ಸೊಹ್ರಾದಲ್ಲಿ ಭರ್ಜರಿ ಮಳೆ ಬಿದ್ದರೂ ನೀರಿಗೆ ತತ್ವಾರ
“ಅದೊಂದು ಕಾಲವಿತ್ತು. ಮಳೆ ಶುರುವಾಯಿತೆಂದರೆ, ಆಕಾಶವೇ ಕಳಚಿ ಬಿದ್ದಂತೆ ಮಳೆ ಹೊಯ್ಯುತ್ತಿತ್ತು. ಮೂರು ದಿನ ಸುರಿದರೂ ಮಳೆ ನಿಲ್ಲದಿದ್ದರೆ, ಒಂಭತ್ತು ದಿನಗಳ ವರೆಗೆ ಎಡೆಬಿಡದ ಮಳೆ ಎಂದು ನಮಗೆ ಗೊತ್ತಾಗುತ್ತಿತ್ತು. ಆಗ ಮುಂದಿನ ಬೆಳೆಗಾಗಿ ಹೊಲಗಳಲ್ಲಿ ನೆಡುವ ಕೆಲಸ ಶುರು ಮಾಡುತ್ತಿದ್ದೆವು” ಎಂದು ನೆನಪು ಮಾಡಿಕೊಳ್ಳುತ್ತಾರೆ, 75 ವರುಷದ ಅಜ್ಜ.
ಇದೆಲ್ಲ ಮೇಘಾಲಯದ ಚಿರಾಪುಂಜಿಯಿಂದ ಕೆಲವು ಕಿಮೀ ದೂರದ ಹಳ್ಳಿ ಟಿರ್-ನಾದಲ್ಲಿ ಅವರ ಬಾಲ್ಯದ ದಿನಗಳ ನೆನಪುಗಳು. ಕಿತ್ತಳೆ, ಕಾಫಿ ಗಿಡಗಳು, ವೀಳ್ಯದೆಲೆ ಬಳ್ಳಿ, ಗೆಣಸು, ಕೇನೆ ಗೆಡ್ಡೆಗಳು ಇವನ್ನೆಲ್ಲ ಮಳೆಗಾಲದಲ್ಲಿ ನೆಡುತ್ತಿದ್ದರಂತೆ. “ಆಗ ನಮಗೆ ಈಗಿನಂತೆ ಆಹಾರದ ಚಿಂತೆ ಇರಲಿಲ್ಲ. ಈಗ ಎಲ್ಲ ತಲೆಕೆಳಗಾಗಿದೆ” ಎನ್ನುತ್ತಾರೆ ಆ ಅಜ್ಜ ಆಕಾಶ ದಿಟ್ಟಿಸುತ್ತಾ.
ಅದೊಂದು ಕಾಲವಿತ್ತು - ಜಗತ್ತಿನಲ್ಲಿ ಅತ್ಯಧಿಕ ಮಳೆ ಚಿರಾಪುಂಜಿಯಲ್ಲಿ ಸುರಿಯುತ್ತಿದ್ದ ಕಾಲ. ಅದಕ್ಕೇ ಚಿರಾಪುಂಜಿಯ ಹೆಸರು ಗಿನ್ನೆಸ್ ರೆಕಾರ್ಡ್ ಪುಸ್ತಕದಲ್ಲಿ ದಾಖಲಾಗಿದೆ: ಒಂದು ಕ್ಯಾಲೆಂಡರ್ ವರುಷದಲ್ಲಿ ಜಗತ್ತಿನಲ್ಲಿ ಅತ್ಯಂತ ಜಾಸ್ತಿ ಮಳೆ ಬಿದ್ದ ಸ್ಥಳ ಎಂಬುದಾಗಿ. ಆಗಸ್ಟ್ 1880ರಿಂದ ಜುಲಾಯಿ 1881ರ ವರೆಗೆ ಅಲ್ಲಿ ಬಿದ್ದ ಮಳೆ 22,987 ಮಿಮೀ. ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಇನ್ನೊಂದು ದಾಖಲೆಯೂ ಚಿರಾಪುಂಜಿಯ ಹೆಸರಿನಲ್ಲಿದೆ: ಒಂದೇ ದಿನದಲ್ಲಿ ಅತ್ಯಧಿಕ ಮಳೆಬಿದ್ದ ಸ್ಥಳ. 1974ರ ಅದೊಂದು ದಿನ ಅಲ್ಲಿ ಪ್ರಳಯವಾದಂತೆ ಮಳೆ ಹೊಯ್ದಿತ್ತು - 2,455 ಮಿಮೀ.
