ಸೋಡಾ ಗೋಲಿ (ಮುಂದುವರಿದ ಭಾಗ)

ಸೋಡಾ ಗೋಲಿ (ಮುಂದುವರಿದ ಭಾಗ)

ಬರಹ

ಬೇಸಿಗೆಯ ರಜೆಗಳು ಮುಗಿದು ಹೋದವು. ಏಳನೆಯ ಕ್ಲಾಸು ಪೂರ್ತಿಯಾಯಿತು. ಆದರೂ ಸೋಡಾ ಗೋಲಿ ಮಾತ್ರ ಪಡೆಯಲಾರದವನಾದೆ. ನಮ್ಮ ಊರಿನಲ್ಲಿ ಮುಂದಿನ ಓದಿಗೆ ಅವಕಾಶವಿರಲಿಲ್ಲ. ನನ್ನನ್ನು ನಮ್ಮ ಮಾವನ ಊರಾದ ವಿಶಾಖಪಟ್ಟಣಕ್ಕೆ ಕಳುಹಿಸಲು ಎಲ್ಲಾ ಏರ್ಪಾಟುಗಳು ನಡೆಯುತ್ತಿದ್ದವು. ನನಗೆ ಸಾಯುವಷ್ಟು ಭಯವಾಗಿತ್ತು. ನಮ್ಮೂರಿನಲ್ಲಿ ನಮ್ಮಮ್ಮ ಮತ್ತು ನಾನು ಒಂದು ಪಾಳುಬಿದ್ದ ಹೆಂಚಿನ ದೊಡ್ಡ ಮನೆಯಲ್ಲಿ ವಾಸವಾಗಿದ್ದೆವು. ನಮ್ಮ ಚಿಕ್ಕಪ್ಪ ಮತ್ತು ದೊಡ್ಡಪ್ಪನವರು ತಮ್ಮ ಪಾಲಿಗೆ ಬಂದ ಕಲ್ಲು, ಮಣ್ಣು, ಬಾಗಿಲುಗಳನ್ನು ಮಾರಿಕೊಂಡಿದ್ದರು. ಒಂದು ಚಿಕ್ಕ ಕೋಣೆ ಮಾತ್ರ ಕಪ್ಪಡರಿದ ಗೋಡೆಗಳಿಂದ ಬೀಳದೆ ಇನ್ನೂ ಉಳಿದಿತ್ತು. ಅಲ್ಲೇ ನಾವಿಬ್ಬರೂ ವಾಸವಾಗಿದ್ದೆವು.

ರಸ್ತೆಯಲ್ಲಿ ನಿಂತು ನೋಡಿದರೆ ನಮ್ಮ ಮನೆ ರೆಕ್ಕೆ ಮುರಿದುಕೊಂಡು ಬಿದ್ದ ಜಟಾಯು ಪಕ್ಷಿಯಂತೆ ಕಾಣಿಸುತ್ತಿತ್ತು. ಆದರೂ ನನಗೆ ಅದು ಅಂದವಾಗಿಯೇ ಕಾಣುತ್ತಿತ್ತು. ಹಿತ್ತಲಿನಲ್ಲಿ ದೊಡ್ಡ ಹುಣಸೆಮರ, ನೇರಳೆಮರ, ಕೊಳವೆ ಬಾವಿ, ಬಚ್ಚ-ಗೋಲಿ, ನೆಲಬಂಡೆಯಾಟ, ಚಿನ್ನಿದಾಂಡು ಆಡಿಕೊಳ್ಳುವುದಕ್ಕೆ ಬೇಕಾದಷ್ಟು ಜಾಗವಿತ್ತು. ಇವನ್ನೆಲ್ಲಾ ಬಿಟ್ಟು ಹೋಗುವುದು ಒಂದು ಸಂಕಟವಾದರೆ, ಅಮ್ಮನನ್ನು ಬಿಟ್ಟಿರುವುದು ಮತ್ತೊಂದು ಸಂಕಟ. ಹೋಗಲ್ಲ ಅಂದರೆ ಹೋಗಲ್ಲ ಎಂದು ಹಠ ಹಿಡಿದೆ.

'ಒಂದು ಆರು ತಿಂಗಳಿನ ಮಾತೋ ನನ್ನಪ್ಪ.. ಹೀಗನ್ನೋದರಾಗೆ ಹಂಗೆ ಬರ್ತದೆ.. ರಜಾದಾಗೆ ಇಲ್ಲಿಗೇ ಬರುವಿಯಂತೆ' ಅಂತ ಅಮ್ಮ ಮುದ್ದು ಮಾಡುತ್ತಾ ಒಪ್ಪಿಸಿದಳು. ಪ್ರಯಾಣಕ್ಕೆ ಅಮ್ಮ ಆಗಲೇ ಎಲ್ಲವನ್ನೂ ಹೊಂದಿಸುತ್ತಿದ್ದಳು.

ನಾನು ಗೋಲಿಗಳೆಲ್ಲವನ್ನೂ ಒಂದು ಬಾರಿ ತೃಪ್ತಿಯಾಗುವಂತೆ ಲೆಕ್ಕ ಮಾಡಿ, ಸಿಗರೇಟು ಡಬ್ಬದ ಕಾಗದದ ಹಿಂದುಗಡೆ ಯಾವ ಯಾವ ಬಗೆಯ ಗೋಲಿಗಳು ಎಷ್ಟೆಷ್ಟಿವೆ ಎಂದು ಬರೆದು, ಆ ಪಟ್ಟಿಯನ್ನೂ, ಗೋಲಿಗಳನ್ನೂ ಒಂದು ಚೀಲದಲ್ಲಿ ಗಂಟು ಕಟ್ಟಿ ನೇರಳೆ ಮರದ ಮುಂದೆ ಜಾಗ್ರತೆಯಾಗಿ ಹೂತಿಟ್ಟೆ.

