ಸೋನ್ಸ್ ಫಾರ್ಮ್ ಎಂಬ ಕೃಷಿಲೋಕ

ಸೋನ್ಸ್ ಫಾರ್ಮ್ ಎಂಬ ಕೃಷಿಲೋಕ

ಕೃಷಿಯ ಸಾಧ್ಯತೆಗಳನ್ನು ತಿಳಿಯಬೇಕಾದರೆ ಮೂಡಬಿದ್ರೆ ಹತ್ತಿರದ ಸೋನ್ಸ್ ಫಾರ್ಮಿಗೆ ಒಮ್ಮೆ ಕಾಲಿಡಬೇಕು, ಅಲ್ಲಿ ಮೂರು ತಾಸುಗಳ ಕಾಲ ಸುತ್ತಾಡಬೇಕು, ಸೋನ್ಸ್ ಸೋದರರೊಂದಿಗೆ ಒಂದಷ್ಟು ಹೊತ್ತು ಮಾತಾಡಬೇಕು. ೫ ಜನವರಿ ೨೦೧೪ರಂದು ನಾವು ೪೦ ಜನರು ಮಂಗಳೂರಿನಿಂದ ಹೊರಟದ್ದು ಸೋನ್ಸ್ ಫಾರ್ಮ್ ನೋಡಲಿಕ್ಕಾಗಿ. ಮೂಡಬಿದ್ರೆ ಹಾದು, ೪೦ ಕಿಮೀ ದೂರದ ಸೋನ್ಸ್ ಫಾರ್ಮಿನ ಗೇಟಿನೆದುರು ಬಸ್ ನಿಂತಾಗ ಬಿಸಿಲೇರುತ್ತಿತ್ತು. ನಮ್ಮನ್ನು ಎದುರುಗೊಂಡರು ಡಾ. ಎಲ್. ಸಿ. ಸೋನ್ಸ್ ಮತ್ತು ಅವರ ತಮ್ಮ ಐ. ವಿ. ಸೋನ್ಸ್.ಈಗ ಅಲ್ಲಿನ ತೋಟದಲ್ಲಿ ಎತ್ತ ಕಂಡರೂ ಹಸಿರು, ನೂರಾರು ಜಾತಿಯ ಸಸ್ಯಗಳು. ಆದರೆ, ಎಂಟು ದಶಕಗಳ ಮುನ್ನ, ಬಾಸೆಲ್ ಮಿಷನಿನವರು ಇಲ್ಲಿ ಕೃಷಿ ಮಾಡುವ ಯೋಜನೆ ಕೈಗೆತ್ತಿಕೊಂಡಾಗ ಇದು ಹೀಗಿರಲಿಲ್ಲ. ಆಗ ಇದೊಂದು ಜಂಬಿಟ್ಟಿಗೆ ಮಣ್ಣಿನ ಗುಡ್ಡವಾಗಿತ್ತು. ಮಳೆಗಾಲದ ಮಳೆನೀರು ಮಾತ್ರ ಇಲ್ಲಿ ನೀರಿನಾಸರೆಯಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ತಮ್ಮ ತಂದೆ ಆಲ್ಫ್ರೆಡ್ ಸೋನ್ಸರು ಇಲ್ಲಿ ಕೃಷಿಗೆ ತೊಡಗಿದರು ಎಂದು ನೆನಪು ಮಾಡಿಕೊಂಡರು ಡಾ. ಎಲ್. ಸಿ. ಸೋನ್ಸ್.ಆರಂಭದಲ್ಲಿ ಇಲ್ಲಿ ನೆಟ್ಟ ತೆಂಗಿನ ಸಸಿಗಳು ಚೆನ್ನಾಗಿ ಬೆಳೆಯಲಿಲ್ಲ. ಆದರೆ ತೆಂಗಿನ ಮರಗಳ ನಡುವೆ ನೆಟ್ಟ ಅನಾನಸ್ ಸಸಿಗಳು ಉತ್ತಮ ಫಸಲು ನೀಡಿದವು. ಅನಂತರ ಹೊಸಹೊಸ ಪ್ರಯೋಗಗಳಿಂದ ಹೊಸಹೊಸ ಪಾಠಗಳ ಕಲಿಕೆ ಅಲ್ಲಿ ನಿರಂತರ. ೧೯೪೭ರ ನಂತರ ಅಲ್ಲಿ ಕೃಷಿಯಲ್ಲಿ ಯಾಂತ್ರೀಕರಣ ಹಾಗೂ ಸುಧಾರಿತ ನೀರಾವರಿ ಪದ್ಧತಿಗಳ ಅಳವಡಿಕೆ. ೪೬ ಎಕ್ರೆಗಳ ತೋಟ ಕ್ರಮೇಣ ೧೦೦ ಎಕ್ರೆಗಳಿಗೆ ವಿಸ್ತರಣೆ. ಅನಾನಸ್ ಮುಖ್ಯ ಬೆಳೆಯಾಗಿ ಮುಂದರಿಕೆ. ಜೊತೆಗೆ ಮಾವು, ಚಿಕ್ಕು, ಕರಿಮೆಣಸು, ದಾಲ್ಚಿನ್ನಿ, ಜಾಯಿಕಾಯಿ, ತೆಂಗಿನಕಾಯಿ, ಗೇರು, ಕೊಕ್ಕೊ, ವೆನಿಲ್ಲಾ ಇತ್ಯಾದಿ ಬೆಳೆಗಳಸಮೃದ್ಧಿ. ವರುಷವಿಡೀ ಕೃಷಿ ಕೆಲಸಗಳು. ಅದರಿಂದಾಗಿ ಸುತ್ತಲಿನ ಹಲವರಿಗೆ ತೋಟದಲ್ಲಿ ಕಾಯಕದ ಅವಕಾಶ.