ಸೋಮುವಿನ ಹುಟ್ಟುಹಬ್ಬ

ಸೋಮುವಿನ ಹುಟ್ಟುಹಬ್ಬ

ಹುಟ್ಟುಹಬ್ಬದಂದು ಬೆಳಗ್ಗೆ ಸೋಮು ಎದ್ದಾಗ ಸೂರ್ಯ ಬೆಳಗುತ್ತಿದ್ದ. “ಓ, ನನಗೆ ಒಂಭತ್ತು ವರುಷ ತುಂಬಿದೆ. ನನ್ನ ಹುಟ್ಟುಹಬ್ಬಕ್ಕೆ ಸೈಕಲ್ ಉಡುಗೊರೆ ಕೊಡೋದಾಗಿ ಅಪ್ಪ ಮಾತು ಕೊಟ್ಟಿದ್ದರು. ಅವರಿಗೆ ಅದು ನೆನಪಿರಬೇಕು” ಎಂದುಕೊಂಡ ಸೋಮು.

ಹೊಸ ಉಡುಪು ಹಾಕಿಕೊಂಡ ಸೋಮು ಮಾಳಿಗೆಯ ಕೋಣೆಯಿಂದ ಇಳಿದು ಕೆಳಕ್ಕೆ ಬಂದ. ಅಲ್ಲಿ ವರಾಂಡದಲ್ಲಿ ಫಳಫಳ ಹೊಳೆಯುತ್ತಿತ್ತು ಹೊಸ ಸೈಕಲ್. “ಓ ಅಪ್ಪ. ನೀವು ನೆನಪಿಟ್ಟುಕೊಂಡು ನನಗೆ ಉಡುಗೊರೆ ತಂದಿದ್ದೀರಲ್ಲಾ!" ಎಂದು ಖುಷಿಯಿಂದ ಕೂಗಿದ ಸೋಮು.

ಸೋಮುವಿನ ಅಪ್ಪ ಮತ್ತು ಅಮ್ಮ ಅವನನ್ನು ಅಪ್ಪಿಕೊಂಡು ಹರಸಿದರು. ಇನ್ನೇನು, ಸೋಮು ಸೈಕಲ್ ಹತ್ತಿ ಉದ್ಯಾನಕ್ಕೊಂದು ಸುತ್ತು ಬರಬೇಕು ಅನ್ನುವಾಗ ಅಪ್ಪ ಅವನನ್ನು ತಡೆದು ಹೇಳಿದರು, “ಸೋಮು, ನೀನು ಈ ಸೈಕಲ್ ಹತ್ತುವ ಮುಂಚೆ ಸೈಕಲ್ ಸವಾರರು ಪಾಲಿಸಬೇಕಾದ ರಸ್ತೆ ನಿಯಮಗಳನ್ನು ಚೆನ್ನಾಗಿ ಓದಿಕೊಳ್ಳಬೇಕು. ಅವುಗಳನ್ನು ನೆನಪಿಟ್ಟುಕೊಳ್ಳಲೇ ಬೇಕು."

“ಅಪ್ಪಾ, ನಾನು ಅದನ್ನೆಲ್ಲಾ ಓದಿಕೊಂಡಿದ್ದೇನೆ ಮತ್ತು ಸೈಕಲ್ ಓಡಿಸಲಿಕ್ಕೂ ಕಲಿತಿದ್ದೇನೆ. ಟ್ರಾಫಿಕ್ ಲೈಟ್ ಯಾವ್ಯಾವ ಬಣ್ಣ ಅಂದ್ರೇನು, ಬಲಕ್ಕೆ ಅಥವಾ ಎಡಕ್ಕೆ ತಿರುಗುವಾಗ ಕೈತೋರಿಸುವುದು ಹೇಗೆ ಅನ್ನೋದೆಲ್ಲಾ ನನಗೆ ಗೊತ್ತಿದೆ” ಎಂದ ಸೋಮು.

