ಸೋಮಾರಿ ಸೋದರರು ಮತ್ತು ಉಕ್ಕಿನ ಅರಮನೆ

ಸೋಮಾರಿ ಸೋದರರು ಮತ್ತು ಉಕ್ಕಿನ ಅರಮನೆ

ಒಂದಾನೊಂದು ಕಾಲದಲ್ಲಿ ತಂದೆಯೊಬ್ಬ ಸೋಮ ಮತ್ತು ಶಾಮ ಎಂಬ ತನ್ನಿಬ್ಬರು ಗಂಡುಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಅವರಿಗೆ ಯಾವತ್ತೂ ಯಾವುದೇ ಕೆಲಸ ಮಾಡಲು ಅವನು ಬಿಡುತ್ತಿರಲಿಲ್ಲ.

ಹಾಗಾಗಿ ತಮ್ಮ ತಂದೆ ದೊಡ್ಡ ಶ್ರೀಮಂತನೆಂದು ಅವರಿಬ್ಬರೂ ನಂಬಿದ್ದರು. ಅದೊಂದು ದಿನ ತಂದೆ ತೀರಿಕೊಂಡರೆಂಬ ಸುದ್ದಿ ಬಂತು. ತಮ್ಮ ತಂದೆ ತಮಗಾಗಿ ಯಾವುದೇ ಸಂಪತ್ತು ಉಳಿಸಿಲ್ಲವೆಂದು ತಿಳಿದಾಗ ಅವರಿಗೆ ಆಘಾತ.

"ನಮ್ಮ ತಂದೆ ತನ್ನೆಲ್ಲ ಹಣವನ್ನು ನಮಗಾಗಿ ಖರ್ಚು ಮಾಡಿದರು” ಎಂದ ಸೋಮ. “ಈ ಸಂಗತಿ ನಮಗೆ ಗೊತ್ತಾಗಲೇ ಇಲ್ಲ. ಗೊತ್ತಾಗಿದ್ದರೆ ನಾವು ಕೆಲಸ ಮಾಡಿ, ಹಣ ಗಳಿಸಿ ಅವರಿಗೆ ಸಹಾಯ ಮಾಡಬಹುದಾಗಿತ್ತು. ಈಗಲಾದರೂ ಬದುಕಲಿಕ್ಕಾಗಿ ನಾವು ಯಾವುದಾದರೂ ಕೆಲಸ ಹುಡುಕಲೇ ಬೇಕು” ಎಂದ ಶಾಮ.

ಅವರಿಬ್ಬರೂ ಕೆಲಸ ಹುಡುಕುತ್ತಾ ಒಬ್ಬ ಕಮ್ಮಾರನ ಬಳಿಗೆ ಬಂದರು. "ನಿಮಗೆ ಕೆಲಸದವರು ಬೇಕೇ” ಎಂದು ಕೇಳಿದರು. "ಹೌದು. ನನಗೆ ಇಬ್ಬರಾದರೂ ಸಹಾಯಕ್ಕೆ ಬೇಕಾಗಿದೆ. ಯಾಕೆಂದರೆ ನನ್ನ ಕೈಯಲ್ಲಿ ಅಷ್ಟು ಕೆಲಸವಿದೆ. ನಿಮಗೆ ಕುದುರೆ ಲಾಳ ಮಾಡಲು ಗೊತ್ತೇ?” ಕೇಳಿದ ಕಮ್ಮಾರ.

“ಅಯ್ಯೋ, ನಾವು ಇದೇ ಮೊದಲ ಸಲ ಕಮ್ಮಾರನ ಕೋಠಿಗೆ ಬಂದಿದ್ದೇವೆ” ಎಂದ ಸೋಮ. ಕಮ್ಮಾರ ನಿಟ್ಟುಸಿರು ಬಿಡುತ್ತಾ ಹೇಳಿದ, “ಹಾಗಾದರೆ ನಿಮ್ಮಿಬ್ಬರಿಗೆ ಇಲ್ಲಿ ಕೆಲಸವಿಲ್ಲ. ಇಲ್ಲಿಂದ ಹೊರಟು ಹೋಗಿ. ನನ್ನ ಸಮಯ ಹಾಳು ಮಾಡಬೇಡಿ.”