ಅಮ್ಮ ನನ್ನನ್ನು ವಿಶಾಖಪಟ್ಟಣಕ್ಕೆ ಕರೆದುಕೊಂಡು ಹೋಗಿ ಮಾವನ ಮನೆಯಲ್ಲಿ ಒಪ್ಪಿಸಿಹೋದಳು. ನನಗೆ ಆ ಊರು ಒಂದಿಷ್ಟೂ ಇಷ್ಟವಾಗಲಿಲ್ಲ. ಸಂದಿಸಂದಿಯಲ್ಲಿ ಸಿಕ್ಕಿಸಿ ಬರೆದ ಕೋಟಿ ಶ್ರೀರಾಮನಾಮ ಪುಸ್ತಕದಂತೆ ಇತ್ತು. ಅದಲ್ಲದೆ ನನಗೆ ಗೊತ್ತಿರುವ ಒಂದು ಮುಖವೂ ಅಲ್ಲಿರಲಿಲ್ಲ. ನಮ್ಮೂರಿನಲ್ಲಾದರೆ ನನಗೆ ಗೊತ್ತಿರದ ಮುಖವೊಂದೂ ಇರಲಿಲ್ಲ. ಹೊಸ ಶಾಲೆ, ಹೊಸ ಮಾಸ್ತರರು, ಎಲ್ಲಾ ಹೊಸದೇ. ಅಮ್ಮ ಆವಾಗಾವಾಗ ಪತ್ರ ಬರೆಯೋಳು. ಆವಾಗಾವಾಗ ಕನಸಿನಲ್ಲಿ ಬರೋಳು. ಒಮ್ಮೆ ಮಾತ್ರ ಕೆಟ್ಟ ಕನಸೊಂದು ಬಿತ್ತು. ಗೋಲಿ ಹೂತಿಟ್ಟ ಜಾಗವನ್ನು ಹೆUಣಗಳು ಕೆದರಿ, ಹಿತ್ತಲಿನ ತುಂಬಾ ಗೋಲಿಗಳು ಚೆಲ್ಲಾಡಿದಂತೆ.. ಬೆಚ್ಚಿ ಬಿದ್ದು ಎಚ್ಚರವಾಗಿ ಅಮ್ಮ ಹೇಳಿದಂತೆ ಆಂಜನೇಯಸ್ವಾಮಿ ಮಂತ್ರವನ್ನು ಪಠಿಸಿ ಮಲಗಿಕೊಂಡೆ.

ಸಂಕ್ರಾಂತಿ ರಜೆಗೆ ಕಳುಹಿಸೆಂದು ಅಮ್ಮ ಮಾವನಿಗೆ ಪತ್ರ ಬರೆದಳು. ನಾನು ದಿನಗಳನ್ನು ಎಣಿಸಲಾರಂಭಿಸಿದೆ. ಏನೇ ಮಾಡಿದರೂ ದಿನಗಳು ಉರುಳುತ್ತಿರಲಿಲ್ಲ. ಇನ್ನು ರಜೆಗಳಿಗೆ ಬರೀ ನಾಲ್ಕೇ ದಿನಗಳಿದ್ದವು. ಈ ದಿನ, ಕಡೇ ದಿನ ಲೆಕ್ಕದಿಂದ ತೆಗೆದರೆ ಬರೀ ಎರಡೇ ದಿನಗಳು. ಅಮ್ಮಯ್ಯ.. ಅಂತ ಅಂದುಕೊಳ್ಳುವುದರೊಳಗೆ, ಅವತ್ತು ಎಲ್ಲರ ಮುಂದೆ 'ಇಂಗ್ಲಿಷಿನಾಗೆ ಪೂರ್ತಿ ಅಧ್ವಾನ್ನವಾಗಿದ್ದಿ.. ಸುಡುಗಾಡು ಹಳ್ಳಿ ಊರು ಓದು.. ಟ್ಯೂಷನ್ ಇಡಿಸ್ತೀನಿ.. ಟೈಪಿಗೆ ಕೂಡಾ ಸೇರಿಕೋ. ನೀನಲ್ಲಿಗೆ ಹೋಗಿ ಬಿಸಿಲಾಗೆ ಗಿಡಗಂಟೆ ಅಲೆಯೋದೇನೂ ಬೇಡ. ಅಷ್ಟಕ್ಕೂ ಬೇಕು ಅಂದ್ರೆ ನಿಮ್ಮಮ್ಮಗೆ ಎರಡು ದಿನ ಇಲ್ಲಿಗೆ ಬಂದು ಹೋಗು ಅಂತ ಹೇಳ್ತೀನಿ..' ಅಂತ ಮಾವಯ್ಯ ಮಾಮೂಲಾಗಿ ಹೇಳಿದ ಮಾತುಗಳು ನನ್ನೆದೆಯಲ್ಲಿ ಆಟಂಬಾಂಬನ್ನು ಸಿಡಿಸಿದವು.

