ಸೋತವರಿಗೆ ಸಹಾನುಭೂತಿ, ಗೆದ್ದವರಿಗೆ ಅಭಿನಂದನೆಗಳು..!

ಸೋತವರಿಗೆ ಸಹಾನುಭೂತಿ, ಗೆದ್ದವರಿಗೆ ಅಭಿನಂದನೆಗಳು..!

" ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ " - ನರೇಂದ್ರ ಮೋದಿ.

" ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದೇವೆ " - ರಾಹುಲ್ ಗಾಂಧಿ.

ಸಾವರ್ಕರ್ ಈ ರಾಷ್ಟ್ರದ ಮಾಹಾನ್ ದೇಶಭಕ್ತ ಮತ್ತು ಮಾದರಿ- ಸಂಘ ಪರಿವಾರ.

ಮಹಾತ್ಮ ಗಾಂಧಿ  ಈ ದೇಶದ ರಾಷ್ಟ್ರಪಿತ ಮತ್ತು ಆದರ್ಶ- ಭಾರತ ರಾಷ್ಟ್ರೀಯ ಕಾಂಗ್ರೇಸ್.

ಟಿಪ್ಪು ಸುಲ್ತಾನ್ ಒಬ್ಬ ಮತಾಂಧ - ದೇಶದ್ರೋಹಿ - ಬಿಜೆಪಿ. ಟಿಪ್ಪು ಸುಲ್ತಾನ್ ಒಬ್ಬ " ದೇಶಪ್ರೇಮಿ - ಸ್ವಾತಂತ್ರ್ಯ ಯೋಧ " - ಕಾಂಗ್ರೇಸ್.

ಪಠ್ಯ ಪುಸ್ತಕಗಳಲ್ಲಿ ಸುಳ್ಳನ್ನೇ ಹೇಳಲಾಗಿದೆ. ಅದನ್ನು ಮಾರ್ಪಾಡು ಮಾಡಲಾಗಿದೆ- ಬಿಜೆಪಿ ಸರ್ಕಾರ.

ಪಠ್ಯ ಪುಸ್ತಕಗಳಲ್ಲಿ ಇತಿಹಾಸವನ್ನು ತಿರುಚಿ ಕೋಮುದ್ವೇಷ ಹರಡಲಾಗುತ್ತಿದೆ- ವಿರೋಧ ಪಕ್ಷ ಕಾಂಗ್ರೇಸ್.

ಹಿಜಾಬ್, ಹಲಾಲ್, ಅಜಾನ್, ಲವ್ ಜಿಹಾದ್, ಗೋಹತ್ಯೆ ಮುಂತಾದ ವಿಷಯಗಳೇ ಬಹುಮುಖ್ಯ- ಬಲಪಂಥೀಯ ಚಿಂತನೆಗಳು.

ಧಾರ್ಮಿಕ ಸ್ವಾತಂತ್ರ್ಯ, ಆಹಾರ ಸ್ವಾತಂತ್ರ್ಯ,  ಅಲ್ಪಸಂಖ್ಯಾತರ ರಕ್ಷಣೆ ಮುಂತಾದ ವಿಷಯಗಳೇ ಬಹುಮುಖ್ಯ- ಎಡಪಂಥೀಯ ಚಿಂತನೆಗಳು.

ವಿಮಾನ ನಿಲ್ದಾಣಗಳು, ದಶಪಥ ರಸ್ತೆಗಳು, ಸ್ಮಾರ್ಟ್ ಸಿಟಿಗಳು, ಡಿಜಿಟಲೀಕರಣ ಮುಂತಾದವೇ ನಿಜವಾದ ಅಭಿವೃದ್ಧಿ- ಬಿಜೆಪಿ ಸರ್ಕಾರ.

ಅನ್ನ ಭಾಗ್ಯ, ಉಚಿತ ಗ್ಯಾರಂಟಿಗಳು, ಅನೇಕ ಸಬ್ಸಿಡಿಗಳು ಮುಂತಾದವುಗಳೇ ನಿಜವಾದ ಸರ್ಕಾರದ ಜವಾಬ್ದಾರಿ- ಕಾಂಗ್ರೇಸ್ ಸರ್ಕಾರ.

ಕರ್ನಾಟಕದ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ.... ಎರಡು ಅತಿರೇಕದ ಸಾಂಪ್ರದಾಯಿಕ ಪಕ್ಷಗಳ ನಡುವೆ ಮತದಾರರು ಒಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ಸುಮಾರು ‌35 ವರ್ಷಗಳಿಂದ ಈ ರೀತಿ ಅಧಿಕಾರ ಬದಲಾಗುತ್ತಾ ಬಂದಿದೆ. ಕೆಲವು ನಾಯಕರು ಈ 35 ವರ್ಷಗಳಿಂದಲೂ ಅಧಿಕಾರ ಕೇಂದ್ರದ ಸುತ್ತಲೇ ಇದ್ದಾರೆ ಮತ್ತು ಈಗಲೂ ಸಹ.