“ಸೋಮು, ನಿನಗೆ ಯಾವಾಗಲೂ ಅವಸರ. ಅಷ್ಟೇ ಅಲ್ಲ, ನೀನು ಜಾಗ್ರತೆಯಿಂದ ಇರೋದಿಲ್ಲ. ಟ್ರಾಫಿಕ್ ರೂಲ್ಸ್ ಎಲ್ಲ ನಿನಗೆ ಚೆನ್ನಾಗಿ ಗೊತ್ತಿದೆ ಅಂತ ಹ್ಯಾಗೆ ಹೇಳೋದು?” ಎಂದು ಕೇಳಿದರು ಅವನ ಅಪ್ಪ. "ಏನಮ್ಮಾ ಇದು! ಇವತ್ತು ನನ್ನ ಹುಟ್ಟುಹಬ್ಬ. ಸಂಜೆ ಪಾರ್ಟಿ ಮಾಡಬೇಕು. ಎಲ್ಲರೂ ನನಗೆ ಉಡುಗೊರೆ ಕೊಡ್ತಾರೆ. ಟ್ರಾಫಿಕ್ ರೂಲ್ಸ್ ಭಾಷಣ ನನಗೆ ಈಗ ಬೇಕಾಗಿಲ್ಲ" ಎಂದು ರೇಗಿದ ಸೋಮು.

ಅವನ ಅಮ್ಮ ನಕ್ಕು ಬಿಟ್ಟಳು. "ನಿನಗೆ ಯಾರೂ ಭಾಷಣ ಕೊಡುತ್ತಿಲ್ಲ. ಮಕ್ಕಳಿಗೆ ಮೊದಲ ಸಲ ಸೈಕಲ್ ಕೊಟ್ಟಾಗ ಟ್ರಾಫಿಕ್ ರೂಲ್ಸ್ ಅಂದ್ರೇನು ಅಂತ ಹೇಳೋದು ಅಮ್ಮಂದಿರ ಕರ್ತವ್ಯ. ಈಗ ತಿಂಡಿ ತಿನ್ನು ಬಾ. ಆದರೆ ಸೈಕಲ್ ತಗೊಂಡು ಹೊರಗೆ ಹೋಗೋ ಮುಂಚೆ ನೀನು ಟ್ರಾಫಿಕ್ ರೂಲ್ಸ್ ಇನ್ನೊಮ್ಮೆ ಓದಿಕೊಳ್ಳಲೇ ಬೇಕು” ಎಂದಳು ಅಮ್ಮ.

ತಿಂಡಿ ತಿಂದು ಮುಗಿಸಿದಾಗ ಟೆಲಿಫೋನ್ ಸದ್ದು ಮಾಡಿತು. ಸೋಮುವಿನ ಅಮ್ಮ ಅದನ್ನು ಉತ್ತರಿಸಲಿಕ್ಕಾಗಿ ಅತ್ತ ಹೋದಳು. ಸೋಮುವಿನ ತಂದೆ ಉದ್ಯಾನದಲ್ಲಿ ಕೆಲಸಗಾರನ ಜೊತೆ ಮಾತನಾಡುತ್ತಿದ್ದರು. ತಾನು ಯಾವಾಗ ತನ್ನ ಸೈಕಲಿನಲ್ಲಿ ಮೊದಲ ಸುತ್ತು ಹೊಡೆದೇನು ಎಂದು ಕಾಯುತ್ತಾ ನಿಂತ ಸೋಮು.

ಹತ್ತು ನಿಮಿಷಗಳಲ್ಲೇ ಸೋಮುವಿಗೆ ಕಾದುಕಾದು ಸಾಕಾಯಿತು. “ನಾನೀಗ ಸೈಕಲ್ ತಗೊಂಡು ರಸ್ತೆಗಿಳಿತೇನೆ. ಮನೆಯೆದುರಿನ ರಸ್ತೆಯ ಕೊನೆ ವರೆಗೆ ಹೋಗಿ ಬರ್ತೇನೆ. ಶ್ಯಾಮುವಿನ ದೊಡ್ಡ ಉದ್ಯಾನಕ್ಕೆ ನಾನು ನೂರಾರು ಸುತ್ತು ಬಂದಿದ್ದೇನೆ. ರಸ್ತೆಯಲ್ಲಿಯೂ ಜೋಪಾನವಾಗಿ ಒಂದು ಸುತ್ತು ಹಾಕಿ ಬರ್ತೇನೆ” ಎಂದು ಯೋಚಿಸಿದ ಸೋಮು.