ಮೆದುಳು ಸ್ವಲ್ಪ ಹೊತ್ತು ಕೆಲಸ ಮಾಡಲಿಲ್ಲ. ಆ ಮಾವಯ್ಯ ಹೇಳೋದೆಲ್ಲಾ ಬರೀ ನಾನ್ಸೆನ್ಸ್, ಐ ಅಗ್ರೀ ನಾಟ್.. ಬರೀ ಗ್ಯಾಸು. ಇಂಗ್ಲಿಷಿನಾಗೆ ನಾನು ಪೂರ್ ಅಂತೆ! ಒಟ್ಟಿನಲ್ಲಿ ಅವನದು ದುಷ್ಟಬುದ್ದಿ. ಅವರಿಗೆ ಇಬ್ಬರು ಸಣ್ಣ ಮಕ್ಕಳು ಅವೆ. ಅವರನ್ನು ನೋಡಕೊಂಡು ಇರಲಿಕ್ಕೆ ನಾನು ಬೇಕು. ಜೊತೆಗೆ ರಜಕ್ಕೆ ಅವರ ಹೆಂಡತಿ ಕಡಿ ಸಂಬಂಧದವರೆಲ್ಲಾ ಬರ್ತಾರೆ.. ಅವರು ಸಿಂಹಾಚಲ, ಹಾರ್ಬರು, ಸುಟ್ಟು ಸುಡುಗಾಡು ಎಲ್ಲಾ ನೋಡಬೆಕು. ಆಗ ಮನೆಯಾಗಿ ಕೂತು ಈ ಹುಡುಗುಮುಂಡೇವನ್ನ ನಾನು ನೋಡ್ಕೋಬೇಕು. ಇದೊಂದೇ ಅಲ್ಲದೆ ಕಿಂಗ್ ಜಾರ್ಜ್ ಆಸ್ಪತ್ರಿನಾಗೆ ಯಾರೋ ರೋಗಿಷ್ಟರೊಬ್ಬರು ಇದ್ದಾರೆ. ಇವರಿಗೆ ಬಂಧುನೋ, ಬಳಗಾನೋ ಆಗ್ತಾರೆ. ಅವರಿಗೆ ಪಥ್ಯದ ಕೂಳನ್ನ ದಿನಾ ತೊಗೊಂಡು ಹೋಗಿ ಕೊಟ್ಟು ಬರೋದು ನಾನೇ ಅಲ್ಲೇನು? ಇವರು ಸ್ವಾರ್ಥ ಬುದ್ಧಿಯಿಂದ ಕಪಟನಾಟಕ ಆಡ್ತಾ ಇದಾರೆ ಅಂತ ನನಗೆ ಅರ್ಥವಾಯ್ತು.

ಮಾವಯ್ಯ ನನ್ನ ಕಣ್ಣಿಗೆ ರಾಜನಾಲನಂತೆ (ತೆಲುಗಿನ ಖ್ಯಾತ ಖಳನಟ) ಕಾಣಿಸಿದ. ತುಂಬಿದ ಸೋಡಾದಿಂದ ಅವನ ನೆತ್ತಿಯ ಮೇಲೆ ಒಮ್ಮೆ ಹೊಡೆದು, ಹೊರಬೀಳೋ ಗೋಲಿ ಜೊತೆಗೆ ಹಾಯಾಗಿ ಆಡಿಕೊಳ್ಳಬೇಕೆನಿಸಿತು.

ನಮ್ಮಮ್ಮ ಮೊದಲೇ ಬಾಯಿ ಸತ್ತೋಳು. ಬೆಳ್ಳಗಿದ್ದಿದ್ದೆಲ್ಲಾ ಹಾಲಂದುಕೊಳ್ಳುತ್ತಾಳೆ. ಇಲ್ಲಾಂದ್ರೆ ಹಾಲಿನ ಸಲುವಾಗಿ ಕೋಲಿನಿಂದಾದರೂ ಹೊಡೆಸಿಕೊಳ್ಳಬೇಕೆನ್ನುತ್ತಾಳೆ. ತಮ್ಮ ಬರೆದಿದ್ದೆಲ್ಲಾ ನಿಜ ಅಂತ ನಂಬಿ 'ರಾಜ, ಹಾಯಾಗಿ ಮಾವಯ್ಯ ಹೇಳಿದಂತೆ ಕೇಳಿಕೊಂಡು ಇರು. ಟೈಪು ಮಿಷಿನ್ ಹೊಡೆಯೋದು ಕಲತುಕೋ..' ಅಂತ ಪತ್ರ ಬರೆದಳು.

ನೋಡ್ತಾ ನೋಡ್ತಾ ನನ್ನ ಬದುಕು ಸೋಡಾಗೋಲಿ ಹಂಗೆ ಆಗಿ ಹೋಯ್ತು. ವಿಶಾಖಪಟ್ಟಣದಲ್ಲಿ ಕಟ್ಟಿಹಾಕಿ ಮುಖದಾಣ ಹಾಕಿಬಿಟ್ಟ ರಾಜನಾಲ ಮಾವ.

