ಸೊಗಸಾದ ಎರಡು ಗಝಲ್ ಗಳು

ಸೊಗಸಾದ ಎರಡು ಗಝಲ್ ಗಳು

ಕವನ

ಮಾತನಾಡದೆ ಮಲಗಿದ ಶವದ ಬಾಯಿಯಿಂದ ಪಿಸುಮಾತು ಕೇಳಿಸುತ್ತದೆ

ಸ್ಮಶಾನದ ಮೂಲೆಯ ಗೋರಿಯೊಳಗಿಂದ ಪಿಸುಮಾತು ಕೇಳಿಸುತ್ತಿದೆ

 

ರಾತ್ರಿ ಹನ್ನೆರಡರ ಸಮಯ ಸ್ವಾತಂತ್ರ್ಯ ಸಿಕ್ಕಿತೆಂದು ಕೇಕೆಯ ಹಾಕಿ ನಲಿದ ನೆನಪು

ಸ್ವಾತಂತ್ರ್ಯ ಹರಣವಾದದ್ದೂ ಬಹುತೇಕ ಹಿರಿಯರಿಂದ ಪಿಸುಮಾತು ಕೇಳಿಸುತ್ತಿದೆ

 

ಪ್ರೀತಿಯ ಅಮಲಿನ ಧ್ವನಿಯೂ ಕೇಳಿಸಿಕೊಂಡದ್ದು ಮಧ್ಯರಾತ್ರಿಯಲ್ಲಿ

ಉಪ್ಪರಿಗೆಯ ಕೋಣೆಯಲ್ಲಿ ಮಲಗಿದ ಪ್ರೇಮಿಗಳಿಂದ ಪಿಸುಮಾತು ಕೇಳಿಸುತ್ತಿದೆ

 

ನಿರೋಗಿಗಳು ಈ ಜಗದ ಮೂಲೆಯಲ್ಲಿ ಯಾರಿಹರು ಬಲ್ಲವರು ಹೇಳುವಿರಾ

ಜೀವನದ ಕೊನೆಯ ಕ್ಷಣದಲ್ಲಿ ರೋಗಿಗಳಿಗೆ ದೇವರಿಂದ ಪಿಸುಮಾತು ಕೇಳಿಸುತ್ತಿದೆ

 

ಈಶನ ಕರ್ಮಗಳಿಗೆ ಅನುಗುಣವಾಗಿಯೇ ಬದುಕು ಸಾಗುತ್ತಿದೆ ನೋಡು

ಐಕ್ಯತೆಯಿಲ್ಲದ ಮನುಜರ ನಟನೆಯಿಂದ ಪಿಸುಮಾತು ಕೇಳಿಸುತ್ತಿದೆ

***

೨.

ನಾನು ಬದುಕನ್ನು ಕೊಟ್ಟೆ ಅವಳು ಬೆಳಕಾಗಿಲ್ಲ ಸಾಕಿ

ತನುವ  ಇಂಚಿಂಚು ಹರಡಿದೆ ಇವಳು ಮರವಾಗಿಲ್ಲ ಸಾಕಿ

 

ಜೀವನ ನೀನೆಂದಷ್ಟು ಕೆಟ್ಟದ್ದು ಅಲ್ಲವೇ ಅಲ್ಲ ಗೊತ್ತಿಲ್ಲವೆ

ಮರದಿಂದ ಜಿನುಗಿದ ಮೇಣದಂತೆ ಇವನು ಮೆದುವಾಗಿಲ್ಲ ಸಾಕಿ

 

ದೊಡ್ಡದಾದ ರಸ್ತೆಗಳ ಪಕ್ಕ ಸಣ್ಣ ಗಲ್ಲಿಗಳಿದ್ದರೂ ವ್ಯರ್ಥ ಸಾಹಸ

ಬದುಕೂ ಅಷ್ಟೇ ದೂರದೃಷ್ಟಿಯ ಜೊತೆಗೆ ಚೆಲುವಾಗಿಲ್ಲ ಸಾಕಿ

 

ಮೂರು ದಿನದ ಸಂತೆಯೊಳು ಕುಣಿದದ್ದೇ ಬಂತು ನೋಡಿ

ಬಾಳು ಒಲುಮೆಯ ಹತ್ತಿರ ಪ್ರೀತಿಯು ಸವಿಯಾಗಿಲ್ಲ ಸಾಕಿ

 

ಕಪ್ಪಿಟ್ಟಿರುವ ಮುಖಗಳ ನಡುವೆ ಈಶಾ ಬೆವರಿದ್ದಾನೆ ನೋಡು

ಒಪ್ಪದಲಿ ಬೆರೆಯಲೂ ಆಗದೇ ಪ್ರೇಮವು ಗೆಲುವಾಗಿಲ್ಲ ಸಾಕಿ

 

-ಹಾ ಮ ಸತೀಶ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್