ಸೋನ್ಸ್ ಫಾರ್ಮ್ ಎಂಬ ಕೃಷಿಲೋಕ
ಕರ್ನಾಟಕಕ್ಕೆ ಅಪರೂಪದ ವಿದೇಶೀ ಹಣ್ಣುಗಳನ್ನು ಪರಿಚಯಿಸಿದ ಸಸ್ಯಶಾಸ್ತ್ರಜ್ನ ಡಾ. ಎಲ್. ಸಿ. ಸೋನ್ಸ್ 5 ಎಪ್ರಿಲ್ 2023ರಂದು ಮೂಡಬಿದಿರೆಯ ಸುಪ್ರಸಿದ್ಧ ಸೋನ್ಸ್ ಫಾರ್ಮಿನ ಸ್ವಗೃಹದಲ್ಲಿ ನಮ್ಮನ್ನು ಅಗಲಿದರು. ತಮ್ಮ 89 ವರುಷಗಳ ತುಂಬು ಬದುಕಿನಲ್ಲಿ ಕೃಷಿಯ ಬಗ್ಗೆ ತಾವು ಕಂಡ ಹಲವು ಕನಸುಗಳನ್ನು ನನಸು ಮಾಡಿಕೊಂಡವರು ಡಾ. ಲಿವಿಂಗ್‌ಸ್ಟನ್ ಚಂದ್ರಮೋಹನ್ ಸೋನ್ಸ್. 1966ರಲ್ಲಿ ಅಮೇರಿಕಾದ ಮೊಂಟಾನಾ ವಿಶ್ವವಿದ್ಯಾಲಯದಿಂದ ಸಸ್ಯಶಾಸ್ತ್ರದಲ್ಲಿ ಪಿ.ಎಚ್.ಡಿ. ಪಡೆದ ಸೋನ್ಸರು ಯಾವತ್ತೂ ದಂತಗೋಪುರದಲ್ಲಿ ಬದುಕಿದವರಲ್ಲ. ಬದಲಾಗಿ ತೀರಾ ಸರಳ ವ್ಯಕ್ತಿಯಾಗಿ, ವಿನಯದ ಮೂರ್ತಿಯಾಗಿ, ತಾನು ಅನುಭವದಿಂದ ಕಲಿತದ್ದನ್ನೆಲ್ಲ ಸಮಾಜದ ಒಳಿತಿಗಾಗಿ ಧಾರೆಯೆರೆದು ಬಾಳಿದವರು. ಕೃಷಿ ಮತ್ತು ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಿಕ್ಕಾಗಿ ತಮ್ಮ ತಂದೆಯವರ ಹೆಸರಿನಲ್ಲಿ ಆಲ್ಫ್ರೆಡ್ ಸೋನ್ಸ್ ಫೌಂಡೇಷನ್ ಪ್ರಾರಂಭಿಸಿದವರು. ವಾಟರ್ ಡಿವೈನಿಂಗ್ ಕಲಿತು, ಬ್ರಿಟಿಷ್ ಸೊಸೈಟಿ ಆಫ್ ಡೌಸರ್ಸ್ ಸದಸ್ಯರಾಗಿದ್ದರು. ಜಲಶೋಧನೆಯ ತಮ್ಮ ವಿಶೇಷ ಕೌಶಲ್ಯ ಬಳಸಿ, ನೂರಾರು ಜನರಿಗೆ ಅವರ ಜಮೀನಿನಲ್ಲಿ ನೆಲದಾಳದ ನೀರಿನ ಸೆಲೆಗಳನ್ನು ತೋರಿಸಿಕೊಟ್ಟ ಮಹಾನುಭಾವರು. ಹಲವಾರು ಜನಹಿತ ಸಂಘಸಂಸ್ಥೆಗಳ ಜನೋಪಯೋಗಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಒಂಭತ್ತು ದಶಕಗಳ ಸಾರ್ಥಕ ಜೀವನ ಅವರದು. ಅವರ ಸೋನ್ಸ್ ಫಾರ್ಮ್ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೂ ಪಾಠಶಾಲೆಯಾಗಿತ್ತು ಎಂಬುದು ಅವರ ಬದುಕಿನ ದೊಡ್ಡ ಸಾಧನೆ. ಮೂರು ಸಾವಿರಕ್ಕೂ ಅಧಿಕ ವಿದೇಶೀಯರು ಸೋನ್ಸ್ ಫಾರ್ಮಿಗೆ ಭೇಟಿ ನೀಡಿದ್ದರು ಎಂಬುದು ಅದರ ಹೆಗ್ಗಳಿಕೆ. ನನ್ನ ತಂದೆ ದಿ. ಅಡ್ಡೂರು ಶಿವಶಂಕರ ರಾಯರ ಆಪ್ತರಾಗಿದ್ದ ಡಾ. ಎಲ್. ಸಿ ಸೋನ್ಸರಿಗೊಂದು ನುಡಿನಮನ.
