ಸೋಫಿಯಾ ಭಾರತದ ಸೋದರಿ

ನಾವು ಮಾತನಾಡುವ ಶಬ್ದಗಳು ಕಣ್ಣಿಗೆ ಕಾಣಿಸುವುದಿಲ್ಲ ನಿಜ. ಆದರೆ, ಅವುಗಳಿಗೆ ಮನಸನ್ನು ಅರಳಿಸುವ, ಸಾಂತ್ವನ ಹೇಳುವ, ಸಂತೃಪ್ತಿ ನೀಡುವ, ಸ್ಫೂರ್ತಿ ತುಂಬಬಲ್ಲ ಶಕ್ತಿ ಇರುತ್ತದೆ. ಹಾಗೆಯೇ, ಕೇಳುಗರ ಮನದಲ್ಲಿ ಶಾಶ್ವತ ಗಾಯ ಮಾಡುವ ಅಪಾಯವೂ ಆ ಮಾತುಗಳಲ್ಲಿರುತ್ತದೆ ಎಂಬುದನ್ನು ಮರೆಯಬಾರದು. ಆದರೆ, ಈಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ಈ ವಾಸ್ತವವನ್ನು ಮರೆತಂತೆ ವರ್ತಿಸುತ್ತಿರುವವರಲ್ಲಿ ಹೆಚ್ಚಿನವರು ರಾಜಕಾರಣಿಗಳು, ಪ್ರಸ್ತುತ, 'ಆಪರೇಷನ್ ಸಿಂದೂರ' ಬಗ್ಗೆ ಜಗತ್ತಿಗೆ ಮಾಹಿತಿ ನೀಡುವ ಮೂಲಕ ಮನೆಮಾತಾಗಿದ್ದ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಬಿಜೆಪಿ ಮುಖಂಡ ಹಾಗೂ ಮಧ್ಯಪ್ರದೇಶದ ಸಚಿವ ವಿಜಯ್ ಶಾ ನುಡಿದಿರುವ ಅಪದ್ಧ ತೀರಾ ನಾಚಿಕೆಗೇಡು. ಮತಿಹೀನ ಹೇಳಿಕೆ ನೀಡಿದ ಈ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹೈಕೋರ್ಟ್ ಸೂಚಿಸಿರುವುದು, ಸುಪ್ರೀಂ ಕೋರ್ಟ್‌ನ ನೂತನ ಸಿಜೆಐ ಬಿ.ಆರ್. ಗವಾಯಿ, 'ಸಾಂವಿಧಾನಿಕವಾಗಿ ಆಯ್ಕೆಯಾದ ಜನಪ್ರತಿನಿಧಿಗಳು ತಮ್ಮ ನಾಲಗೆ ಮೇಲೆ ಹಿಡಿತವಿಟ್ಟುಕೊಳ್ಳಬೇಕು,'' ಎಂದು ಹೇಳಿರುವುದು ಅತ್ಯಂತ ಸೂಕ್ತವೇ ಆಗಿದೆ.
ವಿಜಯ್ ಶಾ ೧೦ ಬಾರಿಯೋ, ೨೦ ಬಾರಿಯೋ ಕ್ಷಮೆ ಕೇಳಿದ ಮಾತ್ರಕ್ಕೆ ಸಾಮಾಜಿಕ ಸಾಮರಸ್ಯದ ಕೊಳದಲ್ಲಿ ಎದ್ದ ತರಂಗಗಳು ತಕ್ಷಣಕ್ಕೆ ತಿಳಿಯಾಗುವುದೇ? ಇಡೀ ದೇಶ ಒಂದಾಗಿ ಉಗ್ರರ ನರಮೇಧ ಕೃತ್ಯವನ್ನು ಖಂಡಿಸುತ್ತಿರುವಾಗ, ಪಾಕ್‌ನ ನೀಚತನದ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿರುವಾಗ, ಈ ಹೋರಾಟದಲ್ಲಿ ಭಾರತೀಯರೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಸಾರುವ ಬದಲು ಸಮಾಜವನ್ನು ಇಬ್ಬಾಗಿಸುವ ಹೇಳಿಕೆ ಅಕ್ಷಮ್ಯ. "ನಮ್ಮ ಹೆಣ್ಣುಮಕ್ಕಳನ್ನು ವಿಧವೆಯಾಗಿಸಿದವರಿಗೆ ತಕ್ಕ ಪಾಠ ಕಲಿಸಲು ಅದೇ ಸಮುದಾಯದ ಸೋದರಿಯನ್ನು ಕಳುಹಿಸಿದ್ದೇವೆ,'' ಎಂಬ ಪ್ರಚೋದನಾಕಾರಿ ಹೇಳಿಕೆ ಸಚಿವರ ಮೂರ್ಖತನದ ಸೂಚಕದಂತೆ ತೋರುತ್ತಿದೆಯಷ್ಟೇ.
