ಸೊಪ್ಪಿನ ಬೆಟ್ಟಗಳ ಕಥನ
“ಸೊಪ್ಪಿನ ಬೆಟ್ಟ” ಎಂದೊಡನೆ ಹಲವರ ಮನದಲ್ಲಿ ಬಾಲ್ಯದ ಹಲವು ನೆನಪುಗಳ ಮೆರವಣಿಗೆ. ಅಲ್ಲಿ ಓಡಾಡಿದ, ಆಟವಾಡಿದ, ಹಿರಿಯರಿಂದ ಸಸ್ಯಲೋಕದ ಮೊದಲ ಪಾಠಗಳನ್ನು ಕಲಿತ ನೆನಪುಗಳು ಹಸಿರುಹಸಿರು.
ಉತ್ತರಕನ್ನಡ ಜಿಲ್ಲೆಯ ಸೊಪ್ಪಿನ ಬೆಟ್ಟಗಳು ಇಂದಿಗೂ ವಿವಿಧ ಸಸ್ಯಗಳ ವಿಸ್ಮಯ ಖಜಾನೆಗಳು. ಈ ಸೊಪ್ಪಿನ ಬೆಟ್ಟಗಳು ಅನೇಕ ಕೃಷಿ ಚಟುವಟಿಕೆಗಳಿಗೆ ಆಧಾರ. ಅಲ್ಲಿ ಸಿಗುವ ಹಣ್ಣುಗಳಂತೂ ಹಲವಾರು. ಉತ್ತರಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಡಿಕೆ ಮತ್ತು ಕೆಲವು ಭತ್ತದ ಬೆಳೆಗಾರರು ಸೊಪ್ಪಿನ ಬೆಟ್ಟಗಳ ಸೊಪ್ಪಿನಮೇಲೆ ವಂಶಪಾರಂಪರ್ಯ ಹಕ್ಕು ಹೊಂದಿದ್ದಾರೆ. ತಮ್ಮ ತೋಟ ಮತ್ತು ಹೊಲಗಳಿಗೆ ಹಸುರುಗೊಬ್ಬರ ಮತ್ತು ಕಂಪೋಸ್ಟ್ ತಯಾರಿಗಾಗಿ ಸೊಪ್ಪಿನ ಬೆಟ್ಟದಿಂದ ಹಸಿಸೊಪ್ಪು ಮತ್ತು ಒಣಎಲೆ ಹೊತ್ತು ತರುವುದು ವಾಡಿಕೆ.
ಸೊಪ್ಪಿನ ಬೆಟ್ಟಗಳ ಸಸ್ಯರಾಶಿ ಅಲ್ಲಿ ಕಳೆಗಳ ಬೆಳವಣಿಗೆ ಮತ್ತು ಮಣ್ಣು ಸವಕಳಿ ಆಗುವುದನ್ನು ತಡೆಯುತ್ತದೆ. ಅಲ್ಲಿಂದ ಸಂಗ್ರಹಿಸಿದ ಸೌದೆ ಅಲ್ಲಿನ ರೈತರ ಮನೆಗಳ ಒಲೆಗಳಲ್ಲಿ ಬೆಂಕಿ ಉರಿಸಲು ಬಳಕೆ. ಜೊತೆಗೆ, ಸೊಪ್ಪಿನ ಬೆಟ್ಟಗಳು ಔಷಧೀಯ ಸಸ್ಯಗಳ ಆಗರಗಳು. ಸುತ್ತಮುತ್ತಲಿನ ಹಳ್ಳಿಗಳ ಪ್ರತಿಯೊಂದು ಕುಟುಂಬದವರಿಗೂ ಯಾವ್ಯಾವ ಸಾಮಾನ್ಯ ಅನಾರೋಗ್ಯಕ್ಕೆ ಸೊಪ್ಪಿನ ಬೆಟ್ಟದಿಂದ ಯಾವ್ಯಾವ ಗಿಡಮೂಲಿಕೆ ತಂದು ಔಷಧಿ ತಯಾರಿಸಬೇಕೆಂದು ಚೆನ್ನಾಗಿ ತಿಳಿದಿದೆ.