ಕಳೆದ ೨೦ – ೩೦ ವರುಷಗಳಲ್ಲಿ ಈ ತೋಟದ ಚಿತ್ರಣವೇ ಬದಲಾಗಿದೆ. ಇದಕ್ಕೆ ಮುಖ್ಯ ಕಾರಣ, ತಮ್ಮ ತೋಟದ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿದ್ದು, ವಿದೇಶೀ ಹಣ್ಣುಗಳ ಕೃಷಿಯಲ್ಲಿ ತೊಡಗಿದ್ದು ಮತ್ತು ಅಧ್ಯಯನಾಸಕ್ತರಿಗೆ ತೋಟದ ಭೇಟಿಗೆ, ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ್ದು ಎಂದು ವಿವರಿಸುತ್ತಾರೆ ಡಾ. ಎಲ್.ಸಿ.ಸೋನ್ಸ್. ರಾಂಬುಟಾನ್, ಮ್ಯಾಂಗೊಸ್ಟೀನ್, ಡುರಿಯನ್, ಬಾರ್ಬಡೋಸ್ ಚೆರಿ, ಸುರಿನಾಮ್ ಚೆರಿ, ರಂಗೂನ್ ಚೆರಿ, ಫ್ಯಾಷನ್ ಹಣ್ಣು, ಪವಾಡ ಹಣ್ಣು, ಹಾವು ಹಣ್ಣು, ಡ್ರಾಗನ್ ಹಣ್ಣು –ಇವು ಸೋನ್ಸ್ ಫಾರ್ಮಿನಲ್ಲಿರುವ ಕೆಲವು ವಿದೇಶೀ ಮೂಲದ ಹಣ್ಣುಗಳು. ಉಷ್ಣವಲಯದ ಬೇರೆ ದೇಶಗಳ ಹಣ್ಣುಗಳನ್ನು ಇಲ್ಲಿ ಬೆಳೆಸುವ ಡಾ. ಸೋನ್ಸರ ಪ್ರಯೋಗ ಫಲ ನೀಡಿದೆ. ಉದಾಹರಣೆಗೆ ಇವರು ೪೦ ವರುಷಗಳ ಮುಂಚೆ ಇಲ್ಲಿ ಬೆಳೆಸಿದ ಹಣ್ಣು ಮಲೇಷ್ಯಾದ ರಂಬುಟಾನ್. ಅದು ನಮ್ಮ ಮಣ್ಣಿನಲ್ಲಿ ಬೆಳೆದು ಹಣ್ಣು ಬಿಡುತ್ತದೆ ಎಂದು ಖಚಿತವಾದ ಬಳಿಕ ಸಸಿ ಮಾಡಿ ಮಾರಿದರು. ಇಂದು, ದಕ್ಷಿಣ ಭಾರತದ ಹಲವೆಡೆ ರಂಬುಟಾನ್ ಕೃಷಿ ಹರಡಿದೆ. ಆದರೆ, ವಿದೇಶದಿಂದ ಪ್ರತಿಯೊಂದು ಹೊಸ ಸಸ್ಯ ತರಿಸುವಾಗ, ಕ್ವಾರಂಟೈನ್ ನಿಯಮಗಳ ಪಾಲನೆಗಾಗಿ ಡಾ. ಸೋನ್ಸರು ಪಟ್ಟ ಪಾಡು ಅವರಿಗೇ ಗೊತ್ತು. ನಗರಗಳ ಜನರು ವಾರಾಂತ್ಯಗಳಲ್ಲಿ ಹಳ್ಳಿಗೆ ಬಂದು ಹಸುರಿನ ನಡುವೆ ಕಾಲ ಕಳೆಯಲು ಇಷ್ಟ ಪಡುತ್ತಾರೆ ಎಂಬುದನ್ನು ಡಾ. ಸೋನ್ಸ್ ಗಮನಿಸಿದರು. ತಮ್ಮ ತೋಟದ ಮೂಲೆಯಲ್ಲಿ ಅಂತಹ ಪ್ರವಾಸಿಗರಿಗೆ ನೆರಳು