ಂ0ಂ

ಅಮ್ಮನ ಸೆರಗನ್ನು ಬಿಟ್ಟು ಹೊರಪ್ರಪಂಚವನ್ನು ಸೇರಿದ ಮೇಲೆ ಸ್ವಲ್ಪ ಹಿರಿತನ ನನ್ನಲ್ಲಿ ಮೂಡಿತು. ದಿನಕಳೆದಂತೆ ನಾನು ಅಲ್ಲಿಗೇಕೆ ಬಂದಿದ್ದೇನೆ, ಮಾವಯ್ಯ ಯಾಕೆ ನನ್ನನ್ನು ಪೋಷಿಸುತ್ತಿದ್ದಾನೆ ಎಂಬುದು ಅರ್ಥವಾಗಲಾರಂಭಿಸಿತು. ಇರೋ ಸಣ್ಣ ಮನೆಯಲ್ಲಿ ಅವರು ಮತ್ತಷ್ಟು ಮುದುಡಿಕೊಂಡು ನನಗೆ ಸ್ಥಳವನ್ನು ಕೊಟ್ಟಿದ್ದಾರೆ. ಅದೇ ಅನ್ನದ ಭಾಗದಲ್ಲಿ ತಾವು ಸ್ವಲ್ಪ ಕಡಿಮೆ ತಿಂದು ನನಗೆ ತಿನ್ನಲು ಕೊಡುತ್ತಿದ್ದಾರೆ. ಅಮ್ಮನ ಮೇಲಿನ ಪ್ರೀತಿ ವಿಶ್ವಾಸದಿಂದ ಇದನ್ನು ಮಾಡುತ್ತಿದ್ದಾರೆಯೇ ಹೊರತು ಅವರಿಗೆ ಇದರಿಂದ ಬಿಡಿಕಾಸೂ ಸಿಕ್ಕುವುದಿಲ್ಲವೆಂದು ಅರ್ಥ ಮಾಡಿಕೊಂಡು ನಾಚಿಕೆ ಪಟ್ಟೆ. ಇನ್ನು ಯಾವತ್ತೂ ಅರ್ಥವಿಲ್ಲದ ಆಲೋಚನೆಗಳನ್ನು, ಸಿಟ್ಟನ್ನು ಹತ್ತಿರ ಬರಗೊಡುವುದಿಲ್ಲ. ಈಗ ಗಾಳಿಪಟ, ಗೋಲಿ, ಬಚ್ಚ ಎಲ್ಲಾ ಮಕ್ಕಳ ಆಟಗಳಂತೆ ನನಗೆ ಕಾಣಿಸುತ್ತಿವೆ.

ಪಿ.ಯು.ಸಿ. ಮುಗಿಯುತ್ಲೇ ಟೈಪು ಮಾಡಿದ್ದನ್ನು ಜೊತೆಮಾಡಿ ಒಂದು ಇದ್ದಲಿನ ಕಂಪನಿಯಲ್ಲಿ ಮಾವ ಕೆಲಸ ಕೊಡಿಸಿದ. ಇನ್ನು ಮುಂದೆ ನಿನ್ನ ಜೀವನ ನಿಂದು. ಆಸಕ್ತಿ ಇದ್ದರೆ ಪ್ರೈವೇಟ್ ಆಗಿ ಓದಿಕೋಬೋದು ಎಂದು ಸಲಹೆಯನ್ನಿತ್ತ.

ಬೇರೆ ಕೋಣೆಯೊಂದನ್ನು ಬಾಡಿಗೆಗೆ ತೆಗೆದುಕೊಂಡೆ. ಅಮ್ಮನನ್ನು ಕೂಡಾ ಬಂದುಬಿಡೆಂದು ಹೇಳಿದೆ. 'ನಾನಿಲ್ಲಿ ಇಲ್ಲಾ ಅಂದರೆ ಕಲ್ಲು, ಮಣ್ಣು, ಕಿಟಕಿ, ಚಿಲಕ ಸಮೇತ ಕಿತ್ತುಕೊಂಡು ಹೋಗ್ತಾರೆ' ಎನ್ನುವ ನೆಪದಿಂದ ಅಮ್ಮ ಅಲ್ಲೇ ಉಳಿದಳು. ಪಾರ್ಟ್ ಟೈಂ ಉದ್ಯೋಗ ಮಾಡುತ್ತಾ ಪದವಿಯ ಪರೀಕ್ಷೆಗೆ ಸಿದ್ಧನಾದೆ.