ಅನಂತರ ಸೋದರರು ಒಬ್ಬ ರೈತನ ಹೊಲಕ್ಕೆ ಬಂದರು. "ನಿಮಗೆ ಕೆಲಸದವರು ಬೇಕೇ” ಎಂದು ಕೇಳಿದರು. “ಬೇಕೇ ಬೇಕು. ಎಷ್ಟು ಜನರಿದ್ದರೂ ಬನ್ನಿ. ಇದೀಗ ಬೀಜ ಬಿತ್ತುವ ಸಮಯ. ನಿಮಗೆ ಈ ಕೆಲಸ ಗೊತ್ತು ತಾನೇ?" ಎಂದು ಕೇಳಿದ ರೈತ.

“ಗೊತ್ತಿಲ್ಲ. ನಮ್ಮ ಜೀವಮಾನದಲ್ಲಿಯೇ ನಾವು ಹಾರೆ ಅಥವಾ ಗುದ್ದಲಿ ಹಿಡಿದಿಲ್ಲ” ಎಂದ ಶಾಮ. "ಹಾಗಿದ್ದರೂ ನನ್ನ ಬಳಿ “ಕೆಲಸದವರು ಬೇಕೇ” ಎಂದು ಕೇಳಲು ನಿಮಗೆ ಧೈರ್ಯ ಹೇಗೆ ಬಂತು? ಇಲ್ಲಿಂದ ತಕ್ಷಣ ಹೊರಟು ಹೋಗಿ” ಎಂದ ರೈತ.

ಇಬ್ಬರು ಸೋದರರೂ ಪೆಚ್ಚಾದರು. ಅಲ್ಲಿಂದ ಅವರು ಒಬ್ಬ ಬೇಕರಿ ಮಾಲೀಕನ ಬಳಿಗೆ ಹೋದರು. ಆತನ ಬಳಿಯೂ "ನಿಮಗೆ ಕೆಲಸದವರು ಬೇಕೇ” ಎಂದು ಕೇಳಿದರು. “ಖಂಡಿತ ಬೇಕಾಗಿದ್ದಾರೆ. ಕೆಲಸ ಹುಡುಕಿಕೊಂಡು ಯಾರಾದರೂ ಬರುತ್ತಾರೋ ಎಂದು ನಾನು ಕಾಯುತ್ತಿದ್ದೆ. ಇಲ್ಲಿ ಬ್ರೆಡ್ಡಿಗೆ ಎಷ್ಟು ಬೇಡಿಕೆ ಇದೆಯೆಂದರೆ, ನನಗೆ ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಂದ ಹಾಗೆ ನಿಮಗೆ ಬ್ರೆಡ್ ಬೇಯಿಸಲು ಗೊತ್ತಿದೆ ತಾನೇ?" ಎಂದು ಕೇಳಿದ ಬೇಕರಿ ಮಾಲೀಕ.

“ಇಲ್ಲ, ಇಲ್ಲ. ಬ್ರೆಡ್ ಬೇಯಿಸುವುದು ಹೇಗೆಂದು ನೀವು ಕಲಿಸಿದರೆ ಕಲಿಯುತ್ತೇವೆ” ಎಂದ ಸೋಮ. "ಛೇ, ಎಂಥ ಯುವಕರು ನೀವು! ನಿಮಗೆ ಬ್ರೆಡ್ ಬೇಯಿಸುವುದನ್ನು ಕಲಿಸುತ್ತಾ ಕೂರಲು ನನಗೆ ಸಮಯವಿಲ್ಲ. ಈಗ ಇಲ್ಲಿಂದ ಹೋಗಿ; ನನಗೆ ನನ್ನ ಕೆಲಸ ಮಾಡಲು ಬಿಡಿ” ಎಂದ ಬೇಕರಿ ಮಾಲೀಕ.

