ಸೈಬರ್ ವಂಚನೆ
ತಂತ್ರಜ್ಞಾನ ಬೆಳೆದಂತೆ ವಂಚಕರ ಯೋಚನೆ ಮತ್ತು ಯೋಜನೆಗಳೂ ವಿಭಿನ್ನ ರೀತಿಯಲ್ಲಿ ಬೆಳೆಯುತ್ತಿದೆ. ಈಗಿನ ಹೊಸ ಟ್ರೆಂಡ್ ಎಂದರೆ ಸೈಬರ್ ವಂಚನೆ. ಈ ವಂಚಕರು ಎಲ್ಲೋ ಕುಳಿತುಕೊಂಡು ಅಂತರ್ಜಾಲದ ಸಹಾಯದಿಂದ ಜನರ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇಂತವರನ್ನು ಗುರುತಿಸಿ ಶಿಕ್ಷೆ ನೀಡುವುದೂ ಬಹಳಷ್ಟು ಸಲ ಕಷ್ಟವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡುವ ಕೃತಿ ‘ಸೈಬರ್ ವಂಚನೆ'. ಇದನ್ನು ಬರೆದಿದ್ದಾರೆ ವಿಕ್ರಮ್ ಜೋಶಿ. ಈ ಅಂತರ ಜಾಲದ ಕರಾಳ ಮುಖವನ್ನು ಬಯಲು ಮಾಡಲು ಲೇಖಕರು ಬಹಳಷ್ಟು ಮಾಹಿತಿಗಳನ್ನು ಸಂಗ್ರಹ ಮಾಡಿದ್ದಾರೆ. ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಸರ್ವೋಚ್ಚನ್ಯಾಯಾಲಯದ ಭೂತಪೂರ್ವ ನ್ಯಾಯಾಧೀಶರಾದ ಬೆ ನಾ ಶ್ರೀಕೃಷ್ಣ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ಇಲ್ಲಿವೆ...
“ರಘುವಂಶ ಮಹಾಕಾವ್ಯದಲ್ಲಿ ಕಾಳಿದಾಸನು ಮಹಾಸಾಗರವು ಭಯಂಕರವಾದ ಜಲಜಂತುಗಳಿಂದ ಅದೃಷ್ಯವೂ ಆದರೆ ರತ್ನಗಳಿಂದ ಕೂಡಿ ಅಭಿಗಮ್ಯವೂ ಎಂದು ವರ್ಣಿಸುತ್ತಾನೆ. ಈ ವರ್ಣನೆ ಅಂತರಜಾಲದ ಮಹಾರಣ್ಯಕ್ಕೂ ಒಪ್ಪುತ್ತದೆ. ಅನೇಕ ಸೌಕರ್ಯಗಳಿಂದ ತುಂಬಿ ಪ್ರಜೆಗಳ ಮನಸೆಳೆಯುವ ಅಂತರಜಾಲವು ಅದರ ಒಳಗೆ ಅಡಗಿರುವ ಅಪಾಯಗಳನ್ನು ಮುಚ್ಚಿ ಅದರ ಮರ್ಮವನ್ನು ತಿಳಿಯದ ಅಮಾಯಕರನ್ನು ದುಃಸ್ಥಿತಿಗೆ ಈಡಾಗಿಸುತ್ತದೆ. ಈಗಿನ ದಿನಗಳಲ್ಲಿ ಪ್ರತಿಯೊಂದು ದೈನಂದಿನ ಕಾರ್ಯವೂ ಗಣಕಯಂತ್ರದ ಅಥವಾ ಜಂಗಮವಾಣಿಯ ಮುಖಾಂತರ ನಡೆಯುತ್ತದೆ. ಕಾಗದಪತ್ರ ವ್ಯವಹಾರಗಳು, ಹಣಕಾಸಿನ ವ್ಯವಹಾರಗಳು ಮುಂತಾಗಿ ಎಲ್ಲ ಕಾರ್ಯಕಲಾಪಗಳೂ ಅಂತರಜಾಲದಲ್ಲಿಯೇ ಜನಿಸಿ ಅಲ್ಲಿಯೇ ಪರ್ಯವಸಾನವಾಗುತ್ತವೆ.