ಮಳೆಗಾಲದಲ್ಲಿ ಸೊಪ್ಪಿನ ಬೆಟ್ಟಗಳಲ್ಲಿ ಸಮೃದ್ಧ ಹುಲ್ಲಿನ ಬೆಳೆ. ಆದ್ದರಿಂದಲೇ ರೈತರು ಅಲ್ಲಿ ತಮ್ಮ ಜಾನುವಾರು ಮೇಯಿಸುತ್ತಾರೆ. ಸ್ಥಳೀಯರು ಕರಡ ಎಂದು ಕರೆಯುವ ಹುಲ್ಲು ಅಲ್ಲಿ ಬೆಳೆಯುವ ಒಂದು ಹುಲ್ಲಿನ ಜಾತಿ. ಇದು ಅಡಿಕೆ ಮರಗಳಿಗೆ ಅತ್ಯುತ್ತಮ ಹೊದಿಕೆ ಹುಲ್ಲು. ಮಳೆಗಾಲದ ನಂತರ ರೈತರು ಅಲ್ಲಿ ಜಾನುವಾರುಗಳನ್ನು ಮೇಯಿಸುವುದಿಲ್ಲ. ಯಾಕೆಂದರೆ, ಮಳೆ ಕಡಿಮೆಯಾದಂತೆ ಹುಲ್ಲಿನ ಬೆಳವಣಿಗೆ ಕಡಿಮೆಯಾಗುತ್ತದೆ. ಡಿಸೆಂಬರ್ ತಿಂಗಳಿನಿಂದ ಮೇ ತಿಂಗಳ ವರೆಗೆ ಸೊಪ್ಪಿನ ಬೆಟ್ಟದಿಂದ ಒಣಹುಲ್ಲು ಕೊಯ್ದು ತರುವ ರೈತರು ಅದನ್ನು ಜಾನುವಾರುಗಳಿಗೆ ಮೇವಾಗಿ ಹಾಕುತ್ತಾರೆ.
ಸೊಪ್ಪಿನ ಬೆಟ್ಟದಿಂದ ಸಿಗುವ ಅರಣ್ಯ ಉತ್ಪನ್ನಗಳಾದ ಉಪ್ಪಾಗೆ ಹಾಗೂ ಕಾಡುಹಣ್ಣುಗಳು ರೈತರಿಗೆ ಉತ್ತಮ ಆದಾಯ ಮೂಲಗಳು. ಉತ್ತರಕನ್ನಡ ಜಿಲ್ಲೆಯ ಹುಕ್ಕಳಿ ಗ್ರಾಮದ ರುದ್ರ ಗೌಡ ಉಪ್ಪಾಗೆಯ ಲಾಭದ ಬಗ್ಗೆ ಹೀಗೆನ್ನುತ್ತಾರೆ, “ಈಗ ಉಪ್ಪಾಗೆ ಮಾರಿದರೆ ಕಿಲೋಕ್ಕೆ ೮೦ ರೂಪಾಯಿ ಸಿಗುತ್ತದೆ. ಅದರಿಂದ ಬೇರೆ ಅನುಕೂಲಗಳೂ ಇವೆ. ಉಪ್ಪಾಗೆಯ ಬೀಜದ ಎಣ್ಣೆ ಅಡುಗೆಗೆ ಒಳ್ಳೆಯದು ಮತ್ತು ಉಪ್ಪಾಗೆ ಹಣ್ಣಿನಿಂದ ಮದ್ಯ ತಯಾರಿಸುತ್ತೇವೆ.”
