ಸೊಳ್ಳೆ ವಿಕರ್ಷಕಗಳಿಂದ ಆರೋಗ್ಯಕ್ಕೆ ಹಾನಿ

ಸೊಳ್ಳೆ ವಿಕರ್ಷಕಗಳಿಂದ ಆರೋಗ್ಯಕ್ಕೆ ಹಾನಿ

ಮಳೆಗಾಲ ಶುರುವಾಗುತ್ತಿದ್ದಂತೆ ಡೆಂಗ್ಯೂ ಮತ್ತು ಮಲೇರಿಯಾ ರೋಗ ಬಾಧೆಗೆ ಒಳಗಾಗುವವರ ಸಂಖ್ಯೆಯ ಹೆಚ್ಚಳ ವರದಿಯಾಗುತ್ತದೆ. ಹಾಗಂತ “ಸೊಳ್ಳೆ ಪರದೆ ದೊಡ್ಡ ರಗಳೆ ಅಂತ ಮೂಲೆಗೆಸೆದಿದ್ದೀರಾ? ಸೊಳ್ಳೆ ಓಡಿಸುವ ರಾಸಾಯನಿಕಗಳಿರುವ ಕಾಯ್ಲ್ ಅಥವಾ ಮ್ಯಾಟ್‌ಗಳನ್ನು ಬೆಡ್‌ರೂಂನಲ್ಲಿ ಉರಿಸಿಟ್ಟರೆ ಚೆನ್ನಾಗಿ ನಿದ್ದೆ ಮಾಡಬಹುದು ಎಂದು ಪ್ರಚಾರ ಮಾಡುವ ಜಾಹೀರಾತುಗಳನ್ನು ಬಹಳಷ್ಟು ಜನರು ನಂಬಿದ್ದಾರೆ. ಹಾಗಾಗಿ ಸೊಳ್ಳೆ ಪರದೆ ಮೂಲೆಗೆಸೆದು, ಸೊಳ್ಳೆ ಕಾಯ್ಲ್ ಅಥವಾ ಮ್ಯಾಟ್ ಉರಿಸಿಟ್ಟು ಮಲಗುತ್ತಿದ್ದಾರೆ. ಆದರೆ ಅವು ಸುರಕ್ಷಿತವೇ? ಅಲ್ಲ.

ಅಧ್ಯಯನಗಳ ಫಲಿತಾಂಶ
ಸೊಳ್ಳೆ ವಿಕರ್ಷಕಗಳಲ್ಲಿ ಇರುವ ರಾಸಾಯನಿಕಗಳು ನಮ್ಮ ಕೇಂದ್ರ ನರಮಂಡಲಕ್ಕೆ ಹಾನಿ ಮಾಡುತ್ತವೆ ಎಂದು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿನ ವೈದ್ಯಕೀಯ ತಜ್ನರಾದ ಡಾ. ದೇವಿಕಾ ನಾಗ್ ಅವರು ಕಾರ್ಖಾನೆ ಕೆಲಸಗಾರರ ಬಗ್ಗೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಸೊಳ್ಳೆ ವಿಕರ್ಷಕಗಳು ಮನುಷ್ಯರಲ್ಲಿ ತೀವ್ರ ದೈಹಿಕ ಸಂಕಟ ಉಂಟು ಮಾಡುತ್ತವೆ ಎಂಬ ಸತ್ಯಾಂಶ ಚೀನಾದಿಂದಲೂ ವರದಿಯಾಗಿದೆ.

ಸೊಳ್ಳೆ ವಿಕರ್ಷಕಗಳ ಧೂಮವನ್ನು ದೀರ್ಘಾವಧಿ ಉಸಿರಾಡುವ ಎಳೆಗೂಸುಗಳಂತೂ ಅಪಾರ ದೈಹಿಕ ಸಂಕಟ ಅನುಭವಿಸುತ್ತವೆ. ಆದರೆ, ಆ ಎಳೆಗೂಸುಗಳ ಹೆತ್ತವರಿಗೆ ಸೊಳ್ಳೆ ವಿಕರ್ಷಕಗಳೇ ಅದಕ್ಕೆ ಕಾರಣವೆಂದು ತಿಳಿಯುವುದಿಲ್ಲ!