ಸೈಬರ್ ವಂಚಕರ ಕುತಂತ್ರವನ್ನು ಅರಿಯದವರು ಸುಲಭವಾಗಿ ಅವರ ವಂಚನೆಗೆ ಬಲಿಯಾಗುತ್ತಾರೆ. ಮೋಸಮಾಡಿ ಪರರ ಬ್ಯಾಂಕಿನ ಖಾತೆಯಿಂದ ಅವರು ಹಣವನ್ನು ಅತಿ ಸುಲಭವಾಗಿ ಎತ್ತಿ ಹಾಕುತ್ತಾರೆ. ಅಂತಹವರ ಕುಚಾಲುಚಲನೆಗಳನ್ನು ಅರಿತಿದ್ದು ಅವುಗಳಿಗೆ ಬಲಿಯಾಗದಂತೆ ಎಚ್ಚರವಹಿಸುವುದು ದುಸ್ತರವಾದ ಕೆಲಸ. ಆಂಥವರು ಯಾವ ರೀತಿ ವಂಚನೆ ಮಾಡಬಹುದು ಎಂಬುದು ಸೈಬರ್ ಪ್ರಪಂಚದಲ್ಲಿನ ಆಗುಹೋಗುಗಳನ್ನರಿತವರಿಗೆ ಮಾತ್ರ ತಿಳಿಯಬಹುದು. ಈ ವಿಷಯವನ್ನು ಕುರಿತು ಇಂಗ್ಲಿಷ್ ಭಾಷೆಯಲ್ಲಿ ಅನೇಕ ಪುಸ್ತಕಗಳು, ಪ್ರಬಂಧಗಳು, ಪತ್ರಿಕಾಲೇಖನಗಳು ಕಾಲಕಾಲಕ್ಕೆ ಪ್ರಕಟವಾಗಿರುತ್ತವೆ. ಆದರೆ ಅವುಗಳು ಇಂಗ್ಲಿಷ್ ಭಾಷೆಯಲ್ಲಿದ್ದು ಆ ಭಾಷೆಯನ್ನರಿತವರಿಗೆ ಮಾತ್ರ ಮಿತವಾಗಿ ಚಾಲ್ತಿಯಲ್ಲಿರುತ್ತವೆ. ಅವುಗಳಲ್ಲಿರುವ ಜ್ಞಾನದ ಲಾಭ ಇಂಗ್ಲಿಷ್ ಭಾಷೆಯನ್ನರಿಯದ ಜನಸಾಮಾನ್ಯರಿಗೆ ದೊರಕದು. ತತ್ರಾಪಿ ಕನ್ನಡದಲ್ಲಿ ಅಂತಹ ಸಾಹಿತ್ಯ ದುರ್ಲಭ. ತಾಂತ್ರಿಕ ಪಾರಿಭಾಷಿಕ ಶಬ್ದಗಳ ಅನುಪಲಬ್ಧಿಯೇ ಅದಕ್ಕೆ ಕಾರಣವಾಗಿರಬಹುದು ಎಂದು ನನ್ನ ಅನಿಸಿಕೆ. ಶ್ರೀ ವಿಕ್ರಮ ಜೋಶಿಯವರ ಈ ಕಿರುಪುಸ್ತಕ ಅದಕ್ಕೆ ಅಪವಾದಾತ್ಮಕವಾಗಿ ಕಾಣುತ್ತದೆ.
ಶ್ರೀ ವಿಕ್ರಮ ಜೋಶಿಯವರು ಪ್ರಬಂಧರೂಪದಲ್ಲಿ ಈ ಕಿರುಹೊತ್ತಿಗೆಯನ್ನು ಬರೆದು ಹೊರತರುತ್ತಿರುವುದು ಅತಿ ಪ್ರಶಂಸನೀಯ. ಇಂತಹ ಹೊತ್ತಿಗೆಗಳ ಪ್ರಸಾರ ಮತ್ತು ಪ್ರಚಾರದಿಂದ ಕನ್ನಡಭಾಷಿಕರಿಗೆ ಅದ್ಯಾಪಿ ಸಿಕ್ಕದೆ ಇರುವ ಅತ್ಯಂತ ಮುಖ್ಯ ವಿಷಯಗಳ ಅರಿವು ಆಗಲು ಸಾಧ್ಯ. ಇಂತಹ ಪ್ರಕಟಣೆಗಳಿಂದ ಆಗುವ ಮತ್ತೊಂದು ಪ್ರಯೋಜನವೆಂದರೆ ಅವು ತಾಂತ್ರಿಕ ಪಾರಿಭಾಷಿಕ ಶಬ್ದಗಳ ಉಪಯೋಗವನ್ನು ಹೆಚ್ಚುಮಾಡಿ ತನ್ಮೂಲಕ ಈ ವಿಷಯನ್ನು ಕುರಿತು ಕನ್ನಡದಲ್ಲಿಯೇ ಹೆಚ್ಚುಹೆಚ್ಚಾಗಿ ಸಂಶೋಧನೆ, ಆನುಸಂಧಾನಗಳಿಗೆ ಅವಕಾಶಮಾಡಿಕೊಡುತ್ತವೆ. ತತ್ಕಾರಣ ಇಂತಹ ಪ್ರಕಟಣೆಗಳನ್ನು ಆದಷ್ಟು ಪ್ರೋತ್ಸಾಹಿಸಬೇಕು…”