ಸೊಳ್ಳೆ ಕಡಿತದಿಂದ ಬೇಸತ್ತು ಹೋಗಿದ್ದೀರಾ?

ಮಳೆಗಾಲ ಪ್ರಾರಂಭವಾಗಿ ಬರೋಬರಿ ಒಂದು ತಿಂಗಳಾಗುತ್ತಾ ಬಂತು. ಬೇಸಿಗೆ ಕಾಲಕ್ಕಿಂತಲೂ ಮಳೆಗಾಲದ ಸಮಯದಲ್ಲಿ ಸೊಳ್ಳೆಗಳ ಕಾಟ ಬಹಳ. ಈ ಸೊಳ್ಳೆಗಳ ಕಡಿತದಿಂದ ಮಲೇರಿಯಾ, ಡೆಂಗ್ಯೂ ಮೊದಲಾದ ಕಾಯಿಲೆಗಳು ಬರುವ ಸಾಧ್ಯತೆ ಅಧಿಕ. ಸೊಳ್ಳೆಗಳ ಕಾಟವನ್ನು ತಪ್ಪಿಸಲು ನಾವು ರಾಸಾಯನಿಕ ವಸ್ತುಗಳಿಂದ ತಯಾರಿಸಿದ ವಿಕರ್ಷಕಗಳನ್ನು ಬಳಸುತ್ತೇವೆ. ಇದರಿಂದ ಸೊಳ್ಳೆಯೇನೋ ಸಾಯಬಹುದು ಅಥವಾ ಓಡಿಹೋಗಬಹುದು ಆದರೆ ಮನುಷ್ಯರ ಮೇಲೆ ಪ್ರತಿಕೂಲ ಪರಿಣಾಮವಾಗುವ ಸಾಧ್ಯತೆ ಹೆಚ್ಚಿದೆ. ಸೊಳ್ಳೆಗಾಗಿ ನಾವು ಬಳಸುವ ಕಾಯಿಲ್, ಲಿಕ್ವಿಡ್ ಗಳು ಮಕ್ಕಳಲ್ಲಿ ಅನಾರೋಗ್ಯ ತರಬಹುದು. ಸೊಳ್ಳೆಗಳನ್ನು ತಪ್ಪಿಸಲು, ಮನೆಯಲ್ಲಿ ನೀವು ಸೊಳ್ಳೆ ನಿವಾರಕ ದ್ರವ್ಯವನ್ನು ಸಿಂಪಡಿಸಬಹುದು. ಕಡ್ಡಿಗಳನ್ನು ಬಳಸಬಹುದು. ಆದರೆ ಮನೆಯಿಂದ ಹೊರಗೆ ಹೋಗುವಾಗ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ.
ಸೊಳ್ಳೆ ಕಡಿತವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ಅನೇಕ ಜನರು ಸಂಜೆಯ ಹೊತ್ತಿಗೆ ಮನೆಯಿಂದ ಹೊರಗೆ ಹೋಗಲು ಹೆದರುತ್ತಾರೆ. ಆದರೆ ಈಗ ನೀವು ಹಾಗೆ ಮಾಡುವ ಅಗತ್ಯವಿಲ್ಲ. ಮನೆಯಿಂದ ಹೊರಗೆ ಹೋಗುವಾಗ ಬೇವಿನ ಎಣ್ಣೆಯನ್ನು ಹಚ್ಚಿಕೊಂಡರೆ ಒಂದು ಸೊಳ್ಳೆಯೂ ನಿಮ್ಮ ಹತ್ತಿರ ಬರಲ್ಲ.
ಬೇವಿನ ಎಣ್ಣೆ : ಪ್ರಾಚೀನ ಕಾಲದಿಂದಲೂ ಬೇವಿನ ಎಣ್ಣೆಯನ್ನು ಆಯುರ್ವೇದ ಔಷಧವಾಗಿ ಬಳಸಲಾಗುತ್ತಿದೆ. ಈ ಎಣ್ಣೆ ದೇಹಕ್ಕೆ ವಿವಿಧ ಬಗೆಯಲ್ಲಿ ಪ್ರಯೋಜನವನ್ನು ನೀಡುತ್ತದೆ. ನೀವು ಇದನ್ನು ನಿಮ್ಮ ದೇಹದ ಮೇಲೆ ಹಚ್ಚಿಕೊಂಡರೆ, ಅದು ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಸೊಳ್ಳೆಗಳನ್ನು ತಪ್ಪಿಸಲು ಇದು ನೈಸರ್ಗಿಕ ಮತ್ತು ಸುರಕ್ಷಿತ ಮಾರ್ಗವಾಗಿದೆ.
ಇದನ್ನು ಬಳಸುವ ವಿಧಾನ : ಒಮ್ಮೆ ನೀವು ಬೇವಿನ ಎಣ್ಣೆ ಹಚ್ಚಿಕೊಂಡರೆ ಅದು ೪ ರಿಂದ ೬ ಗಂಟೆಗಳ ಕಾಲ ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅದಕ್ಕಾಗಿ ದೇವಿನ ಎಣ್ಣೆಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಚರ್ಮಕ್ಕೆ ಹಚ್ಚಿಕೊಳ್ಳಿ. ಬೇವಿನ ಎಣ್ಣೆಯನ್ನು ನೇರವಾಗಿ ಚರ್ಮಕ್ಕೆ ಹಚ್ಚುವುದರಿಂದ ಅಲರ್ಜಿ ಉಂಟಾಗುತ್ತದೆ. ಆದ್ದರಿಂದ ಅದನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಳ್ಳುವುದು ಉತ್ತಮ.
ಈ ಬೇವಿನ ಎಣ್ಣೆ ಸೊಳ್ಳೆಗಳನ್ನು ದೂರವಿಡಲು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಮಾರ್ಗವಾಗಿದೆ. ಬೇವಿನ ಎಣ್ಣೆಯನ್ನು ಹಚ್ಚುವುದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಆದ್ದರಿಂದ ನೀವು ಯಾವುದೇ ಚಿಂತೆಯಿಲ್ಲದೆ ಬೇವಿನ ಎಣ್ಣೆಯನ್ನು ಹಚ್ಚಬಹುದು. ಕೆಲವರಿಗೆ ಬೇವಿನ ಎಣ್ಣೆಯನ್ನು ಹಚ್ಚಿಕೊಂಡಾಗ ಅಲರ್ಜಿಯಾಗುವ ಸಾಧ್ಯತೆ ಇದೆ. ಇದನ್ನು ಗಮನಿಸಿ, ಉತ್ತಮ ದರ್ಜೆಯ ಶುದ್ಧ ಬೇವಿನ ಎಣ್ಣೆಯನ್ನೇ ಬಳಸಲು ಮರೆಯದಿರಿ. ಸೊಳ್ಳೆ ಕಾಟದಿಂದ ಮುಕ್ತಿ ಹೊಂದಿರಿ
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