ಇನ್ನು ಕಾಯಲು ತಯಾರಿಲ್ಲದ ಸೋಮು ಸೈಕಲನ್ನು ವರಾಂಡದಿಂದ ಕೆಳಗಿಳಿಸಿದ. ಅದನ್ನು ಹತ್ತಿ ಪೆಡಲ್ ತುಳಿಯುತ್ತಾ ಉದ್ಯಾನದ ದಾರಿಯಲ್ಲಿ ಸಾಗಿ ಮನೆಯ ಗೇಟು ದಾಟಿ, ರಸ್ತೆಗಿಳಿದೇ ಬಿಟ್ಟ. “ಓ, ನನ್ನದೇ ಸೈಕಲ್ ಓಡಿಸೋದು ಏನು ಮಜಾ” ಎಂದುಕೊಳ್ಳುತ್ತಾ ಜೋರಾಗಿ ಸೈಕಲ್ ತುಳಿಯತೊಡಗಿದ. ದಾರಿಗೆ ಅಡ್ಡಬಂದ ನಾಯಿಯೊಂದನ್ನು ಓಡಿಸಲಿಕ್ಕಾಗಿ ಬೆಲ್ ಬಾರಿಸಿದ. ರಸ್ತೆಯ ಕೊನೆಯಲ್ಲಿ ತಿರುಗುತ್ತೇನೆಂದು ಎಲ್ಲರಿಗೂ ತಿಳಿಸಲಿಕ್ಕಾಗಿ ಕೈಚಾಚಿದ. ಟ್ರಾಫಿಕ್ ಲೈಟ್ ಕೆಂಪು ಬಣ್ಣ ತೋರಿಸಿದಾಗ ಸೈಕಲನ್ನು ನಿಲ್ಲಿಸಿದ.

ರಸ್ತೆಯಲ್ಲಿ ಕಾರು ಮತ್ತು ಲಾರಿಗಳ ಜೊತೆಜೊತೆಗೆ ಸೈಕಲ್ ಓಡಿಸುವುದು ಸೋಮುವಿಗೆ ಖುಷಿಯೋ ಖುಷಿ ಅನಿಸಿತು. ಆಗ ರಸ್ತೆಯಲ್ಲಿ ಏರು ಬಂತು. ಅವನು ಪೆಡಲ್ ಮಾಡುತ್ತಾ ಏದುಸಿರು ಬಿಡತೊಡಗಿದ. ಅವನ ಮುಂದೆ ಒಂದು ಲಾರಿ ನಿಧಾನವಾಗಿ ಚಲಿಸುತ್ತಿತ್ತು. ಸೋಮು ಜೋರಾಗಿ ಪೆಡಲ್ ಮಾಡಿ, ಲಾರಿಯ ಹಿಂಭಾಗವನ್ನು ಬಲಗೈಯಿಂದ ಹಿಡಿದುಕೊಂಡ! ಈಗ ಅವನು ಪೆಡಲ್ ಮಾಡಬೇಕಾಗಿರಲಿಲ್ಲ; ಲಾರಿಯೇ ಸೈಕಲಿನಲ್ಲಿ ಕುಳಿತಿದ್ದ ಸೋಮುವನ್ನು ಎಳೆಯುತ್ತಾ ಮುಂದಕ್ಕೆ ಓಡುತ್ತಿತ್ತು.

ಏರು ಮುಗಿದು, ಸಪಾಟ ರಸ್ತೆ ಶುರುವಾಯಿತು. ಆದರೆ ಸೋಮು ಲಾರಿಯನ್ನು ಹಿಡಿದುಕೊಂಡೇ ಇದ್ದ. ಅಷ್ಟರಲ್ಲಿ ಏನೆಲ್ಲ ಆಗಿ ಹೋಯಿತು! ಅಪಘಾತಗಳು ಆಗೋದೇ ಹಾಗೆ.

ಒಂದು ನಾಯಿ ಅಚಾನಕ್ ಲಾರಿಯ ಎದುರಿನಲ್ಲಿ ಓಡಿ ಬಂತು. ಲಾರಿ ಡ್ರೈವರ್ ಒಂದೇಟಿಗೆ ಬ್ರೇಕ್ ಹಾಕಿದ. ಸೋಮುವಿನ ಸೈಕಲ್ ಲಾರಿಯ ಹಿಂಭಾಗಕ್ಕೆ ಜೋರಾಗಿ ಬಡಿಯಿತು ಮತ್ತು ಸೋಮು ಸೈಕಲಿನಿಂದ ರಸ್ತೆಗೆ ಬಿದ್ದ. ಹಿಂದೆ ನುಗ್ಗಿ ಬರುತ್ತಿದ್ದ ಕಾರಿನ ಚಾಲಕ ಸಕಾಲದಲ್ಲಿ ಬ್ರೇಕ್ ಹಾಕಲಿಲ್ಲ; ಹಾಗಾಗಿ ಆ ಕಾರು ಕೂಡ ಲಾರಿಯ ಹಿಂಭಾಗಕ್ಕೆ ಬಡಿಯಿತು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಸೋಮು ಲಾರಿ ಮತ್ತು ಕಾರುಗಳ ನಡುವೆ ಸಿಕ್ಕಿ ಬಿದ್ದಿದ್ದ.

