ಸೋಲಾರ್ ಕುಕ್ಕರ್

ಸೋಲಾರ್ ಕುಕ್ಕರ್

ಸೋಲಾರ್ ಕುಕ್ಕರ್ ಬಳಸಿ ಅಡುಗೆ ಮಾಡುವುದರಿಂದ ಇಂಧನಕ್ಕಾಗಿ ವ್ಯಯಿಸುವ ಖರ್ಚನ್ನು ಉಳಿಸಬಹುದು ಮಾತ್ರವಲ್ಲ ವಾತಾವರಣಕ್ಕೆ ಇಂಗಾಲನಿಲಗಳು ಸೇರುವುದನ್ನು ಕಡಿಮೆ ಮಾಡಬಹುದು.  ಹೀಗಾಗಿ ಇದು ಪರಿಸರ ಸ್ನೇಹಿ.  ಪ್ಯಾರಾಬೊಲ ಆಕಾರದ (ಟಿವಿ ಡಿಶ್ ಆಂಟೆನಾ ತರಹದ) ಸೋಲಾರ್ ಕುಕ್ಕರುಗಳು ಎಲ್ಪಿಜಿ ಅನಿಲದಷ್ಟೇ ವೇಗವಾಗಿ ಅಡುಗೆ ಬೇಯಿಸಬಲ್ಲವು.  ಹತ್ತರಿಂದ ಹದಿನೈದು ಜನರಿಗೆ ಅಡುಗೆ ಬೇಯಿಸಬಲ್ಲ ಸಾಮರ್ಥ್ಯದ ಪ್ಯಾರಾಬೊಲ ಆಕಾರದ ಸೋಲಾರ್ ಕುಕ್ಕರ್ ಬೆಲೆ ೬,೦೦೦ದಿಂದ  ೭,೦೦೦ ರೂಪಾಯಿ ಇದೆ.  ಇದು ೪೫ ನಿಮಿಷಗಳಲ್ಲಿ ಅಕ್ಕಿಯನ್ನು ಬೇಯಿಸಬಲ್ಲದು.  ಇದರಲ್ಲಿ ಸೂರ್ಯನ ಬೆಳಕನ್ನು ಒಂದು ಕೇಂದ್ರದೆಡೆಗೆ ಪ್ರತಿಫಲಿಸುವ ಪ್ರತಿಫಲಕಗಳನ್ನು ಅಳವಡಿಸಲಾಗಿರುತ್ತದೆ.  ಹೀಗಾಗಿ ಇದರ ಕೇಂದ್ರದಲ್ಲಿ ೩೦೦ ಡಿಗ್ರಿಯವರೆಗೆ ಉಷ್ಣತೆ ಉಂಟಾಗುತ್ತದೆ.  ಈ ಕೇಂದ್ರದಲ್ಲಿ ಪಾತ್ರೆ ಅಥವಾ ಕುಕ್ಕರ್ ಇಡಲು ಸ್ಟಾಂಡ್ ಅಳವಡಿಸಿರುತ್ತಾರೆ.  ಚಲಿಸುತ್ತಿರುವ ಸೂರ್ಯನಿಗೆ ಅನುಗುಣವಾಗಿ ಈ ಸೋಲಾರ್ ಡಿಶ್ ಅನ್ನು ಸೂರ್ಯನೆಡೆಗೆ ಮುಖ ಮಾಡುವಂತೆ ನಿರ್ದಿಷ್ಟ ಸಮಯಕ್ಕೊಮ್ಮೆ ಮಾನವ ಶಕ್ತಿಯಿಂದ ತಿರುಗಿಸುತ್ತಿರಬೇಕು (ಯಾಂತ್ರಿಕವಾಗಿ ತಿರುಗಿಸುವ ಡಿಶ್ ಸೋಲಾರ್ ಕುಕ್ಕರ್ ಕೂಡ ಲಭ್ಯವಿದೆ).  ಇದರಲ್ಲಿ ಬಿಸಿನೀರು ಕಾಯಿಸುವುದು, ಹುರಿಯುವುದು, ಕರಿಯುವುದು ಎಲ್ಲವನ್ನೂ ಮಾಡಬಹುದು.  ಸೂರ್ಯನು ಉದಯಿಸಿ ಒಂದು ಗಂಟೆಯ ನಂತರ ಹಾಗೂ ಸೂರ್ಯನು ಮುಳುಗುವ ಒಂದು ಗಂಟೆ ಮೊದಲಿನ ಅವಧಿಯಲ್ಲಿ ಈ ಸೋಲಾರ್ ಡಿಶ್ ಅನ್ನು ಅಡುಗೆಗೆ ಬಳಸಬಹುದು.  ಇದನ್ನು ಮನೆಯಿಂದ ಹೊರಗೆ ಅಳವಡಿಸಬೇಕಾಗುತ್ತದೆ (ಅಂಗಳದಲ್ಲಿ ಅಥವಾ ಮನೆಯ ಮಹಡಿಯ ಮೇಲೆಯೂ ಅಳವಡಿಸಬಹುದು).