ಹೇಗೋ ಅಮ್ಮನನ್ನು ಒಪ್ಪಿಸಿ ಮನೆಯನ್ನು ಮಾರಾಟಕ್ಕಿಟ್ಟೆ. ನನ್ನ ಡಿಗ್ರಿ ಓದನ್ನು ತಪಸ್ಸಿನಂತೆ ಮುಂದುವರಿಸುತ್ತಿದ್ದೆ. ಬಂದಿದ್ದರಲ್ಲಿಯೇ ಸ್ವಲ್ಪ ಉಳಿಸಿ ನನಗೆ ಮತ್ತು ಅಮ್ಮನಿಗೆ ಸಾಕಾಗುವಷ್ಟು ಸಾಮಾನುಗಳನ್ನು ಕೊಂಡುಕೊಂಡೆ. 'ಸಂಸಾರ ಸಾಗರ' ಅನ್ನೋದರ ನಿಜವಾದ ಅರ್ಥ ಈಗ ಗೊತ್ತಾಗಲಾರಂಭಿಸಿತು. ಮನೆ ಕೊಳ್ಳಲು ಯಾರೋ ಮುಂದೆ ಬಂದರು. ರಿಜಿಸ್ಟ್ರೇಷನ್ನಿಗೆ ಹೋದೆ. ಎಷ್ಟೋ ದಿನಗಳ ನಂತರ ಮತ್ತೆ ನಮ್ಮೂರಿಗೆ ಹೋಗುತ್ತಿದ್ದೆ. ಊರು ಬಿಟ್ಟ ಹೊಸತರಲ್ಲಿ ಹಪಹಪಿಯಿತ್ತೇ ಹೊರತು ಈಗ ಎಸೆದ ಕಲ್ಲಿಗೆ ಅಲ್ಲಾಡಿ ಮತ್ತೆ ಸುಸ್ಥಿತಿಗೆ ಬಂದ ಕೆರೆಯ ನೀರಂತೆ ಮನಸ್ಸು ಸಮಾಧಾನ ಹೊಂದಿತ್ತು. ಮನೆಯನ್ನು ಅಳೆಯೋದು ಸುರಿಯೋದು ಆದ ಮೇಲೆ ಮಾಸ್ತರರು ಕ್ರಯಪತ್ರವನ್ನು ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಓದಲಾರಂಭಿಸಿದರು. 'ದಾನ ದಮನ ಕ್ರಯ ವಿಕ್ರಯಗಳ ಸಮಸ್ತ ಹಕ್ಕುಬಾಧ್ಯತೆಗಳೊಂದಿಗೆ, ಗಿಡಗಂಟಿ ಪಶುಪ್ರಾಣಿ ಕಲ್ಲುಮಣ್ಣು ನಿಧಿನಿಕ್ಷೇಪಗಳ ಸಮೇತ..' ಅನ್ನುತ್ತಲೇ ಹೂತಿಟ್ಟ ಗೋಲಿಗಳ ನೆನಪಾಯ್ತು. ಒಮ್ಮೆ ಮನಸ್ಸು 'ಕಳಕ್' ಎಂದಿತು. ಹಾಗಂತ ಏನೋ ದೊಡ್ಡ ನೋವು ಅಂತಲ್ಲ.. ಸಹಿ ಹಾಕುವ ಕೆಲಸವೆಲ್ಲಾ ಮುಗಿಯಿತು. ಊರು ನೋಡಬೇಕೆನ್ನಿಸದಿದ್ದರೂ ಸೋಡಾನಾಯ್ಡುವನ್ನು ಒಮ್ಮೆ ಕಾಣಬೇಕೆಂದುಕೊಂಡೆ. ಆದರೆ ಗ್ಯಾಸ್ ಸಿಲಿಂಡರ್ ತೆಗೆದುಕೊಂಡು ಪಟ್ಟಣಕ್ಕೆ ಹೋಗಿದ್ದಾನೆಂದು ಹೇಳಿದರು. ಅವನ ಬಗ್ಗೆ ವಿಚಾರಿಸಿದಾಗ ನಾಯ್ಡುವಿನ ಬಗ್ಗೆ ಹೊಸದೊಂದು ಸುದ್ದಿಯನ್ನು ಮಾಸ್ತರರು ಹೇಳಿದರು. ನಮ್ಮೂರಿನಿಂದ ಒಂದು ಹತ್ತು ಮಂದಿ ಅಯೋಧ್ಯೆಗೆ ಇಟ್ಟಿಗೆಗಳನ್ನು ತಲೆಯ ಮೇಲಿಟ್ಟುಕೊಂಡು ಹೋಗಿದ್ದರಂತೆ. ಅವರು ಹಿಂತಿರುಗಿದ ಮೇಲೆ 'ದೇಶದ ಎಲ್ಲಾ ಕಡಿಯಿಂದಲೂ ಲಕ್ಷಗಟ್ಟಲೆ ರಾಮಭಕ್ತರು ಬಂದಿದ್ದರು, ಮಿಲಿಟ್ರಿ ಮಂದಿ ರಾಶಿ ರಾಶಿ ಬಂದಿದ್ರು, ಅಬ್ಬಬ್ಬಾ ಜನ ಅಂದ್ರೆ ಜನ, ಅಲ್ಲ ಬಿಡು, ಇರುವಿ ಸಾಲು..' ಅಂತಾ ಹೇಳುತ್ತಿದ್ದರೆ ಸೋಡಾ ನಾಯ್ಡುವಿಗೆ ಬಾಯಲ್ಲಿ ನೀರೂರಿ 'ಅಬ್ಬಬ್ಬಾ.. ಅಷ್ಟೊಂದು ಜನಾನಾ.. ಹಂಗಂದ್ರೆ ಏನಿಲ್ಲಾ ಅಂದ್ರೂ ಒಂದು ಲಕ್ಷ ಸೋಡಾ ಬಾಟಲಿ ವ್ಯಾಪಾರ ಆಗೋದು. ಯಾರಾದ್ರೂ ಮಿಷಿನ್ ಸೆಟ್ ಅಪ್ ಮಾಡಿದ್ರಾ.. ಅಷ್ಟೊಂದು ಗಿರಾಕಿ ಅಂದ್ರೆ ರೂಪಾಯಿಗೊಂದಂದ್ರೂ ಮುಗೆ ಬಿದ್ದು ಕೊಂಡ್ಕೊಳ್ತಾರೆ..' ಅಂತ ಅವಸರದಿಂದ ಸೋಡಾ ವ್ಯಾಪಾರದ ಬಗ್ಗೆ ವಿಚಾರಿಸಿದನಂತೆ. ಪಾಪ! ಅವನಂತೂ ಬದಲಾಗಿಲ್ಲ ನೋಡು ಎಂದು ಮಾಸ್ತರರು ಪೇಚಾಡಿಕೊಂಡರು.