ಬಟ್ಟೆಗಳನ್ನು ಕೀಟಗಳಿಂದ ರಕ್ಷಿಸಲು ಅವುಗಳ ಎಡೆಯಲ್ಲಿ ನಾವು ಇರಿಸುವ ನ್ಯಾಫ್ತಲೀನ್ ಗುಳಿಗೆಗಳೂ ಐದು ವರುಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಿಷಕಾರಿ ಆಗಬಲ್ಲವು ಎಂದೂ ಡಾ. ದೇವಿಕಾ ಎಚ್ಚರಿಸಿದ್ದಾರೆ. ಆ ಗುಳಿಗೆಗಳ ವಾಸನೆ ಅಡರಿದ್ದ ಶಾಲುಗಳಲ್ಲಿ ಎಳೆ ಮಕ್ಕಳನ್ನು ಸುತ್ತಿ ಮಲಗಿಸಿದಾಗ, ಮಕ್ಕಳು ಅರೆ ಮೂರ್ಛಾವಸ್ಥೆಗೆ ಒಳಗಾದರು ಎಂದು ಅವರು ತಿಳಿಸಿದ್ದಾರೆ.

ವೈದ್ಯರಿಂದ ಸ್ಪಷ್ಟ ಎಚ್ಚರಿಕೆ
ಮುಂಬೈನಲ್ಲಿ ಜರಗಿದ ಇಂಡಿಯನ್ ಮೆಡಿಕಲ್ ಕೌನ್ಸಿಲಿನ ಸಮ್ಮೇಳನದಲ್ಲಿ ವೈದ್ಯರೆಲ್ಲರೂ ಮಾಡಿರುವ ಶಿಫಾರಸ್ ಸ್ಪಷ್ಟವಾಗಿದೆ: “ಪೈರೆಥ್ರಿನ್‌ನಿಂದ ತಯಾರಿಸಿದ ಸೊಳ್ಳೆ ಸುರುಳಿ ಹಾಗೂ ಮ್ಯಾಟ್‌ಗಳನ್ನು ಜನರು ಬಳಸಬಾರದು.” ಯಾಕೆಂದರೆ ಆ ಸೊಳ್ಳೆ ವಿಕರ್ಷಕಗಳು ಅಸ್ತಮಾ ಮತ್ತು ಇತರ ಶ್ವಾಸಕೋಶ ಸಂಬಂಧಿ ತೊಂದರೆಗಳಿರುವ ಮಕ್ಕಳಿಗೂ ವಯಸ್ಕರಿಗೂ ಹಾನಿಕಾರಕ.

ಸೊಳ್ಳೆ ವಿಕರ್ಷಕಗಳಲ್ಲಿ ಬಳಸುವ ಡಿ-ಅಲ್ಲೆಥ್ರಿನ್ ಎಂಬ ಇನ್ನೊಂದು ರಾಸಾಯನಿಕವೂ ಅಪಾಯಕಾರಿ. ಅದು ಕಣ್ಣು, ಚರ್ಮ ಮತ್ತು ಶ್ವಾಸನಾಳವನ್ನು ಕೆರಳಿಸುತ್ತದೆ. ಮಾತ್ರವಲ್ಲ, ನರಮಂಡಲದ ಮೇಲೆಯೂ ದುಷ್ಪರಿಣಾಮ ಬಿರಬಲ್ಲದು. ಅದನ್ನು ಸ್ಪ್ರೇ ಮಾಡಿದಾಗ, ಉಸಿರಿನ ಗಾಳಿಯೊಂದಿಗೆ ಅದು ದೇಹದೊಳಕ್ಕೆ ಹೀರಲ್ಪಡುತ್ತದೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ಅಧ್ಯಯನದ ವರದಿಯೂ ಆ ಬುಲೆಟಿನ್‌ನಲ್ಲಿದೆ. ಅದರ ಪ್ರಕಾರ, ಜನಪ್ರಿಯ ಸೊಳ್ಳೆ ಕಾಯ್ಲ್ ಮತ್ತು ಮ್ಯಾಟ್‌ಗಳ ಬಳಕೆದಾರರು ಆಗಾಗ್ಗೆ ಶ್ವಾಸಕೋಶಗಳ ಸೋಂಕಿನಿಂದ ಬಳಲುತ್ತಾರೆ.