ಕೃಷಿಯ ಸಾಧ್ಯತೆಗಳನ್ನು ತಿಳಿಯಬೇಕಾದರೆ ಮೂಡಬಿದ್ರೆ ಹತ್ತಿರದ ಸೋನ್ಸ್ ಫಾರ್ಮಿಗೊಮ್ಮೆ ಭೇಟಿ ನೀಡಬೇಕೆಂಬುದು ಅಲ್ಲಿಗೆ ಹೋಗಿ ಬಂದವರೆಲ್ಲರೂ ಹೇಳುವ ಅನುಭವದ ಮಾತು. ಅದಕ್ಕಾಗಿ ಆ ದಿನ ಬೆಳಗ್ಗೆಯೇ ನಾವು 40 ಜನರು ಮಂಗಳೂರಿನಿಂದ ಹೊರಟೆವು. 40 ಕಿಮೀ ದೂರದ (ಮೂಡಬಿದ್ರೆ ಹಾದು) ಸೋನ್ಸ್ ಫಾರ್ಮಿನ ಗೇಟಿನೆದುರು ಬಸ್ ನಿಂತಾಗ ಬಿಸಿಲೇರುತ್ತಿತ್ತು. ನಮ್ಮನ್ನು ಎದುರುಗೊಂಡರು ಡಾ. ಎಲ್. ಸಿ. ಸೋನ್ಸ್ ಮತ್ತು ಅವರ ತಮ್ಮ ಐ. ವಿ. ಸೋನ್ಸ್.
ಈಗ ಅಲ್ಲಿನ ತೋಟದಲ್ಲಿ ಎತ್ತ ಕಂಡರೂ ಹಸಿರು, ನೂರಾರು ಜಾತಿಯ ಸಸ್ಯಗಳು. ಆದರೆ, ಎಂಟು ದಶಕಗಳ ಮುನ್ನ, ಬಾಸೆಲ್ ಮಿಷನಿನವರು ಇಲ್ಲಿ ಕೃಷಿ ಮಾಡುವ ಯೋಜನೆ ಕೈಗೆತ್ತಿಕೊಂಡಾಗ ಇದು ಹೀಗಿರಲಿಲ್ಲ. ಆಗ ಇದೊಂದು ಜಂಬಿಟ್ಟಿಗೆ ಮಣ್ಣಿನ ಗುಡ್ಡವಾಗಿತ್ತು. ಮಳೆಗಾಲದ ಮಳೆನೀರು ಮಾತ್ರ ಇಲ್ಲಿ ನೀರಿನಾಸರೆಯಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ತಮ್ಮ ತಂದೆ ಆಲ್ಫ್ರೆಡ್ ಸೋನ್ಸರು ಇಲ್ಲಿ ಕೃಷಿಗೆ ತೊಡಗಿದರು ಎಂದು ನೆನಪು ಮಾಡಿಕೊಂಡರು ಡಾ. ಎಲ್. ಸಿ. ಸೋನ್ಸ್.
ಆರಂಭದಲ್ಲಿ ಇಲ್ಲಿ ನೆಟ್ಟ ತೆಂಗಿನ ಸಸಿಗಳು ಚೆನ್ನಾಗಿ ಬೆಳೆಯಲಿಲ್ಲ. ಆದರೆ ತೆಂಗಿನ ಮರಗಳ ನಡುವೆ ನೆಟ್ಟ ಅನಾನಸ್ ಸಸಿಗಳು ಉತ್ತಮ ಫಸಲು ನೀಡಿದವು. ಅನಂತರ ಹೊಸಹೊಸ ಪ್ರಯೋಗಗಳಿಂದ ಹೊಸಹೊಸ ಪಾಠಗಳ ಕಲಿಕೆ ಅಲ್ಲಿ ನಿರಂತರ.
1947ರ ನಂತರ ಅಲ್ಲಿ ಕೃಷಿಯಲ್ಲಿ ಯಾಂತ್ರೀಕರಣ ಹಾಗೂ ಸುಧಾರಿತ ನೀರಾವರಿ ಪದ್ಧತಿಗಳ ಅಳವಡಿಕೆ. 46 ಎಕ್ರೆಗಳ ತೋಟ ಕ್ರಮೇಣ 100 ಎಕ್ರೆಗಳಿಗೆ ವಿಸ್ತರಣೆ. ಅನಾನಸ್ ಮುಖ್ಯ ಬೆಳೆಯಾಗಿ ಮುಂದರಿಕೆ. ಜೊತೆಗೆ ಮಾವು, ಚಿಕ್ಕು, ಕರಿಮೆಣಸು, ದಾಲ್ಚಿನ್ನಿ, ಜಾಯಿಕಾಯಿ, ತೆಂಗಿನಕಾಯಿ, ಗೇರು, ಕೊಕ್ಕೊ, ವೆನಿಲ್ಲಾ ಇತ್ಯಾದಿ ಬೆಳೆಗಳ ಸಮೃದ್ಧಿ. ವರುಷವಿಡೀ ಕೃಷಿ ಕೆಲಸಗಳು. ಅದರಿಂದಾಗಿ ಸುತ್ತಲಿನ ಹಲವರಿಗೆ ತೋಟದಲ್ಲಿ ಕಾಯಕದ ಅವಕಾಶ.
