ಸೋಮಾರಿ ಭೀಮ

ಸೋಮಾರಿ ಭೀಮ

ಕವನ

ಒಂದ್ ಊರ‍್ನಲ್ಲಿ ಒಂದ್ ಕಾಲ್ದಲ್ಲಿ ಇದ್ದ ಒಬ್ಬ ಹೈದ

ಕೆಲ್ಸಾ ಇಲ್ಲ, ಕಾರ್ಯ ಇಲ್ಲ ಕೂತ್ಕೊಂಡ್ ತಿಂತಾ ಇದ್ದ |

 

ಅಪ್ಪ ಹೇಳ್ದ, ತಾತ ಹೇಳ್ದ ಕೆಲ್ಸ ಮಾಡೋ ಮಗನೇ

ಇಲ್ಲ ಅಂದ್ರೆ ಎಲ್ಲಾ ವ್ಯರ್ಥ ಉಪಯೋಗ್ವಿಲ್ಲ ಸುಮ್ನೆ |

 

ಹೈದ ಕೇಳ್ದ, ತಾತಂಗ್ ಹೇಳ್ದ ಯಾಕ್ ಮಾಡ್ಬೇಕು ಕೆಲ್ಸ

ಎನುಪಯೋಗ ನಂಗದ್ರಿಂದ ಸುಮ್ನೆ ತೊಂದ್ರೆ ದಿವಸಾ |

 

ತಾತ ಹೇಳ್ದ ಹೈದ ಕೇಳೋ ಕೆಲ್ಸ ನಿನ್ ಕೈಲಿದ್ರೆ

ದುಡ್ಡು ಬರುತ್ತೆ, ಕಾಸು ಸಿಗುತ್ತೆ ತಪ್ತು ಎಲ್ಲ ತೊಂದ್ರೆ |

 

ಹೈದ ಅಂದ ಅಪ್ಪಂಗ್ ಕೇಳ್ದ ಕೆಲ್ಸ ಮಾಡ್ದೆ ಸರೀನೇ

ದುಡ್ಡು ತೊಗೊಂಡು ನಾನೇನ್ಮಾಡ್ಲಿ ಇರೋದ್ ಇದೇ ಮನೇನೆ |

 

ಅಪ್ಪ ಹೇಳ್ದ ಅಲ್ವೋ ಹೈದ ದುಡ್ಡೇ ಅಲ್ವೇ ಜೀವನ

ಕೆಲ್ಸವಂತ ನೀನಂತ್‍ಹೇಳಿ ಸಿಗ್ತಾಳ್ ಮೂಲೆ ಭಾವನಾ |

 

ದುಡ್ಡೂ ಬಂತೂ, ಕಾಸೂ ಬಂತೂ ಬಂದ್ಲು ಅನ್ಕೋ ಭಾವನಾ

ಮುಂದೇನಾದೀತ್ ನೀ ಹೇಳ್ ತಾತ ಇಷ್ಟೇ ಅಲ್ವೇ ಜೀವನ?

 

ತಾತ ಅಂದ ಪೆದ್ನನ್ಮಗ್ನೆ ಹೆಂಡ್ತಿ ಬಂದ್ರೆ ಸುಖವೇ

ಎರಡೋ ಮೂರೋ ಮಕ್ಳಾಗ್ತಾವೆ ನಗುವಿಗೇನು ಬರವೇ?

 

ಸರಿ ತಾತ ಅಪ್ಪನ್ ಕೇಳು ಮಕ್ಳು ಬಂದೇ ಬಿಟ್ರೂ

ಮುಂದೇನಮಾಡ್ಲಿ ಮಕ್ಕಳ್ ಜೊತೆಗೆ ಎನೇ ಕೊಟ್ರೂ ಬಿಟ್ರೂ

 

ಮಕ್ಕಳೇ ಕಾಣೋ ಸ್ವರ್ಗ ನಿಂಗೆ ಅವರನ್ ಬೆಳೆಸೋ ನೀನು

ಓದಿ ಬರೆದು ಅಕ್ಷರ ಕಲ್ತು ಮುಂದಕ್ ಬರ್ತಾರ್ ಕಾಣು |

 

ಮಕ್ಕಳೂ ಬಂದ್ರೂ, ಮುಂದಕ್ ಬಂದ್ರೂ ನನಗೇನ್ ಸಿಕ್ತು ಈಗ |

ಅವ್ರವರ್ ಪಾಡಿಗ್ ಅವ್ರ್ ಬೆಳೀತಾರೆ ಹಾಡ್ತ ಕೂಡ್ಲಾ ರಾಗಾ?

 

ನೀನೊಬ್ ದಡ್ಡ, ಬಹುದೊಡ್ ಪೆದ್ದ ಕೂತಲ್ ಕಾಸು ಇನ್ನು

ಆರಮಾಗಿ ಕೂತ್ಕೊಂಡ್ ನೀನು ಬೇಕಾದ್ ಮಾಡ್ಸಿ ತಿನ್ನು |

 

ಅದೇ ಕೆಲ್ಸ ಈಗ್ಲೇ ಇಲ್ವೇ ಇನ್ಯಾಕ್ ಪಡ್ಲಿ ಕಷ್ಟ

ಹೆಂಡ್ತಿ ಮಕ್ಳೂ ಬಂದೇ ಬಿಟ್ರೆ ಜೀವನ ಪೂರ್ತಿ ನಷ್ಟ|

 

ಅಪ್ಪ ತಾತ ಬಾಯ್ಮುಚ್ಕೊಂಡ್ರು ಹೈದ ಇವ್ನು ಭೀಮ

ಬುದ್ಧಿ ತಿಳಿದಾಗ್ ಕೆಲ್ಸಾ ಮಾಡ್ಲಿ ನೋಡ್ಕೊಲ್ತಾನ್ ಶ್ರೀರಾಮ |

 

Comments