ಲಕ್ನೋದ ಕೈಗಾರಿಕಾ ಟಾಕ್ಸಿಕಾಲಜಿ ಸಂಶೋಧನಾ ಕೇಂದ್ರದಲ್ಲಿ ಇಲಿಗಳ ಬಗ್ಗೆ ನಡೆಸಿದ ಅಧ್ಯಯನದ ಫಲಿತಾಂಶಗಳು ನಮ್ಮನ್ನು ಗಾಬರಿಪಡಿಸುತ್ತವೆ. ದ್ರವರೂಪದ ಸೊಳ್ಳೆ ವಿಕರ್ಷಕಗಳ ಸಂಪರ್ಕದಲ್ಲಿದ್ದ ಇಲಿಗಳ ಮೆದುಳು, ಲಿವರ್ ಮತ್ತು ಮೂತ್ರಕೋಶಗಳು ಹಾನಿಗೊಳಗಾದವು.

ಭಾರತದಲ್ಲಿ ಎಷ್ಟರ ಮಟ್ಟಿಗೆ ನಿಯಂತ್ರಣ ತಪ್ಪಿದೆಯೆಂದರೆ ಸೊಳ್ಳೆ ವಿಕರ್ಷಕಗಳ ಅನೇಕ ಉತ್ಪಾದಕರು ಕೀಟನಾಶಕ ಕಾಯಿದೆಯನ್ನೇ ಉಲ್ಲಂಘಿಸುತ್ತಿದ್ದಾರೆ! ತಮ್ಮ ಉತ್ಪನ್ನದ ರಿಜಿಸ್ಟ್ರೇಷನ್ ಸರ್ಟಿಫಿಕೇಟಿನಲ್ಲಿ ನಮೂದಿಸದ ವಾಸನಾ ದ್ರವ್ಯಗಳನ್ನು ಅವರು ಆ ಉತ್ಪನ್ನಗಳಲ್ಲಿ ಬಳಸುತ್ತಿದ್ದಾರೆ. ಯಾಕೆಂದರೆ, ಯಾರೂ ತನಿಖೆ ಮಾಡುವುದಿಲ್ಲ.

ವಿದೇಶಗಳ ಅಧ್ಯಯನ
ಸೊಳ್ಳೆ ಓಡಿಸುವ ಕಾಯ್ಲ್ ಮತ್ತು ಮ್ಯಾಟ್‌ಗಳಲ್ಲಿ ಬಳಸುವ ಅಲ್ಲೆಥ್ರಿನ್ ಬಗ್ಗೆ ಸ್ವೀಡನ್ ಮತ್ತು ಯುಎಸ್‌ಎ ದೇಶಗಳಲ್ಲಿ ನಡೆಸಿದ ಅಧ್ಯಯನಗಳ ಫಲಿತಾಂಶಗಳೂ ನಮ್ಮ ಕಣ್ಣು ತೆರೆಸಬಲ್ಲವು. ಅದರ ದೀರ್ಘಾವಧಿಯ ಬಳಕೆಯು ಮೆದುಳಿನ ಮತ್ತು ರಕ್ತದ ಕ್ಯಾನ್ಸರಿಗೆ ಹಾಗೂ ಗರ್ಭಿಣಿಯರ ಭ್ರೂಣದ ಆಕಾರಗೆಡಲು ಕಾರಣವಾಗುತ್ತದೆಂದು ಇದೀಗ ರುಜುವಾತು ಆಗಿದೆ. ಇಂಟರ್‍-ನೆಟ್‌ನ ಸುಮಾರು ಐದು ಲಕ್ಷ ವೆಬ್-ಸೈಟುಗಳಲ್ಲಿ ದಾಖಲಾಗಿರುವ ಅಲ್ಲೆಥ್ರಿನ್‌ನ ವಿಷಪರಿಣಾಮಗಳ ವರದಿಗಳನ್ನು ಯಾರೂ ಓದಿಕೊಳ್ಳಬಹುದು.