ಈಗ ಅದೆಲ್ಲ ಹಳೆಯ ಕತೆ. ಆ ಅಜ್ಜ ಹೇಳಿದ್ದು ಅಕ್ಷರಶಃ ನಿಜ. ಈಗ ಎಲ್ಲವೂ ತಲೆಕೆಳಗಾಗಿದೆ. ಗೌಹಾತಿಯ ಪ್ರಾದೇಶಿಕ ಹವಾಮಾನ ಕೇಂದ್ರದ ದಾಖಲೆಗಳ ಪ್ರಕಾರ: ಕಳೆದ ದಶಕದಲ್ಲಿ ಚಿರಾಪುಂಜಿಯ ವಾರ್ಷಿಕ ಸರಾಸರಿ ಮಳೆ ಪ್ರಮಾಣ 11,070 ಮಿಮೀ. 2006ರಲ್ಲಿ ಬಿದ್ದ ಮಳೆ ಕೇವಲ 8,730 ಮಿಮೀ. ಅಂದರೆ, ಸರಾಸರಿ ಮಳೆಗಿಂತಲೂ ಶೇ.35ರಷ್ಟು ಕಡಿಮೆ.
ಅಂದ ಹಾಗೆ, ಈಗ ಅತ್ಯಧಿಕ ಮಳೆ ಬೀಳುವ ಸ್ಥಳ ಯಾವುದು? ಇದಕ್ಕಾಗಿ, ಈ ಎರಡು ಸ್ಥಳಗಳೊಳಗೆ ಪೈಪೋಟಿ ಇದೆ: 11,873 ಮಿಮೀ ಸರಾಸರಿ ಮಳೆಯ ಚಿರಾಪುಂಜಿ ಹತ್ತಿರದ ಮಾಸಿರ್-ನಾಮ್ ಮತ್ತು 11,684 ಮಿಮೀ ಸರಾಸರಿ ಮಳೆಯ ಹವಾಯಿ ದ್ವೀಪದ ಕಾಯ್ ಎಂಬಲ್ಲಿನ ವಾಯ್ಅಲೆಅಲೆ ಪರ್ವತ.
ಭರ್ಜರಿ ಮಳೆ ಹೊಯ್ಯುತ್ತಿದ್ದ ಚಿರಾಪುಂಜಿಯಲ್ಲಿ ಏನಾಯಿತು? ಆ ಊರಿನ ಹೆಸರೂ ಬದಲಾಯಿತು, ಅಲ್ಲಿ ಮಳೆಯೂ ಕಡಿಮೆಯಾಯಿತು. ಚಿರಾಪುಂಜಿ ಅನ್ನೋದು ಬ್ರಿಟಿಷರು ಇಟ್ಟ ಹೆಸರು. ಅವರು ಅಲ್ಲಿಗೆ ಕಾಲಿಟ್ಟದ್ದು 1820ರಲ್ಲಿ. ಆದರೆ, ಅಲ್ಲಿನ ಮಳೆಯನ್ನು ಅವರಿಗೂ ತಾಳಿಕೊಳ್ಳಲು ಆಗಲಿಲ್ಲ. ಹಾಗಾಗಿ 1850ರಲ್ಲಿ ಅವರು ಚಿರಾಪುಂಜಿ ತೊರೆದರು. ಆದರೆ ಅವರಿಟ್ಟ ಹೆಸರು ಹಾಗೆಯೇ ಉಳಿಯಿತು. ಕೊನೆಗೆ, 180 ವರುಷಗಳ ನಂತರ ಸ್ಥಳೀಯ ಜನರು ತಮ್ಮೂರಿನ ಹಳೆಯ ಹೆಸರನ್ನೇ ಪುನಃ ಚಾಲ್ತಿಗೆ ತಂದರು. ಅದುವೇ ಸೊಹ್ರಾ. ಅಂದಿನ ಚಿರಾಪುಂಜಿ ಈಗ ಸೊಹ್ರಾ.