ಅನಂತರ ಸೋಮ ಮತ್ತು ಶಾಮ ಒಬ್ಬ ದರ್ಜಿ, ಒಬ್ಬ ಮರದ ಕೆಲಸಗಾರ, ಒಬ್ಬ ಹೋಟೆಲಿನ ಮಾಲೀಕ ಮತ್ತು ಒಬ್ಬ ಹಿಟ್ಟಿನ ಗಿರಣಿಯ ಮಾಲೀಕನನ್ನು ಭೇಟಿಯಾದರು. ಇಬ್ಬರು ಸೋದರರಿಗೆ ಯಾವ ಕೆಲಸವೂ ಗೊತ್ತಿಲ್ಲವೆಂದು ತಿಳಿದಾಗ ಅವರೆಲ್ಲರೂ ಇವರನ್ನು ಹೊರಕ್ಕೆ ಕಳುಹಿಸಿದರು.

ಸೋಮ ಮತ್ತು ಶಾಮ ದಣಿದಿದ್ದರು; ಅವರಿಗೆ ದುಃಖವೂ ಆಗಿತ್ತು. ಅವರು ಹತಾಶೆಯಿಂದ ನಡೆಯುತ್ತಾ ಮುಂದೆ ಸಾಗಿದರು. ನಡೆಯುತ್ತಾ ನಡೆಯುತ್ತಾ ಬಹಳ ದೂರ ಸಾಗಿದರು. ಕೊನೆಗೆ ಒಂದು ಹೊಳೆಯುವ ಉಕ್ಕಿನ ಅರಮನೆಯ ಎದುರು ಬಂದರು.

ಅರಮನೆಯ ದ್ವಾರ ತೆರೆದಿತ್ತು. ಅವರು ಮೆತ್ತಗೆ ಹೆಜ್ಜೆಯಿಡುತ್ತಾ ಅರಮನೆಯ ಒಳಗೆ ನಡೆದರು ಮತ್ತು ಸುತ್ತಲೂ ಅಚ್ಚರಿಯಿಂದ ನೋಡಿದರು. ಅಲ್ಲಿ ದೊಡ್ಡದೊಡ್ಡ ಮರಿಗೆಗಳು, ಪೆಟ್ಟಿಗೆಗಳು ಮತ್ತು ಸಂಪುಟಗಳು ಇದ್ದವು. ಅವೆಲ್ಲದರಲ್ಲಿ ಝಗಮಗಿಸುವ ಆಭರಣಗಳು! ಲಕ್ಷಗಟ್ಟಲೆ ವಜ್ರಗಳು, ಮುತ್ತುಗಳು, ನೀಲಮಣಿಗಳು, ಇತರ ಬೆಲೆಬಾಳುವ ಮಣಿಗಳು ಅಲ್ಲಿದ್ದವು.

ತಮ್ಮನ್ನು ಯಾರೂ ನೋಡುತ್ತಿಲ್ಲವೆಂದು ಖಚಿತಪಡಿಸಿಕೊಂಡರು ಸೋಮ ಮತ್ತು ಶಾಮ. ನಂತರ ತಮ್ಮ ಜೇಬುಗಳಲ್ಲಿ ವಜ್ರ, ಮುತ್ತು, ಮಣಿಗಳನ್ನೂ ಆಭರಣಗಳನ್ನೂ ತುಂಬಿಕೊಂಡರು. "ಈಗ ಈ ಜಗತ್ತಿನಲ್ಲಿ ನಮ್ಮಷ್ಟು ಶ್ರೀಮಂತರು ಯಾರೂ ಇಲ್ಲ. ಇಷ್ಟೆಲ್ಲ ಸಂಪತ್ತು ಗಳಿಸಲಿಕ್ಕಾಗಿ ನಾವು ಯಾವುದೇ ಕೆಲಸ ಮಾಡಲೇ ಇಲ್ಲ” ಎಂದ ಸೋಮ.