ಯುಎಸ್‌ಎಯಲ್ಲಿ ಈ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪೆನಿಗಳು ಪ್ರತಿಯೊಂದು ಪೊಟ್ಟಣದಲ್ಲಿಯೂ “ಹೊರ ಬಳಕೆಗಾಗಿ ಮಾತ್ರ” ಎಂದು ಮುದ್ರಿಸುವುದು ಕಡ್ಡಾಯ. ಆದರೆ ಭಾರತದಲ್ಲಿ ಅದೇ ಉತ್ಪನ್ನಗಳ ಜಾಹೀರಾತಿನಲ್ಲಿ ಏನನ್ನು ತೋರಿಸಲಾಗುತ್ತಿದೆ? ಕುಟುಂಬಗಳು ಆ ಉತ್ಪನ್ನಗಳನ್ನು ಮನೆಯೊಳಗೇ ಉರಿಸಿ ಹಾಯಾಗಿರುವುದನ್ನು!

ಮಲೇರಿಯಾ: ಅಧ್ಯಯನಗಳು
ಮಲೇರಿಯಾ ಸಂಶೋಧನಾ ಕೇಂದ್ರವು 1998ರಲ್ಲಿ ಉತ್ತರ ಪ್ರದೇಶದ ಎರಡು ಹಳ್ಳಿಗಳಲ್ಲಿ ಸೊಳ್ಳೆ ವಿಕರ್ಷಕಗಳ ಅಧ್ಯಯನ ನಡೆಸಿತು. ಅದರಿಂದ ತಿಳಿದು ಬಂದ ಸಂಗತಿ: ಸೊಳ್ಳೆ ವಿಕರ್ಷಕವಾಗಿ ಉಪಯೋಗಿಸುವ ಯಾವುದೇ ರಾಸಾಯನಿಕ ಸೊಳ್ಳೆಗಳ ವಿರುದ್ಧ ಶೇಕಡಾ 100 ರಕ್ಷಣೆ ಒದಗಿಸುವುದಿಲ್ಲ.

ಅನಂತರ ಆ ಕೇಂದ್ರವು ರಾಷ್ಟ್ರಮಟ್ಟದಲ್ಲಿ ಹಲವಾರು ನಗರಗಳಲ್ಲಿರುವ ಮನೆಗಳ ಸರ್ವೆ ನಡೆಸಿತು. ಎಂಟು ನಗರಗಳ 653 ಮನೆಗಳ ಸರ್ವೆಯಲ್ಲಿ ತಿಳಿದು ಬಂದದ್ದು: 193 ಜನರು ಸೊಳ್ಳೆ ವಿಕರ್ಷಕಗಳಿಂದಾಗಿ ವಿವಿಧ ಅನಾರೋಗ್ಯದ ಸಮಸ್ಯೆಗಳಿಂದ ಬಾಧಿತರಾಗಿದ್ದರು - ಉಸಿರಾಟದ ಸಮಸ್ಯೆಗಳು, ತಲೆನೋವು, ಕಣ್ಣುಗಳ ಉರಿ, ಚರ್ಮದ ದಡಿಕೆಗಳು, ಉಸಿರುಗಟ್ಟುವಿಕೆ, ತುರಿಕೆ, ಬ್ರಾಂಕೈಟಿಸ್, ಗಂಟಲು ನೋವು, ಕಿವಿ ನೋವು. ಜೊತೆಗೆ, ಸೊಳ್ಳೆ ವಿಕರ್ಷಕ ಕ್ರೀಮ್ ಬಳಸಿದ 174 ಜನರಲ್ಲಿ 20 ಜನರು ತಮಗಾಗಿರುವ ಚರ್ಮರೋಗ ಅಥವಾ ಎಲರ್ಜಿಯ ಬಗ್ಗೆ ದೂರಿಕೊಂಡರು.