ಸೊಹ್ರಾದಲ್ಲಿ ಜೂನ್ನಿಂದ ಸಪ್ಟಂಬರ್ ವರೆಗೆ ಮಳೆಗಾಲ. ಬಂಗಾಳಕೊಲ್ಲಿಯಿಂದ ಬಾಂಗ್ಲಾದೇಶ ಹಾದು ಬರುವ ಮುಂಗಾರು ಮಾರುತಗಳ ಬಿರುಸು ಜೋರು. ಯಾಕೆಂದರೆ ಬಾಂಗ್ಲಾದೇಶದಲ್ಲಿ ಪರ್ವತಗಳಿಲ್ಲ. ಹಾಗಾಗಿ ಮಳೆಮೋಡಗಳ ತೇವಾಂಶದ ಬಹುಪಾಲು ಮೇಘಾಲಯದ ಪರ್ವತಗಳ ಮೇಲೆಯೇ ಬೀಳುತ್ತದೆ. ಆದರೂ 70,000 ಜನಸಂಖ್ಯೆಯಿರುವ ಸೊಹ್ರಾದಲ್ಲಿ ವರುಷದಿಂದ ವರುಷಕ್ಕೆ ಮಳೆ ಕಡಿಮೆಯಾಗುತ್ತಿದೆ. ಇತ್ತೀಚೆಗಿನ ವರುಷಗಳಲ್ಲಿ ಬೇಸಗೆಯಲ್ಲಿ ಅಲ್ಲಿ ನೀರಿಗೆ ತತ್ವಾರ ಎಂದರೆ ನಂಬುತ್ತೀರಾ?
ಯಾಕೆ ಹೀಗಾಯಿತು? ಸೊಹ್ರಾದ ಬೆಟ್ಟಗಳ ಅರಣ್ಯಗಳನ್ನು ನಾಶ ಮಾಡಿದ್ದರಿಂದಾಗಿ. ಅಲ್ಲಿ ಬೀಳುವ ಮಳೆಯ ರಭಸ ತಗ್ಗಿಸಲು ಮತ್ತು ಬಿದ್ದ ಮಳೆನೀರು ನೆಲದಾಳಕ್ಕೆ ಇಂಗಲು ಸಹಾಯವಾಗಲು ಅಲ್ಲಿ ಈಗ ಮರಗಳೇ ಇಲ್ಲ! ಅಲ್ಲಿ ಬೀಳುವ ಮಳೆ ಕಡಿಮೆಯೇನಲ್ಲ. ಆದರೆ ಅದೆಲ್ಲವೂ ಬೆಟ್ಟಗಳಿಂದ ರಭಸವಾಗಿ ಇಳಿದು, ಪಕ್ಕದ ಬಾಂಗ್ಲಾದೇಶಕ್ಕೆ ಹರಿದು ಹೋಗುತ್ತದೆ. ಮಳೆಗಾಲದಲ್ಲಿ ಪರ್ವತಗಳಿಂದ ಇಳಿದು ಬರುವ ಹಲವಾರು ನೀರಿನ ತೊರೆಗಳು ಚಳಿಗಾಲದಲ್ಲಿಯೇ ಬತ್ತಿ ಹೋಗುತ್ತವೆ.
ನೀರಿಗೆ ತತ್ವಾರ ಹೇಗಿದೆ ಅಂತೀರಾ? ಕೆಲವು ಸ್ಥಳಗಳಲ್ಲಿ ಸರಕಾರ (25 ವರುಷ ಮುಂಚೆ) ಹಾಕಿದ ಪೈಪುಗಳಿಂದ ಕುಡಿಯುವ ನೀರು ತರಲಿಕ್ಕಾಗಿ ಜನರು ಕೆಲವು ಮೈಲು ನಡೆದು ಹೋಗಬೇಕಾಗಿದೆ! ದಿನಕ್ಕೆರಡು ಸಲ ಮಾತ್ರ ಸಿಗುವ ಆ ನೀರೂ ಶುದ್ಧವಾಗಿಲ್ಲ.
