ಸೈಬರ್ ವಂಚನೆಯ ಹೊಸಮುಖ : ಭಾರತೀಯರ ರಕ್ಷಿಸಿ

ಸೈಬರ್ ವಂಚನೆಯ ಹೊಸಮುಖ : ಭಾರತೀಯರ ರಕ್ಷಿಸಿ

ಕಾಂಬೋಡಿಯಾದಲ್ಲಿ ೫೦೦೦ಕ್ಕೂ ಹೆಚ್ಚು ಭಾರತೀಯ ವಲಸಿಗರನ್ನು ಆನ್ ಲೈನ್ ವಂಚನೆ ಮಾಫಿಯಾದವರು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಇದೊಂದು ವಿಚಿತ್ರ ದಂಧೆಯ ಜಾಲ. ಭಾರತದಲ್ಲಿರುವ ಏಜೆಂಟರು ಕಾಂಬೋಡಿಯಾದಲ್ಲಿ ಡೇಟಾ ಎಂಟ್ರಿ ಕೆಲಸ ಖಾಲಿಯಿದೆ ಎಂದು ನಿರುದ್ಯೋಗಿಗಳಿಗೆ ಆಮಿಷವೊಡ್ಡಿ, ಅವರಿಂದ ಹಣ ಪಡೆದು ಕಾಂಬೋಡಿಯಾಗೆ ಕಳುಹಿಸುತ್ತಿದ್ದಾರೆ. ಹಾಗೆ ಕಾಂಬೋಡಿಯಾಗೆ ಹೋದವರಿಗೆ ಅಲ್ಲಿ ಯಾವುದೇ ಡೇಟಾ ಎಂಟ್ರಿ ಕೆಲಸ ಸಿಗುವುದಿಲ್ಲ. ಬದಲಿಗೆ ಸೈಬರ್ ಅಪರಾಧ ಎಸಗುವ ಮಾಫಿಯಾದವರು ಇವರನ್ನು ವಶದಲ್ಲಿರಿಸಿಕೊಂಡು, ಅಲ್ಲಿಂದಲೇ ಭಾರತೀಯರಿಗೆ ಆನ್ ಲೈನ್ ವಂಚನೆ ಎಸಗಲು ಬಳಸಿಕೊಳ್ಳುತ್ತಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಬರುವುದಕ್ಕೆ ಇವರಿಗೆ ಸಾಧ್ಯವಾಗುತ್ತಿಲ್ಲ.

ಕಳೆದ ಆರು ತಿಂಗಳಲ್ಲಿ ಇವರು ಭಾರತೀಯರಿಗೆ ೫೦೦ ಕೋಟಿ ರೂಗ಼ಿಂತ ಹೆಚ್ಚು ಹಣ ವಂಚಿಸಿದ್ದಾರೆಂದು ಅಂಕಿಅಂಶಗಳು ಹೇಳುತ್ತಿವೆ. ಕಾಂಬೋಡಿಯಾದಿಂದ ರಕ್ಷಿಸಲ್ಪಟ್ಟು ಕರ್ನಾಟಕಕ್ಕೆ ಹಾಗೂ ಒಡಿಶಾಗೆ ಬಂದವರ ಮೂಲಕ ಕಲೆ ಹಾಕಿದ ಮಾಹಿತಿಯಲ್ಲಿ ಈ ಸಂಗತಿ ತನಿಖಾ ಸಂಸ್ಥೆಗಳಿಗೆ ತಿಳಿದುಬಂದಿದೆ.

ಕಳೆದ ವರ್ಷ ನಮ್ಮ ರಾಜ್ಯದ ಹಕ್ಕಿಪಿಕ್ಕಿ ಜನಾಂಗದವರು ಆಫ್ರಿಕಾದಲ್ಲಿ ಸಿಲುಕಿದ್ದರು. ಅವರನ್ನು ಸರಕಾರ ರಕ್ಷಿಸಿ ಕರೆತಂದಿತ್ತು. ಆದರೆ ಈಗ ಕಾಂಬೋಡಿಯಾದಲ್ಲಿ ಸಿಲುಕಿದವರದ್ದು ವಿಶಿಷ್ಟ ಪ್ರಕರಣ. ಇವರು ಸ್ವತಃ ಅಪಾಯದಲ್ಲಿರುವುದು ಒಂದೆಡೆಯಾದರೆ, ಇವರೇ ಅಲ್ಲಿದ್ದುಕೊಂಡು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಸೈಬರ್ ಅಪರಾಧಗಳನ್ನು ಎಸಗುತ್ತಿದ್ದಾರೆ. ಆಫ್ರಿಕನ್ ದೇಶಗಳಲ್ಲಿ ಭಾರತವನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಸೈಬರ್ ಹಾಗೂ ಡ್ರಗ್ಸ್ ದಂಧೆಕೋರರ ಜಾಲವಿರುವುದು ಈಗಾಗಲೇ ತಿಳಿದಿದೆ. ಈಗ ಏಷ್ಯಾದ ದೇಶಗಳಲ್ಲೂ ಈ ಜಾಲ ಹರಡುತ್ತಿದೆ. ನಮ್ಮ ಪೋಲೀಸ್ ವ್ಯವಸ್ಥೆಗೆ ಇದೇ ದೇಶದಲ್ಲಿ ಬೇರೆ ರಾಜ್ಯದಲ್ಲಿದ್ದುಕೊಂಡು ಸೈಬರ್ ಅಪರಾಧಗಳನ್ನು ಎಸಗುವ ಕ್ರಿಮಿನಲ್ ಗಳನ್ನೇ ಹಿಡಿಯುವುದಕ್ಕೆ ಆಗುತ್ತಿಲ್ಲ. ನೂರು ಸೈಬರ್ ವಂಚನೆಯ ಪ್ರಕರಣ ನಡೆದರೆ ಒಂದೋ ಎರಡೋ ಪ್ರಕರಣಗಳನ್ನು ಭೇದಿಸುತ್ತಿದ್ದಾರೆ. ಹೀಗಿರುವಾಗ ಬೇರೆ ದೇಶದಿಂದ ಕಾರ್ಯಾಚರಣೆ ನಡೆಸುತ್ತಿರುವವರನ್ನು ಪೋಲೀಸರು ಮಟ್ಟಹಾಕಿಯಾರೇ? ಕೇಂದ್ರ ಸರಕಾರ ಉನ್ನತ ತನಿಖಾ ಸಂಸ್ಥೆಗಳು, ವಿದೇಶಾಂಗ ಇಲಾಖೆ ಹಾಗೂ ರಾಜತಾಂತ್ರಿಕ ಮಾರ್ಗಗಳನ್ನು ಬಳಸಿಕೊಂಡು ವಿದೇಶಗಳಲ್ಲಿ ಬೇರುಬಿಟ್ಟಿರುವ ಸೈಬರ್ ವಂಚಕರ ಜಾಲವನ್ನು ಮಟ್ಟಹಾಕಬೇಕಿದೆ. ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಪ್ರಮಾಣ ಗಮನಿಸಿದರೆ ಅತಿ ಶೀಘ್ರದಲ್ಲಿ ಅವು ತೀರಾ ಅಪಾಯಕಾರಿ ಮಟ್ಟಕ್ಕೆ ತಲುಪಿದರೂ ಅಚ್ಚರಿ ಇಲ್ಲ. 

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೩೦-೦೩-೨೦೩೪

ಚಿತ್ರ ಕೃಪೆ: ಅಂತರ್ಜಾಲ ತಾಣ