ಅಮ್ಮ ನನ್ನ ಬಳಿಗೆ ಬಂದ ಮೇಲೆ ಹೊಸ ಶಕ್ತಿ, ಉತ್ಸಾಹಗಳು ನನ್ನಲ್ಲಿ ಸೇರಿಕೊಂಡವು. ಡಿಗ್ರಿ ಪೂರ್ತಿ ಮಾಡಿ, ಸರ್ವಿಸ್ ಕಮಿಷನ್ ಮುಗಿಸಿಕೊಂಡು, ಮುಖ್ಯದ್ವಾರದಿಂದಲೇ ಡೈರೆಕ್ಟ್ ರಿಕ್ರೂಟ್ಮೆಂಟ್ ಆಗಿ ಆಫೀಸರ್ ಉದ್ಯೋಗ ಸಿಕ್ಕಿತು. ಗೃಹ ಉದ್ಯೋಗಕ್ಕೆ ಸಂಬಂಧಿಸಿದ ಶಾಖೆಯಲ್ಲಿ ಮೊದಲಿಗೆ ನಮ್ಮ ಜಿಲ್ಲೆಗೇ ಪೋಸ್ಟ್ ಮಾಡಿದರು.

ಆ ದಿನ ಬೆಳಗ್ಗೆ ಆಫೀಸಿಗೆ ಹೋಗುತ್ತಲೇ, ತಮ್ಮ ಸಲುವಾಗಿ ನಿಮ್ಮೂರಿನಿಂದ ಸೋಡಾ ನಾಯ್ಡು ಅಂತ ಯಾರೋ ಬಂದಾರೆ ಅಂತ ಹೇಳುತ್ತಲೇ ಒಳಗೆ ಕಳುಹಿಸೆಂದು ಹೇಳಿದೆ.

ಖಾಕಿ ನಿಕ್ಕರು, ಸಿಲ್ಕು ಜುಬ್ಬಾ, ಕಪ್ಪು ಕನ್ನಡಕ, ಸ್ವಲ್ಪ ನೆರೆತ ಅವೇ ಗುಂಗುರು ಕೂದಲು, ಮುಖದ ತುಂಬಾ ನಗೆ. ಆಫೀಸಿನ ವಾತಾವರಣಕ್ಕೆ ಅಂಜುತ್ತಾ ಒಳಗೆ ಬಂದ.

'ನಾನು..' ಎಂದು ಗುರುತು ಹೇಳಲು ಶುರು ಮಾಡಿದಾಗ 'ಗೊತ್ತದೇಳು ನಾಯ್ಡು, ಕೂತ್ಗೋ.. ಕೂತ್ಗೋ' ಎಂದು ಹೇಳಿದ ಮೇಲೆ ಅವನ ಮನಸ್ಸು ತಿಳಿಯಾಯ್ತು. ಕೂತು ಕೂಡದಂತೆ ಕುರ್ಚಿಯ ತುದಿಯಲ್ಲಿ ಕುಳಿತುಕೊಂಡ.

'ಭೇಷಿದಿಯಾ.. ವ್ಯಾಪಾರ ಛಂದಾಗದಾ..' ಎಂದು ಆತ್ಮೀಯವಾಗಿ ವಿಚಾರಿಸಿದೆ.

ಗಂಭೀರವಾಗಿ ಕಪ್ಪು ಕನ್ನಡಕವನ್ನು ತೆಗೆದು, ಕುರ್ಚಿಯಲ್ಲಿ ಸ್ಥಿಮಿತವಾಗಿ ಕುಳಿತುಕೊಂಡು 'ಪರವಾಗಿಲ್ಲರೀ, ಭೇಷೇ ಅದೆ. ಮೊನ್ನೆ ಮೊನ್ನೆ ಮಗಳ ಮದುವಿ ಮಾಡಿದಿವ್ರಿ. ಪಕ್ಕದ ಊರಿಂದೇ ಹುಡುಗ.. ಸೆಕೆಂಡು ಹ್ಯಾಂಡ್ ಮೂರು ಕಾಯಿಲ್ ಜರ್ಮನ್ ವಿಷಿನ್ ಅದೆ ರೀ.. ಅದು ಭಾಳ ಅನುಕೂಲ ಆಗ್ಯದೆ ನೋಡ್ರಿ.. ಉಳಿದಿದ್ದು ಕುರ್ಚಿ ಟೇಬಲು ಎಲ್ಲಾ ನಮ್ಮದೇ ಸರಿಮಾಡಿ ಕೊಟ್ಟೀನ್ರೀ. ನಮ್ಮ ಮಗಳಿಗೆ ಸೋಡಾ ಮಾಡಲಿಕ್ಕೆ ಬರ್ತದೆ ನೋಡ್ರಿ.. ಅಳಿಯ ಊರಾಗೆ ಏನಿಲ್ಲಾ ಅಂದ್ರೂ ಒಂದು ಹತ್ತು ಡಜನ್ ಸೋಡಾ ಮಾರ್ತಾನ್ರೀ.. ಮನೆಯೋರಿಗೇ ಸ್ವಂತ ಅಂತ ಒಂದು ನಾಲ್ಕು ಡಜನ್ ವ್ಯಾಪಾರ ಅದೆ ರೀ.. ಹೆಂಗೋ ಅವರ ಬದುಕು ಅವರು ಮಾಡ್ಕೊಳ್ತಾ ಇದಾರೆ ನೋಡ್ರಿ. ನಮಗೇನೂ ಚಿಂತಿ ಇಲ್ಲ ಬಿಡ್ರೀ..'

ಬಂದ ಕಾರ್ಯದ ಬಗ್ಗೆ ಕೇಳಿದೆ. ಕಣ್ಣಿನ ದೃಷ್ಟಿಯನ್ನು ತಪ್ಪಿಸುವುದು, ತುಟಿಗಳು ಅದರುವುದು ಕಂಡುಬಂತು.