ಉಕ್ಕಿನ ಅರಮನೆಯಿಂದ ಹೊರಗೆ ಹೋಗಲಿಕ್ಕಾಗಿ ಅವರು ದ್ವಾರದತ್ತ ಓಡಿದರು. ಆದರೆ ದ್ವಾರಗಳು ಮುಚ್ಚಿದ್ದವು! ಅವರು ಬಾಗಿಲುಗಳಿಗೆ ಕೈಗಳಿಂದ ಬಡಿದರು, ಕಾಲುಗಳಿಂದ ಒದ್ದರು. ಆದರೆ ಬಾಗಿಲುಗಳು ತೆರೆಯಲೇ ಇಲ್ಲ! “ನಾವೀಗ ಗೂಡಿನಲ್ಲಿ ಸಿಕ್ಕಿಬಿದ್ದ ಇಲಿಗಳಂತೆ ಈ ಅರಮನೆಯಲ್ಲಿ ಸಿಕ್ಕಿಬಿದ್ದಿದ್ದೇವೆ” ಎಂದ ಶಾಮ.

ಅವರು ಅರಮನೆಯಲ್ಲೆಲ್ಲ ಓಡಾಡಿದರು. ಅಲ್ಲಿನ ಎಲ್ಲ ಕೋಣೆಗಳಲ್ಲಿಯೂ ಆಭರಣಗಳು, ವಜ್ರಗಳು, ಮಣಿಗಳು ತುಂಬಿದ್ದವು. ಆದರೆ ಎಲ್ಲಿಯೂ ತಿನ್ನಲು ಏನೂ ಇರಲಿಲ್ಲ! ಒಂದು ತೊಟ್ಟು ನೀರೂ ಇರಲಿಲ್ಲ! “ನಾವಿಲ್ಲಿ ಹಸಿವಿನಿಂದ ಸಾಯಲಿದ್ದೇವೆ. ಇಲ್ಲಿಂದ ಪಾರಾಗಲು ಯಾವ ದಾರಿಯೂ ಕಾಣಿಸುತ್ತಿಲ್ಲ” ಎಂದು ನಿಟ್ಟುಸಿರುಬಿಟ್ಟ ಸೋಮ.

ಸಮಯ ಸರಿಯಿತು; ಕತ್ತಲಾಯಿತು. ಹಸಿವಿನಿಂದ, ಹೆದರಿಕೆಯಿಂದ ಅವರಿಗೆ ರಾತ್ರಿಯಿಡೀ ನಿದ್ದೆ ಬರಲಿಲ್ಲ. ಬೆಳಗಾಗುತ್ತಿದ್ದಂತೆ, ಶಾಮ ಹೇಳಿದ, “ಈ ಆಭರಣಗಳು ಮತ್ತು ವಜ್ರಗಳಿಂದ ಏನು ಪ್ರಯೋಜನ? ಇವು ಎಲ್ಲಿದ್ದವೋ ಅಲ್ಲಿಗೆ ಇವನ್ನು ವಾಪಾಸು ಹಾಕೋಣ.” ಸೋಮನೂ ಇದಕ್ಕೆ ಒಪ್ಪಿದ. ತಾವು ತೆಗೆದಿದ್ದ ಎಲ್ಲ ಆಭರಣಗಳು, ವಜ್ರಗಳು ಮತ್ತು ಮಣಿಗಳನ್ನು ಅವರು ಎಲ್ಲಿಂದ ತೆಗೆದಿದ್ದರೋ ಅಲ್ಲಿಗೇ ವಾಪಾಸು ಹಾಕಿದರು.

ಆಗ ಅಲ್ಲೊಂದು ವಿಸ್ಮಯ ಜರಗಿತು. ಉಕ್ಕಿನ ಅರಮನೆಯ ದ್ವಾರಗಳು ತೆರೆದುಕೊಂಡವು! “ಓ, ನಾವು ಬಚಾವ್! ಬಚಾವ್!" ಎನ್ನುತ್ತ ಇಬ್ಬರು ಸೋದರರೂ ಅರಮನೆಯಿಂದ ಹೊರಗೆ ಓಡಿದರು. ಅವರಿಬ್ಬರೂ ಹತ್ತಿರದಲ್ಲಿದ್ದ ನದಿಯ ದಡದಲ್ಲಿ ಕುಳಿತರು. ಮೊತ್ತಮೊದಲ ಬಾರಿ ಈ ಭೂಮಿ ಎಷ್ಟು ಸುಂದರವಾಗಿದೆ ಎಂದು ಅವರಿಗೆ ಅರಿವಾಯಿತು.