ಕೃಷಿಗೆ ಪೂರಕವಾಗಿ ಸೊಪ್ಪಿನ ಬೆಟ್ಟಗಳ ಬಳಕೆ ಇತ್ತೀಚೆಗಿನ ವಿದ್ಯಮಾನವಲ್ಲ. ಇದು ೨,೦೦೦ ವರುಷಗಳಿಂದ ನಡೆದು ಬಂದ ವಾಡಿಕೆ. ಶತಮಾನಗಳ ಕಾಲ ಸೊಪ್ಪಿನ ಬೆಟ್ಟಗಳನ್ನೂ ಅಲ್ಲಿನ ಕಾಡುಗಳನ್ನೂ ಸಂರಕ್ಷಿಸಿದವರು ರೈತರು. ಆದರೆ ಅವರಿಗೆ ಸೊಪ್ಪಿನ ಬೆಟ್ಟಗಳ ಉತ್ಪನ್ನಗಳನ್ನು ಉಪಯೋಗಿಸಲು ಅಧಿಕೃತ ಹಕ್ಕು ಸಿಕ್ಕಿದ್ದು ೧೮೬೦ರ ದಶಕದಲ್ಲಿ – ಹಳ್ಳಿಗರು ದಟ್ಟ ಕಾಡಿನಿಂದ ಸೊಪ್ಪು ತರುವುದನ್ನು ತಡೆಯಲಿಕ್ಕಾಗಿ, ಪ್ರತಿಯೊಂದು ಮನೆಗೂ ಬ್ರಿಟಿಷರು ಕೆಲವು ಎಕರೆ ಅರಣ್ಯಜಮೀನನ್ನು ಕೃಷಿ ಹಾಗೂ ಗೃಹಬಳಕೆಗಾಗಿ ಒದಗಿಸಿದಾಗ.
ಅಮ್ಮೇನಹಳ್ಳಿಯ ರಘುನಾಥ ಗೌಡರ ಅಡಿಕೆ ತೋಟದ ವಿಸ್ತೀರ್ಣ ೨೫ ಎಕ್ರೆ; ಅವರಿಗೆ ಸುಮಾರು ೨೨೫ ಎಕ್ರೆ ಸೊಪ್ಪಿನ ಬೆಟ್ಟದ ಮೇಲೆ ಹಕ್ಕು. ಅವರು ಹೇಳುತ್ತಾರೆ, “ನಮಗೆ ಈ ಸೊಪ್ಪಿನ ಬೆಟ್ಟ ಕೊಟ್ಟವರು ಬ್ರಿಟಿಷರು. ಇತ್ತೀಚೆಗೆ ಮರು-ಸರ್ವೆ ಮಾಡಿಸಿ, ನಮ್ಮ ಹಕ್ಕಿಗೆ ಆಧಾರವಾಗಿ ಅರಣ್ಯ ಇಲಾಖೆ ದಾಖಲೆಪತ್ರ ಕೊಟ್ಟಿದೆ.”
ಇಂತಹ ದಾಖಲೆಪತ್ರಗಳ ಪ್ರಕಾರ, ಪ್ರತಿಯೊಂದು ಎಕ್ರೆ ಅಡಿಕೆ ತೋಟಕ್ಕೆ ಹೊಂದಿಕೊಂಡು ೯ ಎಕ್ರೆ ವರೆಗೆ ಸೊಪ್ಪಿನ ಬೆಟ್ಟಕ್ಕೆ ಹಾಗೂ ಪ್ರತಿಯೊಂದು ಎಕ್ರೆ ಭತ್ತದ ಗದ್ದೆಗೆ ೪ ಎಕ್ರೆ ವರೆಗೆ ಸೊಪ್ಪಿನ ಬೆಟ್ಟಕ್ಕೆ ರೈತರಿಗೆ ಹಕ್ಕು ನೀಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಸುತ್ತಮುತ್ತಲಿನ ಸೊಪ್ಪಿನಬೆಟ್ಟಗಳ ಬಗ್ಗೆ ೨೦೧೧ರಲ್ಲಿ ಅಧ್ಯಯನ ನಡೆಸಿದ ವಿಜ್ನಾನಿಗಳಿಗೆ ತಿಳಿದು ಬಂದ ಸಂಗತಿ: ಪ್ರತಿಯೊಬ್ಬ ರೈತನೂ ಪ್ರತಿ ವರುಷ ಸುಮಾರು ೩೧ ಟನ್ ಒಣಎಲೆ ಹಾಗೂ ೧೯ಟನ್ ಹಸುರೆಲೆಯನ್ನು ತಮ್ಮ ಸೊಪ್ಪಿನ ಬೆಟ್ಟದಿಂದ ಸಂಗ್ರಹಿಸುತ್ತಾರೆ.