ಅದೇ ಪ್ರದೇಶಗಳ 286 ವೈದ್ಯರನ್ನೂ ಈ ಬಗ್ಗೆ ಪ್ರಶ್ನಿಸಲಾಯಿತು. ಅವರಲ್ಲಿ 165 ವೈದ್ಯರು (ಶೇಕಡಾ 50) ಸೊಳ್ಳೆ ವಿಕರ್ಷಕಗಳಿಂದಾಗಿ ವಿಷಕಾರಿ ಪರಿಣಾಮಗಳು ಉಂಟಾದ ಪ್ರಕರಣಗಳ ಮಾಹಿತಿ ನೀಡಿದರು. ಸೊಳ್ಳೆ ವಿಕರ್ಷಕಗಳಿಂದ (ಅಂದರೆ ಕಾಯ್ಲ್, ಮ್ಯಾಟ್ ಅಥವಾ ದ್ರಾವಣ ಬಳಸುತ್ತಿದ್ದವರಲ್ಲಿ) ಉಂಟಾದ ದೈಹಿಕ ಪ್ರತಿಕ್ರಿಯೆಗಳಿಂದಾಗಿ ತಮ್ಮ ರೋಗಿಗಳಲ್ಲಿ ಅಸ್ತಮಾ, ಶ್ವಾಸಕೋಶಗಳ ಉರಿ, ಕಣ್ಣುಗಳ ಉರಿ ಉಂಟಾಗಿ ಅವಕ್ಕೆ ತಾವು ಚಿಕಿತ್ಸೆ ನೀಡಬೇಕಾಯಿತು ಎಂದು ಆ ವೈದ್ಯರೆಲ್ಲರೂ ಹೇಳಿದರು.

ಭಾರತದಲ್ಲಿ ಸೊಳ್ಳೆ ವಿಕರ್ಷಕಗಳ ವಾರ್ಷಿಕ ವಹಿವಾಟು: ರೂ.4,400 ಕೋಟಿ ದಾಟಿದೆ!
ಸೊಳ್ಳೆ ವಿಕರ್ಷಕಗಳಿಂದ ನಮ್ಮ ಆರೋಗ್ಯಕ್ಕೆ ಹಾನಿ ಖಂಡಿತ ಎಂದು ಅರ್ಥ ಮಾಡಿಕೊಳ್ಳಲು ಇಷ್ಟು ಮಾಹಿತಿ ಸಾಲದೇ? ಅದೇನಿದ್ದರೂ ಭಾರತದಲ್ಲಿ ಸೊಳ್ಳೆ ವಿಕರ್ಷಕ ಕಾಯ್ಲ್, ಮ್ಯಾಟ್ ಮತ್ತು ಕ್ರೀಂಗಳ ಮಾರಾಟ ಹೆಚ್ಚುತ್ತಲೇ ಇದೆ. ಈಗಾಗಲೇ ಅವುಗಳ ವಾರ್ಷಿಕ ಮಾರಾಟ ರೂ. 4,400 ಕೋಟಿ ದಾಟಿದೆ.

ಯಾಕೆಂದರೆ ಅವುಗಳಿಂದ ಆರೋಗ್ಯಕ್ಕೆ ಹಾನಿ ಎಂಬ ಮಾಹಿತಿಯನ್ನು ಬಳಕೆದಾರರಿಗೆ ತಿಳಿಸಲಾಗುತ್ತಿಲ್ಲ. ಬದಲಾಗಿ, ಸೊಳ್ಳೆ ವಿಕರ್ಷಕಗಳ ಜಾಹೀರಾತುಗಳಲ್ಲಿ ಅವುಗಳ ಧೂಮ ತುಂಬಿದ ಕೋಣೆಗಳಲ್ಲಿ ಮಕ್ಕಳು ಹಾಯಾಗಿ ನಿದ್ರಿಸುವುದನ್ನು ತೋರಿಸಿ ತಪ್ಪು-ಮಾಹಿತಿ ನೀಡಲಾಗುತ್ತಿದೆ!

ಇನ್ನಾದರೂ ಬಳಕೆದಾರರು ಜಾಗೃತರಾಗಿ ತಮ್ಮ ಹಾಗೂ ಮಕ್ಕಳ ಆರೋಗ್ಯ ರಕ್ಷಿಸಿಕೊಳ್ಳಬೇಕು. ಅದಕ್ಕಾಗಿ ಮಾಡಬೇಕಾದ ಮುಖ್ಯ ಕೆಲಸ: ಸೊಳ್ಳೆ ಪರದೆಯೊಳಗೆ ಮಲಗಲು ಶುರು ಮಾಡುವುದು.