ಲಾರಿ ಡ್ರೈವರ್ ಲಾರಿಯನ್ನು ನಿಲ್ಲಿಸಿ ಕೆಳಕ್ಕಿಳಿದ. ಕಾರಿನ ಚಾಲಕ ಕಾರಿನಿಂದ ಹೊರಕ್ಕೆ ಜಿಗಿದ. ಅವರಿಬ್ಬರೂ ಸೇರಿ ಸೋಮುವನ್ನು ಬಿದ್ದಲ್ಲಿಂದ ಹೊರಕ್ಕೆಳೆದರು. ನಜ್ಜುಗುಜ್ಜಾದ ಸೈಕಲಿನ ಕೆಲವು ಭಾಗಗಳು ಸೋಮುವಿನ ಮೈಯಲ್ಲಿದ್ದವು!

ಅಲ್ಲೇ ಹಾದು ಹೋಗುತ್ತಿದ್ದ ಮಹಿಳೆಯೊಬ್ಬಳು “ಓ, ಸೋಮು! ಇದೇನು ಮಾಡಿಕೊಂಡೆ? ತಾಳು, ನಿನ್ನ ಅಮ್ಮನಿಗೆ ಫೋನ್ ಮಾಡಿ ಹೇಳ್ತೇನೆ” ಎನ್ನುತ್ತಾ ಹತ್ತಿರ ಬಂದಳು. “ಎಂತಹ ಮೂರ್ಖ ಹುಡುಗ ನೀನು! ಹಾಗೆ ಲಾರಿಯ ಹಿಂಭಾಗ ಹಿಡಿದು ಸೈಕಲ್ ಓಡಿಸುವುದಾ? ನಿನ್ನ ಅಪ್ಪ-ಅಮ್ಮ ರಸ್ತೆಯ ನಿಯಮಗಳನ್ನು ನಿನಗೆ ಹೇಳಲಿಲ್ಲವೇ?" ಎಂದು ಅವಳು ಬಯ್ದಳು.

ಸೋಮುವಿನ ಬಲಗಾಲು ಮುರಿದಿತ್ತು. ಹುಟ್ಟುಹಬ್ಬದ ದಿನವನ್ನು ಅವನು ಆಸ್ಪತ್ರೆಯಲ್ಲಿ ಕಳೆಯಬೇಕಾಯಿತು. ಅವನ ಸೈಕಲ್ - ಹೊಚ್ಚಹೊಸ ಸೈಕಲ್ - ನುಚ್ಚುನೂರಾಗಿತ್ತು. ಅಂತೂ ಗಮ್ಮತ್ತಿನಿಂದ ಹುಟ್ಟುಹಬ್ಬ ಆಚರಿಸುವ ಅವನ ಕನಸೂ ನುಚ್ಚುನೂರಾಗಿತ್ತು.

“ಒಂದು ಕ್ಷಣದ ತಪ್ಪಿಗೆ ಎಂತಹ ಬೆಲೆ ತೆರಬೇಕಾಗುತ್ತದೆ ನೋಡು” ಎಂದರು ಸೋಮುವಿನ ಅಪ್ಪ. ಸೋಮುವಿನ ಅಮ್ಮ ಏನೂ ಮಾತನಾಡದೆ ಆಸ್ಪತ್ರೆಯಲ್ಲಿ ಸೋಮುವಿನೊಂದಿಗೆ ಕುಳಿತಿದ್ದರು - ತಮ್ಮ ಮಾತಿಗೆ ಸೋಮು ಬೆಲೆ ಕೊಟ್ಟಿದ್ದರೆ ಹೀಗೆ ಕಾಲು ಮುರಿದುಕೊಳ್ಳಬೇಕಾಗಿರಲಿಲ್ಲ ಎಂದು ಹೇಳಬೇಕೆನಿಸಿದರೂ ಅವರು ಹೇಳಲಿಲ್ಲ!

ಚಿತ್ರ ಕೃಪೆ: "ದ ಟೆಡ್ಡಿ ಬೇರ್ಸ್ ಟೇಯ್ಲ್" ಪುಸ್ತಕ