ಅಷರಲ್ಲಿ ಕುಳ್ಳ ವ್ಯಕ್ತಿಯೊಬ್ಬ ಅಲ್ಲಿಗೆ ಬಂದ. “ನಾನು ಅಮೋಘ ಮಹಾರಾಜನ ಸೇವಕ. ಮಹಾರಾಜನೇ ಉಕ್ಕಿನ ಅರಮನೆಯನ್ನು ಕಟ್ಟಿಸಿದವನು. ನಿಮಗೆ ಅಲ್ಲಿ ಏನೆಲ್ಲ ಅನುಭವ ಆಯಿತು?" ಎಂದು ಪ್ರಶ್ನಿಸಿದ. ಸೋಮ ಮತ್ತು ಶಾಮ ಮುಚ್ಚುಮರೆಯಿಲ್ಲದೆ ಎಲ್ಲವನ್ನೂ ಹೇಳಿದರು.

ಅದನ್ನೆಲ್ಲ ಗಮನವಿಟ್ಟು ಕೇಳಿದ ಕುಳ್ಳ ವ್ಯಕ್ತಿ ಗಹಗಹಿಸಿ ನಗುತ್ತ ಹೇಳಿದ, “ಅದೆಲ್ಲ ನನಗೆ ಗೊತ್ತು. ನಾನೇ ಅಮೋಘ ಮಹಾರಾಜ. ಪ್ರಾಮಾಣಿಕ ಮತ್ತು ಸತ್ಯ ಹೇಳುವ ವ್ಯಕ್ತಿಗಳೆಂದರೆ ನನಗೆ ಅಚ್ಚುಮೆಚ್ಚು. ನಿಮ್ಮ ಈ ಗುಣಗಳಿಗಾಗಿ ನಿಮಗೆ ಉಡುಗೊರೆ ಕೊಡುತ್ತೇನೆ.”

ಆತ ಸೋಮ ಮತ್ತು ಶಾಮನಿಗೆ ಒಂದೊಂದು ಪೊಟ್ಟಣ ಕೊಡುತ್ತಾ “ಇದರಲ್ಲಿರುವ ಸಂಪತ್ತನ್ನು ಚೆನ್ನಾಗಿ ಬಳಸಿಕೊಳ್ಳಿ" ಎಂದು ಅಲ್ಲಿಂದ ಕಣ್ಮರೆಯಾದ. ಇಬ್ಬರು ಸೋದರರಿಗೆ ಇದು ನಿಜವೋ ಕನಸೋ ಎಂದು ಗೊಂದಲವಾಯಿತು. ಆದರೆ, ತಮ್ಮ ಕೈಯಲ್ಲಿದ್ದ ಪೊಟ್ಟಣ ನೋಡಿ ಅವರು ಆದದ್ದೆಲ್ಲ ನಿಜವೆಂದು ನಂಬಬೇಕಾಯಿತು.

ಅನಂತರ ತಮ್ಮ ಹಳ್ಳಿಗೆ ಹಿಂತಿರುಗಿದರು ಸೋಮ ಮತ್ತು ಶಾಮ. ತಮ್ಮ ಪೊಟ್ಟಣಗಳಲ್ಲಿದ್ದ ಆಭರಣಗಳನ್ನು ಮಾರಿದರು. ಸ್ವಲ್ಪ ಹಣವನ್ನು ಬಡವರಿಗೆ, ವೃದ್ಧರಿಗೆ ಮತ್ತು ರೋಗಿಗಳ ಸೇವೆಗೆ ಬಳಸಿದರು. ಉಳಿದ ಹಣದಲ್ಲಿ ವಿಸ್ತಾರ ಜಮೀನು ಖರೀದಿಸಿ ಬೇಸಾಯ ಮಾಡತೊಡಗಿದರು. ಈಗ ಅವರಿಗೆ ಪ್ರಾಮಾಣಿಕ ಕೆಲಸದಿಂದ ಲಭಿಸುವ ಸಂತೋಷದ ಅರಿವಾಯಿತು!