'ಹಂಗೇನೂ ವಿಶೇಷ ಇಲ್ಲ ಬಿಡ್ರಿ.. ನಮಗೆ ಈಗ ಸ್ವಲ್ಪ ಓಪಿಗಿ ಕಮ್ಮಿ ಆಗ್ಯದೆ ರೀ.. ಒಂದೇ ಕಾಯಿಲ್ ಮಿಷಿನ್ ತಿರುಗಿಸಲಿಕ್ಕೆ ಕೈ ಸೋಲಲಿಕ್ಕೆ ಹತ್ತಾವ್ರೀ.. ಮೂರು ಕಾಯಿಲ್ ಮಿಷಿನ್ ಹೊಸಾದು ಕೊಂಡ್ಕೊಳ್ಳೋಣ ಅಂತ.. ನಿಮ್ಮ ಮುಂದೆ ಹೇಳಿದ್ರೆ ಸಾಲ ಮಂಜೂರಾಗ್ತದೆ, ವ್ಯವಹಾರ ಎಲ್ಲಾ ಸುಲಭವಾಗಿ ಆಗ್ತದೆ ಅಂತ ಹೇಳಿದ್ರು ರೀ..'

ಮಧ್ಯಮಧ್ಯದಲ್ಲಿ ನಿಕ್ಕರು ಜೇಬನ್ನು ಸಂಕೋಚದಿಂದ ಮುಟ್ಟಿಗೊಳ್ಳುತ್ತಾ ನನ್ನನ್ನು ನೋಡಿ ಮತ್ತೆ ಮುಖದಲ್ಲಿ ನಗೆಯರಳಿಸುತ್ತಿದ್ದ. ಯಾಕೋ ಪಾಪ ತುಂಬಾ ಸಂಕೋಚ ಪಟ್ಟುಕೊಳ್ಳುತ್ತಿದ್ದಾನೆಂದುಕೊಂಡೆ.

'ಯಾಕೆ ಸುಮ್ಮನೇ ಒದ್ದಾಡ್ತಿ ನಾಯ್ಡು, ಹಾಯಾಗಿ ಇಲ್ಲಿಗೆ ಬಂದುಬಿಡು.. ಏನಾದ್ರೂ ಬೇರೆ ಕೆಲಸ ಮಾಡ್ಕೊಂಡಿರುವಿಯಂತೆ..' ಅಂದೆ.

ನಾಯ್ಡು ಮುಖದಲ್ಲಿನ ನಗು ಮಾಯವಾಯ್ತು.

'ಬರಬಹುದು ಬಿಡ್ರಿ. ಆದರೆ ಊರಾಗಿರೋದು ನಮ್ಮದೊಂದೇ ಮಿಷಿನ್ ನೋಡ್ರಿ. ರೋಗ ರುಜಿನ ಅಂತ ಏನೇ ಆದ್ರೂ ಊರಾಗೆ ಯಾರೂ ಇಲ್ಲದಂತೆ ಆಗ್ತದೆ.. ಎಲ್ಲಾರೂ ನಮ್ಮ ಸೋಡಾಕ್ಕೇ ಒಗ್ಗಿ ಹೋಗ್ಯಾರೆ. ಹಂಗೆ ನೋಡಿದ್ರೆ ಹನ್ನೆರಡು ತಿರುಪು ಸೋಡಾಕ್ಕೆ ಯಾರೂ ಹಾಕಂಗಿಲ್ಲರೀ.. ಬರಬಹುದು ಅಂದುಕೊಳ್ರೀ. ಆದರೂ..'

ಅವನ ನಂಬಿಕೆಯನ್ನು, ಮುಗ್ದತೆಯನ್ನು ಅರ್ಥ ಮಾಡಿಕೊಂಡೆ.

'ಸರೆ ಬಿಡು. ನಿನ್ನಿಷ್ಟ' ಎಂದು ಹೇಳಿ ಬೇಕಾದ ವಿವರಗಳನ್ನು ಕೇಳಿ ಬರೆದುಕೊಂಡೆ.

'ಒಂದು ತಿಂಗಳು ಹಿಡಿತದೆ. ತಪ್ಪದಂಗೆ ನಿನ್ನ ಕೆಲಸ ಆಗೋ ಹಂಗೆ ನೋಡ್ಕೊಳ್ತೀನಿ' ಎಂದು ಭರವಸೆಯನ್ನಿತ್ತೆ. ನಾಯ್ಡು ಆನೆಯೇರಿದಷ್ಟು ಖುಷಿಯಾದ. ಅಲ್ಪಸಂತೋಷಿ!