ಸೊಪ್ಪಿನ ಬೆಟ್ಟಗಳಿಂದ ವರುಷವರುಷವೂ ಇಷ್ಟೆಲ್ಲ ಸಂಪನ್ಮೂಲ ಸಂಗ್ರಹಿಸಿದರೂ ಅವು ಜೀವವೈವಿಧ್ಯದ ಪ್ರಮುಖ ಆಕರಗಳಾಗಿ ಉಳಿದಿವೆ. ವಿಜ್ನಾನಿಗಳು ದಾಖಲಿಸಿದಂತೆ, ಉತ್ತರಕನ್ನಡ ಜಿಲ್ಲೆಯ ಅಡಿಕೆತೋಟಗಳ ಸೊಪ್ಪಿನಬೆಟ್ಟಗಳಲ್ಲಿ ೧೧೪ ಜಾತಿಯ ಹಕ್ಕಿಗಳಿವೆ. ಶೃಂಗೇರಿ ಪರಿಸರದಲ್ಲಿ ವಿಜ್ನಾನಿಗಳು ಗುರುತಿಸಿರುವುದು ೨೨೦ ಜಾತಿಯ ಮರಗಳನ್ನು ಮತ್ತು ೪೧ ಜಾತಿಯ ಆರ್ಕಿಡ್ ಹೂಗಳನ್ನು. ಆ ಸೊಪ್ಪಿನ ಬೆಟ್ಟಗಳು ಹಾಗೂ ಅದಕ್ಕೆ ತಗಲಿಕೊಂಡ ಕಾಡುಗಳು ಹಲವು ಜಾತಿಯ ಸಸ್ತನಿಗಳ ವಾಸಸ್ಥಾನ: ಕಾಡುಕೋಣ, ಜಿಂಕೆ, ಚಿರತೆ, ಕರಡಿ, ನರಿ ಇತ್ಯಾದಿ.
ಇತ್ತೀಚೆಗೆ, ಅತಿಕ್ರಮಣ ಹಾಗೂ ಮಿತಿಮೀರಿ ಸಂಪನ್ಮೂಲ ತೆಗೆಯುವುದು ಸೊಪ್ಪಿನ ಬೆಟ್ಟಗಳ ಉಳಿವಿಗೆ ಸಮಸ್ಯೆಯಾಗಿದೆ. “ಕೃಷಿಜಮೀನಿನ ವಿಸ್ತರಣೆಗಾಗಿ ಕಾನೂನುರೀತ್ಯಾ ಅವಕಾಶ ಕಲ್ಪಿಸಿರುವುದೂ ಸೊಪ್ಪಿನ ಬೆಟ್ಟಗಳ ವಿಸ್ತೀರ್ಣ ಕಡಿಮೆಯಾಗಲು ಕಾರಣವಾಗಿದೆ”, ಎನ್ನುತ್ತಾರೆ ಶರಶ್ಚಂದ್ರ ಲೇಲೆ. ಉತ್ತರಕನ್ನಡ ಜಿಲ್ಲೆಯ ಸೊಪ್ಪಿನ ಬೆಟ್ಟಗಳನ್ನು ಅಧ್ಯಯನ ಮಾಡಿರುವ ಅವರು ಬೆಂಗಳೂರಿನ ಅಶೋಕ ಟ್ರಸ್ಟ್ ಫಾರ್ ಇಕಾಲಜಿ ಆಂಡ್ ಎನ್ವಿರಾನ್ಮೆಂಟಿನ ಹಿರಿಯ ಫೆಲೋ. “ಕೆಲವು ಜಿಲ್ಲೆಗಳಲ್ಲಿ ವಿಸ್ತಾರ ಪ್ರದೇಶದಲ್ಲಿ ಸೊಪ್ಪಿನ ಬೆಟ್ಟಗಳನ್ನು ಕಾಫಿ ಅಥವಾ ಇನ್ನಿತರ ಪ್ಲಾಂಟೇಷನ್ ಬೆಳೆಗಳ ತೋಟಗಳನ್ನಾಗಿ ಪರಿವರ್ತಿಸಲಾಗಿದೆ” ಎಂದು ತಿಳಿಸುತ್ತಾರೆ ಅವರು.