ಈ ರೀತಿಯ ಸೋಲಾರ್ ಕುಕ್ಕರುಗಳನ್ನು ಮಳೆಗಾಲದ ಹಾಗೂ ಮೋಡಕವಿದ ದಿನಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕಾಲದಲ್ಲಿಯೂ ಬಳಸಬಹುದು. ಹತ್ತರಿಂದ ಹದಿನೈದು ಜನರಿಗೆ ಅಡುಗೆ ಬೇಯಿಸಬಲ್ಲ ಸೋಲಾರ್ ಕುಕ್ಕರ್ ವರ್ಷಕ್ಕೆ ಹತ್ತು ಸಿಲಿಂಡರ್ ಗ್ಯಾಸ್ ಅನ್ನು ಉಳಿಸಬಲ್ಲದು ಎಂದು ಹೇಳುತ್ತಾರೆ.  ಹೀಗಾಗಿ ಇದನ್ನು ಹೆಚ್ಚು ಜನಪ್ರಿಯಗೊಳಿಸಬೇಕಾದ ಅಗತ್ಯ ಇದೆ.  ಸೌದೆಯಂತೆ ಇದರಲ್ಲಿ ಹೊಗೆ ಬರುವುದಿಲ್ಲವಾದ್ದರಿಂದ ಇದು ಆರೋಗ್ಯದ ಮಟ್ಟಿಗೂ ಒಳ್ಳೆಯದು.  ಸೌದೆ ಸಂಗ್ರಹಿಸಲು ಗ್ರಾಮೀಣ ಜನರು ಅಲೆಯುವುದನ್ನು ಕೂಡ ಇದರಿಂದ ಕಡಿಮೆ ಮಾಡಬಹುದು ಮಾತ್ರವಲ್ಲ ಸೌದೆಗಾಗಿ ಮರಗಿಡಗಳ ನಾಶವನ್ನು ಕೂಡ ತಡೆಯಲು ಸಾಧ್ಯ.  ಹೀಗಾಗಿ ಇದನ್ನು ಜನಪ್ರಿಯಗೊಳಿಸಲು ಸರ್ಕಾರ, ಮಾಧ್ಯಮಗಳು ಹೆಚ್ಚಿನ ಗಮನ ಹರಿಸಬೇಕಾಗಿದೆ.  ಇದಕ್ಕೆ ಸರ್ಕಾರದಿಂದ ೩೦% ಸಬ್ಸಿಡಿ ಇದೆಯೆಂದು ಕೂಡ ಹೇಳಲಾಗಿದೆ.  ಸೋಲಾರ್ ಕುಕ್ಕರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿದರೆ ಹಾಗೂ ಜನ ಹೆಚ್ಚು ಹೆಚ್ಚು ಬಳಸುವಂತಾದರೆ ಆಗ ಇದರ ಬೆಲೆಯೂ ಇನ್ನಷ್ಟು ಕಡಿಮೆ ಮಾಡಲು ಸಾಧ್ಯವಿದೆ.  ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಇದರ ಸದ್ಯದ ಬೆಲೆಯು ಹೆಚ್ಚೇ ಎನಿಸಬಹುದು ಆದರೆ ಇದು ಉಳಿಸುವ ಗ್ಯಾಸ್/ಸೌದೆ ಇತ್ಯಾದಿಗಳನ್ನು ಗಮನಿಸಿದರೆ ಇದಕ್ಕೆ ಹಾಕಿದ ಹಣ ಎರಡು ಮೂರು ವರ್ಷಗಳಲ್ಲಿ ವಾಪಸ್ ಬರಬಹುದು.

ಚಿತ್ರ: ಅಂತರ್ಜಾಲದಿಂದ

Comments