ಕಳೆದ 40 ವರುಷಗಳಲ್ಲಿ ಈ ತೋಟದ ಚಿತ್ರಣವೇ ಬದಲಾಗಿದೆ. ಇದಕ್ಕೆ ಮುಖ್ಯ ಕಾರಣ, ತಮ್ಮ ತೋಟದ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿದ್ದು, ವಿದೇಶೀ ಹಣ್ಣುಗಳ ಕೃಷಿಯಲ್ಲಿ ತೊಡಗಿದ್ದು ಮತ್ತು ಅಧ್ಯಯನಾಸಕ್ತರಿಗೆ ತೋಟದ ಭೇಟಿಗೆ, ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ್ದು ಎಂದು ವಿವರಿಸುತ್ತಾರೆ ಡಾ. ಎಲ್.ಸಿ.ಸೋನ್ಸ್.
ರಾಂಬುಟಾನ್, ಮ್ಯಾಂಗೊಸ್ಟೀನ್, ಡುರಿಯನ್, ಬಾರ್ಬಡೋಸ್ ಚೆರ್ರಿ, ಸುರಿನಾಮ್ ಚೆರ್ರಿ, ರಂಗೂನ್ ಚೆರ್ರಿ, ಫ್ಯಾಷನ್ ಹಣ್ಣು, ಪವಾಡ ಹಣ್ಣು, ಹಾವು ಹಣ್ಣು, ಡ್ರಾಗನ್ ಹಣ್ಣು –ಇವು ಸೋನ್ಸ್ ಫಾರ್ಮಿನಲ್ಲಿರುವ ಕೆಲವು ವಿದೇಶೀ ಮೂಲದ ಹಣ್ಣುಗಳು. ಉಷ್ಣವಲಯದ ಬೇರೆ ದೇಶಗಳ ಹಣ್ಣುಗಳನ್ನು ಇಲ್ಲಿ ಬೆಳೆಸುವ ಡಾ. ಸೋನ್ಸರ ಪ್ರಯೋಗ ಫಲ ನೀಡಿದೆ. ಉದಾಹರಣೆಗೆ ಇವರು 55 ವರುಷಗಳ ಮುಂಚೆ ಇಲ್ಲಿ ಬೆಳೆಸಿದ ಹಣ್ಣು ಮಲೇಷ್ಯಾದ ರಂಬುಟಾನ್. ಅದು ನಮ್ಮ ಮಣ್ಣಿನಲ್ಲಿ ಬೆಳೆದು ಹಣ್ಣು ಬಿಡುತ್ತದೆ ಎಂದು ಖಚಿತವಾದ ಬಳಿಕ ಸಸಿ ಮಾಡಿ ಮಾರಿದರು. ಇಂದು, ದಕ್ಷಿಣ ಭಾರತದ ಹಲವೆಡೆ ರಂಬುಟಾನ್ ಕೃಷಿ ಹರಡಿದೆ. ಆದರೆ, ವಿದೇಶದಿಂದ ಪ್ರತಿಯೊಂದು ಹೊಸ ಸಸ್ಯ ತರಿಸುವಾಗ, ಕ್ವಾರಂಟೈನ್ ನಿಯಮಗಳ ಪಾಲನೆಗಾಗಿ ಡಾ. ಸೋನ್ಸರು ಪಟ್ಟ ಪಾಡು ಅವರಿಗೇ ಗೊತ್ತು.
ನಗರಗಳ ಜನರು ವಾರಾಂತ್ಯಗಳಲ್ಲಿ ಹಳ್ಳಿಗೆ ಬಂದು ಹಸುರಿನ ನಡುವೆ ಕಾಲ ಕಳೆಯಲು ಇಷ್ಟ ಪಡುತ್ತಾರೆ ಎಂಬುದನ್ನು ಡಾ. ಸೋನ್ಸ್ ಗಮನಿಸಿದರು. ತಮ್ಮ ತೋಟದ ಮೂಲೆಯಲ್ಲಿ ಅಂತಹ ಪ್ರವಾಸಿಗರಿಗೆ ನೆರಳು ಒದಗಿಸಲು ಅವರು ಬೆಳೆಸಿದ್ದು ಬಿದಿರು ಮೆಳೆಗಳನ್ನು. ಅವುಗಳ ನೆರಳಿನಲ್ಲಿ ನಡು ಮಧ್ಯಾಹ್ನ ಊಟ ಮಾಡಿದ ನಮಗೆ ಬಿಸಿಲಿನ ಬೇಗೆ ತಟ್ಟಲೇ ಇಲ್ಲ.
