡೆದುಕೊಂಡ. ಈ ವಾಹನವನ್ನು ವಿಶ್ವದ ಮೊದಲ ‘ಬೋನ್ ಶೇಕರ್ ಬೈಸಿಕಲ್' ಎಂದು ಕರೆಯಲಾಯಿತು. ಪಿಯರೆ ತನ್ನ ಸೈಕಲ್ ಗೆ ಕಬ್ಬಿಣದ ಫ್ರೇಮ್ ಹಾಗೂ ಮರದ ಚಕ್ರಗಳನ್ನು ಅಳವಡಿಸಿದ್ದರಿಂದ ಸವಾರಿಗೆ ಅಷ್ಟೊಂದು ಅನುಕೂಲಕರವಾಗಿರಲಿಲ್ಲ. ಆ ಕಾರಣದಿಂದಲೇ ಅದಕ್ಕೆ ಬೋನ್ ಶೇಕರ್ (ಮೂಳೆ ಅಲುಗಾಡಿಸುವ) ಸೈಕಲ್ ಎಂದೇ ಕರೆಯುತ್ತಿದ್ದರು. ಫ್ರೆಂಚ್ ಪದ ಬೈಸಿಕಲೆಟ್ಟೆ ಎಂಬ ಪದದಿಂದ ಬೈಸಿಕಲ್ ಎಂಬ ಪದದ ಅನ್ವೇಷಣೆಯಾಯಿತು. ಎರಡು ಚಕ್ರಗಳ ವಾಹನವನ್ನು ಬೈಸಿಕಲ್ ಎಂದೇ ಕರೆಯಲು ಪ್ರಾರಂಭಿಸಿದರು.
ಪ್ರಾರಂಭದಲ್ಲಿ ಸೈಕಲ್ ತಯಾರಿಸಿದಾಗ ಅದಕ್ಕೆ ಪೆಡಲ್ ಮಾಡುವ ಕಲ್ಪನೆಯೇ ಇರಲಿಲ್ಲ. ಕಾಲಿನಿಂದ ತಳ್ಳಿಕೊಂಡು ಮುಂದಕ್ಕೆ ಚಲಾಯಿಸಬೇಕಾಗಿತ್ತು. ೧೮೬೩ರಲ್ಲಿ ಫ್ರಾನ್ಸ್ ದೇಶದವರೇ ಆದ ಪಿಯರೆ ಲಲ್ಲೆಮೆಂಟ್ ಎಂಬಾತ ಮುಂದಿನ ಚಕ್ರಗಳಿಗೆ ಪೆಡಲ್ ಅಳವಡಿಸಿ ಈ ಮಾದರಿಗಾಗಿ ಪೇಟೆಂಟ್ ಪಡೆದುಕೊಂಡ. ನಂತರ ತನ್ನ ಪೇಟೆಂಟ್ ಅನ್ನು ಅಮೇರಿಕಾದ ಒಂದು ಕಂಪೆನಿಗೆ ೨೦೦೦ ಡಾಲರ್ ಹಣಕ್ಕೆ ಮಾರಿದ.
ನಂತರದ ದಿನಗಳಲ್ಲಿ ಅಮೇರಿಕಾದಲ್ಲೂ ಬೈಸಿಕಲ್ ಕ್ರೇಜ್ ಜಾಸ್ತಿಯಾಗುತ್ತಾ ಹೋಯಿತು. ಆಗ ಸೈಕಲ್ ಗೆ ಚೈನ್ ಹಾಗೂ ಪೆಡಲ್ ಸೇರ್ಪಡೆಯ ಅರಿವು ಯಾರಿಗೂ ಇರಲಿಲ್ಲ. ಕ್ರಮೇಣ ಒಂದೊಂದಾಗಿ ಈ ಅನ್ವೇಷಣೆಗಳು ನಡೆದವು. ಆ ಸಮಯದಲ್ಲಿ ಪಿಕೆರಿಂಗ್ ಮತ್ತು ಡೇವಿಸ್ ಕಂಪೆನಿಯು ನವೀನ ರೀತಿಯ ಬೈಸಿಕಲ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಬೈಸಿಕಲ್ ಅನ್ವೇಷಣೆ ಹಾಗೂ ಮಾದರಿಗಳಿಗಾಗಿ ಸುಮಾರು ೨೫೦ಕ್ಕೂ ಅಧಿಕ ಪೇಟೆಂಟ್ ಗಳು ನೊಂದಾವಣೆಯಾದವು. ಎಲ್ಲರೂ ಈ ಬೈಸಿಕಲ್ ಎಂಬ ಮಾಯಾವಿಯ ಹಿಂದೆ ಓಡುತ್ತಿರುವಾಗ ಬ್ರಿಟನ್ ಹಿಂದೆ ಉಳಿಯಲು ಸಾಧ್ಯವೇ? ಅವರೂ ಹಲವಾರು ಬಗೆಯ ಸೈಕಲ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಬ್ರಿಟೀಷ್ ಅಧಿಕಾರಿಗಳ ಹಾಗೂ ಮಿಶನರಿಗಳ ಮೂಲಕ ಸೈಕಲ್ ಭಾರತಕ್ಕೂ ಕಾಲಿಟ್ಟಿತು.
