ಸೋಜಿಗದ ಬಳ್ಳಿ
ಸರಸ್ವತಿ ಶ್ರೀನಿವಾಸರಾಜು ಹೇಳಿದ ಆತ್ಮಕಥನವೇ ‘ಸೋಜಿಗದ ಬಳ್ಳಿ’ ಎಂಬ ಪುಸ್ತಕ. ಸರಸ್ವತಿಯವರ ಮಾತುಗಳನ್ನು ಅಕ್ಷರ ರೂಪಕ್ಕೆ ಇಳಿಸಿ ಸಂಯೋಜನೆ ಮಾಡಿದ್ದಾರೆ ಎಂ. ಆರ್. ಭಗವತಿಯವರು. ಪುಸ್ತಕದ ಬೆನ್ನುಡಿಯಲ್ಲಿ ಮೈಸೂರಿನ ಬಿ.ಪಿ.ಬಸವರಾಜು ಅವರು ಹೀಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
“ಸರಳವಾಗಿ ಕಾಣಿಸಿದರೂ ಈ ಬರಹ ಸುಂದರವಾಗಿದೆ. ಅಚ್ಚುಕಟ್ಟಾಗಿದೆ. ಸಣ್ಣ ಸಣ್ಣ ಸಂಗತಿಗಳನ್ನೇ ಪೋಣಿಸಿ ದೊಡ್ಡ ಚಿತ್ರವನ್ನೇ ಕೊಡಲಾಗಿದೆ. ತೋರುಗಾಣಿಕೆಯಾಗಲಿ, ಅಬ್ಬರವಾಗಲಿ, ಉತ್ಪ್ರೇಕ್ಷೆಯಾಗಲಿ ಇಲ್ಲದ ಸಾಚಾ ಬರವಣಿಗೆ ಆತ್ಮಕತೆ ಎನ್ನುವುದು ಬರೆಯುವ ವ್ಯಕ್ತಿಯ ಪ್ರಾಮಾಣಿಕತೆಯ ಮೇಲೆ ನಿಂತಿರುತ್ತದೆ. ಈ ಪ್ರಾಮಾಣಿಕತೆಯೇ ಈ ಕೃತಿಯ ಜೀವಾಳವಾಗಿದೆ.
ಶ್ರೀನಿವಾಸರಾಜು ಸಮುದಾಯದಿಂದ ಮೂಡಿಬಂದ ವ್ಯಕ್ತಿ. ಕೌಟುಂಬಿಕ ಭಿತ್ತಿ ಎನ್ನುವುದು ಇಲ್ಲಿ ತೆಳು ಪರದೆ ನಿಜವಾದ ಭಿತ್ತಿ ಸಮುದಾಯವೇ ಈ ರಾಜು ಅವರನ್ನು ಅತ್ಯಂತ ಪ್ರೀತಿಯಿಂದ, ಕಾಳಜಿಯಿಂದ, ಸತ್ಯಕ್ಕೆ ಅಪಚಾರವಾಗದ ರೀತಿಯಲ್ಲಿ ಮೂಡಿಸಿರುವ ರೀತಿ ಮೆಚ್ಚುವಂತಿದೆ. ರಾಜು ಅವರ ಚಿತ್ರದಂತೆಯೇ ಇಲ್ಲಿ ಸರಸ್ವತಿ ಅವರ ಚಿತ್ರವೂ ಮೂಡುತ್ತ ಹೋಗಿರುವುದು ವಿಶೇಷ. ರಾಜು ‘ಎತ್ತರದ' ವ್ಯಕ್ತಿ, ಸರಸ್ವತಿ ‘ಕುಳ್ಳು' ಆದರೆ ಈ ಕೃತಿಯ ಆರಂಭದಿಂದ ಬೆಳೆಯುತ್ತಲೇ ಹೋಗಿ ರಾಜು ಅವರನ್ನು ಮುಟ್ಟಿಬಿಡುವ, ಅವರ ಎತ್ತರಕ್ಕೆ ಸಮಸಮವಾಗಿ ಬೆಳೆದು ನಿಂತು ಬಿಡುವ ಸರಸ್ವತಿ ಅವರ ಚಿತ್ರಣವೂ ಕೃತಿಯಲ್ಲಿ ಗಾಢವಾಗಿ ಚಿತ್ರಿತವಾಗಿದೆ.
ಒಬ್ಬ ಗೃಹಿಣಿಯಾಗಿ, ಸೊಸೆಯಾಗಿ, ಮಗಳಾಗಿ, ತಾಯಿಯಾಗಿ, ದೊಡ್ದ ಕುಟುಂಬದ ಮುಖ್ಯ ಕೊಂಡಿಯಾಗಿ, ಜೀವಂತ ಬದುಕಿನ ಬಹು ದೊಡ್ಡ ಪ್ರತಿಮೆಯಾಗಿ ಕಾಣಿಸುವ ಸರಸ್ವತಿ, ರಾಜು ಅವರಷ್ಟೇ ಮುಖ್ಯರು. ಒಬ್ಬರದು ಅಚ್ಚುಕಟ್ಟು ಕುಟುಂಬ, ಇನ್ನೊಬ್ಬರದು ಅಷ್ಟೇ ಅಚ್ಚುಕಟ್ಟು ಸಮೂಹ. ಒಂದು ದೃಷ್ಟಿಪ್ರಜ್ಞೆಯಾದರೆ, ಇನ್ನೊಂದು ಸಮಷ್ಟಿಪ್ರಜ್ಞೆ. ಎರಡೂ ಸರಿಯಾದ ಹದದಲ್ಲಿ ಬೆರೆತಾಗಲೇ ಸಮರಸ ಜೀವನ.
ಈ ಕೃತಿಯನ್ನು ಓದಿದಾಗ ಈ ಸಮರಸ ಜೀವನ ಬಹುದೊಡ್ಡ ಚಿತ್ರವಾಗಿ ಮನದ ಮುಂದೆ ಬಿಚ್ಚಿ ಕೊಳ್ಳುತ್ತದೆ. ಆತ್ಮಕಥೆಯ ಸಾರ್ಥಕತೆ ಇರುವುದೇ ಇಂಥ ಕೃತಿಗಳಲ್ಲಿ ಬದುಕಿನ ಎಲ್ಲ ಸಂಕೀರ್ಣತೆಯನ್ನು ಈ ಆತ್ಮಕತೆ ತನ್ನ ಸರಳತೆಯಲ್ಲಿಯೇ ಹಿಡಿಯಲು ನೋಡಿದೆ. ನಿರೂಪಣೆಯ ಸವಾಲು ಇರುವುದೇ ಇಲ್ಲಿ. ಆ ಸರಳತೆಗೆ ಎಲ್ಲಿಯೂ ಧಕ್ಕೆ ತಾರದಂತೆ ಹಗುರ ಶೈಲಿಯಲ್ಲಿ, ಗಾಂಭೀರ್ಯ ಮುಕ್ಕಾಗದಂತೆ ನಿರೂಪಿಸಿರುವ ಎಂ. ಆರ್. ಭಗವತಿ ಮೆಚ್ಚುಗೆಗೆ ಪಾತ್ರರಾಗುತ್ತಾರೆ.”