ಶೇಕಡಾ 40% ಹೊಸ ಮುಖಗಳ ಪ್ರವೇಶವಾಗುತ್ತಿದ್ದರೆ ಉಳಿದ ‌ ಶೇಕಡಾ ‌60% ವಂಶವಾಹಿನಿಯೇ ಮುಂದುವರಿಯುತ್ತಿದೆ. ಲಕ್ಷಗಳ ಬಜೆಟ್ ಈಗ 3 ಲಕ್ಷ ಕೋಟಿಗೆ ಬಂದು ತಲುಪಿದೆ. ಜನಸಂಖ್ಯೆ 7 ಕೋಟಿ ದಾಟಿದೆ. ಜೀವನಮಟ್ಟ ? ಇದನ್ನು ಅರ್ಥ ಮಾಡಿಕೊಳ್ಳಲು ಬಹಳ ಕಷ್ಟವಾಗಿದೆ. ವಸ್ತುಗಳ ರೂಪದಲ್ಲಿ ಜೀವನ ಉತ್ತಮ ಮಟ್ಟದಲ್ಲಿದೆ‌. ತಂತ್ರಜ್ಞಾನ ನಮ್ಮ ದೈಹಿಕ ಶ್ರಮವನ್ನು ಕಡಿಮೆ ಮಾಡಿದೆ. ಸುಖದ ಕಲ್ಪನೆ ‌ಬದಲಾಗಿದೆ. ಆದರೆ ಆರೋಗ್ಯ ನೆಮ್ಮದಿ ಮತ್ತು ಅದರ ಪರಿಣಾಮವಾಗಿ ಒಟ್ಟು ಜೀವನಮಟ್ಟ ಸಂಪೂರ್ಣ ಕುಸಿಯುತ್ತಿದೆ. ಈ ಸಂದರ್ಭದಲ್ಲಿ ಬಹು ಜನರು ಒಂದು ಹೊಸ ಸರ್ಕಾರವನ್ನು ಆಡಳಿತ ನಡೆಸಲು ಆಯ್ಕೆ ಮಾಡಿದ್ದಾರೆ.

ಆ ಸರ್ಕಾರ ರಚನೆಯಲ್ಲಿ ಮುಖ್ಯಮಂತ್ರಿ ಹುದ್ದೆ ಮತ್ತು ಇತರ ಮಂತ್ರಿ ಹುದ್ದೆಗಳಿಗಾಗಿ ಜಟಾಪಟಿ ಶುರುವಾಗಿದೆ. ಬಹುತೇಕ ಶಾಸಕರು ಅತೃಪ್ತ ಆತ್ಮಗಳು. ಮಂತ್ರಿಗಳಾಗುವ ಮಹತ್ವಾಕಾಂಕ್ಷೆ ಅಥವಾ ದುರಾಸೆ. ಹೊಸದೇನೋ ನಿರೀಕ್ಷಿಸಬಹುದೇ...

ಬಹುಶಃ ಅಸಾಧ್ಯ. ಏಕೆಂದರೆ ಪ್ರಾರಂಭದಲ್ಲಿ ಒಂದಷ್ಟು ಭರವಸೆ ಮೂಡಿಸಬಹುದು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಗೂಂಡಾಗಿರಿ, ಜಾತಿ ರಾಜಕೀಯ ಬಹುತೇಕ ಮುಂದುವರಿಯುತ್ತದೆ. ಬಿಜೆಪಿ ಸರ್ಕಾರದಲ್ಲಿ ಇದ್ದ ಅನೇಕ ದುಷ್ಟ ಕೃತ್ಯಗಳು ಇಲ್ಲಿ ಬೇರೆ ರೂಪದಲ್ಲಿ ಪ್ರಕಟವಾಗಬಹುದು. ಬಿಜೆಪಿ ಸರ್ಕಾರದ ಶ್ರೀಮಂತ ಪರ ನಿಲುವುಗಳು ಇಲ್ಲಿ ಬಡವರ ಪರವಾಗಿ ಬದಲಾಗಬಹುದು. ಆದರೆ ಅದರ ಜಾರಿ ಮಾತ್ರ ಸಂಪೂರ್ಣ ಭ್ರಷ್ಟಾಚಾರದಿಂದಲೇ ಇರುತ್ತದೆ. ಸಂಪುಟ ರಚನೆಯ ನಂತರ ಅತೃಪ್ತ‌ ಆತ್ಮಗಳು ಮತ್ತೆ ಸದಾ ಬಂಡಾಯದ ಧ್ವನಿ ಮೊಳಗಿಸುತ್ತಲೇ ಇರುತ್ತವೆ. ಮಾಧ್ಯಮಗಳು ಅದಕ್ಕೆ ತುಪ್ಪ ಸುರಿಯುತ್ತಲೇ ಇರುತ್ತವೆ. ಅವುಗಳ ಉದ್ಯೋಗವೇ ಅದು.