ಪ್ರಾರಂಭದಲ್ಲಿ ತುಂಬಾ ಭಾರವಾಗಿದ್ದ ಸೈಕಲ್ ಗಳು ಕ್ರಮೇಣ ತೂಕವನ್ನು ಕಡಿಮೆ ಮಾಡಿ ೧೮ ರಿಂದ ೧೯ ಕೆಜಿ ತೂಕ ಹೊಂದತೊಡಗಿದವು. ಆದರೂ ಬೈಸಿಕಲ್ ತನ್ನ ಸರಳ ರೂಪವನ್ನು ಪಡೆದಿರಲಿಲ್ಲ. ೧೮೯೩ರಲ್ಲಿ ಜಾನ್ ಬಾಯ್ಡ್ ಡನ್ಲಪ್ ಎಂಬಾತ ನವೀನ ಬಗೆಯ ನುಮ್ಯಾಟಿಕ್ ಟಯರ್ ಕಂಡುಹಿಡಿದು ಸೈಕಲ್ ಗೆ ಅಳವಡಿಸಿದನು. ಇದು ಬಹಳ ಯಶಸ್ವಿಯಾಯಿತು. ನಿಧಾನವಾಗಿ ಸೈಕಲ್ ಬಳಕೆಯು ಸಾಮಾನ್ಯ ಜನರಲ್ಲಿ ಜನಪ್ರಿಯವಾಗತೊಡಗಿತು. ಕುದುರೆ ಸವಾರಿ ಮಾಡುವವರು ಬೈಸಿಕಲ್ ಬಳಸಲು ಪ್ರಾರಂಭ ಮಾಡಿದರು. ದಿನಗಳೆದಂತೆ ತೂಕವೂ (೧೫-೧೬ ಕೆಜಿ) ಕಮ್ಮಿಯಾಯಿತು. ೧೮೯೯ರಲ್ಲಿ ೧೧ ಲಕ್ಷ ಬೈಸಿಕಲ್ ಗಳು ಮಾರಾಟವಾಗಿದ್ದವು ಎಂದರೆ ನೀವು ಅಂದಿನ ಅದರ ಜನಪ್ರಿಯತೆಯನ್ನು ಊಹಿಸಿಕೊಳ್ಳಬಹುದು. ಮಹಿಳೆಯರೂ ಸವಾರಿ ಮಾಡುವಂತಹ ‘ಲೇಡಿಸ್ ಸೈಕಲ್' ಗಳೂ ಮಾರುಕಟ್ಟೆಗೆ ಬಂದವು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿದ್ದ ವಿದೇಶೀ ಮಹಿಳೆಯರು ಸೈಕಲ್ ಸವಾರಿ ಮಾಡುತ್ತಿದ್ದರು. ನಂತರ ಮೂರು ಚಕ್ರದ ಟ್ರೈಸಿಕಲ್ ಗಳೂ ಬಳಕೆಗೆ ಬಂದವು.
ಹೀಗೆ ದಿನ ಕಳೆದಂತೆ ಸೈಕಲ್ ನಲ್ಲಿ ಆವಿಷ್ಕಾರಗಳು ನಡೆದು ತೂಕ ಮತ್ತು ಆಕಾರದಲ್ಲಿ ಗಣನೀಯ ಬದಲಾವಣೆಗಳು ಆದುವು. ಗಟ್ಟಿಯಾದ, ಹಗುರವಾದ ಲೋಹಗಳನ್ನು ಸೈಕಲ್ ತಯಾರಿಕೆಗೆ ಬಳಸಲಾಯಿತು. ಸುಲಭ ಸವಾರಿಗೆ ಗೇರ್ ಗಳು ಅಳವಡಿಸಲ್ಪಟ್ಟವು. ಡೈನಮೋ ಮೂಲಕ ದೀಪದ (ಲೈಟ್) ವ್ಯವಸ್ಥೆಯೂ ಆಯಿತು. ಹೀಗೆ ವಿವಿಧ ಹಂತಗಳನ್ನು ದಾಟಿದ ಸೈಕಲ್ ಜನಪ್ರಿಯವಾಗುತ್ತಾ ಹೋಯಿತು.
ಈಗಲೂ ಬೈಸಿಕಲ್ ಬಳಕೆ ಗ್ರಾಮೀಣ ಪ್ರದೇಶಗಳಲ್ಲಿ ಅಧಿಕವಿದೆ. ಕೆಲವೊಂದು ದೇಶಗಳಲ್ಲಿ ಬೈಸಿಕಲ್ ಟ್ರಾಕ್ (ರಸ್ತೆ) ಇದೆ. ಸೈಕಲ್ ಸವಾರಿ ಮಾಡುವವರು ಮಾತ್ರ ಈ ರಸ್ತೆಯಲ್ಲಿ ಚಲಿಸಬಹುದು. ಭಾರತದ ಕೆಲವೊಂದು ನಗರಗಳಲ್ಲೂ ಈ ರಸ್ತೆಯನ್ನು ಅಳವಡಿಸಲಾಗಿದೆ. ಪರಿಸರಕ್ಕೆ ಹಾನಿಯಿಲ್ಲದ, ಚಲಿಸುವಾಗ ವ್ಯಾಯಾಮವೂ ಆಗುವ ಈ ಸುಲಭ, ಸರಳ ವಾಹನವನ್ನು ಬಳಸಿದರೆ ಬಹಳ ಉತ್ತಮ ಫಲಿತಾಂಶ ನಮಗೂ, ನಮ್ಮ ಪರಿಸರಕ್ಕೂ ಆಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
ಚಿತ್ರಗಳ ವಿವರ: ೧. ಸೈಕಲ್ ಸವಾರಿ ಮಾಡುತ್ತಿರುವ ಸವಾರರು
೨. ವೆಲೊಸಿಪೆಡೆ ಸೈಕಲ್
೩. ಪೆನ್ನಿ ಫಾರ್ದಿಂಗ್ ಸೈಕಲ್
೪. ಯೂನಿಸೈಕಲ್
೫. ಬೋನ್ ಶೇಕರ್ ಸೈಕಲ್
ಮಾಹಿತಿ ಮತ್ತು ಚಿತ್ರಕೃಪೆ: ಅಂತರ್ಜಾಲ ತಾಣಗಳು