“ಇಲ್ಲಿ ಬೀಳುವ ಮಳೆ ಮೇಲ್ಮಣ್ಣನ್ನು ಕೊಚ್ಚಿಕೊಂಡು ಹೋಗ್ತಿದೆ. ಇದರಿಂದಾಗಿ ಕೃಷಿಗೂ ತೊಂದರೆ, ಹೊಸದಾಗಿ ಗಿಡ ನೆಟ್ಟು ಬೆಳೆಸುವುದಕ್ಕೂ ತೊಂದರೆ" ಎನ್ನುತ್ತಾರೆ ಓ.ಪಿ. ಸಿಂಗ್. ಅವರು ಶಿಲ್ಲಾಂಗಿನ ಈಶಾನ್ಯ ಹಿಲ್ ಯೂನಿವರ್ಸಿಟಿಯ ಪರಿಸರ ಅಧ್ಯಯನ ಕೇಂದ್ರದ ಪರಿಣತರು. ಸೊಹ್ರಾ ಮತ್ತು ಸುತ್ತಲಿನ ಕಣಿವೆಗಳಲ್ಲಿ ಶೇ.50 ಅರಣ್ಯ ನಾಶವಾದದ್ದರ ಪರಿಣಾಮ ಇದು.
ನೀರಿನ ಕೊರತೆಯಿಂದಾಗಿ ಕೃಷಿ ನಲುಗುತ್ತಿದೆ. ಜನರು ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಕಲ್ಲಿದ್ದಲು ಮತ್ತು ಸುಣ್ಣದ ಕಲ್ಲಿನ ಗಣಿಗಾರಿಕೆ ಮತ್ತು ಕಲ್ಲಿನ ಕ್ವಾರಿಗಳ ಕೆಲಸ. ಬಹುಪಾಲು ಜನರು ಕಲ್ಲಿದ್ದಲು ಗಣಿಗಳಲ್ಲಿ ಹಾಗೂ ಸುಣ್ಣದಗೂಡುಗಳಲ್ಲಿ ದಿನಗೂಲಿಗೆ ದುಡಿಯುತ್ತಿದ್ದಾರೆ.
ಹೇಗಿದ್ದ ಸೊಹ್ರಾ ಹೇಗಾಯಿತು! ಸಮೃದ್ಧ ಮಳೆನೀರು ಮತ್ತು ಶುದ್ಧ ಮಳೆನೀರು - ಇವು ಈಗಲೂ ಸೊಹ್ರಾಕ್ಕೆ ಪ್ರಕೃತಿಯ ಕೊಡುಗೆ. ಆದರೆ ಅಲ್ಲಿನ ಜನರು ಕೈಗೆ ಬಂದ ಭಾಗ್ಯ ಕೈಚೆಲ್ಲಿ ಕೂತಿದ್ದಾರೆ.
ಇದೆಲ್ಲ ಸರಿ. ನಮ್ಮನಮ್ಮ ಊರುಗಳ ಕತೆ ಏನು? ಮಳೆನೀರು ಆಕಾಶದಿಂದ ಬೀಳುವ ಭಾಗ್ಯ. ಅದರ ಹನಿಹನಿಯನ್ನೂ ಕೊಯ್ಲು ಮಾಡುವ, ಮಳೆ ನೀರಿಂಗಿಸುವ ವ್ಯವಸ್ಥೆ ಮಾಡಿದ್ದೇವೆಯೇ? ಚೆನ್ನಾಗಿ ಮಳೆ ಸುರಿದ ವರುಷಗಳು ಭಾಗ್ಯದ ವರುಷಗಳು. ಆಗಿನ ಮಳೆನೀರನ್ನು ಠೇವಣಿಯಾಗಿರಿಸಿ, ಮುಂದಿನ ಬರಗಾಲದ ಮರುಷಗಳನ್ನು ಎದುರಿಸಲು ನಾವು ತಯಾರಾಗಿದ್ದೇವೆಯೇ? ಹೌದೆಂದಾದರೆ, ನಾವೇ ಭಾಗ್ಯವಂತರು.
ಗಮನಿಸಿ: ಇವತ್ತು ಕರ್ನಾಟಕಕ್ಕೆ ಈ ವರುಷದ ಮುಂಗಾರು ಮಳೆ ಪ್ರವೇಶವಾಗಿದೆ.
ಫೋಟೋ 1ರಿಂದ 4: ಸೊಹ್ರಾ(ಚಿರಾಪುಂಜಿ)ದಲ್ಲಿ ಮಳೆಗಾಲದ ನಾಲ್ಕು ನೋಟಗಳು
ಕೃಪೆ: ಫೋಟೋ 1 ಮತ್ತು 2: ಡ್ರೀಮ್ಸ್ ಟೈಮ್.ಕೋಮ್
ಫೋಟೋ 3: ಇಂಡಿಯಾ.ಕೋಮ್
ಫೋಟೋ 4: ಸ್ಕೈಮೆಟ್ ವೆದರ್.ಕೋಮ್