೨೦೧೨ರಲ್ಲಿ ವಿಜ್ನಾನಿಗಳು ಕಂಡುಕೊಂಡ ಒಂದು ಸಂಗತಿ ಕುತೂಹಲದಾಯಕ: ಒಂದೆಕ್ರೆ ಭತ್ತದ ಗದ್ದೆಗೆ ಅಗತ್ಯವಾದ ಕಂಪೋಸ್ಟಿಗಿಂತ ಆರು ಪಟ್ಟು ಅಧಿಕ ಕಂಪೋಸ್ಟ್ ಒಂದೆಕ್ರೆ ಅಡಿಕೆ ತೋಟಕ್ಕೆ ಅಗತ್ಯ; ಆದರೆ, ಒಂದೆಕ್ರೆ ಅಡಿಕೆ ತೋಟದ ಆದಾಯ ಒಂದೆಕ್ರೆ ಭತ್ತದ ಗದ್ದೆಯ ಆದಾಯಕ್ಕಿಂತ ನಾಲ್ಕು ಪಟ್ಟು ಅಧಿಕ. ಆದ್ದರಿಂದ, ಶೃಂಗೇರಿ ಪರಿಸರದಲ್ಲಿ ಹೆಚ್ಚೆಚ್ಚು ರೈತರು ತಮ್ಮ ಭತ್ತದ ಗದ್ದೆಗಳನ್ನು ಅಡಿಕೆ ತೋಟಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ಇದರಿಂದಾಗಿ, ಸೊಪ್ಪಿನ ಬೆಟ್ಟಗಳಿಂದ ಹೆಚ್ಚೆಚ್ಚು ಹಸುರುಸೊಪ್ಪು ತರುವಂತಾಗಿ, ಅಲ್ಲಿನ ಹಸುರಿನ ಪರಿಮಾಣ ಕಡಿಮೆಯಾಗುತ್ತಿದೆ.
“ಅದೇನಿದ್ದರೂ, ಸೊಪ್ಪಿನ ಬೆಟ್ಟಗಳು ಸುಸ್ಥಿರವಾಗಿ ಉಳಿದಿವೆ. ಯಾಕೆಂದರೆ ಅವುಗಳ ಮೇಲೆ ರೈತರಿಗೆ ವೈಯುಕ್ತಿಕ ಹಕ್ಕು ಹಾಗೂ ನಿಯಂತ್ರಣವಿದೆ. ಇಂತಹ ಹಕ್ಕು ಅರಣ್ಯನಾಶಕ್ಕೆ ಕಾರಣವಾಗುತ್ತದೆ ಎಂಬ ಬ್ರಿಟಿಷ್ ಮತ್ತು ಭಾರತೀಯ ಅರಣ್ಯ ಅಧಿಕಾರಿಗಳ ಅನಿಸಿಕೆ ತಪ್ಪೆಂದು ತಿಳಿಯಬೇಕಾಗಿದೆ” ಎಂದು ವಿವರಿಸುತ್ತಾರೆ ಶರಶ್ಚಂದ್ರ ಲೇಲೆ.