'ಆಪರೇಷನ್ ಸಿಂದೂರ' ಬಗೆಗಿನ ಮಾಹಿತಿಗಳನ್ನು ಪಾರದರ್ಶಕವಾಗಿ ಜಗತ್ತಿನ ಮುಂದಿಡಲು ಕೇಂದ್ರ ಸರಕಾರ ಆಯ್ಕೆ ಮಾಡಿಕೊಂಡ ಅಧಿಕಾರಿಗಳಲ್ಲಿ ಕರ್ನಲ್ ಸೋಫಿಯಾ ಖುರೇಷಿ ಕೂಡ ಪ್ರಮುಖರು. 'ಆಪರೇಷನ್ ಸಿಂದೂರ'ವು ಪಾಕಿಸ್ತಾನ್ ಬೆಂಬಲಿತ ಉಗ್ರರ ವಿರುದ್ಧವೇ ಹೊರತು ಯಾವುದೋ ನಿರ್ದಿಷ್ಟ ಸಮುದಾಯದ ವಿರುದ್ಧವಲ್ಲ ಎಂಬ ಸ್ಪಷ್ಟ ಅರಿವನ್ನು ಜನಮಾನಸದಲ್ಲಿ ಸ್ಥಾಪಿಸಲೆಂದೇ ಕೇಂದ್ರ ಸರಕಾರ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟಿರುವುದನ್ನು ಗಮನಿಸಬಹುದು. ಆದರೆ, ಕೇಂದ್ರ ಸರಕಾರದಲ್ಲಿ ಆಡಳಿತ ನಡೆಸುತ್ತಿರುವ ಅದೇ ಪಕ್ಷವೇ ಮಧ್ಯಪ್ರದೇಶದಲ್ಲಿಯೂ ಅಧಿಕಾರದಲ್ಲಿದೆ. ಆದರೆ, ಮಧ್ಯಪ್ರದೇಶದ ಸಚಿವರು ತಮ್ಮ ವಾಕ್ ಶುದ್ದಿ ಕಾಪಾಡಿಕೊಳ್ಳದೆ ಜನಸಮುದಾಯವನ್ನು ಇಬ್ಬಾಗಿಸಿ ನೋಡುವ ಮೂಲಕ ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಸ್ವೀಕಾರಾರ್ಹವಲ್ಲ, ಇದು ಭಾರತದ ಭಾವೈಕ್ಯತೆಯ ಜತೆಗೆ ಭಾರತೀಯ ಸೇನೆಗೆ, ಕೇಂದ್ರ ಸರಕಾರದ ಆಶಯಗಳಿಗೆ ಮಾಡಿದ ಅಪಮಾನವ ಹೌದು.
ದೇಶಭಕ್ತಿ ತೋರ್ಪಡಿಸುವ ಭರದಲ್ಲಿ ಯಾವುದೇ ಸಮುದಾಯವನ್ನು ಗುರಿ ಮಾಡುವ ಚಾಳಿ ದೇಶದ ಐಕ್ಯತೆ, ಸಮಗ್ರತೆಗೆ ಅಪಾಯಕಾರಿ. ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಜವಾಬ್ದಾರಿಯತ ಸ್ಥಾನದಲ್ಲಿರುವವರ ಮಾತುಗಳಲ್ಲಿ ಸಮಾಜಹಿತವೂ ಅಡಕವಾಗಿರಬೇಕು ಎನ್ನುವುದು ಪ್ರಜಾಪ್ರಭುತ್ವದ ಮಹಾನ್ ಅಪೇಕ್ಷೆ. ಕರ್ನಲ್ ಸೋಫಿಯಾ ಎಂದೆಂದಿಗೂ ಭಾರತದ ಸೋದರಿ, ಈ ಬಗ್ಗೆ ಸಚಿವರಿಗೆ ಬಂದ ಅನುಮಾನ ಸೋಂಕಾಗದಿರಲಿ. ಸೇನೆ ಬಗ್ಗೆ, ಸೇನೆಯ ಸಾಹಸಗಳ ಬಗ್ಗೆ ಐಕ್ಯತೆಯ ಧ್ವನಿ ಮೊಳಗಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ
ಚಿತ್ರ ಕೃಪೆ: ಅಂತರ್ಜಾಲ ತಾಣ