ಸೊಸೆಯನ್ನ ಮಗಳಂತೆ ಕಾಣಿ...

ನಿಜ ಸ್ನೇಹಿತರೆ, ಇಂದಿನ ದಿನಮಾನದ ಅತ್ತೆ ಸೊಸೆಯರ ಜಗಳಕ್ಕೆ ನ್ಯೂಟನ್ನನ ಮೂರನೇ ನಿಯಮವಾದ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ತುಂಬಾ ಉಪಯೋಗಕ್ಕೆ ಬರುತ್ತೆ ಯಾಕಂದ್ರೆ ಪ್ರಸ್ತುತ ದಿನಮಾನಗಳಲ್ಲಿ ಇಂದಿನ ಸೊಸೆಯೇ ನಾಳೆಯ ಅತ್ತೆ ಎಂಬುದನ್ನ ಮರೆತಂತೆ ಇದೆ. ಅತ್ತೆ ಮತ್ತು ಸೊಸೆ ಎಂಬುವರು ಪರಸ್ಪರ ಸಿಹಿ -ಕಹಿ ನೆನಪುಗಳನ್ನ ಮತ್ತು ಬದುಕಿನ ಏಳು -ಬೀಳುಗಳ ಅನುಭವಗಳನ್ನ ಅಂಚಿಕೊಳ್ಳುವ ಒಳ್ಳೆಯ ಸ್ನೇಹಿತರಾದರೆ ಸಂಸಾರ ಎಂಬ ಸಾಗರ ಸದಾ ನಲ್ಮೆಯಿಂದ ಕೂಡಿರುತ್ತೆ.
ಇಲ್ಲಿ ಇಬ್ಬರು ಬಯಸುವುದು ತಮ್ಮ ಮನೆಯ ಏಳ್ಗೆಯನ್ನೇ ಆದರೆ ಯೋಚಿಸುವ ರೀತಿ ಬೇರೆಯಾಗಿರುತ್ತದೆ ಅಷ್ಟೇ. ಸೇರು ಒದ್ದು ಬರುವ ಸೊಸೆಗೆ ಅತ್ತೆ ಕಾಟ ಸವಾ ಸೇರು ಎಂದು ಬೀಗುವ ಅತ್ತೆಗೆ ಸೊಸೆ ಕಾಟ ಇಂತಹ ಅತ್ತೆ ಸೊಸೆಯಂದಿರಾ ಮದ್ಯೆ ಮಗನಿಗೆ ಪರಮ ಸಂಕಟ. ತನ್ನಂಗ ನೋಡಿದರೆ ಭಿನ್ನಿಲ್ಲ ಬೇದಿಲ್ಲ ತನ್ನಂಗ ತನ್ನ ಮಗಳಂಗ ನೋಡಿದರೆ ಕಣ್ಣಾ ಮುಂದಾದ ಕೈಲಾಸ ಎನ್ನುವಂತೆ, ಬಂದ ಸೊಸೆ ಕಣ್ಣಲ್ಲಿ ನೀರು ತರಿಸೋ ಅತ್ತೆ, ಮಗಳು ಚನ್ನಾಗಿ ಇರಲಿ ಅಂತ ದೇವರ ಪೂಜೆ ಮಾಡ್ತಿದ್ದಳು ಅಂತೆ. ಹಾಗೆಯೇ ಸೇರು ಒದ್ದು ಬರುವ ಸೊಸೆಯನ್ನು ಮಗಳಂತೆ ನೋಡಿಕೊಂಡಾಗ ಸಿಡಿಗುಂಡಿನಂತೆ ಸಿಡಿಯುವಂತಹ ಮಾತಿನ ಕಿಡಿಗಳು ತಾನಾಗೇ ಆರಿ ಹೋಗುತ್ತವೆ.
ಕರುಣೆ ಇಲ್ಲದ ಅತ್ತೆಗೆ ಸೊಸೆ ಆಗಬಾರದು, ಅಪ್ಪುಗೆ ನೀಡುವ ಅತ್ತೆಯ ಸೇವೆಯನ್ನ ಸೊಸೆ ಮರೆಯಬಾರದು. ಒಂದು ಕುಟುಂಬದಲ್ಲಿ ಗಂಡ ಹೆಂಡತಿಯ ಜೋಡಿಗಿಂತ ಅತ್ತೆ ಸೊಸೆ ಜೋಡಿ ಚನ್ನಾಗಿ ಇದ್ರೆ ಆಗ ಮಾತ್ರ ಗಂಡ ಎಂಬ ಬಡಪಾಯಿ ಸ್ವಲ್ಪ ನೆಮ್ಮದಿಯಿಂದ ಮನೆಯಲ್ಲಿ ಇರಲು ಸಾಧ್ಯ. ಯಾರ ಮನೆಯ ಮಗಳಾದರೇನು ನಮ್ಮ ಮನೆಗೆ ಬಂದಿದ್ದಾಳೆ ಅಂದ್ರೆ ಅವಳು ನಮ್ಮ ಮಗಳೇ ಎನ್ನುವಂತೆ ಅತ್ತೆ ಸೊಸೆ ತಿಳಿದುಕೊಂಡು ಬಾಳಬೇಕು.ಅದೇ ರೀತಿ ಗಂಡನ ಮನೆಗೆ ಹೋದ ಪ್ರತಿಯೊಂದು ಹೆಣ್ಣು ಅತ್ತೆಯನ್ನ ತಾಯಿಯಂತೆ ಕಂಡರೆ ಮನೆಯೆಂಬುದು ಕುರುಕ್ಷೇತ್ರ ಆಗದಂತೆ ತಡೆಯಬಹುದು. ಈ ಮೂಲಕ ನಾನು ಕೇಳಿಕೊಳ್ಳುವುದೇನೆಂದರೆ ಪ್ರತಿಯೊಂದು ಹೆಣ್ಣು ಒಂದಲ್ಲಾ ಒಂದು ದಿನ ಸೊಸೆ ಆಗಿ ಕೊನೆಗೆ ಅತ್ತೆಯು ಕೂಡ ಆಗಿ ಬದುಕನ್ನ ಸಾಗಿಸುತ್ತಾಳೆ. ಇಂತಹ ಅದ್ಭುತ ಬದುಕನ್ನ ಅತ್ತೆ ಸೊಸೆಯಂದಿರು ಅರ್ಥ ಮಾಡಿಕೊಂಡು ಬದುಕಿದರೆ ಸಂಸಾರ ಎಂಬ ಸಾಗರ ನೇರವಾಗಿ ಹರಿಯಲು ಸಾಧ್ಯ ಎಂಬುದು ನನ್ನ ಆಶಯ.(ಯಾರೂ ಅನ್ಯತಾ ಭಾವಿಸಬೇಡಿ )
-ಗಂಗಜ್ಜಿ ನಾಗರಾಜ್, ಸಾಸ್ವಿಹಳ್ಳಿ
ಸಾಂದರ್ಭಿಕ ಚಿತ್ರ ಕೃಪೆ: ವಿಜಯ ಕರ್ನಾಟಕ ಜಾಲತಾಣ