ಬೆಂಗಳೂರಿನ ಭಾರತೀಯ ವಿಜ್ನಾನ ಸಂಸ್ಥೆಯ ಸುಸ್ಥಿರ ತಂತ್ರಜ್ನಾನ ಕೇಂದ್ರದ ಕನ್ಸಲ್ಟೆಂಟ್ ವಿಜ್ನಾನಿ ಇಂದು ಕೆ. ಮೂರ್ತಿ, ಈ ಅಭಿಪ್ರಾಯಕ್ಕೆ ದನಿಗೂಡಿಸುವುದು ಹೀಗೆ: “ಈ ಸಮುದಾಯ-ಭೂಮಿ ನಾಶವಾಗಿಲ್ಲ ಯಾಕೆಂದರೆ ಪ್ರತಿಯೊಬ್ಬ ರೈತನಿಗೂ ತಾನು ತನ್ನ ಸೊಪ್ಪಿನ ಬೆಟ್ಟದ ಮಾಲೀಕನೆಂಬ ಭಾವನೆಯಿದೆ. ಸೊಪ್ಪಿನ ಬೆಟ್ಟ ಹೇಗಿದೆ ಎಂಬುದು ಪ್ರತಿಯೊಬ್ಬ ರೈತ ಅದನ್ನು ಹೇಗೆ ನೋಡಿಕೊಳ್ಳುತ್ತಾನೆ ಎಂಬುದನ್ನು ಅವಲಂಬಿಸಿದೆ.”
ಸೊಪ್ಪಿನ ಬೆಟ್ಟದಿಂದ ರೈತರು ಮಿತಿಮೀರಿ ಸೊಪ್ಪು ತೆಗೆಯುವುದನ್ನು ತಡೆಯುವುದಕ್ಕಾಗಿ, ಕರ್ನಾಟಕದ ಅರಣ್ಯ ಕಾಯಿದೆ ಹೀಗೆಂದು ನಿಗದಿಪಡಿಸಿದೆ: ಪ್ರತಿಯೊಂದು ಹೆಕ್ಟೇರ್ ಸೊಪ್ಪಿನ ಬೆಟ್ಟದಲ್ಲಿ ಕನಿಷ್ಠ ನೂರು ಮರಗಳಿರಬೇಕು; ಆ ನೂರು ಮರಗಳಲ್ಲಿ ಕನಿಷ್ಠ ೫೦ ಅರಣ್ಯಗಳಲ್ಲಿ ಸಹಜವಾಗಿ ಬೆಳೆಯುವ ಮರಗಳಾಗಿರಬೇಕು.
ಸೊಪ್ಪಿನ ಬೆಟ್ಟದ ಬಗ್ಗೆ ರೈತರ ಧೋರಣೆಯನ್ನು ರಘುನಾಥ ಗೌಡರ ಈ ಮಾತುಗಳು ಸ್ಪಷ್ಟ ಪಡಿಸುತ್ತವೆ; “ಸೊಪ್ಪಿನ ಬೆಟ್ಟವಿಲ್ಲದಿದ್ದರೆ ನಮ್ಮ ಅಡಿಕೆ ತೋಟಗಳು ಒಳ್ಳೆಯ ಫಸಲು ಕೊಡೋದಿಲ್ಲ. ಹಾಗಾಗಿ, ನಾವು ಸೊಪ್ಪಿನ ಬೆಟ್ಟವನ್ನು ಜೋಪಾನ ಮಾಡುತ್ತೇವೆ ಮತ್ತು ಪ್ರತಿ ವರುಷ ಸೊಪ್ಪಿನ ಬೆಟ್ಟದ ಬೇರೆಬೇರೆ ಜಾಗದಿಂದ ಸೊಪ್ಪು ಕಡಿಯುತ್ತೇವೆ.”
Comments
ಉ: ಸೊಪ್ಪಿನ ಬೆಟ್ಟಗಳ ಕಥನ
ಇಂತಹ ಅವಕಾಶ ಕರಾವಳಿ ಮತ್ತು ಸತ್ತಮುತ್ತಲ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಉಳಿದೆಡೆ ಇಂತಹ ಅವಕಾಶ ರೈತರುಗಳಿಗೆ ಇಲ್ಲ.