ಇದು ನಿರಾಸೆಯ ಮಾತುಗಳಲ್ಲ. ವಾಸ್ತವದ ಪ್ರತಿಬಿಂಬ. ಇಡೀ ವ್ಯವಸ್ಥೆಯೇ ಹದಗೆಟ್ಟಿದೆ. ಮುಂದಿನ 5 ವರ್ಷಗಳ ನಂತರ ಬಿಜೆಪಿಯವರು ತಾವು ಮಹಾನ್ ಪ್ರಾಮಾಣಿಕರು ಎಂಬಂತೆ ಮತ್ತೆ ಜನರ ಮುಂದೆ ಬರುತ್ತಾರೆ. ‌ಈ ಐದು ವರ್ಷಗಳಲ್ಲಿ ಮತ್ತಷ್ಟು ಸಾಲ ಜಾಸ್ತಿಯಾಗಿರುತ್ತದೆ. ಮುಖ್ಯವಾಗಿ ಶ್ರೀಗಂಧದ ನಾಡು ಕರ್ನಾಟಕದ ಗಾಳಿ ನೀರು ಆಹಾರ ಆರೋಗ್ಯ ಮಾನವೀಯ ಮೌಲ್ಯಗಳು, ಜೀವಪರ ನಿಲುವುಗಳು, ಶಿಕ್ಷಣ, ವೈದ್ಯಕೀಯ, ನಿರುದ್ಯೋಗ, ಸಾಮಾಜಿಕ ಸ್ವಾಸ್ಥ್ಯ, ಸಾರಿಗೆ ಮುಂತಾದ ವಿಷಯಗಳಲ್ಲಿ ಶುದ್ದೀಕರಣ ಕ್ರಿಯೆ ನಡೆದು ಜನರ ಜೀವನಮಟ್ಟ ಸುಧಾರಿಸುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.

ಈಗಾಗಲೇ ಕೆಲವು  ಸ್ವಾಮಿಗಳು ಹಿಂದಿನ ಸರ್ಕಾರದಂತೆ ಈಗಿನ ಸರ್ಕಾರದಲ್ಲಿ ಮೂಗು ತೂರಿಸಲು ಪ್ರಾರಂಭಿಸಿದ್ದಾರೆ. ಕೆಲವು ಪ್ರಬಲ ನಾಯಕರು ರಾಜ್ಯ ತಮ್ಮ ಅಪ್ಪನ ಆಸ್ತಿ ಎಂಬಂತೆ ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ಕೆಲವು ನಾಯಕರು ನಾವು ಅಧಿಕಾರ ಸ್ಥಾಪಿಸಲು ಕೆಲವು ತಿಂಗಳುಗಳಿಂದ ಬಹಳ ಕಷ್ಟ ಪಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಸಾಮಾನ್ಯ ಜನ ಜೀವನಪೂರ್ತಿ ಕಷ್ಟ ಪಡುತ್ತಾರೆ ಎಂಬುದನ್ನು ಮರೆಯಬಾರದು.

ಕನಿಷ್ಠ ಮಟ್ಟದ ತ್ಯಾಗವೂ ಇಲ್ಲದ ರಾಜಕೀಯ ಅತ್ಯಂತ ಹೇಯವಾದುದು. ಸೈದ್ದಾಂತಿಕ ಬದ್ದತೆಗಿಂತ ತ್ಯಾಗ ಸಹ ಮುಖ್ಯವಾದುದು. ಸ್ವಾರ್ಥ ಎಲ್ಲವನ್ನೂ ಆಪೋಷನ ತೆಗೆದುಕೊಳ್ಳುತ್ತದೆ. ಬಿಜೆಪಿಯನ್ನು ಸಾರಾಸಗಟಾಗಿ ತಿರಸ್ಕರಿಸಿ ಕಾಂಗ್ರೇಸ್ ಪಕ್ಷವನ್ನು ಜನ ಆಯ್ಕೆ ಮಾಡಿಕೊಂಡಿದ್ದಾರೆ. ಆ ಪಕ್ಷದ 136 ಜನ ಕನಿಷ್ಠ ಜನರ ಪ್ರೀತಿಯ ಋಣವನ್ನು ಪ್ರಾಮಾಣಿಕವಾಗಿ ತೀರಿಸಲು ಪ್ರಯತ್ನಿಸಲಿ. ನನ್ನ ಈ ಋಣಾತ್ಮಕ ಅಭಿಪ್ರಾಯಗಳನ್ನು ಸುಳ್ಳು ಮಾಡಲಿ. ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಿ ಜನರ ಜೀವನಮಟ್ಟ ಸುಧಾರಿಸಲಿ ಎಂದು ಆಶಿಸುತ್ತಾ... ‌

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