ಇಲ್ಲಿನ ವಿವಿಧ ಸಸ್ಯಗಳ ಹಾಗೂ ಹಕ್ಕಿಗಳ ಅಧ್ಯಯನಕ್ಕೆ ನಮ್ಮ ದೇಶದವರೂ ವಿದೇಶದವರೂ ಬರುತ್ತಿರುತ್ತಾರೆ. ಅವರು ಉಳಿದುಕೊಳ್ಳಲು ಇಲ್ಲಿದೆ ಸುಸಜ್ಜಿತ ಅತಿಥಿಗೃಹ. ಮಂಗಳೂರಿಗೆ ವಿಲಾಸಿ ಹಡಗುಗಳಲ್ಲಿ ಆಗಮಿಸುವ ವಿದೇಶಿ ಪ್ರವಾಸಿಗರು ತಂಡತಂಡಗಳಾಗಿ ಮೂಡಬಿದ್ರೆಯ ಸಾವಿರಕಂಬದ ಬಸದಿ ಮತ್ತು ಕಾರ್ಕಳದ ಗೋಮಟೇಶ್ವರ ನೋಡಲು ಬಂದೇ ಬರುತ್ತಾರೆ. ಹಾಗೆ ಬಂದವರು, ಸೋನ್ಸ್ ಫಾರ್ಮಿನ ಸಸ್ಯಲೋಕದಲ್ಲಿ ಸುತ್ತಿ, ಅತಿಥಿಗೃಹದಲ್ಲಿ ವಿರಮಿಸಿ, ಬಿದಿರುಮೆಳೆಗಳ ನೆರಳಿನಲ್ಲಿ ಆಹಾರ ಸೇವಿಸಿ ಮರಳುತ್ತಾರೆ.
ಸೋನ್ಸ್ ಫಾರ್ಮಿನಲ್ಲಿ ನಾವು ಗಮನಿಸಬೇಕಾದ್ದು: ತೋಟದ ಮಣ್ಣಿಗೆ ಸೂಕ್ತ ಬೆಳೆಗಳನ್ನು ಗುರುತಿಸಿ, ಅವನ್ನು ಅತ್ಯುತ್ತಮ ರೀತಿಯಲ್ಲಿ ಬೆಳೆಯುವುದು; ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ ಮೂರ್ನಾಲ್ಕು ಬೆಳೆ ಬೆಳೆಯುವುದು; ಹೊಸ ಬೆಳೆಗಳ ಕೃಷಿಗೆ ತೊಡಗುವುದು; ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವುದು; ಇರುವ ಅವಕಾಶ ಬಳಸಿ ಹೊಸ ಆದಾಯ ಮೂಲಗಳನ್ನು ಹುಟ್ಟು ಹಾಕುವುದು.
ಡಾ. ಎಲ್. ಸಿ. ಸೋನ್ಸ್ ಮತ್ತು ಐ. ವಿ. ಸೋನ್ಸರು “ಕೃಷಿಯಲ್ಲಿ ಲಾಭ ಗಳಿಸುವುದು ಹೇಗೆ?” ಎಂಬುದನ್ನು ತಮ್ಮ ವಿಸ್ತಾರವಾದ ತೋಟದಲ್ಲಿ ಮಾಡಿ ತೋರಿಸಿದ್ದಾರೆ. ನೀವು ಮುಂಚಿತವಾಗಿ ತಿಳಿಸಿ ಹೋಗಿ ಅಲ್ಲಿನ ಸಾಧನೆ ಕಣ್ಣಾರೆ ಕಾಣಬಹುದು. (ಫೋನ್ 08252 36261)
ಫೋಟೋ 1: ನಮ್ಮ ತಂಡದವರಿಗೆ ಮಾಹಿತಿ ನೀಡುತ್ತಿರುವ ಡಾ.ಎಲ್.ಸಿ.ಸೋನ್ಸ್
ಫೋಟೋ 2: ಸೋನ್ಸ್ ಫಾರ್ಮಿನ ಬಿದಿರು ಮೆಳೆಗಳ ನೈಸರ್ಗಿಕ ಚಪ್ಪರ
ಫೋಟೋ 3: ಮರದಲ್ಲಿ ರಂಬುಟಾನ್ ಹಣ್ಣುಗಳು