ಒದಗಿಸಲು ಅವರು ಬೆಳೆಸಿದ್ದು ಬಿದಿರು ಮೆಳೆಗಳನ್ನು. ಅವುಗಳ ನೆರಳಿನಲ್ಲಿ ನಡು ಮಧ್ಯಾಹ್ನ ಊಟ ಮಾಡಿದ ನಮಗೆ ಬಿಸಿಲಿನ ಬೇಗೆ ತಟ್ಟಲೇ ಇಲ್ಲ. ಇಲ್ಲಿನ ವಿವಿಧ ಸಸ್ಯಗಳ ಹಾಗೂ ಹಕ್ಕಿಗಳ ಅದ್ಯಯನಕ್ಕೆ ನಮ್ಮ ದೇಶದವರೂ ವಿದೇಶದವರೂ ಬರುತ್ತಿರುತ್ತಾರೆ. ಅವರು ಉಳಿದುಕೊಳ್ಳಲು ಇಲ್ಲಿದೆ ಸುಸಜ್ಜಿತ ಅತಿಥಿಗೃಹ. ಮಂಗಳೂರಿಗೆ ವಿಲಾಸಿ ಹಡಗುಗಳಲ್ಲಿ ಆಗಮಿಸುವ ವಿದೇಶಿ ಪ್ರವಾಸಿಗರು ತಂಡತಂಡಗಳಾಗಿ ಮೂಡಬಿದ್ರೆಯ ಸಾವಿರಕಂಬದ ಬಸದಿ ಮತ್ತು ಕಾರ್ಕಳದ ಗೋಮಟೇಶ್ವರ ನೋಡಲು ಬಂದೇ ಬರುತ್ತಾರೆ. ಹಾಗೆ ಬಂದವರು, ಸೋನ್ಸ್ ಫಾರ್ಮಿನ ಸಸ್ಯಲೋಕದಲ್ಲಿ ಸುತ್ತಿ, ಅತಿಥಿಗೃಹದಲ್ಲಿ ವಿರಮಿಸಿ, ಬಿದಿರುಮೆಳೆಗಳ ನೆರಳಿನಲ್ಲಿ ಆಹಾರ ಸೇವಿಸಿ ಮರಳುತ್ತಾರೆ.
ಸೋನ್ಸ್ ಫಾರ್ಮಿನಲ್ಲಿ ನಾವು ಗಮನಿಸಬೇಕಾದ್ದು: ತೋಟದ ಮಣ್ಣಿಗೆ ಸೂಕ್ತ ಬೆಳೆಗಳನ್ನು ಗುರುತಿಸಿ, ಅವನ್ನು ಅತ್ಯುತ್ತಮ ರೀತಿಯಲ್ಲಿ ಬೆಳೆಯುವುದು; ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ ಮೂರ್ನಾಲ್ಕು ಬೆಳೆ ಬೆಳೆಯುವುದು; ಹೊಸ ಬೆಳೆಗಳ ಕೃಷಿಗೆ ತೊಡಗುವುದು; ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವುದು; ಇರುವ ಅವಕಾಶ ಬಳಸಿ ಹೊಸ ಆದಾಯ ಮೂಲಗಳನ್ನು ಹುಟ್ಟು ಹಾಕುವುದು.
ಡಾ. ಎಲ್. ಸಿ. ಸೋನ್ಸ್ ಮತ್ತು ಐ. ವಿ. ಸೋನ್ಸರು “ಕೃಷಿಯಲ್ಲಿ ಲಾಭ ಗಳಿಸುವುದು ಹೇಗೆ?” ಎಂಬುದನ್ನು ತಮ್ಮ ವಿಸ್ತಾರವಾದ ತೋಟದಲ್ಲಿ ಮಾಡಿ ತೋರಿಸಿದ್ದಾರೆ. ನೀವು ಮುಂಚಿತವಾಗಿ ತಿಳಿಸಿ ಹೋಗಿ ಅಲ್ಲಿನ ಸಾಧನೆ ಕಣ್ಣಾರೆ ಕಾಣಬಹುದು. (ಫೋನ್ ೦೮೨೫೮ – ೨೩೬೨೬೧)
ಕರ್ನಾಟಕ ಸರಕಾರವು ನವಂಬರ್ ೨೦೧೬ರಲ್ಲಿ ಡಾ. ಎಲ್.ಸಿ. ಸೋನ್ಸರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಇದು ಸೋನ್ಸರ ಕೃಷಿಕಾಯಕಕ್ಕೆ ಸಂದ ಗೌರವ.