ಇನ್ನೇನೋ ಹೇಳಬೇಕೆಂದೋ, ಕೇಳಬೇಕೆಂದೋ ಒದ್ದಾಡುತ್ತಿದ್ದಂತೆ ಕಾಣಿಸಿತು. ಒಟ್ಟಾರೆ ವಿಧವಿಧವಾಗಿ ಹೈರಾಣಾಗುತ್ತಿದ್ದ. ಮತ್ತೆ ನಾನು ಇನ್ನೊಮ್ಮೆ ಮಾತು ಕೊಟ್ಟ ಮೇಲೆ ವಿನಯಪೂರ್ವಕವಾಗಿ ಹಿಂದೆ ಹಿಂದೆ ಹೆಜ್ಜೆಗಳನ್ನಿಡುತ್ತಾ ಬಾಗಿಲಿನ ತನಕ ಹೋಗಿ ಕೈ ಜೋಡಿಸಿ ನಮಸ್ಕಾರ ಮಾಡಲು ಹೋದ. ಒಮ್ಮೆ ಏನೋ ಠಣ್ಣನೆ ನೆಲಕ್ಕೆ ಬಿದ್ದ ಸದ್ದಾಯ್ತು. ಬೆಚ್ಚಿಬಿದ್ದ ನಾಯ್ಡು ಸ್ಪ್ರಿಂಗ ಡೋರ್ ತೆಗೆದುಕೊಂಡು ಕಂಗಾಲಾಗಿ ದೊಡ್ಡ ದೊಡ್ಡ ಹೆಜ್ಜೆಗಳನ್ನಿಡುತ್ತಾ ಓಡಿ ಹೋದ. ಏನೆಂದು ಅರ್ಥವಾಗದೆ ಕುರ್ಚಿಯಿಂದ ಮೇಲಕ್ಕೆದ್ದು ನೋಡಿದರೆ, ಸ್ಪ್ರಿಂಗ್ ಡೋರ್ ಗಳು ಪಂಜರದಿಂದ ಹೊರಬಿದ್ದ ಹಕ್ಕಿಯ ರೆಕ್ಕೆಯಂತೆ ಪಟಪಟನೆ ಬಡಿದುಕೊಳ್ಳುತ್ತಿದ್ದವು.

ನೆಗೆದಾಡುತ್ತಿದ್ದ ಕರುವಿನ ಕೊರಳಲ್ಲಿ ಕಟ್ಟಿದ ಸರ ಕಡಿದು ಗೆಜ್ಜೆಗಳು ನೆಲಕ್ಕೆ ಬಿದ್ದ ಹಾಗೆ, ಮೋಡಗಳು ತುಂಡು ತುಂಡಾಗಿ ರಪರಪನೆ ಆಣೆಕಲ್ಲುಗಳಾಗಿ ನೆಲಕ್ಕೆ ಬಿದ್ದ ಹಾಗೆ, ತುಂಬಿದ ಹಿಡಿಯಲ್ಲಿನ ನೇರಳೆ ಹಣ್ಣುಗಳು ಜಾರಿ ಬಿದ್ದಹಾಗೆ, ಸೋಡಾ ಗೋಲಿಗಳು ನನ್ನ ಆಫೀಸಿನ ನೆಲದ ಮೇಲೆಲ್ಲಾ ಹರಿದಾಡುತ್ತಿದ್ದವು.

ಒಂದು ಕ್ಷಣ ಇಂದ್ರಜಾಲದಲ್ಲಿ ಸಿಕ್ಕಿಬಿದ್ದೆ. ಮೇಜಿನ ಮೇಲಿದ್ದ ಪೇಪರ್ ವೆಯಿಟ್ ಗುಂಡುಸೂಜಿಯ ಮೇಲಿನ ಬುಗುರಿಯಂತೆ ಉಸಿರುಗಟ್ಟಿ ತಿರುಗುತ್ತಿತ್ತು. ಗಾಳಿಗೆ ಎಗರಿದ ಕಾಗದಗಳು ಗಾಳಿಪಟದಂತೆ ರೂಮಿನ ತುಂಬೆಲ್ಲಾ ಹಾರಾಡುತ್ತಿದ್ದವು. ಆತಂಕ, ಗಾಬರಿ, ಸಂತೋಷ ಎಲ್ಲವೂ ನನ್ನನ್ನೊಮ್ಮೆ ಆವರಿಸಿದವು.

ಸ್ಪ್ರಿಂಗ್ ಡೋರ್ ಗಳು ಬಡಿದುಕೊಳ್ಳುವುದನ್ನು ನಿಲ್ಲಿಸಿದವು. ನಾನು ಸುಸ್ಥಿತಿಗೆ ಮರಳಿದೆ. ನೆಲದ ಮೇಲೆ ಹೊರಳಾಡುತ್ತಿದ್ದ ಗೋಲಿಗಳನ್ನು ಅಂಬೆಗಾಲಿಟ್ಟುಕೊಂಡು ಜಾಗ್ರತೆಯಿಂದ ಆಯ್ದುಕೊಂಡೆ. ಹಿಡಿತುಂಬ ಗೋಲಿಗಳನ್ನು ಹೃದಯಕ್ಕೆ ತಬ್ಬಿಕೊಂಡೆ.

ನನ್ನ ಬಾಲ್ಯವನ್ನು ಇಷೊಂದು ವರ್ಷ ಅಳಿಸಿಹೋಗದಂತೆ ತನ್ನ ಮನಸ್ಸಿನಲ್ಲಿಟ್ಟುಕೊಂಡು, ತಾನೇ ಸ್ವತಃ ಬಂದು ನನ್ನ ಕಣ್ಣ ಮುಂದೆ ತೆರೆದಿಟ್ಟ ನಮ್ಮ ನಾಯ್ಡುವಿನ ಸೋಡಾದಲ್ಲಿ ಮಾತ್ರವಲ್ಲ ಮನಸ್ಸಿನಲ್ಲಿಯೂ ಧೂಳಿಲ್ಲ. ಏನು ಕೊಟ್ಟರೆ ತಾನೇ ಅಂತಹ ಮಹಾನುಭಾವನ ಋಣ ತೀರಿಸಿಕೊಳ್ಳಲು ಸಾಧ್ಯ?